ಕಿರಣ್ ರಾಜ್ ಅಭಿನಯದ 'ಕರ್ಣ' ಧಾರಾವಾಹಿ ಟಿಆರ್‌ಪಿ ದಾಖಲೆಗಳನ್ನು ಮುರಿಯುತ್ತಿದೆ. ಕರ್ಣ, ನಿತ್ಯಾ ಮತ್ತು ನಿಧಿ ಪಾತ್ರಗಳು ಹೊಸ ಕಥಾಹಂದರವನ್ನು ಸೃಷ್ಟಿಸುತ್ತಿವೆ. ಮೊದಲ ವಾರದಲ್ಲೇ ಟಿಆರ್‌ಪಿ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಈ ಧಾರಾವಾಹಿ ವೀಕ್ಷಕರನ್ನು ಹೇಗೆ ರಂಜಿಸುತ್ತಿದೆ ಎಂಬುದರ ವಿವರ ಇಲ್ಲಿದೆ.

‘ಕರ್ಣ’ ಧಾರಾವಾಹಿ ಇನ್ನೇನು ಪ್ರಸಾರ ಆಗಬೇಕು ಎಂದುಕೊಳ್ಳುವಷ್ಟರಲ್ಲಿ ಬೇರೆ ವಾಹಿನಿಯಿಂದ ಕಾನೂನು ಸಂಕಷ್ಟ ಎದುರಾಗಿತ್ತು. ಈ ಸಂಕಷ್ಟ ಎದುರಿಸಿದ ಬಳಿಕ ಧಾರಾವಾಹಿ ಪ್ರಸಾರವಾಗಿದೆ. ಪ್ರೋಮೋ ಮೂಲಕವೇ ದೊಡ್ಡ ಮಟ್ಟದಲ್ಲಿ ಹೈಪ್‌ ಸೃಷ್ಟಿ ಮಾಡಿದ್ದ ‘ಕರ್ಣ’ ಈಗ ವೀಕ್ಷಕರ ಮನೆಗೆ ಬಂದಿದ್ದಾನೆ. ಹಾಗಾದರೆ ವೀಕ್ಷಕರು ಮೊದಲ ವಾರ ಕೊಟ್ಟ ಮಾರ್ಕ್ಸ್‌ ಎಷ್ಟು?

ಮಾತು ಉಳಿಸಿಕೊಂಡ ಕಿರಣ್‌ ರಾಜ್!‌

ಸೂಕ್ಷ್ಮ, ಸಂಚಲನ ಮೂಡಿಸಿದ್ದ ‘ಕನ್ನಡತಿ’ ಧಾರಾವಾಹಿಯಂಥಹ ಸೆನ್ಸಿಬಲ್‌ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ಕಿರಣ್‌ ರಾಜ್‌ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಾರೆ ಎಂದಾಗಲೇ ವೀಕ್ಷಕರಿಗೆ ಖುಷಿಯಾಗಿತ್ತು. ಹಿರಿತೆರೆ ಜೊತೆಗೆ ಕಿರುತೆರೆಯಲ್ಲಿಯೂ ಬ್ಯುಸಿಯಾಗಿರುವ ಕಿರಣ್‌ ರಾಜ್‌ ಅವರು ಮಾಡಿದ್ರೆ ಟೈಟಲ್‌ ರೋಲ್‌ ಮಾಡ್ತೀನಿ ಎಂಬ ಮಾತನ್ನು ಉಳಿಸಿಕೊಂಡಿದ್ದಾರೆ.

ನಂ 1 ಧಾರಾವಾಹಿ

ಧಾರಾವಾಹಿ ಆರಂಭವಾದ ಮೊದಲ ವಾರದಲ್ಲೇ ಟಿಆರ್‌ಪಿಯಲ್ಲಿ ದಾಖಲೆ ಮಾಡಿದೆ. ಅಂದಹಾಗೆ ಪ್ರಸಾರವಾದ ಗುರುವಾರ 11.5, ಶುಕ್ರವಾರ 8.7 ಟಿಆರ್‌ಪಿ ಪಡೆದಿದೆ. ಈ ಮೂಲಕ 10.2 TRP ಪಡೆದು ಈ ವಾರದ ನಂಬರ್‌ 1 ಧಾರಾವಾಹಿ ಎಂಬ ಪಟ್ಟ ಪಡೆದಿದೆ. ಕರ್ಣ ಬರುತ್ತಲೇ ದಾಖಲೆ ಸೃಷ್ಟಿ ಮಾಡಿರೋದು ಖುಷಿಯ ವಿಷಯ.

 

ಈ ಧಾರಾವಾಹಿ ಕತೆ ಏನು?

