ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮೂಲಕ ಮನೆಮಾತಾಗಿರುವ ಬೈಜು’ಸ್ ಸಂಸ್ಥೆಯ ಹಿಂದಿದ್ದಾರೆ ಬೈಜು ರವೀಂದ್ರನ್ | ಬಹಳ ಕಡಿಮೆ ಅವಧಿಯಲ್ಲಿ ಜಾಗತಿಕ ಮನ್ನಣೆ ಪಡೆದ ಶಿಕ್ಷಣತಜ್ಞ | ವಿನೂತನ, ವಿಭಿನ್ನ, ವಿಷಿಷ್ಟ ಕಲಿಕಾ ವಿಧಾನ ಪರಿಚಯಿಸಿ ಬಿಲಿಯನೇರ್ ಸಾಲಿಗೆ ಸೇರಿದ ಬೈಜು
ಭಾರತದ ಬಿಲಿಯನೇರ್‌ಗಳ ಸಾಲಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಮಾಜಿ ಶಿಕ್ಷಕರೊಬ್ಬರು ಸೇರ್ಪಡೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿರುವ ನವೋದ್ಯಮಿ ಬೈಜು’ಸ್ ಸಿಇಓ ಈಗ ಬಿಲಿಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ.
ಕ್ಲಾಸ್ ರೂಮ್ ಪಾಠದಿಂದ ಆರಂಭಿಸಿ ಆನ್‌ಲೈನ್ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ, 37 ವರ್ಷ ಪ್ರಾಯದ ಬೈಜು ರವೀಂದ್ರನ್ ಒಡೆತನದ ಬೈಜು’ಸ್ ಈಗ ಟೀಂ ಇಂಡಿಯಾ ಜರ್ಸಿಗಳಿಗೆ ಪ್ರಾಯೋಜಕತ್ವವನ್ನು ನೀಡಲಿದೆ.
7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬೈಜು’ಸ್‌ನ ಆ್ಯಪ್ ಮೌಲ್ಯ ಈಗ 6 ಬಿಲಿಯನ್ ಡಾಲರ್! ಈ ತಿಂಗಳಾರಂಭದಲ್ಲಿ ಬೈಜು ರವೀಂದ್ರನ್ ಥಿಂಕ್ & ಲರ್ನ್ ಸಂಸ್ಥೆಯು 150 ಮಿಲಿಯನ್ ಡಾಲರ್ ಬಂಡವಾಳವನ್ನು ಗಿಟ್ಟಿಸಿತ್ತು. ಈ ಸಂಸ್ಥೆಯಲ್ಲಿ ಶೇ.21 ಪಾಲನ್ನು ಬೈಜು ಹೊಂದಿದ್ದಾರೆ.
ಇದನ್ನೂ ಓದಿ | ವರ್ಷ 2018-19 : ಆದಾಯ ತೆರಿಗೆ ರಿಟನ್ಸ್ ಸಲ್ಲಿಕೆ ಅವಧಿ ವಿಸ್ತರಣೆ!
ಹೆಚ್ಚುತ್ತಿರುವ ಇಂಟರ್ನೆಟ್ ಬಳಕೆ, ಕೈಗೆಟಕುವ ಸ್ಮಾರ್ಟ್‌ಫೋನ್‌ಗಳು, ನವಪೀಳಿಗೆಯ ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ಕಲಿಯುವಿಕೆಗೆ ಭಾರೀ ಉತ್ತೇಜನ ನೀಡಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಬೈಜು, ಸಣ್ಣ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳಿಗೆ ಬೇಕಾದ ಆನ್‌ಲೈನ್ ಕಲಿಕಾ ಸಾಮಾಗ್ರಿ/ ಪಠ್ಯವನ್ನು ಸಿದ್ಧಪಡಿಸಿದ್ದಾರೆ.
ಎಲ್‌ಕೆಜಿಯಿಂದ ಹಿಡಿದು 12ನೇ ತರಗತಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಗಣಿತ, ಇಂಗ್ಲೀಷ್‌ನಂತಹ ಕಠಿಣ ವಿಷಯಗಳನ್ನು ಬಹಳ ಕ್ರಿಯೇಟಿವ್ ಆಗಿ ಕಲಿಸುವ ಹೊಸ ಆ್ಯಪ್‌ಗಳನ್ನು ಬೈಜು ಹೊರತರುತ್ತಿದ್ದಾರೆ. ಅನಿಮೇಷನ್, ವಿಡಿಯೋಗಳು, ರಸಪ್ರಶ್ನೆಗಳು ಹೀಗೆ ಆಟವಾಡುತ್ತಾ ವಿಷಯಗಳನ್ನು ಕಲಿಯುವುದಕ್ಕೆ ಬೈಜು ಒತ್ತು ನೀಡುತ್ತಿದೆ.
