ಭಾರತದ ವಾಣಿಜ್ಯ ನಗರಿ ಮುಂಬೈ ಇದೇ ಮೊದಲ ಬಾರಿಗೆ ಏಷ್ಯಾದ ಬಿಲಿಯನೇರ್ ರಾಜಧಾನಿ ಪಟ್ಟಕ್ಕೇರಿದೆ. ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ 2024 ಈ ಮಾಹಿತಿ ನೀಡಿದೆ.
ನವದೆಹಲಿ (ಮಾ.26): ಭಾರತದ ಆರ್ಥಿಕತೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತದೆ ಎಂಬ ಆತ್ಮವಿಶ್ವಾಸದ ಬೆನ್ನಲ್ಲೇ ಭಾರತದ ಬಿಲಿಯನೇರ್ ಪಟ್ಟಿಗೆ ಈ ವರ್ಷ 100 ಜನರ ಸೇರ್ಪಡೆಯಾಗಿದೆ ಎಂದು ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ 2024 ತಿಳಿಸಿದೆ. ಈ ವರದಿ ಪ್ರಕಾರ ಬೀಜಿಂಗ್ ಅನ್ನು ಹಿಂದಿಕ್ಕಿ ಮುಂಬೈ ಏಷ್ಯಾದ ಬಿಲಿಯನೇರ್ ರಾಜಧಾನಿ ಪಟ್ಟಕ್ಕೇರಿದೆ. ಹಾಗೆಯೇ ಜಾಗತಿಕ ಮಟ್ಟದಲ್ಲಿ ಬಿಲಿಯನೇರ್ ನಗರಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮುಂಬೈಯಲ್ಲಿರುವ ಬಿಲಿಯನೇರ್ ಗಳ ಸಂಖ್ಯೆ ಪ್ರಸ್ತುತ 92. ಅದೇ ಬೀಜಿಂಗ್ ನಲ್ಲಿ 91 ಮಂದಿ ಬಿಲಿಯನೇರ್ ಇದ್ದಾರೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಬಿಲಿಯನೇರ್ ರಾಜಧಾನಿ ಮುಂಬೈ ಆಗಿದೆ ಎಂದು ಈ ವರದಿ ಹೇಳಿದೆ. ಈ ವರ್ಷ 26 ಮಂದಿ ಬಿಲಿಯನೇರ್ ಸೇರ್ಪಡೆಗೊಳ್ಳುವ ಮುನ್ನ ವಿಶ್ವದಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಏಷ್ಯಾದ ಬಿಲಿಯನೇರ್ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ನವದೆಹಲಿ ಇದೇ ಮೊದಲ ಬಾರಿಗೆ ಬಿಲಿಯನೇರ್ ನಗರಗಳ ಟಾಪ್ 10 ಪಟ್ಟಿಗೆ ಸೇರ್ಪಡೆಗೊಂಡಿದೆ. ಇನ್ನು ಪಾಮ್ ಬೀಚ್, ಇಸ್ತನ್ಬುಲ್, ಮೆಕ್ಸಿಕೋ ಸಿಟಿ ಹಾಗೂ ಮೆಲ್ಬೋರ್ನ್ ಹುರುನ್ ಟಾಪ್ 30 ನಗರಗಳಲ್ಲಿ ಸ್ಥಾನ ಪಡೆದಿವೆ ಎಂದು ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ 2024 ತಿಳಿಸಿದೆ.
ಕಳೆದ ವರ್ಷದಿಂದ ಮುಂಬೈ ಸಂಪತ್ತಿನಲ್ಲಿ ಶೇ.47ರಷ್ಟು ಏರಿಕೆ ಕಂಡುಬಂದಿದೆ. ಇನ್ನೊಂದೆಡೆ ಬೀಜಿಂಗ್ ಶೇ.28ರಷ್ಟು ಇಳಿಕೆ ದಾಖಲಿಸಿದೆ. ಈ ಮೂಲಕ ಮುಂಬೈ ಸಂಪತ್ತಿನ ತಾಣವಾಗಿ ಬೆಳೆಯುತ್ತಿರುವ ಜೊತೆಗೆ ತನ್ನ ಸ್ಥಾನವನ್ನು ಭದ್ರಗೊಳಿಸುತ್ತಿದೆ ಕೂಡ.
