Hubballi-Dharwad BRTS: ಕ್ಯಾಶ್‌ಲೆಸ್‌ ಸಾರಿಗೆಗೆ ಮುನ್ನುಡಿ..!

By Girish Goudar  |  First Published Mar 17, 2022, 10:53 AM IST

*  ಬಸ್‌ಗಳಲ್ಲಿ ಕ್ಯಾಶ್‌ಲೆಸ್‌ ವ್ಯವಹಾರದ ಜಮಾನ ಶುರು
*  ಪೇಟಿಎಂನೊಂದಿಗೆ ವಾಕರಸಾ ಸಂಸ್ಥೆ ಒಪ್ಪಂದ
*  ಚಿಲ್ಲರೆ ಸಮಸ್ಯೆಗೆ ಪರಿಹಾರ, ಪ್ರಯಾಣಿಕರಿಗೆ ಅನುಕೂಲ
 


ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ(ಮಾ.17):  ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಗದು ರಹಿತ(Cashless) ವ್ಯವಹಾರಕ್ಕೆ ಉತ್ತೇಜನ ನೀಡುತ್ತಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(NWKRTC) ಪ್ರಯಾಣಿಕರಿಗೆ ನಗದುರಹಿತ ಸೇವೆ ನೀಡಲು ಪೇಟಿಎಂ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಮೊದಲ ಹಂತವಾಗಿ ಬಿಆರ್‌ಟಿಎಸ್‌ನಲ್ಲಿ(BRTS) ಈ ವ್ಯವಸ್ಥೆ ಆರಂಭವಾಗಿದೆ.

Latest Videos

undefined

ಈಗಾಗಲೇ ಮಾರುಕಟ್ಟೆಯಲ್ಲಿ ಫೋನ್‌ಪೇ(Phonepay), ಗೂಗಲ್‌ ಪೇ(Google Pay), ಪೇಟಿಎಂ(Paytm) ಬಳಕೆ ಹೆಚ್ಚಾಗಿದ್ದು, ನಗದುರಹಿತ ವ್ಯವಹಾರವೇ ಅಧಿಕವಾಗಿ ನಡೆಯುತ್ತಿದೆ. ಡಿಜಿಟಲ್‌ ಪಾವತಿ(Digital Payment) ಮೂಲಕ ಪ್ರಯಾಣಿಕರಿಗೆ(Commuters) ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಮಹತ್ತರ ಹೆಜ್ಜೆ ಇಟ್ಟಿದೆ.

Hubballi-Dharwad: BRTS ನಿಲ್ದಾಣಗಳಲ್ಲಿ ಲಿಫ್ಟ್‌ ಇವೆಯಂತೆ ಗೊತ್ತಾ?

ಪ್ರಯಾಣಿಕರಿಗೆ ಹಾಗೂ ಬಿಆರ್‌ಟಿಎಸ್‌ ಸಿಬ್ಬಂದಿಗೆ ಆಗುತ್ತಿರುವ ಚಿಲ್ಲರೆ ಸಮಸ್ಯೆ ತಪ್ಪಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಇದಕ್ಕೆ ಹೆಚ್ಚುವರಿ ಸಿಬ್ಬಂದಿ ಅಗತ್ಯವಿಲ್ಲವಾಗಿದ್ದು, ಇರುವ ಕೌಂಟರ್‌ಗಳಲ್ಲಿ ಬಾರ್‌ಕೋಡ್‌ನ ಒಂದು ಚಿಕ್ಕ ಬೋರ್ಡ್‌ ಹಾಕಿದರೆ ಸಾಕು. ಜತೆಗ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದಿರುವುದರಿಂದ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಫೆ. 15ರಿಂದ ಹುಬ್ಬಳ್ಳಿ(Hubballi) ಸಿಬಿಟಿಯಿಂದ ಇಸ್ಕಾನ್‌ ವರೆಗಿನ 21 ನಿಲ್ದಾಣಗಳ ಕೌಂಟರ್‌ಗಳಲ್ಲಿ ಬಾರ್‌ಕೋಡ್‌ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವಾರದೊಳಗೆ ಧಾರವಾಡದ(Dharwad) 15 ಬಿಆರ್‌ಟಿಎಸ್‌ ನಿಲ್ದಾಣಗಳ ಕೌಂಟರ್‌ನಲ್ಲಿ ಪೇಟಿಎಂ ಬಾರ್‌ಕೋಡ್‌ ವ್ಯವಸ್ಥೆ ಅಳವಡಿಸುವ ತಯಾರಿಯೂ ನಡೆಯುತ್ತಿದೆ. ಬಹುತೇಕ ಪ್ರಯಾಣಿಕರು ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದು, ತಾವೇ ತಮ್ಮ ಖಾತೆಯಿಂದ ನೇರವಾಗಿ ಹಣ ಪಾವತಿಸಿ ಟಿಕೆಟ್‌ ಪಡೆದು ಪ್ರಯಾಣಿಸಬಹುದಾಗಿದೆ. ಹುಬ್ಬಳ್ಳಿಯ ಬಿಆರ್‌ಟಿಎಸ್‌ ನಿಲ್ದಾಣಗಳ ಕೌಂಟರ್‌ಗಳಲ್ಲಿ ನಗದುರಹಿತ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಯಾಣಿಕರು ಕೆಲವೊಮ್ಮೆ ಚಿಲ್ಲರೆ ಇಲ್ಲದೆ ಸಾಲಿನಲ್ಲೇ ನಿಲ್ಲಬೇಕಾಗುತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಇದಕ್ಕಾಗಿ ಸಿಬ್ಬಂದಿ ಬೇಕಿಲ್ಲ ಜತೆಗೆ ವೆಚ್ಚದಾಯಕವೂ ಅಲ್ಲ. ಇರುವ ವ್ಯವಸ್ಥೆ ಕೌಂಟರ್‌ಗಳಲ್ಲಿ ಇದನ್ನು ಸಾಕಾರಗೊಳಿಸಲು ಸಂಸ್ಥೆ ಮುಂದಾಗಿದೆ.

