ಬೆಂಗಳೂರಿನಲ್ಲಿ ಚಿನ್ನದ ಲೇಪಿತ ಇಟ್ಟಿಗೆಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ರಾಜರ ಆಳ್ವಿಕೆಯ ಪ್ರದೇಶದಲ್ಲಿ ನಿಧಿ ಸಿಕ್ಕಿದೆ ಎಂದು ನಂಬಿಸಿ ವಂಚಿಸುತ್ತಿದ್ದರು. ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನಕಲಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು (ಮಾ.24): ರಾಜರು ಆಳ್ವಿಕೆ ಮಾಡಿದ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡುವುದಕ್ಕಾಗಿ ಪಾಯ ಅಗೆಯುವಾಗ ನಿಧಿ ಪತ್ತೆಯಾಗಿದೆ ಎಂದು ಇನ್ನದ ಇಟ್ಟಿಗೆ ಕೊಡುವುದಾಗಿ ವಂಚನೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಟ್ಟಿಗೆಗೆ ಚಿನ್ನದ ಪಾಲಿಶ್ ಮಾಡಿ ಮಾರಾಟ ಮಾಡಲು ಯತ್ನ ಮಾಡಿದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ, ಅನ್ವರ್ ಹುಸೇನ್ ಬಂಧಿತ ಆರೋಪಿಗಳು. ರಾಜರು ಆಳ್ವಿಕೆ ಮಾಡುತ್ತಿದ್ದ ಸ್ಥಳದಲ್ಲಿ ಮನೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ಕಥೆ ಕಟ್ಟಿದ್ದ ಆರೋಪಿಗಳು. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆ ಎಷ್ಟಿದೆಯೋ ಅದಕ್ಕಿಂತ ಅರ್ಧ ಬೆಲೆಗೆ ಚಿನ್ನ ಕೊಡುವುದಾಗಿ ಹೇಳಿದ್ದರು. ಇವರು ಮರದಹಲಗೆ ಹಾಗೂ ಮಣ್ಣಿನ ಇಟ್ಟಿಗೆ ಚಿನ್ನದ ಪಾಲಿಶ್ ಮಾಡಿ ಮಾರಾಟ ಮಾಡುತ್ತಿದ್ದರು.
ಇವರು ಮೊದಲು ವ್ಯಾಪಾರಿಗಳ ನಂಬಿಕೆ ಗಳಿಸಲು 10 ಗ್ರಾಂವರೆಗೂ ಅಸಲಿ ಚಿನ್ನದ ಗಟ್ಟಿಯನ್ನು ನೀಡುತ್ತಿದ್ದರು. ಇದರ ನಂತರ ನಕಲಿ ಚಿನ್ನವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆಗ ವ್ಯಾಪಾರಿಗಳು ಚಿನ್ನವನ್ನು ತೆಗೆದುಕೊಳ್ಳಲು ತಾವು ತಿಳಿಸಿದ ಜಾಗಕ್ಕೆ ಬರುವಂತೆ ಹೇಳಿ ಪದೆ ಪದೇ ಲೊಕೇಷನ್ ಬದಲು ಮಾಡುತ್ತಿದ್ದರು. ಕೊನೆಗೆ, ನಿರ್ಜನ ಪ್ರದೇಶದಲ್ಲಿ ವ್ಯಾಪಾರಿಗಳನ್ನು ಕರೆಸಿಕೊಂಡು ತುರ್ತಾಗಿ ಹಣವನ್ನು ಪಡೆದು ಅವರ ಕೈಗೆ ಚಿನ್ನವನ್ನು ಇಟ್ಟು ಪರಾರಿ ಆಗುತ್ತಿದ್ದರು. ಇದೀಗ ವ್ಯಾಪಾರಿಗಳ ವಂಚನೆ ಬಗ್ಗೆ ದೂರು ನೀಡಿದ್ದನ್ನು ಹಿಂಬಾಲಿಸಿದ ಪೊಲೀಸರಿಗೆ ಇದೇ ರೀತಿ ಮತ್ತೊಬ್ಬ ವ್ಯಾಪಾರಿಗೆ ವಂಚನೆ ಮಾಡುವಾಗ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಎಷ್ಟು ಚಿನ್ನವಿದೆ? ಎಷ್ಟು ದಾಸ್ತಾನು ಮಾಡಬಹುದು ? ಹೊಸ ಆದಾಯ ತೆರಿಗೆ ನಿಯಮ ಜಾರಿಗೆ ಬಂದಿದೆ! ಎಚ್ಚರ
ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿಸಿದ ವಂಚಕರಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹನ, ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಸದ್ಯ ಮೂವರ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.