ಇ-ರುಪಿ ಬಳಕೆ ಹೆಚ್ಚಿಸಲು ಬ್ಯಾಂಕ್ ಗಳ ಮೇಲೆ ಆರ್ ಬಿಐ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರನ್ನು ಸೆಳೆಯಲು ಕೆಲವು ಬ್ಯಾಂಕುಗಳು ಇ-ರುಪಿ ಬಳಸಿ ವಹಿವಾಟು ನಡೆಸೋ ಗ್ರಾಹಕರಿಗೆ ರಿವಾರ್ಡ್ಸ್ ನೀಡಲು ಮುಂದಾಗಿವೆ.
ನವದೆಹಲಿ (ಅ.27): ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ಇ-ರುಪಿ ಬಳಕೆ ಮಾಡುವ ಗ್ರಾಹಕರಿಗೆ ಬ್ಯಾಂಕ್ ಗಳು ಪ್ರೋತ್ಸಾಹದಾಯಕ ಬಹುಮಾನ ನೀಡಲಿವೆ ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇ-ರುಪಿ ಬಳಕೆ ಹೆಚ್ಚಿಸುವಂತೆ ಬ್ಯಾಂಕುಗಳ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಇಂಥ ಕ್ರಮಕ್ಕೆ ಮುಂದಾಗಿವೆ ಎಂದು ರಾಯ್ಟರ್ಸ್ ಮೂರು ಮೂಲಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿವೆ. ಇ-ರುಪಿ ವಹಿವಾಟುಗಳನ್ನು ಪ್ರೋತ್ಸಾಹಿಸಲು ಬ್ಯಾಂಕ್ ಗಳು ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ರಿವಾರ್ಡ್ಸ್ ಹಾಗೂ ಪಾಯಿಂಟ್ಸ್ , ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಳಕೆಗೆ ರಿವಾರ್ಡ್ಸ್ ಸೇರಿದಂತೆ ಅನೇಕ ವಿಧದ ಪ್ರಯೋಜನಗಳನ್ನು ಬ್ಯಾಂಕ್ ಗಳು ಗ್ರಾಹಕರಿಗೆ ನೀಡುತ್ತಿವೆ. ಇ-ರುಪಿಗೆ ಸಂಬಂಧಿಸಿ ಆರ್ ಬಿಐ ಡಿಸೆಂಬರ್ ನಲ್ಲಿ ಪೈಲಟ್ ಯೋಜನೆ ಪ್ರಾರಂಭಿಸಿತ್ತು. ಈ ವರ್ಷದ ಅಂತ್ಯದೊಳಗೆ ಒಂದು ಮಿಲಿಯನ್ ವಹಿವಾಟುಗಳ ಗುರಿ ತಲುಪುವುದು ಈ ಯೋಜನೆ ಉದ್ದೇಶ. ಆದರೆ, ಪ್ರಸಕ್ತ ರಿಟೇಲ್ ವಹಿವಾಟುಗಳು ಈ ಗುರಿಯಿಂದ ಕೆಳ ಮಟ್ಟದಲ್ಲಿವೆ. ದಿನಕ್ಕೆ ಸುಮಾರು 25,000 ಆಸುಪಾಸಿನಲ್ಲಿವೆ. ಹೀಗಾಗಿ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳ ಅಗತ್ಯವಿರೋದನ್ನು ಆರ್ ಬಿಐ ಹಾಗೂ ಬ್ಯಾಂಕುಗಳು ಮನಗಂಡಿವೆ.
ಇ-ರುಪಿಗೆ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನದ ಭಾಗವಾಗಿ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಜೊತೆಗೆ ಡಿಜಿಟಲ್ ಕರೆನ್ಸಿ ಜೋಡಣೆಯಂತಹ ಹೊಸ ಫೀಚರ್ ಗಳನ್ನು ಆರ್ ಬಿಐ ಪರಿಚಯಿಸಿದೆ ಎಂದು ರಾಯ್ಟರ್ಸ್ ಕಳೆದ ತಿಂಗಳು ವರದಿ ಮಾಡಿತ್ತು. ಇನ್ನು ಇ-ರುಪಿ ವಹಿವಾಟುಗಳನ್ನು ಪ್ರೋತ್ಸಾಹಿಸಲು ಭಾರತದ ಅತೀದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್ ಡಿಎಫ್ ಸಿ ಬ್ಯಾಂಕ್ ಮುಂದಾಳತ್ವ ವಹಿಸಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಉನ್ನತಾಧಿಕಾರಿಗಳು ಕೂಡ ಇದನ್ನು ದೃಢೀಕರಿಸಿದ್ದು, ಇ-ರುಪಿ ವಹಿವಾಟುಗಳನ್ನು ಹೆಚ್ಚಿಸಲು ಪ್ರಯತ್ನಗಳನ್ನು ನಡೆಸುತ್ತಿರೋದಾಗಿ ತಿಳಿಸಿದ್ದಾರೆ. ಆದರೆ, ಗ್ರಾಹಕರಿಗೆ ಯಾವ ರೀತಿಯ ವಿಶೇಷ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂಬ ಬಗ್ಗೆ ಮಾತ್ರ ಸ್ಪಷ್ಟ ಮಾಹಿತಿ ನೀಡಿಲ್ಲ.
