
ಬೆಂಗಳೂರು: ಮೊದಲೆಲ್ಲಾ ಬೇಸಿಗೆ ರಜೆ ಬಂದರೆ ಸಾಕು ಪೇಟೆ ಮಕ್ಕಳೆಲ್ಲಾ ಹಳ್ಳಿಯಲ್ಲಿರುವ ಅಜ್ಜ ಅಜ್ಜಿಯ ಮನೆಯ ಹಾದಿ ಹಿಡಿಯುತ್ತಿದ್ದರು. ಕಾಡುಗಳಲ್ಲಿ ಅಲೆದು ಹೊಳೆಗಳಲ್ಲಿ ಮಿಂದು ಕಾಡು ಹಣ್ಣುಗಳನ್ನು ತಿಂದು ಹೊಲಗದ್ದೆಗಳಲ್ಲಿ ಓಡಾಡುತ್ತಾ ಕಸಿನ್ಸ್‌ಗಳ( ಚಿಕ್ಕಪ್ಪ ದೊಡ್ಡಪ್ಪ ಅತ್ತೆ ಮಾವನ ಮಕ್ಕಳು) ಜೊತೆ ಸೇರಿ ಆಟವಾಡುತ್ತಾ ಮಜಾ ಮಾಡುತ್ತಾ ಬೇಸಿಗೆ ರಜೆ ಕಳೆದು ಹೋದದೆ ತಿಳಿಯುತ್ತಿರಲಿಲ್ಲ. ಅದು ಆ ಕಾಲ ಆದರೆ ಈ ಕಾಲ ಹಾಗಿಲ್ಲ ಕೆಲ ಕುಟಂಬಗಳು ಊರಿನ ಭೂಮಿಯನ್ನೆಲ್ಲಾ ಮಾರಿ ಅಜ್ಜ ಅಜ್ಜಿಯೂ ಕೂಡ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದರಿಂದ ಅಜ್ಜ ಅಜ್ಜಿಯ ಜೊತೆ ಬೇಸಿಗೆ ರಜೆ ಕಳೆಯುವ ಭಾಗ್ಯ ಇಂದಿನ ಮಕ್ಕಳಿಗೆ ಇಲ್ಲದಾಗಿದೆ. ಪೇಟೆಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಕೂಡ ಮಕ್ಕಳಿಗೆ ಬೋರು ಹೊಡೆಸಿವೆ. ಹೀಗೆ ಬೋರು ಹೊಡೆಸಿಕೊಂಡ ಬೆಂಗಳೂರಿನ ಮಕ್ಕಳು ಟೈಮ್ ಪಾಸ್ ಮಾಡಲು ಹೊಸ ಉಪಾಯ ಮಾಡಿದ್ದಾರೆ. ಅದು ನೆಟ್ಟಿಗರೊಬ್ಬರ ಕಣ್ಣಿಗೆ ಬಿದ್ದು ಬೆಂಗಳೂರಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ ಆ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
ಟ್ವಿಟ್ಟರ್‌ನಲ್ಲಿ @KuchrooAayushi ಎಂಬುವವರು ಈ ಮಕ್ಕಳ ಫೋಟೋವನ್ನು ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. ನನ್ನ ದಿನದ ಹೈಲೈಟ್ಸ್, ಬೆಂಗಳೂರಿನ ಇಂದಿರಾನಗರದ ದಾರಿಯಲ್ಲಿ ನಡೆದು ಬರುತ್ತಿದ್ದಾಗ, ಈ ಡುಮ್‌ಡುಮ್ಸ್‌ಗಳು ಕಂಡು ಬಂದರು. ಅವರು ಅಲ್ಲಿ ನಿಂಬೆಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿದ್ದರು. ಏಕೆಂದು ಕೇಳಿದಾಗ ಅವರು ಹೇಳಿದ್ದು, ಅವರಿಗೆ ಬೋರಾಗುತ್ತಿದೆ ಎಂದು. ಮಾರಾಟದ ಕಲೆಯನ್ನು ಕಲಿತುಕೊಳ್ಳಲು ಇದೊಂದು ಒಳ್ಳೆಯ ದಾರಿ ಹಾಗೂ ಒಳ್ಳೆಯ ಸಮಯ ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಮನೆ ಗೇಟ್ ಮುಂದೆ ಲೆಮನ್ ಜ್ಯೂಸ್ ಮಾರಾಟ (ನಿಂಬೆ ಹಣ್ಣಿ ಜ್ಯೂಸ್ ) ಮಾಡುತ್ತಿದ್ದ ಮುಂದಿನ ಪುಟಾಣಿ ಬ್ಯುಸಿನೆಸ್ ಮ್ಯಾನ್‌ಗಳ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ (social Media) ಪೋಸ್ಟ್ ಮಾಡಿದ್ದಾರೆ.
Vijayapura: ಠಾಗೋರ್ ಶಾಲೆಯಲ್ಲಿ ಪುಡ್ ಫೆಸ್ಟಿವಲ್ : ಸಮೋಸಾ, ಬಿರಿಯಾನಿ ತಯಾರಿಸಿದ ಮಕ್ಕಳು..!
ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ. ಮೂರು ಲಕ್ಷಕ್ಕೂ ಅಧಿಕ ಜನ ಈ ಪೋಸ್ಟ್‌ನ್ನು ವೀಕ್ಷಿಸಿದ್ದಾರೆ. ಫೋಟೋಗಳಲ್ಲಿ ಮೂವರು ಮಕ್ಕಳು ಮನೆಯ ಗೇಟೊಂದರ ಮುಂದೆ ತಮ್ಮ ಪುಟ್ಟ ಸ್ಟಡಿ ಟೇಬಲ್ ಹಾಕಿಕೊಂಡು ಲೇಮನ್ ಜ್ಯೂಸ್ (Lemon juice) ಮಾರಾಟ ಮಾಡುವುದನ್ನು ಕಾಣಬಹುದಾಗಿದೆ. ಟೇಬಲ್ ಪಕ್ಕದಲ್ಲೇ ಲೆಮನ್ ಜ್ಯೂಸ್ Rs 10 ಎಂದು ಬರೆದಿರುವ ಬೋರ್ಡ್ ಇದೆ. ಟೇಬಲ್ ಮೇಲೆ 4 ಗ್ಲಾಸ್‌ಗಳಲ್ಲಿ ಲೆಮನ್ ಜ್ಯೂಸ್ ತುಂಬಿಸಿ ಅದಕ್ಕೆ ಸಣ್ಣ ತಟ್ಟೆಯಿಂದ ಮುಚ್ಚಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಬಹುದಾಗಿದೆ.
ಅಲ್ಲದೇ ಅಲ್ಲಿರುವ ಪೇಪರ್ ಬೋರ್ಡ್‌ನಲ್ಲಿ ವಿವಿಧ ರೀತಿಯ ಲಭ್ಯವಿರುವ ಲಿಂಬೆ ಜ್ಯೂಸ್‌ನ ವಿಧಗಳನ್ನು ಬರೆಯಲಾಗಿದೆ. ಬಿಳಿ ಸಕ್ಕರೆಯ ಲಿಂಬೆ ಜ್ಯೂಸ್, ಕಂದು ಸಕ್ಕರೆಯಿಂದ ತಯಾರಿಸಿದ ಲಿಂಬೆ ಜ್ಯೂಸ್, ಮಮೂಲಿ ಲಿಂಬೆ ಜ್ಯೂಸ್ ಹಾಗೂ ಉಪ್ಪು ಮಿಶ್ರಿತ ಲಿಂಬೆ ಜ್ಯೂಸ್ ಎಂದು ಬರೆದಿದ್ದು, ಐಸ್ ಬೇಕಿದ್ದಲ್ಲಿ 5 ರೂಪಾಯಿ ಹೆಚ್ಚುವರಿ ಪಾವತಿಸಬೇಕು ಎಂದು ಬರೆಯಲಾಗಿದೆ. ಜೊತೆಗೆ ಅಲ್ಲಿ ಹಣ ಸಂಗ್ರಹಿಸಲು ಮಕ್ಕಳು ಹಣದ ಡಬ್ಬಿಯನ್ನು ಕೂಡ ಇಟ್ಟಿರುವುದನ್ನು ಕಾಣಬಹುದಾಗಿದೆ.
ಇಷ್ಟು ಸಣ್ಣ ಪ್ರಾಯದಲ್ಲೇ ಮಕ್ಕಳ ವ್ಯವಹಾರ ಚಾಕಚಕ್ಯತೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ. ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿ ಪುಟ್ಟ ಬಾಲಕನ ವ್ಯವಹಾರ ಚತುರತೆಯನ್ನು ಕೊಂಡಾಡಿದ್ದಾರೆ. ಈ ಹುಡುಗ ಬಂದು ನನ್ನ ಸೇಲ್ಸ್ ಕೆಲಸವನ್ನು ಕಸಿದುಕೊಳ್ಳಲಿ ಎಂದು ನನಗನಿಸುತ್ತಿದೆ. ಇದೊಂದು ತರ ಪ್ರಗತಿಪರವಾದ ಬೆಳವಣಿಗೆ. ಅಲ್ಲದೇ ಅಲ್ಲಿ ವೃತ್ತಿಪರ ಮಟ್ಟದ ಬೆಲೆ ತಂತ್ರಗಳನ್ನು ಬಳಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರು ನಾನು ಬಾಲ್ಯದಲ್ಲಿ ಈ ರೀತಿ ಮಾಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ತಲೆಮಾರಿನ ಮಕ್ಕಳು ಬಹುತೇಕ ಸ್ಮಾರ್ಟ್‌ಫೋನ್ ಚಟದಿಂದ ಕಳೆದುಹೋಗುತ್ತಿದ್ದಾರೆ ಎಂದು ಬಹುತೇಕ ಪೋಷಕರು ಚಿಂತೆ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಪುಟ್ಟ ಮಕ್ಕಳು ಹೀಗೆ ಬೋರಾಗುತ್ತಿದೆ ಎಂದು ವ್ಯವಹಾರಕ್ಕಿಳಿದಿರುವುದು ಒಂದು ಸ್ಪೂರ್ತಿದಾಯಕ ವಿಚಾರವಾಗಿದ್ದು ಇದು ಇತರರಿಗೂ ಮಾದರಿಯಾಗಬಲ್ಲದು.
ಬಾಲ್ಯದಲ್ಲೇ ಅನಾಥವಾಗಿ ಬಿಟ್ಟು ಹೋದವರ ಮೇಲಿನ ದ್ವೇಷ ಸಾಧನೆಗೆ ಬ್ಯಾಂಕ್ ಲೂಟಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.