ಸ್ಮಾರ್ಟ್‌ಪೋನ್‌ ಇದ್ದವರು ಸಾಕಷ್ಟುಸಂಖ್ಯೆ ಪೇಟಿಎಂ ಮೂಲಕ ಹಣ ಪಾವತಿಸಿ ಟಿಕೆಟ್‌ ಖರೀದಿಸುತ್ತಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆಗೆ ಪರಿಹಾರ ದೊರೆತಿದೆ. ಸಾರ್ವಜನಿಕ ವಲಯದಿಂದಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಬಿಆರ್‌ಟಿಎಸ್‌ನ ಸಿಬ್ಬಂದಿ ಹನುಮರೆಡ್ಡಿ ಈರಡ್ಡಿ.

ತಂತ್ರಜ್ಞಾನವನ್ನು(Technology) ಬಳಸಿಕೊಂಡು ಮುಂಬರುವ ದಿನಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಟಿಕೆಟ್‌ ಕೌಂಟರ್‌ಗಳಲ್ಲಿ ಹಾಗೂ ಗ್ರಾಮಾಂತರ, ವೇಗದೂತ ಬಸ್‌ಗಳಲ್ಲೂ ಪೇಟಿಎಂ ಬಾರ್‌ಕೋಡ್‌ ಅಳವಡಿಸುವ ಚಿಂತನೆ ಸಾರಿಗೆ ಸಂಸ್ಥೆಯದ್ದಾಗಿದೆ.

South India's First Project: ದಶಕ ಕಳೆದರೂ BRTS ಪೂರ್ಣವಾಗಿಲ್ಲ..!

ನಗದುರಹಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಪೇಟಿಎಂನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಜಿಟಲ್‌ ಮೂಲಕ ಹಣ ಪಾವತಿಸಿ ಪ್ರಯಾಣಿಕರು ಟಿಕೆಟ್‌ ಪಡೆಯಬಹುದು. ಇದರಿಂದ ಹಣಕಾಸಿನ ಸುರಕ್ಷತೆ ಜತೆಗೆ ಚಿಲ್ಲರೆ ಸಮಸ್ಯೆಯೂ ಬಗೆಹರಿಯಲಿದೆ. ಮುಂದೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಟಿಕೆಟ್‌ ಕೌಂಟರ್‌ಗಳಲ್ಲಿ ಹಾಗೂ ಗ್ರಾಮಾಂತರ, ವೇಗದೂತ ಬಸ್‌ಗಳಲ್ಲೂ ಪೇಟಿಎಂ ಬಾರ್‌ಕೋಡ್‌ ಅಳವಡಿಸುವ ಚಿಂತನೆ ನಡೆಸಲಾಗುವುದು ಅಂತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ತಿಳಿಸಿದ್ದಾರೆ.  

ಪ್ರಾಯೋಗಿಕವಾಗಿ ಈಗಾಗಲೇ 21 ಬಿಆರ್‌ಟಿಎಸ್‌ ನಿಲ್ದಾಣಗಳ ಕೌಂಟರ್‌ಗಳಲ್ಲಿ ಪೇಟಿಎಂ ಬಾರ್‌ಕೋಡ್‌ ಅಳವಡಿಸಲಾಗಿದೆ. ಪಾರದರ್ಶಕ ಮತ್ತು ಸುರಕ್ಷಿತ ಹಣಕಾಸು ವ್ಯವಹಾರಕ್ಕೆ ಪ್ರಯಾಣಿಕರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಧಾರವಾಡದ 15 ನಿಲ್ದಾಣಗಳ ಕೌಂಟರ್‌ಗಳಲ್ಲಿ ಮುಂದಿನ ಒಂದು ವಾರದೊಳಗೆ ಬಾರ್‌ಕೋಡ್‌ ಅಳವಡಿಸಲಾಗುವುದು ಅಂತ ನಗರ ಸಾರಿಗೆ ಸಹಾಯಕ ಸಂಚಾರ ವ್ಯವಸ್ಥಾಪಕ ರವಿ ಅಂಚಿಗಾವಿ ಹೇಳಿದ್ದಾರೆ. 
 

click me!