ಮುಂದೂಡಿದ ಇಎಂಐಗೆ ಬಡ್ಡಿ ವಿನಾಯ್ತಿ: ಕೇಂದ್ರದ ಪರಿಶೀಲನೆ

By Kannadaprabha NewsFirst Published Sep 11, 2020, 8:45 AM IST
Highlights

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್‌ ಇದ್ದ ಕಾರಣ ಆರ್ಥಿಕ ಪರಿಸ್ಥಿತಿ ಬುಡ ಮೇಲಾಗಿದ್ದು, ಇಎಂಐ ಕಟ್ಟಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಲಾವಾಕಾಶ ನೀಡಿತ್ತು. ಆದರೆ, ಇದಕ್ಕೆ ಬಡ್ಡಿ ಕಟ್ಟುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪರಿಶೀಲಿಸಲು ಸೂಚಿಸಿದೆ.

ನವದೆಹಲಿ (ಸೆ.11): ಕೊರೋನಾ ವೈರಸ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವರಿಗೆ ಸಾಲದ ಕಂತು (ಇಎಂಐ) ಮರುಪಾವತಿಯನ್ನು ಮುಂದೂಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ), ಈ ಅವಧಿಯಲ್ಲಿ ಮುಂದೂಡಿಕೆ ಮಾಡಿದ ಸಾಲದ ಕಂತಿಗೆ ಬಡ್ಡಿ ವಿಧಿಸುವುದರಿಂದಲೂ ವಿನಾಯ್ತಿ ನೀಡುವ ವಿಚಾರವನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿವೆ. ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌, ಇನ್ನೂ 2 ವಾರ ಯಾರನ್ನೂ ಸುಸ್ತಿ ಸಾಲಗಾರರು ಎಂದು ಘೋಷಿಸದಂತೆ ತನ್ನ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.

ಇಎಂಐ ಮುಂದೂಡಿಕೆ ಮಾಡಲು ಅವಕಾಶ ನೀಡಿರುವ ಬ್ಯಾಂಕುಗಳು ಆ ಅವಧಿಯಲ್ಲಿ ಮುಂದೂಡಿಕೆ ಮಾಡಲ್ಪಟ್ಟಕಂತಿಗೂ ಬಡ್ಡಿ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿವೆ. ಅದರ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಬಡ್ಡಿ ವಿಧಿಸುವುದನ್ನು ಮರುಪರಿಶೀಲಿಸಲು ಸೆ.3ರಂದು ಸರ್ಕಾರಕ್ಕೆ ಸೂಚಿಸಿತ್ತು. ಅಲ್ಲದೆ, ಈ ಅವಧಿಯಲ್ಲಿ ಯಾವುದೇ ಖಾತೆಯನ್ನು ಅನುತ್ಪಾದಕ ಸಾಲದ ಖಾತೆ ಎಂದು ಘೋಷಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಗುರುವಾರ ಈ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ, ಈ ಕುರಿತು ಪರಿಶೀಲನೆ ನಡೆಸಲು ತಜ್ಞರ ಸಮಿತಿ ರಚಿಸಿರುವುದಾಗಿಯೂ, ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿರುವುದಾಗಿಯೂ ಸರ್ಕಾರ ತಿಳಿಸಿತು. ಅದನ್ನು ಪರಿಗಣಿಸಿದ ಕೋರ್ಟ್‌, ಸೆ.28ರೊಳಗೆ ನಿರ್ಧಾರ ತಿಳಿಸಬೇಕು. ನಂತರ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ. ಅಲ್ಲಿಯವರೆಗೆ ಮಧ್ಯಂತರ ಆದೇಶ ಮುಂದುವರೆಯುತ್ತದೆ ಎಂದು ಸ್ಪಷ್ಟವಾಗಿ ಹೇಳಿತು.

ಲೋನ್ ವಿನಾಯ್ತಿ: ಪಿಟಿಷನ್ ವಿಚಾರಣೆ

ಸರ್ಕಾರ ಈ ಹಿಂದಿನ ವಿಚಾರಣೆಯಲ್ಲಿ, ಮುಂದೂಡಿಕೆಯಾದ ಇಎಂಐಗೆ ಬಡ್ಡಿ ವಿನಾಯ್ತಿ ನೀಡಿದರೆ ಕಷ್ಟಪಟ್ಟು ಇಎಂಐ ಪಾವತಿಸಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಹೀಗಾಗಿ ಬಡ್ಡಿ ವಿನಾಯ್ತಿ ನೀಡುವುದು ಸರಿಯಲ್ಲ ಎಂದು ಹೇಳಿತ್ತು.

