10 ಸಾವಿರ ಕೋಟಿ ರು. ಹೂಡಿಕೆಯ ಬೃಹತ್ ಯೋಜನೆಗೆ ಬೊಮ್ಮಾಯಿ ಚಾಲನೆ, ವಿಜಯಪುರ, ರಾಯಚೂರಲ್ಲೂ ‘ಪಿಎಂ ಮಿತ್ರ’ ರೀತಿ ಪಾರ್ಕ್ ಸ್ಥಾಪನೆ ಘೋಷಣೆ.
ಕಲಬುರಗಿ(ಮಾ.29): ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸುವ, 10 ಸಾವಿರ ಕೋಟಿ ಬಂಡವಾಳ ಆಕರ್ಷಿಸುವ ಗುರಿ ಹೊಂದಿರುವ ದೇಶದ 2ನೇ ಹಾಗೂ ರಾಜ್ಯದ ಮೊದಲ ‘ಪಿಎಂ ಮಿತ್ರ’ ಟೆಕ್ಸ್‌ಟೈಲ್ ಪಾರ್ಕ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಕಲಬುರಗಿಯಲ್ಲಿ ಚಾಲನೆ ನೀಡಿದರು. ಮೊದಲ ದಿನವೇ 8 ಕಂಪನಿಗಳು ಈ ಪಾರ್ಕ್‌ನಲ್ಲಿ 1900 ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿವೆ.
ಇದೇ ವೇಳೆ, ‘ಪಿಎಂ ಮಿತ್ರ’ ಪಾರ್ಕ್ ಮಾದರಿಯಲ್ಲಿ ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಮತ್ತೆರಡು ಜವಳಿ ಪಾರ್ಕ್ ಹಾಗೂ ರಾಜ್ಯದ ಇತರೆ 25 ಜಿಲ್ಲೆಗಳಲ್ಲಿ ಮಿನಿ ಟೆಕ್ಸ್‌ಟೈಲ್ ಪಾರ್ಕ್ ಅನ್ನು ರಾಜ್ಯ ಸರ್ಕಾರದಿಂದಲೇ ಸ್ಥಾಪಿಸುವುದಾಗಿ ಬೊಮ್ಮಾಯಿ ಹೇಳಿದರು.
ಹಿಂದಿನ ಸರ್ಕಾರದ ತಪ್ಪು ನೀತಿಗಳಿಂದಾಗಿ ಕಲಬುರಗಿಯಲ್ಲಿದ್ದ ಎಂಎಸ್‌ಕೆ ಮಿಲ್ ಬಾಗಿಲು ಮುಚ್ಚಿತು. ದಾವಣಗೆರೆಯ ಅದೆಷ್ಟೋ ಮಿಲ್‌ಗಳು ಬಂದ್ ಆದವು. ಜನ ಸಮುದಾಯಕ್ಕೆ ಕೆಲಸ ನೀಡುವಂಥ ಜವಳಿ ಉದ್ಯಮವನ್ನು ಜೀವಂತವಾಗಿಡಲು ಹಿಂದಿನ ಸರ್ಕಾರ ಏನನ್ನೂ ಮಾಡಲಿಲ್ಲ. ಕಲಬುರಗಿ ಸೇರಿ ಕಲ್ಯಾಣದ ಜಿಲ್ಲೆಗಳ ಆರ್ಥಿಕತೆ ಎತ್ತಿ ಹಿಡಿಯುವ ಕೆಲಸ ಎಂದೋ ಆಗಬೇಕಿತ್ತು. ಆ ಕೆಲಸವನ್ನು ಮೋದಿ ಅವರು ಟೆಕ್ಸ್‌ಟೈಲ್ ಪಾರ್ಕ್ ನೀಡುವ ಈಗ ಮೂಲಕ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರ ‘ಪಿಎಂ ಮಿತ್ರ’ ಪಾರ್ಕ್ ಮೂಲಕ ಜನ ಸಮೂಹಕ್ಕೆ ಕೆಲಸ ಕೊಡುವ ಮಹತ್ವದ ಕೆಲಸ ಮಾಡುತ್ತಿದೆ ಎಂದರು.
undefined
ಕರ್ನಾಟಕದಲ್ಲಿ ಪಕ್ಷಾಂತರ ಪರ್ವ: ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಮತ್ತೊಬ್ಬ ನಾಯಕ?
ಎರಡನೇ ಅತಿ ದೊಡ್ಡ ಕೊಡುಗೆ:
371ಜೆ ಕಲಂ ತಿದ್ದುಪಡಿ ನಂತರ ಈ ಭಾಗಕ್ಕೆ ಸಿಕ್ಕ ಅತಿ ದೊಡ್ಡ ಕೊಡುಗೆ ಅಂದರೆ ಅದು ಮೆಗಾ ಟೆಕ್ಸ್‌ಟೈಲ್ ಪಾರ್ಕ್. ಈ ಯೋಜನೆ ಮೂಲಕ .10 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 1 ಲಕ್ಷ ನೇರ ಮತ್ತು 2 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಥಿಕ ಶಕ್ತಿ ತುಂಬಲಿದೆ ಎಂದರು.
ಕಲಬುರಗಿ ಭವಿಷ್ಯದ ಹೂಡಿಕೆ ನಗರ:
ವೈಮಾನಿಕವಾಗಿ, ರೈಲು ಹಾಗೂ ಭೂ ಸಾರಿಗೆ ಮೂಲಕ ಬಹುದೊಡ್ಡ ಸಂಪರ್ಕ ಜಾಲ ಹೊಂದಿರುವ ಕಲಬುರಗಿ ದೇಶದ ಭವಿಷ್ಯದ ನಗರ ಆಗಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ದೇಶ-ವಿದೇಶಗಳ ಜನ ಇಲ್ಲಿ ಹೂಡಿಕೆ ಮಾಡಲಿದ್ದಾರೆ. ಇಲ್ಲಿ ಮೆಗಾ ಜವಳಿ ಪಾರ್ಕ್ ಶುರುವಾಗಲು ಪ್ರಧಾನಿ ಮೋದಿ ಆಶೀರ್ವಾದವೇ ಕಾರಣ. ಇದರಿಂದ ಲಕ್ಷಾಂತರ ಜನರ ಬದುಕೇ ಬದಲಾಗುತ್ತದೆ. ಅವರ ಬಾಳಲ್ಲಿ ಬೆಳಕು ಕಾಣುತ್ತದೆ ಎಂದರು. ವಲಸೆ ಸಮಸ್ಯೆಯಿಂದಾಗಿ ಕಲ್ಯಾಣದ ಸಾವಿರಾರು ಕುಟುಂಬಗಳು ತಮ್ಮ ಬದುಕನ್ನೇ ಛಿದ್ರಗೊಳಿಸಿಕೊಂಡಿವೆ. ಟೆಕ್ಸ್‌ಟೈಲ್ ಪಾರ್ಕ್ ಇಂಥ ಕುಟುಂಬಗಳ ಪಾಲಿಗೆ ವರದಾನ. ವಲಸೆ ಸಮಸ್ಯೆ ಸವಾಲಿಗೆ ಪಿಎಂ ಮಿತ್ರ ಪಾರ್ಕ್ ಪರಿಹಾರ ರೂಪದಲ್ಲಿ ಬಂದಿದೆ ಎಂದರು.
8 ಕಂಪನಿಗಳಿಂದ 1900 ಕೋಟಿ ಹೂಡಿಕೆ
ಕಲಬುರಗಿಯಲ್ಲಿ ಚಾಲನೆ ಪಡೆದ ‘ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪರೆಲ್ ಪಾರ್ಕ್’(ಪಿಎಂ ಮಿತ್ರ)ಗೆ ಮೊದಲ ದಿನವೇ .1,900 ಕೋಟಿ ಬಂಡವಾಳ ಹರಿದು ಬಂದಿದೆ. ಜವಳಿ ರಂಗದ ಹೆಸರಾಂತ ಶಾಹಿ ಎಕ್ಸ್‌ಪೋರ್ಚ್, ಹಿಮತ್ ಸಿಂಗ್ ಕಾ ಸೀಡ್ ಲಿಮಿಟೆಡ್ ತಲಾ .500 ಕೋಟಿ, ಟೆಕ್ಸ್‌ಪೋರ್ಚ್, ಕೆಪಿಆರ್ ಮಿಲ್ಸ್, ಪ್ರತಿಭಾ ಸಿಂಥೆಟಿಕ್ಸ್ ತಲಾ .200 ಕೋಟಿ, ಗೋಕುಲ್ ಎಕ್ಸ್‌ಪೊರ್ಚ್, ಇಂಡಿಯಾ ಡಿಸೈನರ್ ತಲಾ .100 ಕೋಟಿ, ಸೋನಲ್ ಅಪರಲ್ಸ್ ಹಾಗೂ ಸೂರ್ಯವಂಶಿ ಸಂಸ್ಥೆ ತಲಾ .50 ಕೋಟಿ ಹೀಗೆ ಎಂಟು ಕಂಪನಿಗಳು .1,900 ಕೋಟಿ ಬಂಡವಾಳ ಹೂಡಲು ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡಿವೆ.
