ರಿಲಯನ್ಸ್ ನಲ್ಲಿ ಹೊಸ ಯುಗಾರಂಭ; ನಿರ್ದೇಶಕರ ಮಂಡಳಿಗೆ ಇಶಾ, ಆಕಾಶ್, ಅನಂತ್ ಸೇರ್ಪಡೆಗೆ ಷೇರುದಾರರ ಗ್ರೀನ್ ಸಿಗ್ನಲ್

By Suvarna News  |  First Published Oct 27, 2023, 3:52 PM IST

ರಿಲಯನ್ಸ್ ನಿರ್ದೇಶಕರ ಮಂಡಳಿಗೆ ಮುಖೇಶ್ ಅಂಬಾನಿ ಮೂವರು ಮಕ್ಕಳ ಸೇರ್ಪಡೆಗೆ ಷೇರುದಾರರು ಅನುಮೋದನೆ ನೀಡಿದ್ದಾರೆ. ಹೀಗಾಗಿ ರಿಲಯನ್ಸ್ ನಲ್ಲಿ ಇನ್ನು ಮುಂದೆ ಇಶಾ, ಆಕಾಶ್ ಹಾಗೂ ಅನಂತ್ ಅವರ ಯುಗಾರಂಭವಾಗಲಿದೆ.  


ನವದೆಹಲಿ (ಅ.27): ರಿಲಯನ್ಸ್ ಸಾಮ್ರಾಜ್ಯದಲ್ಲಿ ಹೊಸ ಯುಗ ಪ್ರಾರಂಭವಾಗಲಿದೆ. ಆರ್ ಐಎಲ್ ನಿರ್ದೇಶಕರ ಮಂಡಳಿಗೆ  ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಸೇರ್ಪಡೆಗೆ ಷೇರುದಾರರು ಅನುಮತಿ ನೀಡಿದ್ದಾರೆ.  ಶುಕ್ರವಾರ ಸ್ಟಾಕ್ ಎಕ್ಸ್ ಚೇಂಜ್ ಗೆ ಸಲ್ಲಿಸಿದ ಫೈಲಿಂಗ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಈ ಮಾಹಿತಿ ಬಹಿರಂಗಪಡಿಸಿದೆ. 2024ನೇ ಹಣಕಾಸು ಸಾಲಿನ ಆರ್ ಐಎಲ್ ದ್ವಿತೀಯ ತ್ರೈಮಾಸಿಕದ ವರದಿ ಪ್ರಕಟವಾಗಲು ಕೆಲವೇ ದಿನಗಳು ಬಾಕಿ ಉಳಿದಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಕಂಪನಿಯ ಷೇರುಗಳಲ್ಲಿ ಶೇ.1.8 ಏರಿಕೆ ಕಂಡುಬಂದಿದೆ. ರಿಲಯನ್ಸ್ ನಿರ್ದೇಶಕರ ಮಂಡಳಿಗೆ ನೇಮಕಗೊಳ್ಳಲು ಅವಳಿ-ಜವಳಿಗಳಾದ 32 ವರ್ಷ ವಯಸ್ಸಿನ ಇಶಾ ಹಾಗೂ ಆಕಾಶ್ ಶೇ.98ಕ್ಕೂ ಅಧಿಕ ಮತಗಳನ್ನು ಪಡೆದಿದ್ದರೆ, 28 ವರ್ಷದ ಅನಂತ್ ಅವರಿಗೆ ಶೇ.92.75ರಷ್ಟು ಮತಗಳು ಬಿದ್ದಿವೆ ಎಂದು ಫೈಲಿಂಗ್ ನಲ್ಲಿ ತಿಳಿಸಲಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳಿಗೆ ನಿರ್ದೇಶಕರ ನೇಮಕಕ್ಕೆ ಅಥವಾ ಇನ್ಯಾವುದೋ ಪ್ರಮುಖ ನಿರ್ಧಾರ ಕೈಗೊಳ್ಳಲು ಷೇರುದಾರರ ಅನುಮೋದನೆ ಪಡೆಯೋದು ಅಗತ್ಯ. ಇದಕ್ಕೆ ಷೇರುದಾರರಿಂದ ವೋಟಿಂಗ್ ಕೂಡ ನಡೆಯುತ್ತದೆ. 

ಮುಖೇಶ್ ಅಂಬಾನಿ ಈಗಾಗಲೇ ತಮ್ಮ ಉದ್ಯಮ ಸಾಮ್ರಾಜ್ಯದ ವಿವಿಧ ಜವಾಬ್ದಾರಿಗಳನ್ನು ತಮ್ಮ ಮೂವರು ಮಕ್ಕಳಿಗೆ ಹಂಚಿಕೆ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೂವರು ಮಕ್ಕಳು ಕೂಡ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಪ್ರಮುಖ ಉದ್ಯಮಗಳ ನೇತೃತ್ವ ವಹಿಸಿದ್ದಾರೆ ಕೂಡ. ಕಂಪನಿಯ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ತಮ್ಮ ಮಕ್ಕಳಿಗೆ ವಿವಿಧ ಉದ್ಯಮಗಳನ್ನು ಹಂಚಿಕೆ ಮಾಡಿರುವ ಮಾಹಿತಿ ನೀಡಿದ್ದರು. ತಮ್ಮ ಮೂವರು ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿ ಸಂಸ್ಥೆಯ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವನ್ನು ಕೂಡ ಮುಖೇಶ್ ವ್ಯಕ್ತಪಡಿಸಿದ್ದರು. ಅಲ್ಲದೆ, ಮುಂದಿನ 5 ವರ್ಷಗಳ ಕಾಲ ಆರ್ ಐಎಲ್ ಮುಖ್ಯಸ್ಥನಾಗಿ ತಾನು ಅವರು ಜಿಯೋ, ರಿಟೇಲ್ ಹಾಗೂ ಹೊಸ ಇಂಧನ ಉದ್ಯಮಗಳನ್ನು ಸಮರ್ಥವಾಗಿ ನಿಭಾಯಿಸಲು ಸೂಕ್ತ ಮಾರ್ಗದರ್ಶನ ನೀಡೋದಾಗಿ 66 ವರ್ಷದ ಮುಖೇಶ್ ಅಂಬಾನಿ ತಿಳಿಸಿದ್ದರು.

Tap to resize

Latest Videos

ರಿಲಯನ್ಸ್ ಮಂಡಳಿಗೆ ಅನಂತ್ ಅಂಬಾನಿ ನೇಮಕಕ್ಕೆ ಹಿನ್ನಡೆ; ವೋಟ್ ಮಾಡದಂತೆ ಹೂಡಿಕೆದಾರರಿಗೆ ಐಐಎಎಸ್ ಸಲಹೆ

ಸ್ಟ್ಯಾನ್ ಫೋರ್ಡ್ ಯುನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದಿರುವ ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಈಗಾಗಲೇ ರಿಲಯನ್ಸ್ ರಿಟೇಲ್ ಸಂಸ್ಥೆ ಉದ್ಯಮ ವಿಸ್ತರಣೆ ನಿಟ್ಟಿನಲ್ಲಿ ಸಾಕಷ್ಟು ಮಹತ್ವದ ಹೆಜ್ಜೆಗಳನ್ನಿಟ್ಟಿದೆ. ಇಶಾ ಉದ್ಯಮಿ ಅಜಯ್ ಪಿರಮಲ್ ಅವರ ಪುತ್ರ ಆನಂದ್ ಪಿರಮಲ್ ಅವರನ್ನು ವಿವಾಹವಾಗಿದ್ದಾರೆ. ಇನ್ನು ಇಶಾ ಅವರ ಅವಳಿ ಸಹೋದರ ಆಕಾಶ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಮುಖ್ಯಸ್ಥರಾಗಿದ್ದಾರೆ. ಇನ್ನು ಕಿರಿಯ ಪುತ್ರ ಅನಂತ್ ಅಂಬಾನಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಮನರಂಜನಾ ಉದ್ಯಮದಲ್ಲೂ ಅಂಬಾನಿಯದ್ದೇ ಸಾಮ್ರಾಜ್ಯ: ಡಿಸ್ನಿ ಹಾಟ್‌ಸ್ಟಾರ್‌ ಕೂಡ ರಿಲಯನ್ಸ್ ಪಾಲು!

ರಿಲಯನ್ಸ್ ನಿರ್ದೇಶಕರ ಮಂಡಳಿಗೆ ಅನಂತ್ ಅಂಬಾನಿ ನೇಮಕಕ್ಕೆ ಅನುಮೋದನೆ ನೀಡದಂತೆ ಪ್ರಾಕ್ಸಿ ಅಡ್ವೈಸರಿ ಸಂಸ್ಥೆ ಐಐಎಎಸ್ ಷೇರುದಾರರಿಗೆ ಸಲಹೆ ನೀಡಿತ್ತು. ಅನಂತ್ ವಯಸ್ಸು ಹಾಗೂ ಅನುಭವ ಕಡಿಮೆಯಿದ್ದು,ಇದು ವೋಟಿಂಗ್ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ಐಐಎಎಸ್ ತಿಳಿಸಿತ್ತು. . ಅನಂತ್ ಅಂಬಾನಿ ಅವರ ವಯಸ್ಸು 30 ವರ್ಷಕ್ಕಿಂತ ಕಡಿಮೆಯಿದೆ ಹಾಗೂ ಅವರಿಗೆ 10 ವರ್ಷಗಳ ಅನುಭವ ಕೂಡ ಇಲ್ಲ. ಹೀಗಾಗಿ ಅವರಿಗೆ ಮತ ನೀಡದಂತೆ ಷೇರುದಾರರಿಗೆ ಐಐಎಎಸ್ ಸಲಹೆ ನೀಡಿತ್ತು. ಆದರೆ, ಮುಖೇಶ್ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಪುತ್ರಿ ಇಶಾ ಅಂಬಾನಿ ನೇಮಕಕ್ಕೆ ಈ ಸಂಸ್ಥೆ ಅನುಮೋದನೆ ನೀಡಿತ್ತು.


 

click me!