ಬ್ಯಾಂಕುಗಳ ನಡುವೆ ಶೀಘ್ರದಲ್ಲೇ ಡಿಜಿಟಲ್ ಕರೆನ್ಸಿ ವಹಿವಾಟು ಶುರು
ಇನ್ನು ಇ-ರುಪಿ ಬಳಕೆಗೆ ಖಾಸಗಿ ವಲಯದ ಬ್ಯಾಂಕ್ ಗಳಾದ ಯೆಸ್ ಬ್ಯಾಂಕ್ ಹಾಗೂ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ರಿವಾರ್ಡ್ ಪಾಯಿಂಟ್ಸ್ ನೀಡುತ್ತಿದ್ದು, ಅವುಗಳನ್ನು ಟ್ರಾವೆಲ್ ಬುಕ್ಕಿಂಗ್, ಮೊಬೈಲ್ ರಿಚಾರ್ಜ್ ಗೆ ಬಳಕೆ ಮಾಡಬಹುದು. ಇನ್ನು ಫಾಸ್ಟ್ ಟ್ಯಾಗ್ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆ ಮೂಲಕ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗಲಿದೆ. ಹಾಗೆಯೇ ಐಸಿಐಸಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಕೂಡ ಇ-ರುಪಿ ಬಳಕೆಗೆ ಗ್ರಾಹಕರಿಗೆ ಪ್ರೋತ್ಸಾಹ ನೀಡಲು ಯೋಜನೆಗಳನ್ನು ರೂಪಿಸುತ್ತಿವೆ ಎಂದು ಹೇಳಲಾಗಿದೆ. ಈ ಬಗ್ಗೆ ಎರಡೂ ಬ್ಯಾಂಕ್ ಗಳ ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.
ಈ ಪ್ರೋತ್ಸಾಹ ಯೋಜನೆಗಳನ್ನು 'ಕಿರು ಅವಧಿಯ ಕ್ರಮಗಳು' ಎಂದು ಪರಿಗಣಿಸಲಾಗಿದ್ದು, ಇವು ವಹಿವಾಟಿನ ಪ್ರಮಾಣವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಿವೆ ಎಂದು ಖಾಸಗಿ ಬ್ಯಾಂಕ್ ವೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಡಿಜಿಟಲ್ ರೂಪಾಯಿ ಪೇಪರ್ ಕರೆನ್ಸಿ ಸ್ಥಾನವನ್ನು ಬದಲಾಯಿಸಲು ಸಾಧ್ಯವಿಲ್ಲ: ಎಸ್ ಬಿಐ ಮುಖ್ಯಸ್ಥ ಖಾರ
ಬ್ಯಾಂಕ್ ಗಳ ನಡುವೆ ವಹಿವಾಟಿಗೆ ಡಿಜಿಟಲ್ ಕರೆನ್ಸಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಬ್ಯಾಂಕುಗಳ ನಡುವಿನ ಕೊಡುಕೊಳ್ಳುವಿಕೆ ಅಥವಾ ಕಾಲ್ ಮನಿ ಮಾರ್ಕೆಟ್‌ನಲ್ಲಿ ಡಿಜಿಟಲ್ ಕರೆನ್ಸಿ ಬಳಕೆಯನ್ನು ಪ್ರಾಯೋಗಿಕವಾಗಿ ಆರಂಭಿಸುವ ಬಗ್ಗೆ ಜಿ20 ಸಮಾವೇಶದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಬಿಐ ಕಾರ್ಯಕಾರಿ ನಿರ್ದೇಶಕ ಅಜಯ್ ಕುಮಾರ್ ಚೌಧರಿ ತಿಳಿಸಿದ್ದರು. ಡಿಜಿಟಲ್ ರುಪೀ-ಹೋಲ್‌ಸೇಲ್ (ಎ-ಡಬ್ಲ್ಯು) (Digital Rupee-Wholesale)ಎಂದು ಕರೆಸಿಕೊಳ್ಳುವ ಈ ಕರೆನ್ಸಿಯನ್ನು ಸರ್ಕಾರಿ ಷೇರುಗಳ ವಹಿವಾಟಿನಲ್ಲಿ ಬಳಕೆ ಮಾಡುವುದನ್ನು ಸರ್ಕಾರ ಕಳೆದ ವರ್ಷವೇ ಆರಂಭಿಸಿತ್ತು. ಬ್ಯಾಂಕುಗಳ ನಡುವೆ ಡಿಜಿಟಲ್ ಕರೆನ್ಸಿ ಬಳಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India), ಬ್ಯಾಂಕ್ ಆಫ್ ಬರೋಡಾ (Bank of Baroda), ಯೂನಿಯನ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank), ಐಸಿಐಸಿಐ ಬ್ಯಾಂಕ್, ಯಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್(IDFC First Bank) ಹಾಗೂ ಎಚ್‌ಎಸ್‌ಬಿಸಿ ಬ್ಯಾಂಕುಗಳನ್ನು ಆರ್‌ಬಿಐ ಆಯ್ಕೆ ಮಾಡಿಕೊಂಡಿದೆ. ಈ ಬ್ಯಾಂಕುಗಳ ನಡುವಿನ ಆಂತರಿಕ ವ್ಯವಹಾರದಲ್ಲಿ ಇನ್ನುಮುಂದೆ ಡಿಜಿಟಲ್ ಕರೆನ್ಸಿಯನ್ನು ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ.