
ಮುಂಬೈ(ಫೆ.06): ಅದು ಧೀರೂಭಾಯಿ ಅಂಬಾನಿ ಕಟ್ಟಿದ ವಾಣಿಜ್ಯ ಸಾಮ್ರಾಜ್ಯ. ಅದರ ಹೆಸರು ರಿಲಯನ್ಸ್ ಇಂಡಸ್ಟ್ರಿಸ್. 1977ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇದೀಗ ವಿಶ್ವದ ಮೂಲೆ ಮೂಲೆಯಲ್ಲಿ ಚಿರಪರಿಚಿತ.
ರಿಲಯನ್ಸ್ ಇಂಡಸ್ಟ್ರಿಸ್ ಆರಂಭದ ದಿನಗಳನ್ನು ನಿಜಕ್ಕೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಧೀರೂಭಾಯಿ ಅವರ ಸತತ ಪರಿಶ್ರಮದಿಂದ ಒಂದು ಪುಟ್ಟ ಸಂಸ್ಥೆ ದೇಶದ ಹೆಮ್ಮೆಯ ಉದ್ಯಮ ಸಂಸ್ಥೆಯಾಗಿ ಬೆಳೆದಿದ್ದು ನಿಜಕ್ಕೂ ಅದ್ಭುತ ಇತಿಹಾಸ.
ರಿಲಯನ್ಸ್ ಇಂಡಸ್ಟ್ರಿಸ್‌ನ ಅಡಿಪಾಯ ಅದರ ಷೇರುದಾರರು. ಒಂದು ಕಾಲದಲ್ಲಿ ಧೀರೂಭಾಯಿ ಅಂಬಾನಿ ತಮ್ಮ ಷೇರುದಾರರ ಸಭೆಯನ್ನು ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಸುತ್ತಿದ್ದರು. ಅಸಲಿಗೆ ರಿಲಯನ್ಸ್ ಎಂದರೆ ಷೇರುದಾರರ ಮೌಲ್ಯ ಎಂದರ್ಥ.
ತನ್ನ ಷೇರುದಾರರ ಕೊಡುಗೆಯಿಂದಲೇ ಬೃಹದಾಕಾರವಾಗಿ ಬೆಳೆದ ರಿಲಯನ್ಸ್, ಇಂದಿಗೂ ತನ್ನ ವಾರ್ಷಿಕ ಷೇರುದಾರರ ಸಭೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತದೆ.
ರಿಲಯನ್ಸ್ ನೊಗ ಮಕ್ಕಳ ಹೆಗಲಿಗೆ:
2002ರಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಧೀರೂಭಾಯಿ ಅಂಬಾನಿ ನಿಧನ ಹೊಂದಿದರು. ತಮ್ಮ ಸಾವಿಗೂ ಮೊದಲೇ ತಮ್ಮ ಮಕ್ಕಳಾದ ಮುಖೇಶ್ ಮತ್ತು ಅನಿಲ್ ಅಂಬಾನಿ ಭವಿಷ್ಯಕ್ಕೆ ಧೀರೂಭಾಯಿ ಭದ್ರ ಬುನಾದಿ ಹಾಕಿದ್ದರು.
ಜೀವನದುದ್ದಕ್ಕೂ ಒಟ್ಟಾಗಿ ಇರಿ ಎಂದು ಹೇಳಿಯೇ ಬಹುಶಃ ಧೀರೂಭಾಯಿ ಕೊನೆಯುಸಿರೆಳೆದಿದ್ದರೆನೋ?. ಆದರೆ ಅಂದು ಒಟ್ಟಾಗಿ ಇರುವ ಮಾತು ಕೊಟ್ಟಿದ್ದ ಸಹೋದರರು ಕೇವಲ 4 ವರ್ಷಗಳಲ್ಲಿ ಪರಸ್ಪರ ಮುಖ ತಿರುಗಿಸಿ ಬಿಟ್ಟರು.
ಹೌದು, 2006ರಲ್ಲಿ ಮುಖೇಶ್ ಮತ್ತು ಅನಿಲ್ ಅಂಬಾನಿ ಪರಸ್ಪರ ದೂರವಾದರು. ಅದರಂತೆ ರಿಲಯನ್ಸ್ ಇಂಡಸ್ಟ್ರಿಸ್ ಕೂಡ ಎರಡು ಹೋಳಾಯಿತು. ಸಹೋದರರ ನಡುವಿನ ವೈಮನಸ್ಸು ಎಷ್ಟು ಗಾಢವಾಗಿತ್ತೆಂದರೆ ಧೀರೂಭಾಯಿ ಅಂಬಾನಿ ವಾಣಿಜ್ಯ ಸಾಮ್ರಾಜ್ಯ ಒಡೆದು ಚೂರು ಚೂರಾಯಿತು.
ರಿಲಯನ್ಸ್ ಇಂಡಸ್ಟ್ರಿಸ್, ಪೆಟ್ರೋಲಿಯಂ ಮುಖೇಶ್ ಪಾಲಿಗೆ ಬಂದರೆ, ರಿಲಯನ್ಸ್ ಕಮ್ಯುನಿಕೇಶನ್ಸ್, ಟೆಲಿಕಾಂ ಅನಿಲ್ ಅಂಬಾನಿ ಪಾಲಾಯಿತು. ಆದರೆ ಮುಖೇಶ್ ತಮ್ಮ ಪಾಲಿಗೆ ಬಂದ ಸಂಸ್ಥೆಗಳನ್ನು ಶ್ರದ್ಧೆಯಿಂದ ಬೆಳೆಸಿದರೆ, ಅನಿಲ್ ಒಡೆತನದ ರಿಲಯನ್ಸ್ ಕುಮ್ಯುನಿಕೇಶನ್ಸ್ ನಷ್ಟದ ಹಾದಿ ಹಿಡಿಯಿತು.
ಅನಿಲ್ ಕುಸಿತದ ಹಾದಿ:
ಅಣ್ಣನಿಂದ ಬೇರೆಯಾದ ಅನಿಲ್ ಅಂಬಾನಿ ತಮ್ಮ ಉದ್ಯಮವನ್ನು ನಿಭಾಯಿಸುವಲ್ಲಿ ವಿಫಲವಾದರು. ರಿಲಯನ್ಸ್ ಕಮ್ಯುನಿಕೇಶನ್ಸ್ ಸಾಲದ ಸುಳಿಗೆ ಸಿಲುಕಿತು. ಇತ್ತ ಸಹೋದರ ಮುಖೇಶ್ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟು ಯಶಸ್ವಿಯಾಗತೊಡಗಿದರು. ರಿಲಯನ್ಸ್ ಜಿಯೋ ಮೂಲಕ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮುಖೇಶ್ ಪ್ರಾರಂಭಿಸಿದರು.
ಈ ಬೆಳವಣಿಗೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಅನಿಲ್, ಹೇಗಾದರೂ ಮಾಡಿ ತಮ್ಮ ಸಂಸ್ಥೆಯನ್ನು ಮತ್ತೆ ಲಾಭದ ಹಳಿ ಮೇಲೆ ತರಬೇಕೆಂದು ಪಣ ತೊಟ್ಟರು. ಅದರಂತೆ ವಿದೇಶಿ ಸಂಸ್ಥೆಗಳೊಂದಿಗೆ ವ್ಯಾವಹಾರಿಕ ಒಪ್ಪಂದ ಮಾಡಿಕೊಳ್ಳತೊಡಗಿದರು.
ಆದರೆ ತಮ್ಮ ಸಂಸ್ಥೆಯನ್ನು ನಿಭಾಯಿಸುವಲ್ಲಿ ವಿಫಲರಾದ ಅನಿಲ್, ಈ ವಿದೇಶಿ ಕಂಪನಿಗಳಿಂದ ಪಡೆದ ಸಾಲ ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದರು. ಕಾನೂನಾತ್ಮಕ ಪ್ರಕ್ರಿಯೆಗಳು ಅನಿಲ್ ಅವರನ್ನು ಹೈರಾಣಾಗಿಸಿದವು. ಇಂದಿಗೂ ಅನಿಲ್ ಅಂಬಾನಿ ಸಂಸ್ಥೆಯ ವಿರುದ್ಧದ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತವೆ.
ಈ ಮಧ್ಯೆ 2018ರಲ್ಲಿ ಸ್ವಿಡನ್ ಸಂಸ್ಥೆ ಎರಿಕ್ಸನ್ ರಿಲಯನ್ಸ್ ಕಮ್ಯುನಿಕೇಶನ್ಸ್ ವಿರುದ್ಧ 1,100 ಕೋಟಿ ರೂ. ಸಾಲದ ಹೊರೆ ಹಾಕಿತು. ಹಲವು ಕಂಪನಿಗಳಿಂದ ಪಡೆದ ಸಾಲ ತೀರಿಸಲಾಗದೇ ಅನಿಲ್ ದಿವಾಳಿಯಂಚಿಗೆ ಬಂದು ತಲುಪಿದರು.
ಅಣ್ಣನತ್ತ ಅನಿಲ್ ಚಿತ್ತ:
ದಿವಾಳಿಯಂಚಿಗೆ ತಲುಪಿರುವ ಅನಿಲ್ ಅಂಬಾನಿ, ಇದೀಗ ಮತ್ತೆ ಅಣ್ಣನ ಸಹಾಯ ಬೇಡುತ್ತಿದ್ದು, ಪರಮುಖವಾಗಿ ರಿಲಯನ್ಸ್ ಕಮ್ಯುನಿಕೇಶನ್ಸ್ ಸ್ಪೆಕ್ಟ್ರಮ್ ಕೊಳ್ಳುವ ಮೂಲಕ ಮುಖೇಶ್ ಸಹೋದರನ ನೆರವಿಗೆ ಬರಬಹುದಾಗಿದೆ.
ಆದರೆ ಈ ಒಪ್ಪಂದಕ್ಕೆ ಕೇಂದ್ರದ ದೂರಸಂಪರ್ಕ ಇಲಾಖೆ ಮತ್ತು ಟ್ರಾಯ್ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಮೊರೆ ಹೋಗಿವೆ. ಆದರೆ ಸ್ಪೆಕ್ಟ್ರಮ್ ಖರೀದಿಗೆ ಸುಪ್ರೀಂ ಕೆಲವು ನಿಯಮಗಳನ್ನು ಸಡಿಲಿಸಿರುವುದು ಮುಖೇಶ್ ಮತ್ತು ಅನಿಲ್ ಪಾಲಿಗೆ ಶುಭ ಸುದ್ದಿ.
ಅದರಂತೆ ಮುಖೇಶ್ ಸುಮಾರು 17,000 ಕೋಟಿ ರೂ. ನೀಡಿ ರಿಲಯನ್ಸ್ ಕಮ್ಯುನಿಕೇಶನ್ಸ್ ನ ಸ್ಪೆಕ್ಟ್ರಮ್ ಖರೀದಿಸಲು ಮುಂದಾಗುವ ಸಾಧ್ಯತೆ ಇದೆ. ಈ ಮೂಲಕ ಸಹೋದರನಿಗೆ ಸಹಾಯ ಮಾಡುವುದು ಮುಖೇಶ್ ಯೋಜನೆಯಾಗಿದೆ.
ಬದಲಾಗಲಿದೆಯಾ ಅನಿಲ್ ಹಣೆಬರಹ?:
ಹಳೆ ವೈಷಮ್ಯ ಮರೆತು ಮುಖೇಶ್ ಸಹೋದರನ ನೆರವಿಗೆ ಬಂದರೆ ಖಂಡಿತ ಅನಿಲ್ ಹಣೆಬರಹ ಬದಲಾಗಲಿದೆ. ಸಂಸ್ಥೆಯನ್ನು ಮತ್ತೆ ಲಾಭದತ್ತ ಮುನ್ನಡೆಸಿ ಸಾಲದ ಸುಳಿಯಿಂದ ಹೊರಬರಲು ಅನಿಲ್ ಅಂಬಾನಿ ಅವರಿಗೆ ಅಣ್ಣ ಮುಖೇಶ್ ಅಂಬಾನಿ ಸಹಾಯ ಬೇಕಿರುವುದು ಸೂರ್ಯ, ಚಂದ್ರರ ಇರುವಿಕೆಯಷ್ಟೇ ಸತ್ಯ.
ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!
ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!
ಅನಿಲ್ ಅಂಬಾನಿಗೆ ಸಂಕಷ್ಟ : ಜೈಲಿಗೆ ಹಾಕಲು ಮನವಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.