ಯುಎಇ ಮತ್ತು ಭಾರತದ ಭವಿಷ್ಯವು ಶತಮಾನಗಳಿಂದ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಸ್ನೇಹ, ವಿಶ್ವಾಸ ಮತ್ತು ಉದ್ಯಮಶೀಲತೆಯ ಮನೋಭಾವದಲ್ಲಿ ನೆಲೆಗೊಂಡಿರುವ ನಿಕಟ ಸಹಯೋಗವು ನಮ್ಮ ಆರ್ಥಿಕತೆಗಳಿಗೆ, ಕೈಗಾರಿಕೆಗಳಿಗೆ, ನಗರಗಳಿಗೆ ಮತ್ತು ನಮ್ಮ ಜನರಿಗೆ, ಇಂದಿನ ಮತ್ತು ಮುಂದಿನ ಪೀಳಿಗೆಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ.
ನಾವು 2021 ಅನ್ನು ಹಿಂತಿರುಗಿ ನೋಡಿದಾಗ ಮತ್ತು 2022ನೇ ವರ್ಷದ ಮುನ್ನೋಟವನ್ನು ಗಮನಿಸಿದಾಗ, ನಮ್ಮ ಎರಡೂ ರಾಷ್ಟ್ರಗಳು ಐತಿಹಾಸಿಕ ತಿರುವಿನಲ್ಲಿವೆ ಎಂಬುದು ಸ್ಪಷ್ಟವಾಗುತ್ತದೆ. ಯುಎಇ ತನ್ನ 50ನೇ ವರ್ಷವನ್ನು ಆಚರಿಸುತ್ತಿದೆ ಮತ್ತು ಮುಂದಿನ 50 ವರ್ಷಗಳ ಬೆಳವಣಿಗೆಗೆ ತನ್ನ ದೃಷ್ಟಿಕೋನವನ್ನು ರೂಪಿಸಿದೆ.
ಭಾರತ ತನ್ನ ಸ್ವಾತಂತ್ರ್ಯದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ ಮತ್ತು ಹೊಸ ಚೈತನ್ಯ ಮತ್ತು ಉತ್ಸಾಹದಿಂದ ತನ್ನ ದೀರ್ಘಾವಧಿಯ ಅಭಿವೃದ್ಧಿ ಪಯಣದಲ್ಲಿ ಮುನ್ನಡೆಯುತ್ತಿದೆ. ಸ್ವಲ್ಪವೇ ಸಮಯದ ಹಿಂದೆ 2017ರಲ್ಲಿ, ನಮ್ಮ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯಾಗಿ ಬೆಳೆಸಲು ಎರಡೂ ದೇಶಗಳ ನಾಯಕರು ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಂಡರು. ಅಂದಿನಿಂದ, ನಮ್ಮ ಸಮಯ ಪರೀಕ್ಷಿತ ಸಂಬಂಧವು ಇದೇ ರೀತಿಯ ದೃಷ್ಟಿಕೋನ, ಗಾಢ ಬಾಂಧವ್ಯ ಮತ್ತು ನಿರಂತರ ತಿಳುವಳಿಕೆಯಲ್ಲಿ ಬೇರೂರಿದೆ, ಬಲವಾದ ಮತ್ತು ಬಹುಮುಖಿ ದ್ವಿಪಕ್ಷೀಯ ಸಹಕಾರವಾಗಿ ಅರಳಿದೆ. ಇದು ನಮ್ಮ ಮಿಲಿಯನ್‌ಗಟ್ಟಲೆ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಪ್ರತಿಕೂಲ ಕಾಲದಲ್ಲಿ ಒಗ್ಗಟ್ಟು
ಈ ವಿಶೇಷ ಸಂಬಂಧವು ಜಗತ್ತಿನ ಸಂಕೀರ್ಣ ಮತ್ತು ಅನಿಶ್ಚಿತ ಸವಾಲುಗಳಿಗೆ ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಕಸನವಾಯಿತು. ನಮ್ಮ ರಾಷ್ಟ್ರಗಳ ಸ್ಥೈರ್ಯ ಮತ್ತು ಸ್ಥಿತಿಸ್ಥಾಪಕತ್ವ ಮುಖ್ಯವಾಗಿ ನಮ್ಮ ಗಾಢ ಸ್ನೇಹವು ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಪ್ರಕಾಶಿಸಿದೆ. ಎಲ್ಲಾ ಸಮುದಾಯಗಳ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ವ್ಯಾಪಾರ, ತಂತ್ರಜ್ಞಾನ, ಪ್ರತಿಭೆ ಮತ್ತು ಪ್ರವಾಸೋದ್ಯಮದ ಸಮರ್ಥ ಬಳಕೆಯ ಮೂಲಕ ನಮ್ಮ ಜನರು ಮತ್ತು ವಿಶಾಲ ಜಗತ್ತಿನ ಪ್ರಗತಿಯ ಮೇಲೆ ದೃಢವಾದ ಗಮನವನ್ನು ನೀಡಿದ್ದೇವೆ.