ಕರ್ಣ ಧಾರಾವಾಹಿಯ ಸಂಚಿಕೆಗಳು ಸಿಕ್ಕಾಪಟ್ಟೆ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಕರ್ಣನ ಮನೆ, ಆಸ್ಪತ್ರೆ ಎಲ್ಲವೂ ಸುಂದರವಾಗಿ ಕಾಣುತ್ತಿದೆ. ಇನ್ನೊಂದು ಕಡೆ ಕರ್ಣ ಹಾಗೂ ನಿಧಿ, ನಿತ್ಯಾ ಕಾಂಬಿನೇಶನ್‌ ವೀಕ್ಷಕರಿಗೆ ಸಖತ್‌ ಖುಷಿ ಕೊಡುತ್ತಿದೆ. ಡಾಕ್ಟರ್‌ ಕರ್ಣನನ್ನು ಕಂಡ್ರೆ ನಿಧಿಗೆ ತುಂಬ ಇಷ್ಟ, ಇನ್ನೂ ಅವನಿಗೆ ಪ್ರೇಮ ನಿವೇದನೆ ಮಾಡೋಕೆ ಆಗದೆ ಒದ್ದಾಡುತ್ತಿದ್ದಾಳೆ. ನಿತ್ಯಾಗೆ ಕರ್ಣನನ್ನು ಕಂಡರೆ ಆಗೋದಿಲ್ಲ. ಇನ್ನು ಹದಿನೈದು ದಿನದಲ್ಲಿ ನಿತ್ಯಾಗೆ ತೇಜಸ್‌ ಎನ್ನುವ ಹುಡುಗನ ಜೊತೆ ಮದುವೆ ಆಗಬೇಕಂತೆ. ನಿತ್ಯಾ ಅಜ್ಜಿ, ಕರ್ಣನ ಅಜ್ಜಿ ಸ್ನೇಹಿತರು. ಹೀಗಾಗಿ ನಿತ್ಯಾ ಮದುವೆಗೆ ಕರ್ಣ ಸಹಾಯ ಮಾಡೋಕೆ ರೆಡಿ ಆಗಿದ್ದಾನೆ.

ಬೀದಿಯಲ್ಲಿ ಬಿದ್ದಿದ್ದ ಮಗುವನ್ನು ರಾಮಕೃಷ್ಣ ಅವರು ಮನೆಗೆ ತಂದು ಸಾಕಿದ್ದಾರೆ. ಅಷ್ಟೇ ಅಲ್ಲದೆ ಇಡೀ ಆಸ್ತಿಯನ್ನು ಅವನ ಹೆಸರಿಗೆ ಬರೆದಿದ್ದಾರೆ. ರಾಮಕೃಷ್ಣನ ಮಕ್ಕಳು, ಸೊಸೆಯಂದಿರಿಗೆ ಕರ್ಣನನ್ನು ಕಂಡರೆ ಆಗೋದಿಲ್ಲ. ನಂಬರ್‌ 1 ಗೈನಕಾಲಜಿಸ್ಟ್‌ ಆಗಿರೋ ಕರ್ಣನಿಗೆ ಮನೆಯವರ ಗುಣ ಸ್ವಭಾವ, ಊಟ ತಿಂಡಿ ಎಲ್ಲದರ ಬಗ್ಗೆಯೂ ಗೊತ್ತಿದೆ. ಕರ್ಣನಿಗೆ ತಂದೆ ಎಂದು ಕರೆಸಿಕೊಳ್ಳುವವನಿಗೆ ಅವನನ್ನು ಕಂಡರೆ ಆಗೋದಿಲ್ಲ, ಕರ್ಣ ಮದುವೆ ಆಗಬಾರದು ಎಂದು ಒಪ್ಪಂದ ಮಾಡಿಸಿಕೊಂಡಿದ್ದಾನೆ. ಆದರೆ ಕರ್ಣನ ಅಜ್ಜಿಗೆ ಮೊಮ್ಮಗ ಮದುವೆ ಆಗಬೇಕು ಎನ್ನೋ ಆಸೆ. ಒಟ್ಟಿನಲ್ಲಿ ನಿತ್ಯಾ, ನಿಧಿ, ಕರ್ಣನ ಲೈಫ್‌ ಕಥೆ ಏನಾಗುವುದೋ ಏನೋ!

ಪಾತ್ರಧಾರಿಗಳು

ಕರ್ಣ- ಕಿರಣ್‌ ರಾಜ್‌

ನಿತ್ಯಾ- ನಮ್ರತಾ ಗೌಡ

ನಿಧಿ- ಭವ್ಯಾ ಗೌಡ