ಕೇಂದ್ರಕ್ಕೆ ಸುಪ್ರೀಂ ತಪರಾಕಿ:
ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಿರುವ ಮಾಸಿಕ ಸಾಲದ ಕಂತುಗಳ (ಇಎಂಐ) ಮೇಲಿನ ಬಡ್ಡಿ ಮನ್ನಾ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ನಿರ್ಧಾರ ಕೈಗೊಳ್ಳಲು ನಿಮಗೆ ಎಲ್ಲಾ ಅಧಿಕಾರವಿದ್ದರೂ, ನೀವು ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಹಿಂದೆ ಅವಿತುಕೊಂಡಿದ್ದೀರಿ ಎಂದು ಕೇಂದ್ರ ಸರಕಾರದ ವಿರುದ್ಧವೂ ಕಿಡಿಕಾರಿತ್ತು. ಅಲ್ಲದೆ ಈ ಕುರಿತು ವಾರದೊಳಗೆ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋರ್ಟ್ ತಾಕೀತು ಮಾಡಿತ್ತು.

ಇಎಂಐ ಮತ್ತೆ 18 ತಿಂಗಳೂ ಮುಂದೂಡಿಕೆ

ಏನಿದು ಪ್ರಕರಣ?: ಕೋವಿಡ್‌ ಹಿನ್ನೆಲೆಯಲ್ಲಿ ಆರ್‌ಬಿಐ, ಎಲ್ಲಾ ರೀತಿಯ ಸಾಲಗಳ ಮಾಸಿಕ ಕಂತು ಪಾವತಿಯನ್ನು 6 ತಿಂಗಳ ಕಾಲ ಮುಂದೂಡಿತ್ತು. ಪಾವತಿ ಮುಂದೂಡಿದರೂ ಆ ಅವಧಿಗೆ ಗ್ರಾಹಕರು ಬಡ್ಡಿ ಮತ್ತು ಸುಸ್ತಿ ಬಡ್ಡಿ ಪಾವತಿಸಬೇಕು ಎಂದು ಬ್ಯಾಂಕ್‌ಗಳು ನಿಯಮ ರೂಪಿಸಿದ್ದವು. ಆದರೆ ಇದನ್ನು ಹಲವು ಸಂಘ ಸಂಸ್ಥೆಗಳು ಬಲವಾಗಿ ಪ್ರಶ್ನಿಸಿದ್ದವು. ಪಾವತಿ ಕಷ್ಟಎಂಬ ಕಾರಣಕ್ಕೇ ಮಾಸಿಕ ಕಂತು ಪಾವತಿ ಮುಂದೂಡಿರುವಾಗ ಅದಕ್ಕೆ ಬಡ್ಡಿ ಮತ್ತು ಸುಸ್ತಿ ಬಡ್ಡಿ ಹೇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಅಭಿಪ್ರಾಯ ಸಲ್ಲಿಕೆಗೆ ಆರ್‌ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿತ್ತು.

ಈ ಪ್ರಕರಣದ ಹಿಂದಿನ ವಿಚಾರಣೆ ವೇಳೆ, ಗ್ರಾಹಕರು ಬಡ್ಡಿ ಪಾವತಿಸುವುದು ಅನಿವಾರ್ಯ. ಇಲ್ಲದೇ ಹೋದಲ್ಲಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಕ್ಕಿಬೀಳಲಿವೆ. ಅವುಗಳಿಗೆ 2 ಲಕ್ಷ ಕೋಟಿ ರು.ನಷ್ಟವಾಗಲಿದೆ ಎಂದು ಆರ್‌ಬಿಐ ಹೇಳಿತ್ತು. ಆದರೆ ಕೇಂದ್ರ ಸರ್ಕಾರ, ಬಡ್ಡಿ ಮತ್ತು ಸುಸ್ತಿಬಡ್ಡಿ ಪಾವತಿಯಿಂದ ವಿನಾಯ್ತಿ ನೀಡುವ ಕುರಿತು ಯಾವುದೇ ಸ್ಪಷ್ಟನಿಲವು ತಾಳುವುದಕ್ಕೆ ವಿಫಲವಾಗಿತ್ತು.

ಪಾವತಿ ಮುಂದೂಡಿದ ಸಾಲದ ಮೇಲೆ ಬಡ್ಡಿ ದರ

click me!