ಮನೆಯಲ್ಲಿ ಎಷ್ಟು ಬಂಗಾರ, ಆಭರಣ ಇಡಬೇಕು ಎಂಬುದಕ್ಕೆ ನಿಯಮ ಇದೆ. ಅದೇ ರೀತಿ ನಗದು ಎಷ್ಟಿರಬೇಕು ಎಂಬುದಕ್ಕೂ ನಿಯಮ ಇದ್ಯಾ? ನಿಮ್ಮ ಮನೆಯಲ್ಲಿ ಎಷ್ಟು ನಗದು ಇರಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಅಧಿಕಾರಿ ಮನೆ ಮೇಲೆ ಐಟಿ (IT) ದಾಳಿ, ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು (Cash) ವಶಕ್ಕೆ ಎಂಬ ಸುದ್ದಿ ಆಗಾಗ ಬರ್ತಿರುತ್ತದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಎಷ್ಟು ನಗದು ಇಟ್ಟುಕೊಂಡ್ರೆ ಸೇಫ್ ಎನ್ನುವ ಪ್ರಶ್ನೆಯೊಂದು ಜನಸಾಮಾನ್ಯರನ್ನು ಕಾಡುತ್ತದೆ. ಮನೆಯಲ್ಲಿ ನಗದು ಇಟ್ಟುಕೊಳ್ಳುವವರ ಸಂಖ್ಯೆ ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದ್ರೆ ಈಗ ಕಡಿಮೆ ಇದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟು ಹೆಚ್ಚಿರುವ ಕಾರಣ ಜನರು, ನಗದನ್ನು ಹೆಚ್ಚಾಗಿ ಮನೆಯಲ್ಲಿ ಇಟ್ಟುಕೊಳ್ಳೋದಿಲ್ಲ. ಆದ್ರೂ ಮನೆಯಲ್ಲಿ ಗರಿಷ್ಠ ಎಷ್ಟು ನಗದನ್ನು ಇಟ್ಟುಕೊಳ್ಳಬಹುದು, ಅದಕ್ಕಿರುವ ನಿಯಮ ಏನು ಎಂಬ ಮಾಹಿತಿ ನಿಮಗಿದ್ರೆ ಒಳ್ಳೆಯದು.
ಮನೆಯಲ್ಲಿ ಎಷ್ಟು ನಗದು ಇಡಬಹುದು? : ಮನೆಯಲ್ಲಿ ನಗದು ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯ್ದೆಯಲ್ಲಿ ಯಾವುದೇ ಸ್ಥಿರ ನಿಯಮವಿಲ್ಲ. ಕಾನೂನುಬದ್ಧ ಮೂಲದಿಂದ ಹಣ ಬಂದರೆ, ಯಾವುದೇ ವ್ಯಕ್ತಿಯು ಮನೆ ಅಥವಾ ಕಚೇರಿಯಲ್ಲಿ ಎಷ್ಟು ಬೇಕಾದರೂ ನಗದು ಇಟ್ಟುಕೊಳ್ಳಬಹುದು. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಮನೆಯಲ್ಲಿ ಎಷ್ಟು ಬೇಕಾದರೂ ಹಣವನ್ನು ಇಟ್ಟುಕೊಳ್ಳಬಹುದು. ಆದ್ರೆ ನೀವು ಈ ಹಣವನ್ನು ಸರಿಯಾದ ರೀತಿಯಲ್ಲಿ ಗಳಿಸಿರಬೇಕು. ಆ ಆದಾಯದ ಸರಿಯಾದ ಮೂಲವನ್ನು ನೀವು ಹೊಂದಿರಬೇಕು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಮ್ಮ ಮನೆ ಮೇಲೆ ದಾಳಿ ಮಾಡಿದರೆ, ಆ ಹಣದ ಬಗ್ಗೆ ನಿಮ್ಮ ಬಳಿ ಕಾನೂನು ಪುರಾವೆ ಇರಬೇಕು. ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಮತ್ತು ಇತರ ದಾಖಲೆಗಳ ಮೂಲಕ ಈ ಹಣ ನಿಮ್ಮ ಆದಾಯ ಅಥವಾ ಉಳಿತಾಯ ಎಂದು ಸಾಬೀತುಪಡಿಸಿದರೆ, ಯಾವುದೇ ಸಮಸ್ಯೆ ಇರುವುದಿಲ್ಲ. ಒಂದು ವೇಳೆ ಗಳಿಕೆ ಕಾನೂನುಬಾಹಿರವಾಗಿದ್ದರೆ, ಆ ಹಣವನ್ನು ಕಪ್ಪು ಹಣವೆಂದು ಪರಿಗಣಿಸಲಾಗುತ್ತದೆ. ಕಪ್ಪು ಹಣದ ಮೇಲೆ ಆದಾಯ ತೆರಿಗೆ ಇಲಾಖೆ ಭಾರಿ ದಂಡ ವಿಧಿಸುತ್ತದೆ. ಕಾನೂನು ಕ್ರಮ ತೆಗೆದುಕೊಳ್ಳುತ್ತದೆ.
10 ರೂಪಾಯಿ ನಾಣ್ಯದಲ್ಲಿ ಯಾವುದು ಅಸಲಿ, ಯಾವುದು ನಕಲಿ?
ಒಬ್ಬ ವ್ಯಕ್ತಿ ಎಷ್ಟು ಹಣ ಸಾಗಿಸಬೇಕು ಎನ್ನುವ ಬಗ್ಗೆಯೂ ಸ್ಪಷ್ಟ ಕಾನೂನಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ನಗದನ್ನು ಸಾಗಿಸುತ್ತಿದ್ದರೆ ಆದಾಯ ತೆರಿಗೆ ಅಧಿಕಾರಿಗಳು ಅದರ ಮೂಲದ ಬಗ್ಗೆ ವಿಚಾರಿಸಬಹುದು. ಈ ಸಂದರ್ಭದಲ್ಲಿ ವ್ಯಕ್ತಿ ಹಣ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ. ಪೂರ್ಣ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು ಸಾಗಿಸುತ್ತಿರುವ ಅಥವಾ ಮನೆಯಲ್ಲಿಟ್ಟಿರುವ ಹಣದ ಮೂಲವನ್ನು ಬಹಿರಂಗಪಡಿಸದಿದ್ದರೆ ಆ ಹಣ ಅಘೋಷಿತ ಆದಾಯವೆಂದು ತೆರಿಗೆಗೆ ಒಳಪಡುತ್ತದೆ.
ಆರ್‌ಬಿಐ ನಿಯಮ ಏನು? : ಮನೆಯಲ್ಲಿ ನಗದು ಇಡಲು ಯಾವುದೇ ಮಿತಿಯನ್ನು ಆರ್ ಬಿಐ ನಿಗದಿಪಡಿಸಿಲ್ಲ. ಆದ್ರೆ ನಿಮ್ಮ ಬಳಿ ಇರುವ ಹಣಕ್ಕೆ ಸರಿಯಾದ ದಾಖಲೆ ಅವಶ್ಯಕ ಎಂದು ಆರ್ ಬಿಐ ಕೂಡ ಹೇಳುತ್ತದೆ. ವ್ಯಾಪಾರ ನಡೆಸುತ್ತಿದ್ದರೆ ಲೆಕ್ಕಪತ್ರ ಸರಿಯಾಗಿರಬೇಕು. ಬ್ಯಾಂಕಿನಿಂದ ಹಿಂಪಡೆಯಲಾದ ನಗದು ಅಥವಾ ಉಡುಗೊರೆಯಾಗಿದ್ದರೆ ಅದಕ್ಕೆ ಸಂಬಂಧಿಸಿದ ರಸೀದಿಯನ್ನು ನೀವು ಹೊಂದಿರಬೇಕು.
ಇನ್ನೊಂದೇ ವಾರ ಬಾಕಿ! ಮಾರ್ಚ್ 31ರೊಳಗೆ ಹಣಕಾಸಿನ ಈ ಕೆಲಸಗಳನ್ನ ಮುಗಿಸಿ, ಇಲ್ಲಾಂದ್ರೆ ತೊಂದ್ರೆ ಫಿಕ್ಸ್!
ಬ್ಯಾಂಕ್ ನಿಂದ ಹಣ ವಿತ್ ಡ್ರಾ ನಿಯಮ : ಬ್ಯಾಂಕ್ ನಿಂದ ಹಣ ವಿತ್ ಡ್ರಾಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮವಿದೆ. ನೀವು ಒಂದು ದಿನದಲ್ಲಿ 2 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ವಹಿವಾಟು ನಡೆಸುವಂತಿಲ್ಲ. ಮದುವೆ ಅಥವಾ ಸಮಾರಂಭದಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ದಂಡ ವಿಧಿಸಲಾಗುತ್ತದೆ. ಯಾವುದೇ ವ್ಯಕ್ತಿಯಿಂದ ಒಂದು ದಿನದಲ್ಲಿ 50,000 ರೂಪಾಯಿಗಿಂತ ಹೆಚ್ಚಿನ ನಗದು ಉಡುಗೊರೆಯನ್ನು ಸ್ವೀಕರಿಸಿದರೆ, ಅದಕ್ಕೂ ನೀವು ಲೆಕ್ಕ ನೀಡಬೇಕು.