ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

By Web DeskFirst Published Oct 7, 2019, 1:28 PM IST
Highlights

ಬಹು ನಿರೀಕ್ಷಿತ ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ ಇದೇ ಅಕ್ಟೋಬರ್‌ 8ರಂದು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಿದೆ. ಖರೀದಿಯ ಒಪ್ಪಂದ ಏರ್ಪಟ್ಟ12 ವರ್ಷಗಳ ನಂತರ ವಿವಾದಿತ ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆಗೆ ಸೇರಲು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ರಫೇಲ್‌ ಒಪ್ಪಂದ, ವಿವಾದ, ರಫೇಲ್‌ ವಿಶೇಷತೆ, ಭಾರತಕ್ಕೆ ಅದರ ಅಗತ್ಯ ಮತ್ತಿತರ ಮಾಹಿತಿ ಇಲ್ಲಿದೆ.

ಬಹು ನಿರೀಕ್ಷಿತ ರಫೇಲ್‌ ಯುದ್ಧ ವಿಮಾನವನ್ನು ಫ್ರಾನ್ಸ್‌ ಇದೇ ಅಕ್ಟೋಬರ್‌ 8ರಂದು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಿದೆ. ಖರೀದಿಯ ಒಪ್ಪಂದ ಏರ್ಪಟ್ಟ12 ವರ್ಷಗಳ ನಂತರ ವಿವಾದಿತ ರಫೇಲ್‌ ಯುದ್ಧ ವಿಮಾನಗಳು ಭಾರತದ ವಾಯುಪಡೆಗೆ ಸೇರಲು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ರಫೇಲ್‌ ಒಪ್ಪಂದ, ವಿವಾದ, ರಫೇಲ್‌ ವಿಶೇಷತೆ, ಭಾರತಕ್ಕೆ ಅದರ ಅಗತ್ಯ ಮತ್ತಿತರ ಮಾಹಿತಿ ಇಲ್ಲಿದೆ.

ವಿಜಯದಶಮಿ ದಿನ ವಾಯುಪಡೆಗೆ ವಿಶೇಷ ಅಸ್ತ್ರ ಸಿದ್ಧಿ!

ಸಾಕಷ್ಟು ವಿವಾದಗಳ ಬಳಿಕ ಅಂತೂ ಭಾರತೀಯ ವಾಯುಪಡೆಗೆ ಅಗಾಧ ಶಕ್ತಿ ಸಾಮರ್ಥ್ಯ ನೀಡುವ ಫ್ರಾನ್ಸ್‌ನ ಅತ್ಯಾಧುನಿಕ ರಫೇಲ್ ಯುದ್ಧವಿಮಾನ ವಿಜಯದಶಮಿಯಂದು ದೇಶದ ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಕಂಪನಿಯಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.

ಭಾರತದ ತೆಕ್ಕೆಗೆ ರಫೇಲ್: ವಿಶೇಷತೆಗಳೇನು? ಇಲ್ಲಿದೆ ವಿವರ!

ಅಲ್ಲದೆ ಈ ದಿನ ಭಾರತೀಯ ವಾಯುಸೇನೆಯ ಸಂಸ್ಥಾಪನಾ ದಿನವೂ ಹೌದು. ಮೊದಲ ಯುದ್ಧ ವಿಮಾನವನ್ನು ಸ್ವೀಕರಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಕ್ಟೋಬರ್‌ 7ರಿಂದ 3 ದಿನಗಳ ಕಾಲ ಪ್ಯಾರಿಸ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಫ್ರಾನ್ಸ್‌ನಲ್ಲಿ ರಾಜನಾಥ್‌ ಸಿಂಗ್‌ ಮೊದಲ ಬಾರಿಗೆ ರಫೇಲ… ಯುದ್ಧ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ.

ಭಾರತಕ್ಕೆ ಬರೋದು ಇನ್ನೂ 7 ತಿಂಗಳು ತಡ ಏಕೆ?

