
ಬೆಂಗಳೂರು (ಏ.11): ಹೊಸ ಆಲೋಚನೆಗಳಿಗೆ ಉದ್ಯಮ ಜಗತ್ತಿನಲ್ಲಿ ಸದಾ ಅವಕಾಶಗಳಿರುತ್ತವೆ. ಇದಕ್ಕೆ ಇತ್ತೀಚಿನ ದಿನಗಳಲ್ಲಿ ನವೀನ ಮಾದರಿಯ ಸ್ಟಾರ್ಟ್ ಅಪ್ ಗಳು ಹುಟ್ಟಿಕೊಂಡಿರೋದೆ ಸಾಕ್ಷಿ. ಐಐಟಿ ದೆಹಲಿಯ ಇಬ್ಬರು ವಿದ್ಯಾರ್ಥಿಗಳು ಜಾನುವಾರುಗಳ ಖರೀದಿ ಹಾಗೂ ಮಾರಾಟಕ್ಕೆ 'ಆನಿಮಲ್' ಎಂಬ ವಿನೂತನ ಆನ್ ಲೈನ್ ಪ್ಲಾರ್ಟ್ ಫಾರ್ಮ್ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಇದರಿಂದ ಉತ್ತಮ ಆದಾಯ ಕೂಡ ಗಳಿಸುತ್ತಿದ್ದಾರೆ. ಹಣಕಾಸು ವರ್ಷ 2022ರಲ್ಲಿ ಈ ಪ್ಲಾಟ್ ಫಾರ್ಮ್ ಆದಾಯ 7.4 ಕೋಟಿ ರೂ. ಈಗ ಇದು 565 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಸ್ಟಾರ್ಟ್ ಅಪ್ ಪಿಡಿಯಾ ತಿಳಿಸಿದೆ. ಹೈನುಗಾರರ ಜೀವನಮಟ್ಟವನ್ನು ಸುಧಾರಿಸುವ ಹಾಗೂ ಜಾನುವಾರುಗಳ ಮಾರಾಟವನ್ನು ಸರಳಗೊಳಿಸುವ ಉದ್ದೇಶದಿಂದ ಆನಿಮಲ್ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಬೆಂಗಳೂರು ಮೂಲದ ಈ ಸ್ಟಾರ್ಟ್ ಅಪ್ ಅನ್ನು 2019ರಲ್ಲಿ ಸ್ಥಾಪಿಸಲಾಗಿದೆ. ಎಲ್ಲವೂ ಆನ್ ಲೈನ್ ಮೂಲಕವೇ ನಡೆಯುತ್ತಿರುವ ಈ ಕಾಲದಲ್ಲಿ ಜಾನುವಾರುಗಳ ಮಾರಾಟದ ಈ ಪ್ಲಾರ್ಟ್ ಫಾರ್ಮ್ ಅನ್ನು ರೈತರು ಬಳಸಿಕೊಳ್ಳುತ್ತಿದ್ದು, ಸಂಸ್ಥೆಗೆ ಉತ್ತಮ ಆದಾಯವೂ ಸಿಗುತ್ತಿದೆ.
'ಆನಿಮಲ್' ಅಂದ್ರೇನು?
ಆನಿಮಲ್ (Animall) ಜಾನುವಾರುಗಳ ಟ್ರೇಡಿಂಗ್ ಹಾಗೂ 'ಲಿಸ್ಟಿಂಗ್ ಗೆ' ಇರುವ ಆನ್ ಲೈನ್ ಮಾರುಕಟ್ಟೆ ಆಗಿದೆ. ಹಸುಗಳು ಹಾಗೂ ಎಮ್ಮೆಗಳ ಖರೀದಿ ಹಾಗೂ ಮಾರಾಟದ ಆನ್ ಲೈನ್ ವ್ಯವಹಾರಕ್ಕೆ ಈ ಪ್ಲಾರ್ಟ್ ಫಾರ್ಮ್ ಅವಕಾಶ ಕಲ್ಪಿಸಿದೆ. 2019ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ 'ಆನಿಮಲ್' ಸಂಸ್ಥೆಯ ಪೂರ್ಣ ಹೆಸರು 'ಆನಿಮಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್'.
ಭಿಕ್ಷುಕರ ಮೇಲೆ ಹೂಡಿಕೆ, ಬಂದ ಲಾಭದಲ್ಲಿ Beggars Corporation ಕಟ್ಟಿದ ಸಾಹಸಿ!
ಆನಿಮಲ್ ಸ್ಥಾಪಕರು ಯಾರು?
