
ಬೆಂಗಳೂರು: ಜಾಗತಿಕ ವಿದ್ಯಮಾನಗಳಿಂದ ಬೇಡಿಕೆ ಹೆಚ್ಚಳವಾಗಿ ನಗರಕ್ಕೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗಿದ್ದು, ಆಟೋ ಎಲ್‌ಪಿಜಿ ಸರಬರಾಜು ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ ನಡೆದಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಹೇಳಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಐಒಸಿಎಲ್, ಸೀಮಿತ ಸಂಖ್ಯೆಯ ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು, ಸೀಮಿತ ವಿತರಣಾ ಸಾಮರ್ಥ್ಯ ಮತ್ತು ಕಾರ್ಯಾಚರಣೆಯ ಸವಾಲುಗಳು, ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳ ಮುಚ್ಚಿರುವುದರಿಂದ ಆಟೋಗಳಿಗೆ ಎಲ್‌ಪಿಜಿ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಕರ್ನಾಟಕದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಒಟ್ಟು 72 ಗ್ಯಾಸ್ ಬಂಕ್‌ಗಳನ್ನು ನಡೆಸುತ್ತಿವೆ. ಇದರಲ್ಲಿ ಐಒಸಿಎಲ್ 55 ಕೇಂದ್ರಗಳನ್ನು ಹೊಂದಿದೆ. ಮತ್ತೊಂದೆಡೆ ಖಾಸಗಿ ಸಂಸ್ಥೆಗಳು ನಡೆಸುತ್ತಿರುವ 300ಕ್ಕೂ ಹೆಚ್ಚು ಬಂಕ್‌ಗಳ ಪೈಕಿ ಶೇ.80ರಷ್ಟು ಬಾಗಿಲು ಹಾಕಿವೆ.
ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಐಒಸಿಎಲ್ ಕರ್ನಾಟಕದಲ್ಲಿ ತನ್ನ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ತಿಳಿಸಿದೆ. ಐಒಸಿಎಲ್ ಬಂಕ್‌ಗಳಿಗೆ ಫೆಬ್ರವರಿಯಲ್ಲಿ ಪ್ರತಿ ದಿನ ಸುಮಾರು 43.5 ಮೆಟ್ರಿಕ್ ಟನ್ ಗ್ಯಾಸ್ ಪೂರೈ ಸಲಾಗುತ್ತಿತ್ತು. ಮಾರ್ಚ್‌ನಲ್ಲಿ 59.53 ಮೆಟ್ರಿಕ್ ಟನ್ ಹಾಗೂ ಏ.4ರಂದು ಇದನ್ನು 68.53 ಮೆಟ್ರಿಕ್ ಟನ್‌ಗೆ ಹೆಚ್ಚಿಸಲಾಗಿದೆ. ಈ ಪ್ರಯತ್ನಗಳ ಹೊರತಾಗಿಯೂ, ಸೀಮಿತ ಸಂಖ್ಯೆಯ ಬಂಕ್‌ಗಳಿರುವ ಕಾರಣ ಬೇಡಿಕೆ ಮತ್ತು ಪೂರೈಕೆಯ ಅಂತರವನ್ನು ಸಂಪೂರ್ಣವಾಗಿ ಸರಿದೂಗಿಸಲು ಕಷ್ಟವಾಗುತ್ತಿದೆ.
ಐಒಸಿಎಲ್ ಬಂಕ್‌ಗಳಲ್ಲಿ ಗ್ಯಾಸ್ ದರ ₹89.52 ಇದೆ. ಆದರೆ, ಖಾಸಗಿ ಬಂಕ್‌ಗಳಲ್ಲಿ ₹99 ರಿಂದ 105 ಇದೆ. ಹೀಗಾಗಿ ಚಾಲಕರು ಖಾಸಗಿ ಬಂಕ್‌ಗಳತ್ತ ಬರುತ್ತಿದ್ದು, ದಟ್ಟಣೆ ಹೆಚ್ಚಾಗುತ್ತಿದೆ ಎಂದು ಐಒಸಿಎಲ್ ತಿಳಿಸಿದೆ.
ಆಟೋ ಗ್ಯಾಸ್ ಸಮಸ್ಯೆಗೆ ಕಾರಣ
ಪೆಟ್ರೋಲ್ ಬಳಸಲು ಕರೆ: ಸುಮಾರು ಶೇ.70ರಷ್ಟು ಆಟೋರಿಕ್ಷಾಗಳು ಡ್ಯುಯಲ್-ಫ್ಲ್ಯುಯೆಲ್ ಸಾಮರ್ಥ್ಯವನ್ನು ಹೊಂದಿದ್ದು, ಆಟೋ ಎಲ್‌ಪಿಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲವು. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಚಾಲಕರು ತಾತ್ಕಾಲಿಕವಾಗಿ ಪೆಟ್ರೋಲ್ ಬಳಸುವಂತೆ ಐಒಸಿಎಲ್ ಹೇಳಿದೆ.
ಇದನ್ನೂ ಓದಿ: ಇರಾನ್ ವಿರುದ್ಧ ಮಾರಕ ಕ್ಷಿಪಣಿ ಬಳಕೆಗೆ ಅಮೆರಿಕದಿಂದ ತಯಾರಿ?
ಆಟೋ ಗ್ಯಾಸ್‌ಗಾಗಿ ನಗರದಲ್ಲಿ ಭಾನುವಾರವೂ ಪರದಾಟ ಮುಂದುವರಿದಿತ್ತು. ಬಸವೇಶ್ವರ ನಗರ, ಶೇಷಾದ್ರಿಪುರ, ಮೈಸೂರು ರಸ್ತೆ, ಕೆಂಗೇರಿ ಸೇರಿದಂತೆ ನಗರದ ಬಹುತೇಕ ಕಡೆ ಗ್ಯಾಸ್ ಲಭ್ಯವಿದ್ದ ಬಂಕ್‌ಗಳ ಎದುರು ನೂರಾರು ಆಟೋಗಳು, ಸಿಎನ್‌ಜಿ ಚಾಲಿತ ಕಾರುಗಳು ಸರತಿ ಸಾಲಿನಲ್ಲಿ ನಿಂತಿದ್ದವು. ಕೆಲವು ಬಂಕ್ ಗಳಲ್ಲಿ ಗ್ಯಾಸ್ ಸಿಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಚಾಲಕರು ಕಾಯುತ್ತಾ ನಿಂತಿದ್ದರು. ಅನೇಕ ಬಂಕ್‌ಗಳಲ್ಲಿ ನೋ ಸ್ಟಾಕ್ ಫಲಕಗಳು ನೇತಾಡುತ್ತಿದ್ದವು.
ಇದನ್ನೂ ಓದಿ:
ನನಗಾಗ 15 ವರ್ಷ ಪೋರ್ನ್ ಸೈಟ್‌ನಲ್ಲಿ ನನ್ನ ಮುಖ ಕಂಡು ಬೆಚ್ಚಿಬಿದ್ದಿದ್ದೆ: ಕರಾಳ ನೆನಪು ಹಂಚಿಕೊಂಡ ನಟಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.