ಅಧಿಕೃತವಾಗಿ ರಫೇಲ್‌ ವಿಮಾನಗಳು ಅಕ್ಟೋಬರ್‌ 8ರಂದೇ ಭಾರತದ ಸೇನಾ ಬತ್ತಳಿಕೆಗೆ ಸೇರಲಿವೆಯಾದರೂ ಅವು ಮೇ 2020ರಲ್ಲಷ್ಟೇ ಭಾರತಕ್ಕೆ ಬರಲಿವೆ. ಈಗಾಗಲೇ ಭಾರತೀಯ ಪೈಲಟ್‌ಗಳ ಸಣ್ಣ ತಂಡಕ್ಕೆ ಫ್ರಾನ್ಸ್‌ನಲ್ಲಿ ತರಬೇತಿ ಪೂರ್ಣಗೊಂಡಿದ್ದು, ಇನ್ನೂ 24 ಪೈಲಟ್‌ಗಳಿಗೆ ಮೂರು ತಂಡಗಳಾಗಿ ತರಬೇತಿ ನೀಡಲಾಗುತ್ತದೆ. 2020ರ ಮೇ ವೇಳೆಗೆ ಈ ತರಬೇತಿ ಕೊನೆಗೊಳ್ಳಲಿದೆ ಮತ್ತು ಅದೇ ಸಮಯಕ್ಕೆ ವಿಮಾನ ಭಾರತಕ್ಕೆ ಬರಲಿದೆ.

ರಫೇಲ್‌ ಹಸ್ತಾಂತರಕ್ಕೂ ಮುನ್ನ ಅದನ್ನು ಪರೀಕ್ಷಿಸುವ ಸಲುವಾಗಿ ಭಾರತದಿಂದ ಈಗಾಗಲೇ ಪೈಲಟ್‌ಗಳನ್ನು ಮತ್ತು ತಜ್ಞರನ್ನು ಕಳುಹಿಸಿಕೊಡಲಾಗಿದೆ. ವಾಯುಪಡೆ ಪೈಲಟ್‌ಗಳು ಕನಿಷ್ಠ 15000 ಗಂಟೆ ವಿಮಾನ ಹಾರಾಟ ನಡೆಸಿ ಪರೀಕ್ಷಿಸಿದ ಬಳಿಕವಷ್ಟೇ ಹಸ್ತಾಂತರಿಸಲಾಗುತ್ತದೆ.

ಛತ್ತೀಸ್ ಗಢದಲ್ಲಿದೆ ರಫೇಲ್ ಹೆಸರಿನ ಹಳ್ಳಿ; ವಿವಾದದಿಂದಾಗಿ ಗ್ರಾಮಸ್ಥರಿಗೆ ಅಪಹಾಸ್ಯ!

ರಫೇಲ್‌ನ ವಿಶೇಷತೆ ಏನು?

ಎರಡು ಎಂಜಿನ್‌ ಹೊಂದಿರುವ, ಬಹುಮುಖಿ ಕಾರ್ಯಗಳನ್ನು ಮಾಡುವ ಯುದ್ಧ ವಿಮಾನ ರಫೇಲ್‌. ಅತ್ಯಂತ ಕರಾರುವಾಕ್ಕಾಗಿ ಭೂಮಿ ಹಾಗೂ ಸಮುದ್ರದ ಮೇಲಿನ ಗುರಿಗಳ ಮೇಲೆ ಇವು ಕ್ಷಿಪಣಿ, ಬಾಂಬ್‌ ದಾಳಿಗಳನ್ನು ನಡೆಸಬಲ್ಲವು. ಇವು ಅಣ್ವಸ್ತ್ರ ದಾಳಿಗೂ ಜಗ್ಗದ ಶಕ್ತಿಶಾಲಿ ವಿಮಾನಗಳು. ಫ್ರಾನ್ಸ್‌ನಲ್ಲಿ 100ಕ್ಕೂ ರಫೇಲ್‌ ಯುದ್ಧ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಜಗತ್ತಿನ ಪ್ರಸಿದ್ಧ ಯುದ್ಧ ವಿಮಾನಗಳ ಪೈಕಿ ಅತ್ಯಂತ ಆಧುನಿಕ ಹಾಗೂ ಬಹೂಪಯೋಗಿ ಯುದ್ಧ ವಿಮಾನಗಳಲ್ಲಿ ರಫೇಲ್‌ ಕೂಡ ಒಂದು.

