ನಿಮ್ಮ ಖಾತೆಗೆ ತಪ್ಪಾಗಿ ಲಕ್ಷಾಂತರ ಹಣ ಬಂದರೆ ಏನು ಮಾಡಬೇಕು? ಅದನ್ನು ಖರ್ಚು ಮಾಡಿದರೆ ಏನಾಗುತ್ತದೆ? ಈ ಬಗ್ಗೆ ಬ್ಯಾಂಕ್ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು (ಏ.01): ಕೆಲವೊಮ್ಮೆ ಇದ್ದಕ್ಕಿದ್ದಂತೆ ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಲಕ್ಷಗಟ್ಟಲೆ ಹಣ ಬಂದರೆ ನೀವು ಅದನ್ನು ಖರ್ಚು ಮಾಡಬಹುದೇ? ಅಥವಾ ಬೇರೆ ಯಾವ ವಿಧಾನವನ್ನು ಅನುಸರಿಸಬೇಕು ಎಂಬುದರ ಬಗ್ಗೆ ತುಂಬಾ ಜನರಿಗೆ ಗೊಂದಲಗಳಿವೆ. ಇದಕ್ಕೆ ಬ್ಯಾಂಕ್ ನಿಯಮಾವಳಿಗಳಲ್ಲಿ ಏನೆಲ್ಲಾ ತಿಳಿಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ..
ಒಂದು ದಿನ ನೀವು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಸ್ಕ್ರೀನ್ ಮೇಲೆ 5,00,00,000 ರೂಪಾಯಿ ಕಂಡರೆ ಏನಾಗುತ್ತದೆ ಎಂದು ಯೋಚಿಸಿ! ಖುಷಿಯಿಂದ ಕುಣಿಯುತ್ತೀರೋ ಅಥವಾ ಟೆನ್ಶನ್ ಆಗುತ್ತೀರೋ? ಮತ್ತು ತಪ್ಪಾಗಿ ಬಂದ ಈ ಹಣವನ್ನು ಖರ್ಚು ಮಾಡಿದರೆ ಏನಾಗುತ್ತದೆ? ಬ್ಯಾಂಕ್ ನಿಮ್ಮನ್ನು ಕ್ಷಮಿಸುತ್ತದೆಯೇ ಅಥವಾ ಕಾನೂನು ಕ್ರಮ ಕೈಗೊಂಡು ಜೈಲಿಗೆ ಕಳುಹಿಸುತ್ತದೆಯೇ? ಬ್ಯಾಂಕ್ ಅಕೌಂಟಿಗೆ ತಪ್ಪಾಗಿ ಬಂದ ಹಣವನ್ನು ಖರ್ಚು ಮಾಡಿದರೆ ಏನಾಗುತ್ತದೆ ಎಂದು ತಿಳಿಯೋಣ?
ಬ್ಯಾಂಕ್ ಅಕೌಂಟಿಗೆ ತಪ್ಪಾಗಿ ಹಣ ಬಂದರೆ ಏನು ಮಾಡಬೇಕು?
ಬ್ಯಾಂಕಿನಿಂದ ತಪ್ಪಾಗಿ ಬೇರೆಯವರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದರೆ, ಮೊದಲು ನಿಮ್ಮ ಬ್ಯಾಂಕಿಗೆ ತಿಳಿಸಿ. ಇದರ ನಂತರ, ಬ್ಯಾಂಕ್ ಈ ಹಣ ಎಲ್ಲಿಂದ ಮತ್ತು ಯಾವ ಮೂಲದಿಂದ ಬಂದಿದೆ ಎಂದು ಪರಿಶೀಲನೆ ಮಾಡಿಸಿ. ಇದು ತಪ್ಪಾಗಿ ನಡೆದಿದೆ ಎಂಬುದು ತಿಳಿದುಬಂದರೆ, ಆ ಹಣವನ್ನು ಮೂಲ ಬ್ಯಾಂಕ್ ಖಾತೆಗೆ ವಾಪಸ್ ಕಳುಹಿಸುತ್ತದೆ. ಬ್ಯಾಂಕ್‌ಗೆ ಇದ್ದಕ್ಕಿದ್ದಂತೆ ಬಂದ ಹಣದ ಮೂಲವನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ, ಭಾರತ ಸರ್ಕಾರದ ಏಜೆನ್ಸಿಗಳು ಅದನ್ನು ಪತ್ತೆ ಹಚ್ಚುತ್ತವೆ.
