ಬದಲಾಯ್ತಾ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿಲುವು?| ಭಾರತ ಬಿಟ್ಟು ಚೀನಾದತ್ತ ಹೊರಳಿದ ಟ್ರಂಪ್ ವ್ಯಾಪಾರ ಬುದ್ಧಿ| ಚೀನಾದೊಂದಿಗಿನ ವಾಣಿಜ್ಯ ಸಮರ ಕೊನೆಗಾಣಿಸಲು ಟ್ರಂಪ್ ಒಲವು| ಚೀನಾ ಜೊತೆ ವ್ಯಾಪಾರಕ್ಕೆ ಸಿದ್ಧ ಎಂದು ಸಂದೇಶ ಕಳುಹಿಸಿದ ಅಮೆರಿಕ ಅಧ್ಯಕ್ಷ|
ವಾಷಿಂಗ್ಟನ್(ಮಾ.09): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿಜಕ್ಕೂ ಊಹೆಗೆ ನಿಲುಕದ ಮನುಷ್ಯ. ಈ ಕ್ಷಣ ಒಂದು ಹೇಳುವ ಟ್ರಂಪ್ ಅರೆಕ್ಷಣದಲ್ಲಿ ಮತ್ತೊಂದನ್ನು ಹೇಳುತ್ತಾರೆ. ಚೀನಾದೊಂದಿಗೆ ವಾಣಿಜ್ಯ ಸಮರದಲ್ಲಿ ತೊಡಗಿದ್ದ ಈ ಆಸಾಮಿ, ತನ್ನ ಲಾಭಕ್ಕಾಗಿ ಭಾರತಕ್ಕೆ ಬೆಣ್ಣೆ ಹಚ್ಚಿದ್ದು ಎಲ್ಲಿರಿಗೂ ಗೊತ್ತಿರುವ ಸಂಗತಿ.
ಆದರೆ ಇದೀಗ ಟ್ರಂಪ್‌ಗೆ ಭಾರತ ಬೇಡವಾಗಿದೆ. ಇದೇ ಕಾರಣಕ್ಕೆ ಭಾರತ ತನ್ನ ವಸ್ತುಗಳ ಮೇಲೆ ಅಧಿಕ ಆಮದು ಸುಂಕ ವಿಧಿಸುತ್ತಿದ್ದು, ತಾನೂ ಕೂಡ ಭಾರತದ ವಸ್ತುಗಳ ಮೇಲೆ ಅಧಿಕ ಸುಂಕ ವಿಧಿಸುವುದಾಗಿ ಹೇಳಿದ್ದಾರೆ.
undefined
ಆದರೆ ಭಾರತದೊಂದಿಗೆ ವ್ಯಾಪಾರ ಡಲ್ ಆದರೆ ಏನು ಮಾಡಬೇಕು ಎಂಬ ಚಿಂತೆ ಟ್ರಂಪ್‌ಗೆ ಕಾಡುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಂಡಿರುವ ಟ್ರಂಪ್, ಈ ಹಿಂದೆ ದೂರ ತಳ್ಳಿದ ಚೀನಾದತ್ತ ಒಲವಿನ ದೃಷ್ಟಿ ಹರಿಸಿದ್ದಾರೆ.
ಅಮೆರಿಕ-ಚೀನಾ ವಾಣಿಜ್ಯ ಸಮರ ಇಡೀ ವಿಶ್ವವನ್ನೇ ತಲ್ಲಣಗೊಳಿಸಿತ್ತು. ಜಗತ್ತಿನ ಎರಡು ದೈತ್ಯ ರಾಷ್ಟ್ರಗಳ ನಡುವಿನ ವ್ಯಾಪಾರ ಸಮರ ಇತರ ಚಿಕ್ಕ ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಅಷ್ಟೇ ಏಕೆ ವಾಣಿಜ್ಯ ಹೊಡೆತದ ಪರಿಣಾಮ ಸ್ವತಃ ಚೀನಾ ಕೂಡ ತನ್ನ ಜಿಡಿಪಿ ಗುರಿಯನ್ನು ಕಡಿತಗೊಳಿಸಿದೆ.
ಇನ್ನು ದೀರ್ಘಕಾಲದ ವಾಣಿಜ್ಯ ಸಮರದ ಪರಿಣಾಮ ಅಮೆರಿಕ ಕೂಡ ಸುಸ್ತಾಗಿದ್ದು, ಇದೀಗ ಚೀನಾದೊಂದಿಗೆ ಒಪ್ಪಂದಕ್ಕೆ ಮುಂದಾಗಿದೆ. ಇದೇ ಕಾರಣಕ್ಕೆ ಚೀನಾದೊಂದಿಗೆ ವ್ಯಾಪಾರ ಸಾಧ್ಯತೆ ಇದ್ದು, ಅದು ನಮಗೆ ಲಾಭದಾಯಕವಾಗಿದ್ದರೆ ಮಾತ್ರ ಎಂದು ಟ್ರಂಪ್ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಅಂದರೆ ಚೀನಾದೊಂದಿಗೆ ವ್ಯಾಪಾರ ವೃದ್ಧಿಗೆ ಮುಂದಾಗಿರುವ ಟ್ರಂಪ್, ಅದರಲ್ಲಿ ಅಮೆರಿಕದ ಲಾಭ ಹುಡುಕುತ್ತಿದ್ದಾರೆ. ಇದಕ್ಕೆ ಬಿಜಿಂಗ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಕಾದು ನೋಡಬೇಕಿದೆ.
ಚೀನಾದ ಸುಮಾರು 250 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ವಸ್ತುಗಳ ಮೇಲೆ ಅಮೆರಿಕ ಶೇ.25ರಷ್ಟು ಆಮದು ಸುಂಕ ವಿಧಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಚೀನಾ 110 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಅಮೆರಿಕದ ವಸ್ತುಗಳ ಮೇಲೆ ಆಮದು ಸುಂಕ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ-ಚೀನಾ ನಡವೆ ವಾಣಿಜ್ಯ ಸಮರ ಏರ್ಪಟ್ಟಿತ್ತು.