ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಷೇರುಗಳಲ್ಲಿ ಶೇ.21ರಷ್ಟು ಕುಸಿತವಾಗಿದ್ದು, 3.4 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಮಾರುಕಟ್ಟೆ ಏರಿಳಿತ, ತನಿಖೆ, ಮತ್ತು ಆರೋಪಗಳಿಂದ ಷೇರುಗಳ ಮೌಲ್ಯ ಕಡಿಮೆಯಾಗಿದೆ.
ನವದೆಹಲಿ: ಈ ವರ್ಷ ಆರಂಭದಿಂದ ಉದ್ಯಮಿ ಗೌತಮ್ ಅದಾನಿ ಲಾಭಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. 2024ರಲ್ಲಿದ್ದ ಗೌತಮ್ ಅದಾನಿ ಲಾಭದ ಪ್ರಮಾಣ ಕಡಿಮೆಯಾಗುತ್ತಲೇ ಬರುತ್ತಿದೆ. 2024-25ರ ಆರ್ಥಿಕ ವರ್ಷದ ಅಂತ್ಯದಲ್ಲಿರುವ ಸಂದರ್ಭದಲ್ಲಿ ಗೌತಮ್ ಅದಾನಿ ಒಡೆತನದ 'ಅದಾನಿ ಗ್ರೂಪ್' ಷೇರುಗಳಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಶೇ.21ರಷ್ಟು ಕುಸಿತವಾಗಿದೆ. ಮಾರುಕಟ್ಟೆ ಒಟ್ಟು ಬಂಡವಾಳದಲ್ಲಿ 3.4 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಅದಾನಿ ಗ್ರೂಪ್ ಅನುಭವಿಸಿದೆ. ಮಾರುಕಟ್ಟೆಯಲ್ಲಿನ ಏರಿಳಿತ, ಸಂಸ್ಥೆಯ ವಿರುದ್ಧ ನಡೆಯುತ್ತಿರುವ ತನಿಖೆ ಮತ್ತು ಕೆಲ ಆರೋಪಗಳಿಂದಾಗಿ ಅದಾನಿ ಗ್ರೂಪ್ ಷೇರುಗಳ ಮೌಲ್ಯ ಕಡಿಮೆಯಾಗಲು ಕಾರಣ ಎಂದು ವರದಿಯಾಗಿದೆ. ಈ ಆರ್ಥಿಕ ವರ್ಷದಲ್ಲಿ ಅತಿಹೆಚ್ಚು ನಷ್ಟಕ್ಕೊಳಗಾದ ಕಂಪನಿ ಇದಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮಾರ್ಚ್ 24 ರಿಂದ ಮಾರ್ಚ್ 28ರ ಅವಧಿಯಲ್ಲಿ ಅದಾನಿ ಗ್ರೀನ್ ಎನರ್ಜಿಯ ಷೇರುಗಳಲ್ಲಿ ಹೆಚ್ಚು ಕುಸಿತ ಕಂಡಿದೆ. ಮಾರುಕಟ್ಟೆಯ ಬಂಡವಾಳ 2.90 ಲಕ್ಷ ಕೋಟಿಯಿಂದ 1.46 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. ಅಂದ್ರೆ ಅರ್ಧದಷ್ಟು ಕ್ಯಾಪಿಟಲ್ ಕಡಿಮೆಯಾಗಿದೆ. ಇಷ್ಟು ಮಾತ್ರವಲ್ಲ ಅದಾನಿ ಎಂಟರ್‌ಪ್ರೈಸಸ್ ಷೇರುಗಳಲ್ಲಿ ಶೇ.27ರಷ್ಟು ಕುಸಿತವಾಗಿದ್ದು, 96,096 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.
ಅದಾನಿ ಪೋರ್ಟ್ಸ್ ಆಂಡ್ SEZ ಮಾರುಕಟ್ಟೆ ಬಂಡವಾಳ ಶೇ.11.40ರಷ್ಟು ಕುಸಿತವಾಗಿದ್ದು, 33,029 ಕೋಟಿ ರೂ.ಗಳಷ್ಟ ನಷ್ಟವುಂಟಾಗಿದೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಎನರ್ಜಿ ಸೆಲ್ಯುಷನ್ ಷೇರುಗಳು ಕ್ರಮವಾಗಿ ಶೇ. 31.84 ಮತ್ತು ಶೇ.18.95ರಷ್ಟು ಕಡಿಮೆಯಾಗಿದೆ. ಇನ್ನು ಸಿಮೆಂಟ್ ಕಂಪನಿಗಳಾದ ಎಸಿಸಿ ಮತ್ತು ಅಂಬುಜಾ ಷೇರುಗಳು ಶೇ. 23.10, ಶೇ.15.92ರಷ್ಟು ಕುಸಿತಕಂಡಿವೆ. ಅದಾನಿ ಗ್ರೂಪ್ ಮೀಡಿಯಾ ಕಂಪನಿ ಎನ್‌ಡಿಟಿವಿ ಷೇರುಗಳಲ್ಲಿಯೂ ಶೇ.41.58ರಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಸೌರ ವಿದ್ಯುತ್ ಹಗರಣ: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿಗೆ ಅಮೆರಿಕ ತನಿಖೆ ಆತಂಕ
ಅದಾನಿ ಷೇರುಗಳ ಕುಸಿತಕ್ಕೆ ಕಾರಣವೇನು?
ಆರ್ಥಿಕ ವರ್ಷ 2025ರಲ್ಲಿ ಅದಾನಿ ಸಂಸ್ಥೆಗಳ ಷೇರುಗಳ ಮೌಲ್ಯ ಕುಸಿತಕ್ಕೆ ಅನೇಕ ಕಾರಣಗಳಿವೆ. ಭಾರತೀಯ ಷೇರು ಮಾರುಕಟ್ಟೆ ಮೇಲಿನ ಆರ್ಥಿಕ ಒತ್ತಡಗಳು, ಜಾಗತೀಕವಾಗಿ ಬದಲಾಗುತ್ತಿರುವ ರಾಜಕೀಯ ನೀತಿಗಳು, ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿಗಳು, ವೀಕರಿಸಬಹುದಾದ ಇಂಧನ ಮತ್ತು ಅನಿಲ ವಲಯಗಳಲ್ಲಿನ ಸಮಸ್ಯೆಗಳು ಸೇರಿದಂತೆ ಹಲವು ಜಾಗತೀಕ ವಿಷಯಗಳು ಅದಾನಿ ಸಮೂಹದ ಷೇರುಗಳ ಕುಸಿತಕ್ಕೆ ಕಾರಣವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಭಾರೀ ಮಾರಾಟವು ಅದಾನಿ ಸಮೂಹದ 6 ಕಂಪನಿಗಳ ಮೇಲೂ ಪರಿಣಾಮ ಬೀರಿದೆ.
ಇದನ್ನೂ ಓದಿ: ಅಂಬಾನಿ, ಅದಾನಿ ಅಲ್ಲ, 2025ರ ಬಿಲೇನಿಯರ್ ಪೈಕಿ ಈ 94 ವರ್ಷದ ಉದ್ಯಮಿಗೆ ಮಾತ್ರ ಲಾಭ