Bengaluru Tech Summit: ಸ್ಟಾರ್ಟಪ್‌ಗಾಗಿ ಟೆಕ್‌ ಸಮ್ಮಿಟ್‌ನಲ್ಲಿ 9 ‘ಬೂಸ್ಟರ್‌ ಕಿಟ್‌’ ಒಪ್ಪಂದ

By Kannadaprabha NewsFirst Published Nov 19, 2022, 12:00 AM IST
Highlights

ಗೂಗಲ್‌, ಪೇಟಿಎಂ ಎಚ್‌ಡಿಎಫ್‌ಸಿ ಸೇರಿ 9 ಕಂಪನಿಗಳ ಜತೆ ಸರ್ಕಾರ ಒಡಂಬಡಿಕೆ, ಈ ಕಂಪನಿಗಳಿಂದ ಸ್ಟಾರ್ಟಪ್‌ ಉದ್ಯಮಕ್ಕೆ ನೆರವು

ಬೆಂಗಳೂರು(ನ.19): ಸ್ಟಾರ್ಟಪ್‌ಗಳ ಬೆಳವಣಿಗೆಗೆ ರಚನಾತ್ಮಕ ನೆರವು ನೀಡುವ ಉದ್ದೇಶದ ‘ಬೂಸ್ಟರ್‌ ಕಿಟ್‌’ ಉಪಕ್ರಮಕ್ಕೆ ರಾಜ್ಯ ಸರ್ಕಾರ 9 ಸಂಸ್ಥೆಗಳೊಂದಿಗೆ ಶುಕ್ರವಾರ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ.
ಸಮಾವೇಶದ ಕೊನೆಯ ದಿನವಾದ ಶುಕ್ರವಾರ ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಕರ್ನಾಟಕ ಇನ್ನೋವೇಶನ್‌ ಮತ್ತು ಟೆಕ್ನಾಲಜಿ ಸೊಸೈಟಿ (ಕಿಟ್ಸ್‌) ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ ಅವರು ಸರ್ಕಾರದ ಪರವಾಗಿ ಸಹಿ ಹಾಕಿದರು.

ಗೂಗಲ್‌, ಪೇಟಿಎಂ, ಎಚ್‌ಡಿಎಫ್‌ಸಿ, ರೇಜರ್‌ ಪೇ, ಮೈಕ್ರೋಸಾಫ್ಟ್‌, ಗೆಯ್ನ, ದಯಾನಂದ ಸಾಗರ್‌ ಉದ್ಯಮಶೀಲತಾ ಮತ್ತು ವಾಣಿಜ್ಯ ಪರಿಪೋಷಣಾ ಕೇಂದ್ರ, ಎಡಬ್ಲ್ಯೂಎಸ್‌ ಮತ್ತು ಸ್ಟ್ರಾಂಗ್‌ಹರ್‌ ವೆಂಚರ್ಸ್‌ ಜತೆಗೆ ಐಟಿ-ಬಿಟಿ ಇಲಾಖೆ ಮತ್ತು ಕಿಟ್ಸ್‌ ಪ್ರತಿನಿಧಿಗಳು ಸಚಿವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಿದವು.

BTS2022: ಉದ್ಯಮಗಳು ಬೆಂಗಳೂರಿನಿಂದ ಆಚೆ ನೆಲೆಯೂರುವುದು ಅಗತ್ಯ: ಸಚಿವ ಅಶ್ವತ್ಥನಾರಾಯಣ

ಬಳಿಕ ಮಾತನಾಡಿದ ಸಚಿವರು, ‘ಕರ್ನಾಟಕ ಸ್ಟಾರ್ಟಪ್‌ ಸೆಲ್‌ನಲ್ಲಿ ನೋಂದಣಿ ಮಾಡಿಕೊಂಡಿರುವ ನವೋದ್ಯಮಗಳಿಗೆ ಇನ್ನು ಮುಂದೆ ಎಚ್‌ಡಿಎಫ್‌ಸಿ, ಪೇಟಿಎಂ ಮತ್ತು ರೇಜರ್‌ ಪೇ ಸಂಸ್ಥೆಗಳ ಮೂಲಕ ಬ್ಯಾಂಕಿಂಗ್‌ ಹಾಗೂ ಫಿನ್‌-ಟೆಕ್‌ ಸೇವೆಗಳು ಸಿಗಲಿವೆ. ಜತೆಗೆ ಸ್ಮಾರ್ಚ್‌-ಅಪ್‌ ಉಪಕ್ರಮದಡಿ ಹೆಚ್ಚಿನ ಮಾರುಕಟ್ಟೆಪ್ರಸ್ತುತಿ, ಬೇಡಿಕೆ ಸೃಷ್ಟಿಮತ್ತು ವ್ಯಾಪಾರ-ವಹಿವಾಟುಗಳ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಸುಗಮ ಸೇವೆಗೆ ಸಹಕಾರಿ:

ಟೆಲಿಗ್ಲೋಬಲ್‌ ಆಕ್ಸಲರೇಟರ್‌ ಫಾರ್‌ ಇನ್ನೋವೇಷನ್‌ ನೆಟ್‌ವರ್ಕ್(ಗೆಯ್ನ) ಜತೆಗಿನ ಒಡಂಬಡಿಕೆಯಿಂದ ನವೋದ್ಯಮಗಳಿಗೆ ವೇಗವರ್ಧಿತ ಬೆಂಬಲ, ದಯಾನಂದ ಸಾರ್ಗರ್‌ ಸಂಸ್ಥೆಯ ಮೂಲಕ ಪರಿಪೋಷಣೆಯ ಸಹಾಯ, ಸ್ಟ್ರಾಂಗ್‌ಹರ್‌ ವೆಂಚರ್ಸ್‌ ಮೂಲಕ ಮಹಿಳಾ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ಎಡಬ್ಲ್ಯುಎಸ್‌ ಆಕ್ಟಿವೇಟ್‌ ಹಾಗೂ ಮೈಕ್ರೋಸಾಫ್‌್ಟಜತೆಗಿನ ಒಡಂಬಡಿಕೆಗಳಿಂದ ಕ್ಲೌಡ್‌ ಆಧಾರಿತ ಸೇವೆಗಳ ಬೆಂಬಲ ಸುಗಮವಾಗಿ ದೊರೆಯಲಿದೆ ಎಂದು ವಿವರಿಸಿದರು.

ಬೂಸ್ಟರ್‌ ಕಿಟ್‌ ಉಪಕ್ರಮದಿಂದಾಗಿ ನವೋದ್ಯಮಗಳಿಗೆ ಅಗತ್ಯವಾಗಿರುವ ಕಚೇರಿ, ಮೂಲಸೌಲಭ್ಯ, ಪ್ರಯೋಗಾಲಯ, ಪರಿಣತರ ಅನುಭವಗಳು, ಅಗತ್ಯ ನಿಧಿ ಕೂಡ ಲಭ್ಯವಾಗಲಿವೆ. ರಾಜ್ಯದ ಆರ್ಥಿಕತೆಯ ಬೆಳವಣಿಗೆಯಲ್ಲಿ ನವೋದ್ಯಮಗಳು ನಿರ್ಣಾಯಕ ಪಾತ್ರ ವಹಿಸಬೇಕಾಗಿದ್ದು, ಡಿಜಿಟಲ್‌ ಅರ್ಥವ್ಯವಸ್ಥೆಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಾದ ಅಗತ್ಯವಿದೆ ಎಂದು ನುಡಿದರು.

Bengaluru Tech Summit: ಬಿಟಿಎಸ್‌ನಲ್ಲಿ 20 ನೂತನ ಸ್ಟಾರ್ಟಪ್‌ ಉತ್ಪನ್ನ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕಿಟ್ಸ್‌ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್‌ ಮತ್ತು ಒಡಂಬಡಿಕೆಗೆ ಅಂಕಿತ ಹಾಕಿದ ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸ್ಟಾರ್ಟಪ್‌ಗಳ ಬೆಳವಣಿಗೆಗೆ ನೆರವು ನೀಡುವ ‘ಬೂಸ್ಟರ್‌ ಕಿಟ್‌’ ಕಿಟ್‌ ಉಪಕ್ರಮದಡಿ ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಕಂಪನಿಗಳೊಂದಿಗೆ ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ಕಿಟ್ಸ್‌ ವ್ಯವಸ್ಥಾಪಕ ನಿರ್ದೇಶಕಿ ಮೀನಾ ನಾಗರಾಜ್‌ ಹಾಜರಿದ್ದರು.

click me!