ನೋಡಲು ಸಣ್ಣ ಗಾತ್ರದ್ದಾಗಿದ್ದರೂ ಇವುಗಳ ಸರ್ವೇಕ್ಷಣಾ ಸಾಮರ್ಥ್ಯ ಗರಿಷ್ಠ ಮಟ್ಟದ್ದಾಗಿದ್ದು, ಬರಿಗಣ್ಣಿಗೆ ಕಾಣಿಸದ ಶತ್ರುಗಳ ವಾಹನ ಮತ್ತು ಪಡೆಗಳ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವುದೇ ಮಾದರಿಯ ಭೂಗುಣಕ್ಕೂ ಹೊಂದಿಕೊಳ್ಳುವುದು ಈ ವಿಮಾನಗಳ ಇನ್ನೊಂದು ವಿಶೇಷತೆ. ಅಮೆರಿಕ ನಿರ್ಮಿತ ಎಫ್‌-35 ಮತ್ತು ಎಫ್‌-22 ರಾಪ್ಟರ್‌ ನಂತರ ಫ್ರಾನ್ಸ್‌ ನಿರ್ಮಿತ 4.5ನೇ ತಲೆಮಾರಿನ ರಫೇಲ್‌ ಯುದ್ಧ ವಿಮಾನವು ಪ್ರಸ್ತುತ ವಿಶ್ವದ ಅತ್ಯಂತ ಶಕ್ತಿಶಾಲಿ ವಾಯುಯೋಧ ಎನಿಸಿಕೊಂಡಿದೆ. ಈ ಯುದ್ಧ ವಿಮಾನವು ಅತ್ಯಂತ ಸುಧಾರಿತ ತಂತ್ರಜ್ಞಾನಗಳನ್ನೊಳಗೊಂಡಿರುತ್ತದೆ.

* ಲೇಹ್‌ನಂತರ ಹೈ ಆಲ್ಟಿಟ್ಯೂಡ್‌ ಪ್ರದೇಶಗಳಲ್ಲೂ ಬಹು ಬೇಗನೆ ತ್ವರಿತವಾಗಿ ಟೇಕ್‌ ಆಫ್‌ ಆಗಬಹುದು

* ಪ್ರತಿಕೂಲ ವಾತಾವರಣದ ಬಗ್ಗೆ ಮುಂಚಿತವಾಗಿಯೇ ತಿಳಿಯಲು ರಾಡಾರ್‌ ವಾರ್ನಿಂಗ್‌ ವ್ಯವಸ್ಥೆ ಇರುತ್ತದೆ

* ಎಂಥಾ ಕ್ಷಿಪಣಿ ದಾಳಿಯನ್ನೂ ಎದುರಿಸುವ ಶಕ್ತಿ ಹೊಂದಿದೆ

* 10 ಟನ್‌ ಪೇಲೋಡ್ಸ್‌ ಹೊರುವ ಸಾಮರ್ಥ್ಯ

* ವೇಗ: 1910 ಕಿ.ಮೀ/ಗಂಟೆ

ಯುಪಿಎ ಅವಧಿಯ ಒಪ್ಪಂದ; ಬಿಜೆಪಿ ಅವಧಿಯಲ್ಲಿ ಫೈನಲ್‌

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಪ್ರಕ್ರಿಯೆ 2007 ರಲ್ಲಿಯೇ ಶುರುವಾಗಿತ್ತು. ಸುದೀರ್ಘ ಸಂಧಾನ, ಸಮಾಲೋಚನೆಗಳ ಬಳಿಕ ಅಂದಿನ ರಕ್ಷಣಾ ಸಚಿವರಾಗಿದ್ದ ಎ.ಕೆ.ಆ್ಯಂಟನಿ, ಅಂತಿಮ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಗುತ್ತಿಗೆ ಸಂಧಾನ ಸಮಿತಿಯ ಅಭಿಪ್ರಾಯ ಕೇಳಿದ್ದರು. ಹಲವು ಸುತ್ತಿನ ಸಮಾಲೋಚನೆಗಳ ಹೊರತಾಗಿಯೂ ಯುಪಿಎ ಸರ್ಕಾರಕ್ಕೆ ರಫೇಲ್‌ ಖರೀದಿ ಒಪ್ಪಂದವನ್ನು ಅಖೈರುಗೊಳಿಸಲು ಸಾಧ್ಯವಾಗಿರಲಿಲ್ಲ.

ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ವರ್ಷವೇ ಈ ಪ್ರಕ್ರಿಯೆಗೆ ಮರುಚಾಲನೆ ನೀಡಲಾಗಿತ್ತು. 2016ರಲ್ಲಿ ಭಾರತ-ಫ್ರಾನ್ಸ್‌ ಸರ್ಕಾರಗಳ ನಡುವೆ ಒಪ್ಪಂದ ಕುದುರಿತ್ತು. ಆ ಪ್ರಕಾರವಾಗಿ 36 ರಫೇಲ್‌ ಯುದ್ಧವಿಮಾನ ಖರೀದಿ ಒಪ್ಪಂದ ನಡೆದಿತ್ತು.