ಆನಿಮಲ್ ಸಂಸ್ಥೆಯನ್ನು ಸ್ನೇಹಿತೆಯರಾದ ನೀತು ಯಾದವ್ ಹಾಗೂ ಕೀರ್ತಿ ಜಂಗ್ರ ಜೊತೆಗೆ ಅನುರಾಗ್ ಬಿಸೋಯಿ, ಲಿಬಿನ್ ವಿ ಬಾಬು, ನೀತು ವೈ ಹಾಗೂ ಸಂದೀಪ್ ಮಹಾಪಾತ್ರ ಎಂಬ ಆರು ಮಂದಿ ಸೇರಿ ಸ್ಥಾಪಿಸಿದರು. ಈ ಸಂಸ್ಥೆಯ ಏಂಜೆಲ್ ಹೂಡಿಕೆದಾರರು ಶಾದಿ ಡಾಟ್ ಕಾಮ್ ಸ್ಥಾಪಕರಾದ ಅನುಪಮ್ ಮಿತ್ತಲ್, ಝೊಮ್ಯಾಟೋ ಸ್ಥಾಪಕ ಹಾಗೂ ಸಿಇಒ ದೀಪೇಂದ್ರ ಗೋಯೆಲ್ . ಇವರ ಜೊತೆಗೆ ಅಂಜಲಿ ಬನ್ಸಾಲ್, ಮೋಹಿತ್ ಕುಮಾರ್ ಹಾಗೂ ಶಹಿಲ್ ಬರೌ ಕೂಡ ಸೇರಿದ್ದಾರೆ.
ಆನಿಮಲ್ ಯಶೋಗಾಥೆ
ನೀತು ಯಾದವ್ ಹಾಗೂ ಕೀರ್ತಿ ಜಂಗ್ರ ಐಐಟಿ ದೆಹಲಿಯಲ್ಲಿ ಒಂದೇ ಕೋಣೆಯಲ್ಲಿ ನೆಲೆಸಿದ್ದರು. ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದು ಉತ್ತಮ ಸ್ನೇಹಿತರಾದರು.ಇಬ್ಬರಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸಿತ್ತು. ಅದರಲ್ಲೂ ಸ್ವಂತ ಉದ್ಯಮವೊಂದನ್ನು ಹುಟ್ಟುಹಾಕುವ ಮಹಾದಾಸೆ ಇತ್ತು. ಇಂಥ ಸಮಯದಲ್ಲೇ ಹೈನುಗಾರರಿಗೆ ನೆರವಾಗುವಂತಹ ಆನ್ ಲೈನ್ ಪ್ಲಾರ್ಟ್ ಫಾರ್ಮ್ ಸ್ಥಾಪಿಸುವ ಆಲೋಚನೆ ಮೂಡಿತು. ಪರಿಣಾಮ 2019ರ ನವೆಂಬರ್ ನಲ್ಲಿ ನೀತು ಯಾದವ್ ಕೀರ್ತಿ ಜಂಗ್ರ ಅವರನ್ನು ನೇಮಕ ಮಾಡಿಕೊಂಡು ಜಾನುವಾರುಗಳ ಆನ್ ಲೈನ್ ಮಾರುಕಟ್ಟೆ 'ಆನಿಮಲ್' ಪ್ರಾರಂಭಿಸಿಯೇ ಬಿಟ್ಟರು. ಇವರ ಜೊತೆಗೆ ಪ್ರತಿಲಿಪಿಯಲ್ಲಿ ನೀತು ಅವರ ಸಹೋದ್ಯೋಗಿಗಳಾಗಿದ್ದ ಇಬ್ಬರು ಸಾಥ್ ನೀಡಿದರು. ಬೆಂಗಳೂರಿನಲ್ಲಿ ಪುಟ್ಟ ಬಾಡಿಗೆ ಕೋಣೆಯಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
ಮ್ಯಾನೇಜರನ್ನೇ ಬ್ಯುಸಿನೆಸ್ ಪಾರ್ಟನರ್ ಮಾಡಿಕೊಂಡ ದೀಪಿಕಾ ಪಡುಕೋಣೆ; ಹಾಗಾದ್ರೆ ಯಾರು ಈ ಜಿಗರ್ ಶಾ?
ಪ್ರಾರಂಭದಲ್ಲಿ ಎಲ್ಲ ಸ್ಟಾರ್ಟ್ ಅಪ್ ಗಳಂತೆ ಆನಿಮಲ್ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಆದರೆ, ಆ ಬಳಿಕ ಎಮ್ಮೆಗಳನ್ನು ಖರೀದಿಸಲು ಆಸಕ್ತಿ ಹೊಂದಿರುವ ಜನರು ಇವರಿಗೆ ಹೆಚ್ಚಿನ ಆರ್ಡರ್ ನೀಡಲು ಪ್ರಾರಂಭಿಸಿದರು. ಈ ಆನ್ ಲೈನ್ ಪ್ಲಾಟ್ ಫಾರ್ಮ್ ಪ್ರಾಣಿಗಳ ಕಾಳಜಿಗೆ ಕೂಡ ಸೇವೆಗಳನ್ನು ಒದಗಿಸುತ್ತದೆ. 2022ನೇ ಹಣಕಾಸಿನ ಸಾಲಿನಲ್ಲಿ ಕಂಪನಿಯ ಶೇ.90ರಷ್ಟು ಆದಾಯ ಜಾನುವಾರುಗಳ ಖರೀದಿ-ಮಾರಾಟ ವ್ಯವಹಾರದಿಂದಲೇ ಬಂದಿದೆ. ಉಳಿದ ಶೇ.10 ವೈದ್ಯಕೀಯ ವೆಚ್ಚಗಳು, ಸಂತಾನೋತ್ಪತ್ತಿಗೆ ನೆರವು ಹಾಗೂ ಮಾರಾಟದ ಕಮೀಷನ್ ನಿಂದ ಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.