UP Election: ಯಾದವೇತರರು ಒಟ್ಟಿಗೆ ಬಂದರೆ ಬಿಜೆಪಿಗೆ ಲಾಭ, ಬರದೇ ಹೋದರೆ ಅಖಿಲೇಶ್‌ಗೆ ಲಾಭ
ಸಾಂಕ್ರಾಮಿಕದ ಹೊರತಾಗಿಯೂ ಯುಎಇ ಎಕ್ಸ್‌ಪೋ 2020 ಅನ್ನು ಯಶಸ್ವಿಯಾಗಿ ಆಯೋಜಿಸಿರುವುದು ಇದಕ್ಕೊಂದು ನಿದರ್ಶನ. ಭಾರತವು ರಾಷ್ಟ್ರೀಯ ಮನೋಭಾವವನ್ನು ಉತ್ತೇಜಿಸುವ ಮತ್ತು ಸಂದರ್ಶಕರನ್ನು ಆಕರ್ಷಿಸುವ ಸ್ಫೂರ್ತಿದಾಯಕ ಪೆವಿಲಿಯನ್‌ನೊಂದಿಗೆ ತನ್ನ ಪಾತ್ರವನ್ನು ವಹಿಸಿದೆ. ಇಂದು, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯು ಒಂದು ಮಹತ್ವದ ಬದಲಾವಣೆಯ ಹಂತದಲ್ಲಿದೆ.
ಕೋವಿಡ್ ನಂತರದ ಯುಗದಲ್ಲಿ ಸಹಯೋಗದ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಹುಸಾಧ್ಯತೆಗಳನ್ನು ಅನ್ವೇಷಿಸುತ್ತಿರುವಾಗ, ನಾವು ಮತ್ತೊಮ್ಮೆ ನಮ್ಮ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹಂಚಿಕೆಯ ದೃಷ್ಟಿಕೋನವನ್ನು ಹೊಂದಿದ್ದೇವೆ. ಸುಸ್ಥಿರತೆ, ಹವಾಮಾನ ಕ್ರಮ, ನಾವೀನ್ಯತೆ, ಡಿಜಿಟಲೀಕರಣ, ಸ್ಟಾರ್ಟ್‌ಅಪ್‌ಗಳು, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ, ಫಿನ್-ಟೆಕ್ ಮತ್ತು ಕೌಶಲ್ಯದಂತಹ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರ ಕುರಿತು ವಿಶೇಷ ಗಮನಹರಿಸುವುದರೊಂದಿಗೆ ನಮ್ಮ ಪರಸ್ಪರ ಹಂಚಿಕೆಯ ದೃಷ್ಟಿಕೋನವು ಭವಿಷ್ಯಕ್ಕೆ ಸಿದ್ಧವಾಗಿರುವ ಪಾಲುದಾರಿಕೆಯನ್ನು ರೂಪಿಸುತ್ತದೆ.
ಇತಿಹಾಸ ನಿರ್ಮಾಣ
ಕೇವಲ 5 ತಿಂಗಳ ಹಿಂದೆ, ಒಂದು ಐತಿಹಾಸಿಕ ಕಾರ್ಯಕ್ಕಾಗಿ ಭರವಸೆ ಮತ್ತು ಆಶಾವಾದದ ಹಂಚಿಕೆಯ ಪ್ರಜ್ಞೆಯೊಂದಿಗೆ ನಾವು ಒಟ್ಟಾದೆವು. ಅದೆಂದರೆ, ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಕುರಿತು ಮಾತುಕತೆಗಳನ್ನು ಪ್ರಾರಂಭಿಸುವುದು. ಇದು ವ್ಯಾಪಾರ, ವಾಣಿಜ್ಯ ಮತ್ತು ಹೂಡಿಕೆಗಳಿಗೆ ಅಗಾಧ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ, ಕಠಿಣವಾದ ಆದರೆ ಸಂಭಾವ್ಯ ಪರಿವರ್ತನೆಯ ಸಮಯದಲ್ಲಿ ನಿರಂತರ ಜಾಗತಿಕ ಚೇತರಿಕೆಗೆ ಕೊಡುಗೆ ನೀಡುತ್ತದೆ. ಪ್ರಗತಿಯ ಬಗೆಗಿನ ಪರಸ್ಪರ ಆಶಯ ಮತ್ತು ಎರಡೂ ದೇಶಗಳಲ್ಲಿನ ಜನರಿಗೆ ದೂರಗಾಮಿ ಪ್ರಯೋಜನಗಳನ್ನು ತಲುಪಿಸುವ ಅಚಲ ಬದ್ಧತೆ ಎರಡೂ ಕಡೆಗಳಲ್ಲಿ ಗಾಢವಾಗಿದೆ.
ಈ ಜಂಟಿ ಉದ್ದೇಶವು ಮಾತುಕತೆಗಳನ್ನು ಪ್ರೇರೇಪಿಸಿತು, ಇದು ಸದ್ಯದ ಸಾಂಕ್ರಾಮಿಕ ರೋಗದ ಸವಾಲುಗಳ ನಡುವೆಯೂ ಅಸಾಧಾರಣವಾದ ವೇಗದಲ್ಲಿ ಮುನ್ನಡೆಯಿತು. ಇಂದು ಒಪ್ಪಂದವು ಸಹಿ ಮಾಡಲ್ಪಟ್ಟಿದೆ, ಮೊಹರು ಮಾಡಲ್ಪಟ್ಟಿದೆ ಮತ್ತು ವಿತರಿಸಲ್ಪಟ್ಟಿದೆ. ಯುಎಇ ಮತ್ತು ಭಾರತದ ನಡುವಿನ ಸಮೃದ್ಧವಾದ ಮತ್ತು ಕಾರ್ಯತಂತ್ರದ ಸಹಕಾರದ ಹೊಸ ಯುಗಕ್ಕೆ ವೇದಿಕೆಯು ಸಿದ್ಧವಾಗಿದೆ, ಇದು ಎರಡೂ ರಾಷ್ಟ್ರಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಭವಿಷ್ಯದ ಬೆಳವಣಿಗೆ
ನೇರ ಪ್ರತಿಫಲಗಳು ಎರಡೂ ರಾಷ್ಟ್ರಗಳಿಗೆ ಸ್ಪಷ್ಟವಾಗಿವೆ. ದ್ವಿಪಕ್ಷೀಯ ವ್ಯಾಪಾರವು ಐದು ವರ್ಷಗಳಲ್ಲಿ 100 ಶತಕೋಟಿ ಡಾಲರ್‌ಗೆ ಬೆಳೆಯುತ್ತದೆ, ಇದು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗುತ್ತದೆ. ಹೆಚ್ಚಿನ ಮಾರುಕಟ್ಟೆಪ್ರವೇಶವು ರಫ್ತುದಾರರು, ಆಮದುದಾರರು ಮತ್ತು ಗ್ರಾಹಕರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಪ್ರಯೋಜನವನ್ನು ನೀಡುತ್ತದೆ. ಅತ್ಯಗತ್ಯ, ಉನ್ನತ ಕೌಶಲ್ಯದ ವೃತ್ತಿಪರರು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ ಮತ್ತು ನಮ್ಮ ಎರಡೂ ದೇಶಗಳ ಜನರ ಅನುಕೂಲಕ್ಕಾಗಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು.
ಭಾರತದ ವ್ಯವಹಾರ ಸಂಸ್ಥೆಗಳು ಅನೇಕ ಉತ್ಪನ್ನಗಳಿಗೆ ವಿಶೇಷವಾಗಿ ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆ, ಪ್ಲಾಸ್ಟಿಕ್, ಕೃಷಿ ಉತ್ಪನ್ನಗಳು, ಇಂಜಿನಿಯರಿಂಗ್ ಸರಕುಗಳು ಮತ್ತು ಔಷಧಿಗಳಂತಹ ಕಾರ್ಮಿಕರು ಹೆಚ್ಚು ಬೇಡಿಕೆಯಿರುವ ವಲಯಗಳಲ್ಲಿ ಸುಧಾರಿತ ಮಾರುಕಟ್ಟೆಯನ್ನು ಪಡೆಯುತ್ತವೆ. ಮತ್ತೊಂದೆಡೆ, ಯುಎಇಯ ರಫ್ತುದಾರರು ಭಾರತದ ದೊಡ್ಡ ಮಾರುಕಟ್ಟೆಗೆ ವಿಶೇಷವಾಗಿ ಪೆಟ್ರೋಲಿಯಂ, ಲೋಹಗಳು, ಖನಿಜಗಳು, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್‌ಗಳಂತಹ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಪಡೆಯುತ್ತಾರೆ. ಪ್ಲಾಸ್ಟಿಕ್‌ಗಳು, ರತ್ನಗಳು ಮತ್ತು ಆಭರಣಗಳಂತಹ ಭಾರತದಲ್ಲಿನ ಡೌನ್‌ಸ್ಟ್ರೀಮ… ಉದ್ದಿಮೆಗಳು ಕಡಿಮೆ ಬೆಲೆಯ ಕಚ್ಚಾವಸ್ತುಗಳಿಂದ ಪ್ರಯೋಜನಗಳನ್ನು ಪಡೆಯುತ್ತವೆ.
ಸ್ಟಾರ್ಟಪ್‌ಗಳ ಪ್ರವೇಶ
ನಮ್ಮ ಜನರು ಎರಡೂ ದೇಶಗಳ ನಡುವೆ ಶತಮಾನಗಳಷ್ಟುಕಾಲ ತಡೆರಹಿತ ಸಂಚಾರವನ್ನು ಆನಂದಿಸಿದ್ದಾರೆ. ಈ ಸಿಇಪಿಎಯು ಭಾರತದ ವೃತ್ತಿಪರರಿಗೆ ಯುಎಇಯಲ್ಲಿ ಹೆಚ್ಚಿನ ಅವಕಾಶಗಳನ್ನು ಹುಡುಕಲು ಮತ್ತು ಜಾಗತಿಕ ವೇದಿಕೆಯಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ. ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್ ಮತ್ತು ಇತರ ಪ್ರದೇಶಗಳಿಗೆ ಯುಎಇ ಕಾರ್ಯತಂತ್ರದ ಗೇಟ್‌ವೇ ಆಗುವುದರಿಂದ ಎರಡೂ ಕಡೆಯವರು ಪ್ರಯೋಜನ ಪಡೆಯುತ್ತಾರೆ. ಎಲ್ಲಾ ರೀತಿಯ ಬಂಡವಾಳ- ಹಣಕಾಸು, ತಾಂತ್ರಿಕ ಮತ್ತು ಮಾನವ-ಹೊಸ ಮತ್ತು ಹೆಚ್ಚು ಪರಿಣಾಮಕಾರಿ ಚೌಕಟ್ಟಿನೊಂದಿಗೆ ಎರಡೂ ದಿಕ್ಕುಗಳಲ್ಲಿ ಹರಿಯುತ್ತದೆ. ಭಾರತವು ತನ್ನ ಇತ್ತೀಚಿನ ಬಜೆಟ್‌ನಲ್ಲಿ ಸಾರ್ವಜನಿಕ ಬಂಡವಾಳ ಹೂಡಿಕೆಯಲ್ಲಿ ಖಾಸಗಿ ಹೂಡಿಕೆಯ ಮೇಲೆ ಗಮನಹರಿಸಿದೆ.
ಬಿಜೆಪಿಗೆ ರಾಜಕೀಯ ಲಾಭದ ನಿರೀಕ್ಷೆ, ಕಾಂಗ್ರೆಸ್ ವೋಟ್ ಕಳೆದುಕೊಳ್ಳುವ ಆತಂಕ
ಭಾರತದ ಬೆಳವಣಿಗೆಯಿಂದ ಲಾಭ ಪಡೆಯಲು ಯುಎಇ ಹೂಡಿಕೆಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸಹ ಜಾಗತಿಕವಾಗಿ ಸ್ಪರ್ಧಿಸಲು ಸುಲಭವಾಗುತ್ತದೆ. ಭಾರತ ಮತ್ತು ಯುಎಇ ಆಕರ್ಷಕ, ಸ್ಪರ್ಧಾತ್ಮಕ ಮತ್ತು ಪೂರಕ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗಳನ್ನು ಹೊಂದಿವೆ.
ಬೆಂಗಳೂರು, ಮುಂಬೈ, ನವದೆಹಲಿ ಸೇರಿದಂತೆ ಭಾರತದ ವಿವಿಧ ರಾಜ್ಯಗಳು/ನಗರಗಳಿಂದ ಅಬುಧಾಬಿ ಮತ್ತು ದುಬೈನಂತಹ ಯುಎಇಯ ವ್ಯಾಪಾರ ಕೇಂದ್ರಗಳಿಗೆ ಉದ್ಯಮಶೀಲತೆಯ ಸುವರ್ಣ ಯುಗ ಹೊರಹೊಮ್ಮುತ್ತಿದೆ. ನಮ್ಮ ಸಿಇಪಿಎ ಹೊಸ ಗ್ರಾಹಕರು, ನೆಟ್‌ವರ್ಕ್ಗಳು ಮತ್ತು ಅವಕಾಶಗಳಿಗೆ ಸ್ಟಾರ್ಟ್‌ಅಪ್ ಪ್ರವೇಶವನ್ನು ನೀಡುತ್ತದೆ ಮತ್ತು ಅವುಗಳು ತ್ವರಿತವಾಗಿ ಬೆಳೆಯಲು ಚಿಮ್ಮುಹಲಗೆಯಾಗಿ ಬಳಸಿಕೊಳ್ಳಲು ಸುಧಾರಿತ ಕಾರ್ಯವಿಧಾನಗಳನ್ನು ಒದಗಿಸುತ್ತದೆ.
ಭವಿಷ್ಯಕ್ಕೆ ಚೈತನ್ಯ
ನಮ್ಮ ಎರಡು ದೇಶಗಳು ಇಂಧನ ಕ್ಷೇತ್ರದಲ್ಲಿ ಅತ್ಯಂತ ನಿಕಟ ಸಂಬಂಧವನ್ನು ಹೊಂದಿವೆ. ಸ್ವಚ್ಛ ಮತ್ತು ಹಸಿರು ಭವಿಷ್ಯಕ್ಕಾಗಿ ನಾವು ಸಮಯೋಚಿತ, ಸಮಾನ ಮತ್ತು ನ್ಯಾಯಯುತ ಇಂಧನ ಪರಿವರ್ತನೆಗೆ ಬದ್ಧರಾಗಿರುತ್ತೇವೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿನ ನಮ್ಮ ಸಂಬಂಧವು ಎರಡೂ ದೇಶಗಳಲ್ಲಿ ಪರಸ್ಪರ ಹೂಡಿಕೆಯೊಂದಿಗೆ ಅನನ್ಯವಾಗಿದೆ. ಭಾರತದ ಆಯಕಟ್ಟಿನ ಪೆಟ್ರೋಲಿಯಂ ನಿಕ್ಷೇಪಗಳಲ್ಲಿ ಭಾಗವಹಿಸುವ ಏಕೈಕ ದೇಶ ಯುಎಇಯಾಗಿದೆ.
ಎರಡೂ ರಾಷ್ಟ್ರಗಳು ಕ್ರಿಯಾತ್ಮಕ ಹೊಸ ವ್ಯಾಪಾರ ಮತ್ತು ಹೂಡಿಕೆ ನೀತಿಗಳನ್ನು ಅನುಸರಿಸುತ್ತಿದ್ದೇವೆ. ಭಾರತವು 2022ರಲ್ಲಿ 400 ಶತಕೋಟಿ ಡಾಲರ್ ರಫ್ತುಗಳನ್ನು ಮೀರುವ ನಿರೀಕ್ಷೆಯಿದೆ. 2030ರ ವೇಳೆಗೆ ತನ್ನ ಆರ್ಥಿಕತೆಯ ಗಾತ್ರವನ್ನು ದ್ವಿಗುಣಗೊಳಿಸುವ ಯುಎಇಯ ಪ್ರಯತ್ನಗಳಲ್ಲಿ ನಮ್ಮ ವೃದ್ಧಿಸುತ್ತಿರುವ ದ್ವಿಪಕ್ಷೀಯ ವ್ಯಾಪಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಯುಎಇ ಮತ್ತು ಭಾರತದ ಭವಿಷ್ಯವು ಶತಮಾನಗಳಿಂದ ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಸ್ನೇಹ, ವಿಶ್ವಾಸ ಮತ್ತು ಉದ್ಯಮಶೀಲತೆಯ ಮನೋಭಾವದಲ್ಲಿ ನೆಲೆಗೊಂಡಿರುವ ನಿಕಟ ಸಹಯೋಗವು ನಮ್ಮ ಆರ್ಥಿಕತೆಗಳಿಗೆ, ಕೈಗಾರಿಕೆಗಳಿಗೆ, ನಗರಗಳಿಗೆ ಮತ್ತು ನಮ್ಮ ಜನರಿಗೆ, ಇಂದಿನ ಮತ್ತು ಮುಂದಿನ ಪೀಳಿಗೆಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ನಮ್ಮ ಆಶಯದ ದೃಷ್ಟಿಕೋನವಾಗಿದೆ.
- ಪಿಯೂಷ್ ಗೋಯಲ್
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