ಚುನಾವಣೆಗೂ ಮುನ್ನವೇ ಶುರುವಾಯ್ತು ಧಮ್ಕಿ ಪಾಲಿಟಿಕ್ಸ್: ಹರ್ಷಾನಂದ ಗುತ್ತೇದಾರ್
ಮುಖ್ಯಮಂತ್ರಿ ಬೊಮ್ಮಾಯಿ ಬೊಮ್ಮಾಯಿ, ಜವಳಿ ಖಾತೆ ರಾಜ್ಯ ಸಚಿವೆ ದರ್ಶನಾ ಹಾಗೂ ಜವಳಿ ಇಲಾಖೆಯ ರಾಜ್ಯ, ಕೇಂದ್ರದ ಹಿರಿಯ ಅಧಿಕಾರಿಗಳಿದ್ದ ವೇದಿಕೆಯಲ್ಲಿಯೇ ಜವಳಿ ಉದ್ಯಮ ರಂಗದ ಈ ಉದ್ಯಮಿಗಳನ್ನು ಆಹ್ವಾನಿಸಿ ರಾಜ್ಯ ಸರ್ಕಾರದ ಜವಳಿ ಇಲಾಖೆ ಹಾಗೂ ಆಯಾ ಸಂಸ್ಥೆಗಳವರ ಮಧ್ಯೆ ಪರಸ್ಪರ ಒಪ್ಪಂದ ಪತ್ರಕ್ಕೂ ಸಹಿಹಾಕಲಾಯಿತು. ದೇಶದ ಮೊದಲ ಪಿಎಂ ಮಿತ್ರ ಪಾರ್ಕ್ಗೆ ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ಚಾಲನೆ ಸಿಕ್ಕಿದೆ.
ಏನು ವಿಶೇಷ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಜಾರಿಯಾಗುತ್ತಿರುವ ಪಾರ್ಕ್ ಇದು. ಯೋಜನೆಯಲ್ಲಿ ಕೇಂದ್ರ ಶೇ.49 ಹಾಗೂ ರಾಜ್ಯವು ಶೇ.51ರಷ್ಟುಪಾಲು ಹೊಂದಿದೆ. 2008-09ರಲ್ಲಿ ಕಲಬುರಗಿ ಬಳಿಯ ಫಿರೋಜಾಬಾದ್, ಹೊನ್ನಕಿರಣಗಿ ಸೀಮೆಯಲ್ಲಿ ಥರ್ಮಲ್ ಪವರ್ ಪ್ಲಾಂಟ್‌ಗೆಂದು ಸ್ವಾಧೀನ ಪಡಿಸಿಕೊಂಡಿರುವ 1,600 ಎಕರೆ ಭೂ ಪ್ರದೇಶದಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಟೆಕ್ಸ್‌ಟೈಲ್ ಪಾರ್ಕ್ಗೆ ನೀಡಲಾಗುತ್ತಿದೆ. ನೀರು, ರಸ್ತೆ, ವಿದ್ಯುತ್, ಚರಂಡಿ ಮತ್ತಿತರ ಮೂಲಸೌಲಭ್ಯಗಳನ್ನು ಯೋಜನೆಯ ಭಾಗವಾಗಿ ಸರ್ಕಾರವೇ ಕಲ್ಪಿಸಲಿದೆ.