ಬೀದಿಯಲ್ಲಿ ಸಿಗುವ ತಿನಿಸು ಇನ್ನು ಆನ್‌ಲೈನ್ ಡೆಲಿವರಿ| ಯೋಜನೆ ಸಿದ್ಧವಾಗುತ್ತಿದೆ: ಪ್ರಧಾನಿ ಮೋದಿ
ಭೋಪಾಲ್(ಸೆ.10): ರಸ್ತೆ ಬದಿಯಲ್ಲಿ ರುಚಿಕರವಾದ ಖಾದ್ಯಗಳನ್ನು ತಯಾರಿಸಿ ಉಣಬಡಿಸುವ ವ್ಯಾಪಾರಿಗಳಿಗೆ ದೊಡ್ಡ ರೆಸ್ಟೋರೆಂಟ್‌ಗಳ ಮಾದರಿಯ ಆನ್‌ಲೈನ್ ಡೆಲಿವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಈ ಸಂಬಂಧ ಯೋಜನೆಯೊಂದನ್ನು ತಯಾರಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಆನ್‌ಲೈನ್ ಡೆಲಿವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಬೀದಿ ಬದಿಯಲ್ಲಿ ಆಹಾರ ಮಾರುವವರು ಕೂಡ ದೊಡ್ಡ ರೆಸ್ಟೋರೆಂಟ್‌ಗಳ ರೀತಿ ಆನ್‌ಲೈನ್ ಡೆಲಿವರಿ ಕೊಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿನ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಫಲಾನುಭವಿಗಳೊಂದಿಗೆ ಗುರುವಾರ ಸಂವಾದ ನಡೆಸಿದ ಮೋದಿ ಅವರು, ರಾಜ್ಯ ಸರ್ಕಾರ 1 ಲಕ್ಷ ಮಂದಿಗೆ ಸ್ವನಿಧಿ ಯೋಜನೆಯಡಿ ಅನುಕೂಲ ಕಲ್ಪಿಸಿದೆ. 4.5 ಲಕ್ಷ ಮಂದಿಗೆ ಗುರುತಿನ ಚೀಟಿ ನೀಡಿದೆ. ಕೇವಲ ಎರಡು ತಿಂಗಳಲ್ಲಿ ಈ ಕೆಲಸ ಆಗಿದೆ. ಇತರೆ ರಾಜ್ಯಗಳು ಕೂಡ ಮಧ್ಯಪ್ರದೇಶದಿಂದ ಪ್ರೇರಣೆ ಪಡೆಯಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಬೀದಿ ವ್ಯಾಪಾರಿಗಳಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜೂ.1ರಂದು ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.