ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ನೀಡಿದ್ದ ಗಡುವು ಈಗಾಗಲೇ ಮುಗಿದಿದೆ. ಆದರೂ ಇನ್ನೂ ಲಿಂಕ್ ಮಾಡದವರಿಗೆ ಒಂದು ತಿಂಗಳ ಕಾಲಾವಕಾಶವನ್ನು ಅಂಚೆ ಇಲಾಖೆ ನೀಡಿದ್ದು, ಆದಷ್ಟು ಬೇಗ ಮಾಡಿ ಮುಗಿಸುವಂತೆ ಮನವಿ ಮಾಡಿದೆ.
ಮುಂಬೈ (ಅ.27): ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಗೆ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಒಂದು ತಿಂಗಳೊಳಗೆ ಲಿಂಕ್ ಮಾಡುವಂತೆ ಅಂಚೆ ಇಲಾಖೆ ಗ್ರಾಹಕರಲ್ಲಿ ಮನವಿ ಮಾಡಿದೆ.ಅಲ್ಲದೆ, ಈ ಕೆಲಸ ಮಾಡಲು ವಿಫಲರಾದರೆ ಖಾತೆಯಿಂದ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗೋದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆ ತೆರೆಯಲು ಬಯಸೋರು ಕಡ್ಡಾಯವಾಗಿ ಆಧಾರ್ ಸಂಖ್ಯೆ ನೀಡಬೇಕು ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡಬೇಕು ಎಂದು ಈ ವರ್ಷದ ಪ್ರಾರಂಭದಲ್ಲಿ ಕೇಂದ್ರ ಸರ್ಕಾರ ಗಜೆಟೆಡ್ ಅಧಿಸೂಚನೆ ಮೂಲಕ ತಿಳಿಸಿತ್ತು. ಖಾತೆ ತೆರೆಯುವ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸೋದು ಹಾಗೂ ಭದ್ರತೆಯನ್ನು ಹೆಚ್ಚಿಸೋದು ಈ ಹೊಸ ನಿಯಮದ ಉದ್ದೇಶವಾಗಿದೆ. ಇನ್ನು ಈಗಾಗಲೇ ಖಾತೆ ಹೊಂದಿರೋರು ಈ ತನಕ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿಗೆ ನೀಡದಿದ್ದರೆ ಅಂಥವರು 2023ರ ಏಪ್ರಿಲ್ 1ರಿಂದ 6 ತಿಂಗಳೊಳಗೆ ನೀಡುವಂತೆ ತಿಳಿಸಲಾಗಿತ್ತು. ಇನ್ನು ನಿಗದಿತ ಕಾಲಾವಧಿಯೊಳಗೆ ಈ ಕೆಲಸ ಮಾಡಲು ವಿಫಲರಾದರೆ ಅಂಥ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ ಎಂದು ತಿಳಿಸಲಾಗಿತ್ತು.
ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಗೆ ಆಧಾರ್ ಸಂಖ್ಯೆ ಜೊತೆಗೆ ಮೊಬೈಲ್ ಸಂಖ್ಯೆ ಕೂಡ ಲಿಂಕ್ ಮಾಡೋದು ಕಡ್ಡಾಯ. ಸುರಕ್ಷತೆ ಹೆಚ್ಚಿಸಲು ಹಾಗೂ ಖಾತೆದಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಮುಖ ಮಾಹಿತಿಗಳನ್ನು ಎಸ್ ಎಂಎಸ್ ಮೂಲಕ ಖಾತೆದಾರರಿಗೆ ನೀಡಲು, ಅವರ ಖಾತೆಗಳಿಗೆ ಇ-ಪ್ರವೇಶ ನೀಡಲು ಹಾಗೂ ಫೋನ್ ಸೇವೆಗಳನ್ನು ಬಳಸಿಕೊಳ್ಳಲು ಈ ಅವಕಾಶ ನೀಡಲಾಗಿದೆ.