ಯಾರಿವರು ಬೈಜು?
ಬೈಜು ಮೂಲತ: ಕೇರಳ ಕರಾವಳಿಯಲ್ಲಿರುವ ತ್ರಿಶೂರ್ ಜಿಲ್ಲೆಯ ಅಯಿಕೋಡ್ ಹಳ್ಳಿಯವರು. ಆದರೆ ಬೆಂಗಳೂರನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ.
ಇಂಜಿನಿಯರಿಂಗ್ ಪದವೀಧರನಾದ ಬೈಜು ಮೊದಲು ಇಂಗ್ಲಂಡ್‌ನ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತನ್ನ ಸುಲಲಿತವಾಗಿ ಕಲಿಯುವ ಮತ್ತು ಕಲಿಸುವ ಕೌಶಲ್ಯವನ್ನು ಬಳಸಿ, ಸ್ನೇಹಿತರಿಗೆ IIM ಪ್ರವೇಶ ಪರೀಕ್ಷೆಗಳನ್ನು ಸುಲಭವಾಗಿ ಪಾಸ್ ಮಾಡುವ ತಂತ್ರಗಳನ್ನು ಹೇಳಿಕೊಡುತ್ತಿದ್ದರು.
ಇದನ್ನೂ ಓದಿ | 3.60 ಲಕ್ಷ ಕೋಟಿ ಒಡೆಯನ ವಾರ್ಷಿಕ ವೇತನ ಇಷ್ಟೇನಾ? 11 ವರ್ಷದಿಂದ ಏರಿಕೆ ಆಗಿಲ್ಲ!
ಅಷ್ಟೇ ಅಲ್ಲ, ತನ್ನ ಕೌಶಲ್ಯತೆಯನ್ನು ಪರೀಕ್ಷಿಸಲು ಬೈಜು ಖುದ್ದು ಒಮ್ಮೆ IIM ಪ್ರವೇಶ ಪರೀಕ್ಷೆಯನ್ನು ಕೂಡಾ ಬರೆದರಲ್ಲದೇ, ನೂರಕ್ಕೆ ನೂರು ಅಂಕಗಳನ್ನು ಗಳಿಸಿದ್ದರು. ಆದರೆ, IIM ನಲ್ಲಿ ಪ್ರವೇಶ ಪಡೆಯಲಿಲ್ಲ. ಹಿಂತಿರುಗಿ ನೋಡಿಲ್ಲ!
ಆ ಬಳಿಕ ಸಣ್ಣ ವಿದ್ಯಾರ್ಥಿಗಳಿಗೆ ಕೋಣೆಯಲ್ಲಿ ಪಾಠ ಹೇಳಿಕೊಡುವುದನ್ನು ಆರಂಭಿಸಿದ ಬೈಜು, ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಪಾಠ ಹೇಳಿಕೊಡಲಾರಂಭಿಸಿದರು. ಅವರ ಪಾಠಕ್ಕಾಗಿ ವಿದ್ಯಾರ್ಥಿಗಳು/ಪೋಷಕರು ಮುಗಿಬಿದ್ದರು.
2011ರಲ್ಲಿ ಥಿಂಕ್ & ಲರ್ನ್ ಸಂಸ್ಥೆಯನ್ನು ಆರಂಭಿಸಿದ್ದ ಬೈಜು, 2015ರಲ್ಲಿ ಬೈಜು’ಸ್ ಕಲಿಕಾ ಆ್ಯಪನ್ನು ಹೊರತಂದರು. ಕೊಲ್ಲಿ ದೇಶಗಳಿಗೆ ಈಗಾಗಲೇ ತನ್ನ ಆನ್‌ಲೈನ್ ಶಿಕ್ಷಣದ ಮಾರುಕಟ್ಟೆಯನ್ನು ವಿಸ್ತರಿಸಿರುವ ಬೈಜು, ಅಮೆರಿಕಾ ಮತ್ತು ಯುರೋಪಿಯನ್ ದೇಶಗಳತ್ತ ದೃಷ್ಟಿ ನೆಟ್ಟಿದ್ದಾರೆ.