ಇನ್ನು ಒಟ್ಟಾರೆಯಾಗಿ ನೋಡಿದರೆ ಚೀನಾಕ್ಕೆ ಹೋಲಿಸಿದರೆ ಭಾರತದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಹೆಚ್ಚಿದೆ. ಈ ವರ್ಷ ಭಾರತದಲ್ಲಿ 94 ಹೊಸ ಬಿಲಿಯನೇರ್ ಗಳು ಸೇರ್ಪಡೆಗೊಂಡಿದ್ದಾರೆ. ಅದೇ ಚೀನಾದಲ್ಲಿ ಈ ವರ್ಷ ಬರೀ 55 ಬಿಲಿಯನೇರ್ ಗಳು ಮಾತ್ರ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ಹುರುನ್ ವರದಿ ತಿಳಿಸಿದೆ.
75 ಕೋಟಿ ರೂ.ಗೆ ಮಾರಾಟವಾದ ಮುಖೇಶ್ ಅಂಬಾನಿಯ ಮ್ಯಾನ್‌ಹಟನ್ ಬಂಗಲೆ ಹೇಗಿದೆ?
ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಮುಖೇಶ್ ಅಂಬಾನಿ ಮಾತ್ರ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯ ಟಾಪ್ 10ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯನಾಗಿದ್ದಾರೆ. ಈ ವರ್ಷ ಅಂಬಾನಿ ಸಂಪತ್ತಿಗೆ 33 ಬಿಲಿಯನ್ ಡಾಲರ್ ಸೇರ್ಪಡೆಗೊಂಡಿದೆ. ಈ ಮೂಲಕ ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಮುಖೇಶ್ ಅಂಬಾನಿ ಉಳಿಸಿಕೊಂಡಿದ್ದಾರೆ. ಇನ್ನು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ 86 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ. ಅದಾನಿ ಸಂಪತ್ತಿನಲ್ಲಿ ಶೇ.62ರಷ್ಟು ಏರಿಕೆಯಾಗಿದೆ.
ರಿಲಯನ್ಸ್‌ನಲ್ಲಿ ಅತೀ ಹೆಚ್ಚು ಪಾಲುದಾರರು ಯಾರು? ಮುಕೇಶ್ ಅಂಬಾನಿ-ಪತ್ನಿ, ಮಕ್ಕಳು ಅಲ್ಲ!
ಷೇರು ಮಾರುಕಟ್ಟೆಯಲ್ಲಿನ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಒಟ್ಟು ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಶೇ.5ರಷ್ಟು ಹೆಚ್ಚಳವಾಗಿದೆ. ಇವರ ಸಂಖ್ಯೆ 3,300. ಹುರುನ್ ಶ್ರೀಮಂತರ ಪಟ್ಟಿ ಜಾಗತಿಕ ಆರ್ಥಿಕತೆಯ ಕಥೆಯನ್ನು ಹೇಳುತ್ತದೆ. ಇದು ವಿಶ್ವದ ಶ್ರೀಮಂತ ವ್ಯಕ್ತಿಗಳ ಕಥೆಯನ್ನು ಹೇಳುತ್ತದೆ. ಯಾರು ಮೇಲಿದ್ದಾರೆ, ಯಾರು ಕೆಳಗಿದ್ದಾರೆ, ರಾಷ್ಟ್ರಗಳು ಹಾಗೂ ವಿವಿಧ ವಲಯಗಳಲ್ಲಿ ಟ್ರೆಂಡ್ ಹೇಗಿದೆ ಎಂಬುದನ್ನು ಈ ವರದಿ ತಿಳಿಸುತ್ತದೆ.
ಸಂಪತ್ತಿನ ಬೆಳವಣಿಗೆಯಲ್ಲಿ ಎಐ ಮಹತ್ವದ ಪಾತ್ರ ವಹಿಸಿದೆ ಎಂದು ಹೂಗೆವರ್ಫ್ ತಿಳಿಸಿದ್ದಾರೆ. ಈ ವರ್ಷ ಶೇ.50ರಷ್ಟು ಹೊಸ ಸಂಪತ್ತನ್ನು ಸೃಷ್ಟಿಸಿದೆ ಎಂದು ಹುರುನ್ ವರದಿ ಮುಖ್ಯಸ್ಥ ರುಪರ್ಟ್ ಹೂಗೆವೆರ್ಫ್ ತಿಳಿಸಿದ್ದಾರೆ. ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್, ಒರಾಕಲ್ ಹಾಗೂ ಮೆಟಾದಂತಹ ಸಂಸ್ಥೆಗಳಲ್ಲಿನ ಬಿಲಿಯನೇರ್ ಗಳ ಸಂಪತ್ತಿನಲ್ಲಿ ಗಮನಾರ್ಹ ಏರಿಕೆಯಾಗಿದೆ.