ಇದನ್ನೂ ಓದಿ: ಇದು ಭರ್ಜರಿ ಸುದ್ದಿ, EPFO Auto Claim Settlement ಮಿತಿ 5 ಲಕ್ಷಕ್ಕೆ ಏರಿಕೆ!
ಇದರಲ್ಲಿ ಬ್ಯಾಂಕಿನ ತಪ್ಪು ಇದ್ದರೆ ಏನಾಗುತ್ತದೆ?
ಕೆಲವೊಮ್ಮೆ ಬ್ಯಾಂಕಿನ ಸಿಬ್ಬಂದಿಯ ತಪ್ಪಿನಿಂದಾಗಿ, ಬಹಳಷ್ಟು ಹಣವು ಬೇರೊಬ್ಬರ ಖಾತೆಗೆ ವರ್ಗಾವಣೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಂಕ್ ತಕ್ಷಣವೇ ಆ ಖಾತೆಯನ್ನು ಫ್ರೀಜ್ ಮಾಡುತ್ತದೆ. ಸಂಪೂರ್ಣ ಮಾಹಿತಿ ಪಡೆದ ನಂತರ, ಆ ಹಣವನ್ನು ಖಾತೆಯಿಂದ ಹಿಂಪಡೆಯಲಾಗುತ್ತದೆ. ನಂತರ ಆ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲಾಗುತ್ತದೆ. ಯಾರ ಖಾತೆಗೆ ತಪ್ಪಾಗಿ ಹಣ ಹೋಗಿದೆಯೋ ಅವರು ಆ ಹಣವನ್ನು ತೆಗೆಯಬಾರದು ಅಥವಾ ಖರ್ಚು ಮಾಡಬಾರದು ಎಂದು ಬ್ಯಾಂಕ್ ಹೀಗೆ ಮಾಡುತ್ತದೆ.
ಬ್ಯಾಂಕ್ ಅಕೌಂಟಿಗೆ ತಪ್ಪಾಗಿ ಬಂದ ಹಣ ಖರ್ಚು ಮಾಡಿದರೆ ಏನಾಗುತ್ತದೆ?
ನಿಮ್ಮ ಬ್ಯಾಂಕ್ ಖಾತೆಗೆ ತಪ್ಪಾಗಿ ಇದ್ದಕ್ಕಿದ್ದಂತೆ ಹಣ ಬಂದರೆ ಮತ್ತು ನೀವು ತಡಮಾಡದೆ ಅದನ್ನು ತೆಗೆದರೆ ಅಥವಾ ಖರ್ಚು ಮಾಡಿದರೆ, ನಿಮಗೆ ಶಿಕ್ಷೆಯಾಗಬಹುದು. ಹೀಗೆ ಮಾಡುವುದು ಕಾನೂನುಬಾಹಿರವಾಗಿದೆ. ಹಣ ಬಂದ ಬಗ್ಗೆ ಬ್ಯಾಂಕಿಗೆ ಮಾಹಿತಿ ನೀಡಬೇಕು. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ, ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕನಿಷ್ಠ 3 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ತಪ್ಪಾಗಿ ಬಂದ ಹಣವನ್ನು ಖರ್ಚು ಮಾಡಿದವರಿಂದ ಎಲ್ಲ ಹಣವನ್ನು ವಸೂಲಿ ಮಾಡಲಾಗುತ್ತದೆ. ಆದ್ದರಿಂದ, ನಿಮಗೆ ಎಂದಾದರೂ ತಪ್ಪಾಗಿ ಹಣ ಬಂದಲ್ಲಿ ಆ ಹಣವನ್ನು ಖರ್ಚು ಮಾಡುವುದನ್ನು ತಪ್ಪಿಸಿ.
ಇದನ್ನೂ ಓದಿ: BSNL ಗ್ರಾಹಕರಿಗೆ ಕಡಿಮೆ ಬೆಲೆಯ IPL ರೀಚಾರ್ಜ್ ಪ್ಲಾನ್! ಅನ್‌ಲಿಮಿಟೆಡ್ ಆಫರ್ ಮಿಸ್ ಮಾಡ್ಕೋಬೇಡಿ!