ಹೂಡಿಕೆ ಮೇಲೆ ಉತ್ತಮ ರಿಟರ್ನ್ಸ್ ಗಳಿಸಲು ದೀರ್ಘಾವಧಿ ಯೋಜನೆಗಳನ್ನು ಆಯ್ದುಕೊಳ್ಳೋದು ಜಾಣತನ. ಉತ್ತಮ ರಿಟರ್ನ್ಸ್ ನೀಡುವ 5 ದೀರ್ಘಾವಧಿ ಹೂಡಿಕೆಗಳ ಮಾಹಿತಿ ಇಲ್ಲಿದೆ.
Business Desk:ಇತ್ತೀಚಿನ ದಿನಗಳಲ್ಲಿ ದುಡಿದ ಹಣವನ್ನು ಹಾಗೆಯೇ ಬ್ಯಾಂಕ್ ಖಾತೆಯಲ್ಲಿಡೋರ ಸಂಖ್ಯೆ ಕಡಿಮೆ. ಬದಲಿಗೆ ದುಡಿದ ಹಣದಿಂದ ಇನ್ನಷ್ಟು ಗಳಿಸುವ ಲೆಕ್ಕಾಚಾರ ಮಾಡೋರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಹೂಡಿಕೆ ಮಾಡೋರ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದೆ. ಹೂಡಿಕೆ ಮಾಡೋವಾಗ ಅಲ್ಪಾವಧಿಗಿಂತ ದೀರ್ಘಾವಧಿ ಯೋಜನೆಗಳಲ್ಲಿ ಹೂಡಿಕೆ ಮಾಡೋದು ಉತ್ತಮ. ಏಕೆಂದ್ರೆ ಹೂಡಿಕೆ ಅವಧಿ ಹೆಚ್ಚಿದಷ್ಟೂ ಅಧಿಕ ರಿಟರ್ನ್ಸ್ ಸಿಗುತ್ತದೆ. ಒಂದು ವೇಳೆ ನೀವು ಕೂಡ ದೀರ್ಘಾವಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ಹಾಗೂ ಉತ್ತಮ ರಿಟರ್ನ್ಸ್ ನಿರೀಕ್ಷಿಸುತ್ತಿದ್ದರೆ, ನೀವು ಕೆಲವೊಂದು ವಿಚಾರಗಳನ್ನು ಅವಲೋಕಿಸೋದು ಅಗತ್ಯ. ಹಾಗೆಯೇ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳು ಯಾವುವು ಎಂಬುದನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ. ಮ್ಯೂಚುವಲ್ ಫಂಡ್ಸ್ ನಿಂದ ಹಿಡಿದು ರಿಯಲ್ ಎಸ್ಟೇಟ್ ತನಕ ಇಂದು ಹೂಡಿಕೆಗೆ ಅನೇಕ ಅವಕಾಶಗಳಿವೆ. ಹಾಗಾದ್ರೆ ಹೂಡಿಕೆಗೆ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
1.ಮ್ಯೂಚುವಲ್ ಫಂಡ್ಸ್: ಮ್ಯೂಚುವಲ್ ಫಂಡ್ಸ್ ಜನಪ್ರಿಯ ಹೂಡಿಕೆ ಸಾಧನಗಳಲ್ಲಿ ಒಂದು. ಷೇರು ಮಾರುಕಟ್ಟೆಗೆ ಹೋಲಿಸಿದ್ರೆ ಮ್ಯೂಚುವಲ್ ಫಂಡ್ ತುಂಬಾ ಸುರಕ್ಷಿತ. ಸರಳವಾಗಿ ಹೇಳೋದಾದ್ರೆ ಮ್ಯೂಚುವಲ್ ಫಂಡ್ ಅನೇಕ ವ್ಯಕ್ತಿಗಳ ಹಣದಿಂದ ನಿರ್ಮಾಣವಾಗಿರೋ ಫಂಡ್. ಈ ಫಂಡ್ ಅನ್ನು ಆಸ್ತಿ ನಿರ್ವಹಣಾ ಸಂಸ್ಥೆ (ಎಎಂಸಿ) ಅಥವಾ ಫಂಡ್ ಹೌಸ್ ನಿರ್ವಹಿಸುತ್ತದೆ. ಈ ಸಂಸ್ಥೆ ಭಾರತ ಸರ್ಕಾರದ ಸೆಬಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸಂಗ್ರಹಿಸಿದ ಬಂಡವಾಳವನ್ನು ಫಂಡ್ ಮ್ಯಾನೇಜರ್ ವಿವಿಧ ಕಂಪನಿಗಳ ಷೇರುಗಳಲ್ಲಿ ತೊಡಗಿಸುತ್ತಾನೆ. ಈತ ಷೇರು, ಮಾರುಕಟ್ಟೆ ವಿಷಯಗಳಲ್ಲಿ ಪರಿಣಿತನಾಗಿದ್ದು, ಹೂಡಿಕೆದಾರರಿಗೆ ಗರಿಷ್ಠ ರಿಟರ್ನ್ಸ್ ಬರೋ ರೀತಿಯಲ್ಲಿ ಬಂಡವಾಳವನ್ನು ಜಾಣತನದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸುತ್ತಾನೆ. ಅನೇಕ ಸ್ಮಾಲ್ ಕ್ಯಾಪ್ ಅಥವಾ ಮಿಡ್ ಕ್ಯಾಪ್ ಫಂಡ್ ಗಳು ಲಭ್ಯವಿದ್ದು, ಅವುಗಳ ವಾರ್ಷಿಕ ರಿಟರ್ನ್ಸ್ ಶೇ.20-25ಕ್ಕಿಂತ ಹೆಚ್ಚಿದೆ.
ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೋರು ಈ ಸಂಗತಿಗಳನ್ನು ತಿಳಿದಿರೋದು ಅಗತ್ಯ!
2.ಸಾಲದ ಸಾಧನ: ಇದು ಸರ್ಕಾರ, ಕಂಪನಿಗಳು ಹಾಗೂ ವ್ಯಕ್ತಿಗಳು ಹಣವನ್ನು ಸಂಗ್ರಹಿಸಲು ಅಥವಾ ಆದಾಯ ಸೃಷ್ಟಿಗೆ ಬಳಸುವ ಸಾಧನ. ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿದರೆ ಸ್ಥಿರ ಆದಾಯ, ಒಂದಿಷ್ಟು ಹಣ ಹಾಗೂ ನಿಯಮಿತವಾಗಿ ಬಡ್ಡಿ ಹಣವನ್ನು ಗಳಿಸುತ್ತಾರೆ. ಬಡ್ಡಿಯನ್ನು ಮುಂಚಿತವಾಗಿಯೇ ನಿಗದಿ ಮಾಡಲಾಗುತ್ತದೆ. ಅಂದರೆ ಹೂಡಿಕೆದಾರರಾಗಿರುವ ನೀವು ಕಂಪನಿ ಅಥವಾ ಸಂಸ್ಥೆಗೆ ಸಾಲ ನೀಡುತ್ತೀರಿ. ಇದು ಹೂಡಿಕೆಗೆ ಉತ್ತಮ ಆಯ್ಕೆಯಾಗಿದ್ದು ಅಧಿಕ ರಿಟರ್ನ್ಸ್ ಕೂಡ ನೀಡುತ್ತದೆ.
3.ಚಿನ್ನ ಹಾಗೂ ಬೆಳ್ಳಿ: ಇವೆರಡೂ ಭಾರತೀಯರಿಗೆ ಹಿಂದಿನಿಂದಲೂ ಹೂಡಿಕೆಗೆ ಮೆಚ್ಚಿನ ಸಾಧನಗಳಾಗಿವೆ. ನಮ್ಮ ದೇಶದ ಕರೆನ್ಸಿಗೆ ಕೂಡ ಚಿನ್ನದ ಬೆಂಬಲವಿದೆ. ಅಂದರೆ ಹೂಡಿಕೆಗೆ ಚಿನ್ನ ಅತ್ಯಂತ ಸುರಕ್ಷಿತ ಸಾಧನ. ಇನ್ನು ರಿಟರ್ನ್ಸ್ ಆಧಾರದಲ್ಲಿ ಕೂಡ ಚಿನ್ನ ಹಾಗೂ ಬೆಳ್ಳಿ ಎಂದಿಗೂ ಯಾರಿಗೂ ಬೇಸರ ಮಾಡೋದಿಲ್ಲ. ಚಿನ್ನದಲ್ಲಿ ಹೂಡಿಕೆ ಮಾಡಲು ಅನೇಕ ಯೋಜನೆಗಳಿವೆ. ಭೌತಿಕ ಚಿನ್ನವೇ ಆಗಬೇಕೆಂದೇನಿಲ್ಲ. ಡಿಜಿಟಲ್ ಗೋಲ್ಡ್ ಹಾಗೂ ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಕೂಡ ಹೂಡಿಕೆ ಮಾಡಬಹುದು.
ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡ್ಬೇಕಾ? ಈ 5 ಅಂಶಗಳನ್ನು ಮಿಸ್ ಮಾಡ್ಲೇಬೇಡಿ..
4.ಷೇರು ಮಾರುಕಟ್ಟೆ: ಷೇರು ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಹೂಡಿಕೆಗೆ ಮೆಚ್ಚಿನ ತಾಣವಾಗಿದೆ. ಆದರೆ, ಷೇರು ಮಾರುಕಟ್ಟೆಯಿಂದ ಉತ್ತಮ ಹಣ ಗಳಿಸಲು ಅದರಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರೋದು ಕೂಡ ಅಗತ್ಯ. ಷೇರು ಮಾರುಕಟ್ಟೆಯಲ್ಲಿನ ದೀರ್ಘಾವಧಿ ಹೂಡಿಕೆಯಿಂದ ಶೇ.100-200ರಷ್ಟು ರಿಟರ್ನ್ಸ್ ಗಳಿಸಬಹುದು.
5.ರಿಯಲ್ ಎಸ್ಟೇಟ್: ಚಿನ್ನದ ಮಾದರಿಯಲ್ಲೇ ರಿಯಲ್ ಎಸ್ಟೇಟ್ ಕೂಡ ಭೌತಿಕ ಆಸ್ತಿಯಾಗಿದೆ. ಇದು ಹೂಡಿಕೆ ಮೇಲೆ ಉತ್ತಮ ರಿಟರ್ನ್ಸ್ ನೀಡುತ್ತದೆ. ಒಂದು ವೇಳೆ ನಿಮಗೆ ಜಾಗ ಅಥವಾ ಮನೆಯಿದ್ದರೆ ಅದನ್ನು ಬಾಡಿಗೆಗೆ ನೀಡುವ ಮೂಲಕ ಕೂಡ ಆದಾಯ ಗಳಿಸಬಹುದು. ಇನ್ನು ಭೂಮಿ ಮೇಲೆ ಹಾಕಿದ ಹೂಡಿಕೆ ಎಂದಿಗೂ ಕೈಬಿಡೋದಿಲ್ಲ. ವರ್ಷದಿಂದ ವರ್ಷಕ್ಕೆ ಭೂಮಿ ಬೆಲೆ ಹೆಚ್ಚುತ್ತಲೇ ಇರುತ್ತದೆ.