ಅಂಚೆ ಕಚೇರಿ ಉಳಿತಾಯ ಯೋಜನೆ ಹೂಡಿಕೆ ನಿಯಮಗಳಲ್ಲಿ ಬದಲಾವಣೆ;ಕೆವೈಸಿ ಜೊತೆಗೆ ಆದಾಯದ ದಾಖಲೆಯೂ ಅಗತ್ಯ
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ), ಅಂಚೆ ಕಚೇರಿ ಉಳಿತಾಯ ಯೋಜನೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಲಿಂಕ್ ಮಾಡಲು ಸೆಪ್ಟೆಂಬರ್ 31 ಅಂತಿಮ ಗಡುವಾಗಿತ್ತು. ಹಾಗೆಯೇ ಈಗಾಗಲೇ ಸಣ್ಣ ಉಳಿತಾಯ ಯೋಜನೆಗಳಲ್ಲಿ ಖಾತೆ ಹೊಂದಿದ್ದು, ಆಧಾರ್ ಸಂಖ್ಯೆ ಒದಗಿಸಲು ವಿಫಲರಾಗಿರೋರ ಖಾತೆಯನ್ನು 2023ರ ಅಕ್ಟೋಬರ್ 1ರಿಂದ ಫ್ರೀಜ್ ಮಾಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಹೀಗಾಗಿ ಅವಧಿ ಮುಗಿದಿದ್ದರೂ ಅಂಚೆ ಇಲಾಖೆ ಸಣ್ಣ ಉಳಿತಾಯ ಖಾತೆಗೆ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯನ್ನು ಒಂದು ತಿಂಗಳೊಳಗೆ ಲಿಂಕ್ ಮಾಡುವಂತೆ ಗ್ರಾಹಕರಲ್ಲಿ ಮನವಿ ಮಾಡಿದೆ.
ಸಣ್ಣ ಉಳಿತಾಯ ಯೋಜನೆ ಖಾತೆ ನಿಷ್ಕ್ರಿಯಗೊಂಡ್ರೆ ಏನಾಗುತ್ತೆ?
ಅಂಚೆ ಕಚೇರಿ ಗೆ ಆಧಾರ್ ಸಂಖ್ಯೆ ಸಲ್ಲಿಕೆ ಮಾಡದಿದ್ರೆ ಪಿಪಿಎಫ್, ಎನ್ ಎಸ್ ಸಿ ಅಥವಾ ಎಸ್ ಸಿಎಸ್ ಎಸ್ ಸೇರಿದಂತೆ ಸಣ್ಣ ಉಳಿತಾಯ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ. ಒಂದು ವೇಳೆ ನಿಮ್ಮ ಖಾತೆ ನಿಷ್ಕ್ರಿಗೊಂಡರೆ ನಿಮಗೆ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಪ್ರಯೋಜನಗಳು ಸಿಗೋದಿಲ್ಲ. ಅಲ್ಲದೆ, ಈ ಉಳಿತಾಯ ಯೋಜನೆಗಳ ಮೇಲೆ ಸಾಲ ತೆಗೆಯಲು ಹಾಗೂ ಅವಧಿಪೂರ್ಣ ವಿತ್ ಡ್ರಾ ಮಾಡಲು ಕೂಡ ಸಾಧ್ಯವಾಗೋದಿಲ್ಲ. ಬಾಕಿಯಿರುವ ಬಡ್ಡಿ ಕೂಡ ನಿಮ್ಮ ಖಾತೆಗೆ ಕ್ರೆಡಿಟ್ ಆಗೋದಿಲ್ಲ. ಇನ್ನು ಸಣ್ಣ ಉಳಿತಾಯ ಯೋಜನೆ ಮೆಚ್ಯುರಿಟಿ ಆಗಿದ್ದರೂ ಹಣ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ.
PPF ಬಡ್ಡಿದರ ಏಕೆ ಏರಿಕೆಯಾಗಿಲ್ಲ? ಮುಂದಿನ ದಿನಗಳಲ್ಲಿ ಹೆಚ್ಚಳವಾಗುತ್ತಾ?
ಆಧಾರ್ ಲಿಂಕ್ ಮಾಡೋದು ಹೇಗೆ?
ಅಂಚೆ ಕಚೇರಿಗೆ ಭೇಟಿ ನೀಡಿ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬಹುದು. ಹೀಗಾಗಿ ನೀವು ಇನ್ನೂ ಸಣ್ಣ ಉಳಿತಾಯ ಖಾತೆಗಳಿಗೆ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಲಿಂಕ್ ಮಾಡದಿದ್ದರೆ ತಕ್ಷಣ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ.