ಮನೆ ಬಾಡಿಗೆ ಪಾವತಿಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಜೇಬಿಗೆ ಬೀಳುತ್ತೆ ಹೆಚ್ಚುವರಿ ಹೊರೆ

By Suvarna NewsFirst Published Nov 18, 2022, 8:58 PM IST
Highlights

ಮನೆ ಬಾಡಿಗೆ ಪಾವತಿ ಸೇರಿದಂತೆ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಕೆಲವು ವಹಿವಾಟುಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ಎಸ್ ಬಿಐ ಹೆಚ್ಚಿಸಿದೆ. ಪರಿಷ್ಕೃತ ಶುಲ್ಕ ನವೆಂಬರ್ 15ರಿಂದಲೇ ಅನ್ವಯಿಸುತ್ತದೆ. ಈ ಕುರಿತು ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.
 

Business Desk: ನೀವು ಮನೆ ಬಾಡಿಗೆ ಪಾವತಿಸಲು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ರೆ ಇನ್ನು ಮುಂದೆ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು. ಕೆಲವು ವಹಿವಾಟುಗಳಿಗೆ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ವಿಧಿಸಲಾಗುವುದು ಎಂದು ಎಸ್ ಬಿಐ ಕಾರ್ಡ್ಸ್ ತಿಳಿಸಿದೆ. ಪರಿಷ್ಕೃತ ಶುಲ್ಕ ನವೆಂಬರ್ 15ರಿಂದಲೇ ಅನ್ವಯಿಸಲಿದೆ ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಈ ಕುರಿತು ಗ್ರಾಹಕರಿಗೆ ಎಸ್ ಎಂಎಸ್ ಮೂಲಕ ಕೂಡ ಮಾಹಿತಿ ನೀಡಲಾಗಿದೆ. ಮನೆ ಬಾಡಿಗೆ, ವ್ಯಾಪಾರ ಇಎಂಐ ವಹಿವಾಟುಗಳ ಮೇಲಿನ ಪ್ರೊಸೆಸಿಂಗ್ ಶುಲ್ಕ ಹೆಚ್ಚಿಸಲಾಗಿದೆ. ವ್ಯಾಪಾರ ಇಎಂಐ ವಹಿವಾಟುಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು 99ರೂ. ನಿಂದ 199ರೂ.ಗೆ ಹೆಚ್ಚಳ ಮಾಡಲಾಗಿದೆ. ಇಂಥ ವಹಿವಾಟುಗಳ ಮೇಲೆ ಶೇ.18ರಷ್ಟು ಜಿಎಸ್ ಟಿ ಕೂಡ ವಿಧಿಸಲಾಗುತ್ತಿದೆ. ಇನ್ನು ಬಾಡಿಗೆ ಪಾವತಿ ಮೇಲೆ 99ರೂ. ಪ್ರೊಸೆಸಿಂಗ್ ಶುಲ್ಕ ಹಾಗೂ 17.82 ರೂ. ಜಿಎಸ್ ಟಿ ವಿಧಿಸಲಾಗುತ್ತಿದೆ. ಗ್ರಾಹಕರಿಗೆ ಎಸ್ ಬಿಐ ಕಳುಹಿಸಿರುವ ಎಸ್ಎಂಎಸ್ ನಲ್ಲಿ 'ಪ್ರೀತಿಯ ಕಾರ್ಡ್ಬಳಕೆದಾರರೇ, ನಿಮ್ಮ ಕ್ರೆಡಿಟ್ ಕಾರ್ಡ್ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಲಾಗಿದ್ದು, ನವೆಂಬರ್ 15, 2022ರಿಂದ ಜಾರಿಗೆ ಬರಲಿದೆ' ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಗ್ರಾಹಕರು ಕಂಪನಿ ವೆಬ್ ಸೈಟ್ ಗೆ ಭೇಟಿ ನೀಡುವಂತೆ ಎಸ್ಎಂಎಸ್ ನಲ್ಲಿ ತಿಳಿಸಲಾಗಿದೆ. 

ಇನ್ನು ಎಸ್ ಬಿಐ (SBI) ಕ್ರೆಡಿಟ್ ಕಾರ್ಡ್ ಗಳ (Credit cards) ರಿವಾರ್ಡ್ ಪಾಯಿಂಟ್ ಗಳಲ್ಲಿ ಪರಿಷ್ಕರಣೆ (Revise) ಮಾಡಿರುವ ಬಗ್ಗೆ ಕೂಡ ಸಂದೇಶ ಕಳುಹಿಸಿದೆ. ಇನ್ನು ನ.15ರಿಂದಲೇ ಜಾರಿಗೆ ಬರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲಿನ ಕನಿಷ್ಠ ಬಡ್ಡಿದರ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ ಆರ್) ಅನ್ನು ಶೇ.10-15ರಷ್ಟು ಹೆಚ್ಚಳ ಮಾಡಿದೆ. ಇದರಿಂದ ಎಂಸಿಎಲ್ಆರ್ ಗೆ ಲಿಂಕ್ ಆಗಿರುವ ಸಾಲಗಳ ಮೇಲಿನ ಇಎಂಐ ಮೊತ್ತ ಹೆಚ್ಚಲಿದ್ದು, ಸಾಲಗಾರರ ಮೇಲೆ ಇನ್ನಷ್ಟು ಹೊರೆ ಬೀಳಲಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೂ ಪ್ರೊಸೆಸಿಂಗ್ ಶುಲ್ಕ ಹೆಚ್ಚಳದ ಬಿಸಿ ತಟ್ಟಲಿದೆ. 

ಪಿಂಚಣಿದಾರರು ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡ್ಬಹುದು; ಬರೀ ಒಂದು ವಿಡಿಯೋ ಕರೆ ಮೂಲಕ!

ಕ್ರೆಡಿಟ್ ಕಾರ್ಡ್ (Credit card) ರಿವಾರ್ಡ್ ಪಾಯಿಂಟ್ ಗಳಿಗೆ (Reward points) ಸಂಬಂಧಿಸಿ ನೀಡುವ ಕೊಡುಗೆಗಳ ಪರಿಷ್ಕರಣೆ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ. ಸದ್ಯ ನೀಡಲಾಗುತ್ತಿರು 5x ರಿವಾರ್ಡ್ ಪಾಯಿಂಟ್ ಅನ್ನು ಜನವರಿ 1ರಿಂದ ಪರಿಷ್ಕರಣೆ ಮಾಡೋದಾಗಿ ಎಸ್ ಬಿಐ ಮಾಹಿತಿ ನೀಡಿದೆ. 

ಇತರ ಬ್ಯಾಂಕ್ ಗಳಲ್ಲಿ ಕೂಡ ಪರಿಷ್ಕರಣೆ
ಕಳೆದ ತಿಂಗಳು ಐಸಿಐಸಿಐ (ICICI) ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit card) ಮೂಲಕ ಮಾಡಿದ ಬಾಡಿಗೆ ಪಾವತಿಗೆ ಶೇ.1ರಷ್ಟು ಪ್ರೊಸೆಸಿಂಗ್ ಶುಲ್ಕವನ್ನು ಅಕ್ಟೋಬರ್ 20ರಿಂದ ವಿಧಿಸಿದೆ. ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಐಸಿಐಸಿಐ ಬ್ಯಾಂಕ್ ಕಳುಹಿಸಿರುವ ಎಸ್ ಎಂಎಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

ಥರ್ಡ್ ಪಾರ್ಟಿ ಆ್ಯಪ್ ಗಳಾದ ಕ್ರೆಡ್ (Cred), ಪೇಟಿಎಂ (PTM), ಮೈಗೇಟ್ (Mygate) ಮುಂತಾದವು ಕ್ರೆಡಿಟ್ ಕಾರ್ಡ್ ಗಳ (Credit cards) ಮುಖಾಂತರ ಮನೆ ಬಾಡಿಗೆ (Home rent) ಪಾವತಿಸಲು ಅನುವು ಮಾಡಿ ಕೊಡುತ್ತವೆ. ಈ ಆ್ಯಪ್ ಗಳು (Apps) ಬಾಡಿಗೆ ಪಾವತಿಗಳ ಮೇಲೆ ಶುಲ್ಕ ವಿಧಿಸುತ್ತವೆ. ಉದಾಹರಣೆಗೆ ಕ್ರೆಡ್ ನಲ್ಲಿ (Cred) ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸಿದ್ರೆ ಶೇ.1ರಿಂದ ಶೇ.1.75 ಶುಲ್ಕವನ್ನು ಸೇವಾ ಶುಲ್ಕದ ರೂಪದಲ್ಲಿ ವಿಧಿಸುತ್ತದೆ. 

click me!