ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ದಿಢೀರ್ ನಾಪತ್ತೆ| ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ ಹೆಗಡೆ ಅವರಿಗಾಗಿ ತೀವ್ರ ಶೋಧ| ಕೆಫೆ ಕಾಫಿ ಡೇ ಮೂಲಕ ಒಂದು ಪೀಳಿಗೆ ಮೇಲೆ ಪ್ರಭಾವ ಬೀರಿದ ಸಿದ್ಧಾರ್ಥ| ಕೆಫೆ ಕಾಫಿ ಡೇ ಮೂಲಕ ವಿಶ್ವಖ್ಯಾತಿ ಪಡೆದ ಸಿದ್ಧಾರ್ಥ ಹೆಗಡೆ| ಸಿದ್ಧಾರ್ಥ ಹೆಗಡೆ ಬೆಳೆದು ಬಂದ ಪರಿ ಅನನ್ಯ| ದೇಶದ 200 ನಗರಗಳಲ್ಲಿ 1,772ಕ್ಕೂ ಹೆಚ್ಚು ಶಾಖೆಗಳು| ವಿದೇಶಗಳಲ್ಲೂ ಮಿಂಚುತ್ತಿವೆ ಕಾಫಿ ಡೇ ಶಾಖೆಗಳು|
ಬೆಂಗಳೂರು(ಜು.30): ಅದು ಹದಿಹರೆಯದ ಮನಸ್ಸುಗಳು ತಮ್ಮ ವರ್ತಮಾನದ ಮಧುರ ಘಳಿಗೆಯನ್ನೂ, ಸುಂದರ ಭವಿಷ್ಯದ ಕನಸನ್ನು ಕಾಫಿ ಹೀರುತ್ತಾ ಹೆಣೆಯುವ ತಾಣ. ಅದು ವೃತ್ತಿಪರರು ಪರಸ್ಪರ ಚರ್ಚಿಸುತ್ತಾ ದೃಢ ನಿರ್ಧಾರ ಕೈಗೊಳ್ಳುವ ಸ್ಥಳ. ಹಾಯಾದ ಕುರ್ಚಿ ಮೇಲೆ ಕುಳಿತು ವೃದ್ಧರು ರಾಜಕೀಯವೂ ಸೇರಿದಂತೆ ದೇಶದ ಆಗುಹೋಗುಗಳ ಕುರಿತು ಚಿಂತಿಸಲು ಅದು ಪ್ರಶಸ್ತ ಸ್ಥಳ. ಅದು ಚಿಕ್ಕ ಆದರೂ ಚೊಕ್ಕ ಸಂಸಾರವೊಂದು ಕುಟುಂಬ ಸಮೇತ ಸಮಯ ಕಳೆಯುವ ವಿಕೇಂಡ್ ಅಡ್ಡಾ ಕೂಡ ಹೌದು.
ಹೌದು, ನಾವು ಮಾತನಾಡುತ್ತಿರುವುದು ಕೆಫೆ ಕಾಫಿ ಡೇ ಎಂಬ ಕ್ರಾಂತಿಕಾರಕ, ಆಧುನಿಕ ಕಾಫಿ ಶಾಪ್ ಕುರಿತು. ಕಾಫಿ, ಟೀಯನ್ನು ಕೇವಲ ಹೋಟೆಲ್’ಗಳಲ್ಲಿ ಗಡಿಬಿಡಿಯಲ್ಲಿ ಹೀರುವ ಪೀಳಿಗೆಯೊಂದಕ್ಕೆ ಕಾಫಿಯನ್ನು ಆರಾಮವಾಗಿ ಒಂದೊಂದೇ ಗುಟುಕನ್ನು ಹೀರುತ್ತಾ ಹೇಗೆ ಆಸ್ವಾದಿಸಬಹುದು ಎಂಬುದನ್ನು ಹೇಳಿಕೊಟ್ಟ ಸಿದ್ಧಾರ್ಥ ಹೆಗಡೆ ಅವರ ಕುರಿತು.
ಕೆಫೆ ಕಾಫಿ ಡೇ ಮೂಲಕ ಕಾಫಿ ಕುಡಿಯುವ ಪದ್ದತಿಯನ್ನೇ ಬದಲಿಸಿದ ವಿಜಿ ಸಿದ್ಧಾರ್ಥ ಹೆಗಡೆ ನಿನ್ನೆ(ಜು.29) ಸಂಜೆಯಿಂದ ನಾಪತ್ತೆಯಾಗಿದ್ದಾರೆ. ಸಿದ್ಧಾರ್ಥ ಹೆಗಡೆ ನಾಪತ್ತೆಯಿಂದ ಇಡೀ ರಾಜ್ಯ ಕಂಗಾಲಾಗಿದೆ. ಮಂಗಳೂರಿನ ಬಳಿ ನೇತ್ರಾವತಿ ನದಿಯಲ್ಲಿ ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಈ ಮಧ್ಯೆ ಸಿದ್ಧಾರ್ಥ ಹೆಗಡೆ ಯಾರು? ಕೆಫೆ ಕಾಫಿ ಡೇ ಪರಿಕಲ್ಪನೆ ಮೂಡಿದ್ದು ಹೇಗೆ? ಕೆಫೆ ಕಾಫಿ ಡೇ ಮೂಲಕ ಸಿದ್ಧಾರ್ಥ ಹೆಗಡೆ ಹೇಗೆ ವಿಶ್ವ ಖ್ಯಾತಿ ಗಳಿಸಿದರು ಎಂಬುದು ಚರ್ಚಾ ವಿಷಯವಾಗಿ ಪರಿಣಮಿಸಿದೆ.
A Lot Can Happen Over Coffee ಎಂಬ ಅಡಿಬರಹದೊಂದಿಗೆ ಇಡೀ ಪೀಳಿಗೆಯನ್ನು ತನ್ನತ್ತ ಸೆಳೆದ ಕೆಫೆ ಕಾಫಿ ಡೇ ಸಿದ್ಧಾರ್ಥ ಹೆಗಡೆ ಟವರ ಕನಸಿನ ಕೂಸು. 1996ರಲ್ಲಿ ಬೆಂಗಳೂರಿನಲ್ಲಿ ಒಂದು ಶಾಪ್ ಆರಂಭ ಮಾಡಿದ್ದ ಸಿದ್ಧಾರ್ಥ, ಇಂದು ದೇಶ ವಿದೇಶಗಳಲ್ಲಿ ಸುಮಾರು 1,772ಕ್ಕೂ ಹೆಚ್ಚು ಶಾಖೆಗಳನ್ನು ಹೊಂದುವ ಮೂಲಕ ವಿಶ್ವ ಖ್ಯಾತಿ ಗಳಿಸಿದೆ.
ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಹೌದಾದರೂ, ತಮ್ಮದೇ ವಹಿವಾಟಿನಿಂದ ಸಿದ್ಧರ್ಥ ಹೆಚ್ಚು ಮುನ್ನಲೆಗೆ ಬಂದವರು. ಸಿದ್ಧಾರ್ಥ ಇಂದು ಒಟ್ಟು 16 ಕಂಪನಿಗಳಿಗೆ ಒಡೆಯ ಎಂಬುದು ಅಚ್ಚರಿಯ ವಿಷಯವೇನಲ್ಲ.
ದೇಶದ 200ಕ್ಕೂ ಹೆಚ್ಚು ನಗರಗಳಲ್ಲಿ ಶಾಖೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಮಲೇಷಿಯಾ, ಈಜಿಪ್ಟ್, ನೇಪಾಳ ದೇಶಗಳಲ್ಲೂ ಕೂಡ ತನ್ನ ಶಾಖೆಗಳನ್ನು ತೆರೆದಿದೆ.
ಒಟ್ಟು 22 ಸಾವಿರ ಕೋಟಿಗೂ ಅಧಿಕ ಆಸ್ತಿ ಹೊಂದುವ ಮೂಲಕ ದೇಶದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಸಿದ್ಧಾರ್ಥ ಹೆಗಡೆ ರಾರಾಜಿಸುತ್ತಿದ್ದಾರೆ.
ವ್ಯಕ್ತಿ ಪರಿಚಯ
ಹೆಸರು-ವಿಜಿ ಸಿದ್ಧಾರ್ಥ ಹೆಗಡೆ
ಜನ್ಮ ದಿನಾಂಕ-23-08-1959
ಪೋಷಕರು-ಗಂಗಯ್ಯ ಹೆಗಡೆ(ತಂದೆ),ವಾಸಂತಿ ಹೆಗಡೆ(ತಾಯಿ)
ಜನ್ಮಸ್ಥಳ-ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೇತನಹಳ್ಳಿ
ಶಿಕ್ಷಣ-ಸ್ನಾತಕೋತ್ತರ ಪದವಿ, ಮಂಗಳುರು ವಿವಿ
ಪತ್ನಿ-ಮಾಳವಿಕ ಹೆಗಡೆ(ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹಿರಿಯ ಮಗಳು)
ಮಕ್ಕಳು-ಅಮಾರ್ಥ್ಯ, ಈಶಾನ್
ಮೊದಲ ಕಾಫಿ ಶಾಪ್-1996, ಬೆಂಗಳೂರು
ಒಟ್ಟು ಶಾಖೆ(2019): 1,772
ಸಂಸ್ಥೆಯ ಸಂಪತ್ತು-3,300 ಕೋಟಿ ರೂ.
ವೈಯಕ್ತಿಕ ಸಂಪತ್ತು- 22 ಸಾವಿರ ಕೋಟಿ ರೂ.