36 ರಫೇಲ್‌ ಜೆಟ್‌ಗಳ ಬೆಲೆ .59,000 ಕೋಟಿ!

2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿತ್ತು. ಅದಕ್ಕಾಗಿ ಬಿಡ್ಡಿಂಗ್‌ ಪ್ರಕ್ರಿಯೆ ಆರಂಭವಾಗಿ, ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿ ಈ ಗುತ್ತಿಗೆಯನ್ನು ತನ್ನದಾಗಿಸಿಕೊಂಡಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರವರೆಗೂ ಮಾತುಕತೆ ಮುಂದುವರಿಯಿತು.

ಮೋದಿ ಪ್ರಧಾನಿಯಾದ ಬಳಿಕ 2015 ರಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿ, ರಫೇಲ್‌ ಯುದ್ಧ ವಿಮಾನ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡರು. ಆ ಒಪ್ಪಂದವೇ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡುವುದು. ಮೋದಿ ಸರ್ಕಾರ 36 ಯುದ್ಧ ವಿಮಾನ ಖರೀದಿಗೆ ಹೊಸ ಒಪ್ಪಂದ ಮಾಡಿಕೊಂಡ ಬಳಿಕ ಡಸಾಲ್ಟ್‌ ಕಂಪನಿ ಈ ಹಿಂದಿನ ಯುಪಿಎ ಸರ್ಕಾರದೊಂದಿಗಿನ ಒಪ್ಪಂದವನ್ನು 2015ರಲ್ಲಿ ರದ್ದು ಮಾಡಿತು. ನಂತರ 2016ರಲ್ಲಿ ಭಾರತ ಸರ್ಕಾರ ಡಸಾಲ್ಟ್‌ ಕಂಪನಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿತು. ಆ ಒಪ್ಪಂದದ ಪ್ರಕಾರ ಯುದ್ಧ ವಿಮಾನಗಳನ್ನು 59,000 ಕೋಟಿ ರು.ಗಳಿಗೆ ತೀರ್ಮಾನಿಸಲಾಗಿತ್ತು.

9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ; ನಿಮ್ಮ ಜೇಬು ಉಳಿತಾಯಕ್ಕೆ ಆರ್ ಬಿಐ ಆಧಾರ!

ವಿವಾದ ಏನು? ಕಾಂಗ್ರೆಸ್‌ ಈ ಒಪ್ಪಂದ ವಿರೋಧಿಸಿದ್ದೇಕೆ?

ರಫೇಲ್‌ ಒಪ್ಪಂದದಲ್ಲಿ ಮೋದಿ ನೇತೃತ್ವದ ಸರ್ಕಾರ ಅವ್ಯವಹಾರ ನಡೆಸಿದೆ ಎಂದು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದರು. ಈ ಹಿಂದೆ 2007ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ 126 ಯುದ್ಧ ವಿಮಾನ ಖರೀದಿಗೆ 54,000 ರು. ನೀಡುವ ಒಪ್ಪಂದವಾಗಿತ್ತು. ಅದರಲ್ಲಿ ಡಸಾಲ್ಟ್‌ ಕಂಪನಿಯು ಹಾರಾಟಕ್ಕೆ ಸಿದ್ಧವಿರುವ 18 ವಿಮಾನಗಳನ್ನು ಭಾರತಕ್ಕೆ ಒದಗಿಸಿ ಉಳಿದ ಯುದ್ಧ ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಕಂಪನಿಗೆ ತಾಂತ್ರಿಕ ನೆರವು ನೀಡುವುದೆಂದು ಮಾತುಕತೆಯಾಗಿತ್ತು. ಆದರೆ ಅದು ಜಾರಿಯಾಗಿರಲಿಲ್ಲ.

2016 ರಲ್ಲಿ ಎನ್‌ಡಿಎ ಸರ್ಕಾರ ಹಾರಾಟಕ್ಕೆ ಸಿದ್ಧವಾಗಿರುವ 36 ಯುದ್ಧ ವಿಮಾನಗಳಿಗೆ 59,000 ಕೋಟಿ ರು. ಪಾವತಿಸಲು ಒಪ್ಪಿಕೊಂಡಿದೆ. ಪ್ರತಿ ವಿಮಾನವನ್ನು 526 ಕೋಟಿ ವೆಚ್ಚದಲ್ಲಿ ಖರೀದಿಸಲು ಯುಪಿಎ ನಿರ್ಧರಿಸಿದ್ದರೆ, ಎನ್‌ಡಿಎ ಅದೇ ವಿಮಾನಕ್ಕೆ 1,555 ಕೋಟಿ ರು. ಪಾವತಿಸಲು ಮುಂದಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಸಂಸತ್ತಿನಲ್ಲಿ ಈ ವಿಷಯ ಕೋಲಾಹಲವನ್ನೇ ಎಬ್ಬಿಸಿತ್ತು.

ಈ ಕುರಿತ ವರದಿಯನ್ನು ಬಹಿರಂಗ ಪಡಿಸುವಂತೆ ಒತ್ತಾಯಿಸಿದ್ದರು. ಆದರೆ ಕೇಂದ್ರ ಸರ್ಕಾರ ಗೌಪ್ಯತೆಯ ದೃಷ್ಟಿಯಿಂದ ಬಹಿರಂಗಪಡಿಸಿರಲಿಲ್ಲ. ಈ ವಿಷಯ ಕೋರ್ಟ್‌ ಮೆಟ್ಟಿಲನ್ನೂ ಏರಿತ್ತು. ಹಾಗೆಯೇ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯಲ್‌ ಮಾಕ್ರನ್‌ ತಳ್ಳಿಹಾಕಿದ್ದಾರೆಂದು ಅಲ್ಲಿನ ವಿದೇಶಾಂಗ ಇಲಾಖೆ ಸ್ಪಷ್ಟನೆ ನಿಡಿತ್ತು.

ರಫೇಲ್‌ ಭಾರತಕ್ಕೆ ಏಕೆ ಬೇಕು?

ಭಾರತದ ವಾಯುಸೇನೆ ಬಲಿಷ್ಠವಾಗಿದ್ದರೂ ಅತ್ಯಾಧುನಿಕ ಯುದ್ಧ ವಿಮಾನಗಳು ಭಾರತದ ಬಳಿ ಇಲ್ಲ. ಭಾರತ ಇನ್ನೂ ಹಾರಾಡುವ ಶವ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ಮಿಗ್‌ ಮಾದರಿಯ ವಿಮಾನಗಳನ್ನೇ ಬಳಸುತ್ತಿದೆ. ಪಾಕಿಸ್ತಾನ ಪಾಲ್ಕನ್‌ ಎಫ್‌-16 ಹಾಗೂ ಚೀನಾ ಚೆಂಗ್ಡು ಜೆ-20 ಯಂತಹ ಅತ್ಯಾಧುನಿಕ ಮಾದರಿಯ ಫೈಟರ್‌ ಜೆಟ್‌ಗಳನ್ನು ಹೊಂದಿದ್ದರೂ ಭಾರತದ ಬಳಿ ಅಂತಹ ವಿಮಾನ ಇಲ್ಲ. ಆದರೆ ರಫೇಲ್‌ ಈ ಎಲ್ಲಾ ಕೊರತೆಗಳನ್ನೂ ನೀಗಿಸಲಿದೆ. ಅತ್ಯಂತ ಬಲಿಷ್ಠ ಯುದ್ಧವಿಮಾನ ಎಂದು ಹೆಸರು ಪಡೆದಿರುವ ರಫೇಲ್‌ ಭಾರತದ ಬತ್ತಳಿಕೆ ಸೇರಿದರೆ ಭಾರತೀಯ ವಾಯುಸೇನೆಗೆ ಆನೆ ಬಲ ಬಂದಂತಾಗುತ್ತದೆ.

ನೆರೆ ರಾಷ್ಟ್ರಗಳ ಬಳಿ ಇರುವ ಫೈಟರ್‌ಗಳು

ಚೀನಾ : ಸುಖೋಯ್‌-30ಎಸ್‌, ಜೆಎಫ್‌-17 ಥಂಡರ್‌ ಲೈಟ್‌ ಕಾಂಬ್ಯಾಟ್‌ ಏರ್‌ಕ್ರಾಫ್ಟ್‌, ಜೆ-11 ಮತ್ತು ಜೆ-10 ಬಹುಮುಖಿ ಯುದ್ಧ ವಿಮಾನಗಳು

ಪಾಕಿಸ್ತಾನ: ಎಫ್‌-16, ಫ್ರೆಂಚ್‌ ಮೀರಜ್‌ ಯುದ್ಧ ವಿಮಾನಗಳು ಮತ್ತು ಜೆಎಫ್‌-17ಎಸ್‌

 

click me!