ಬೆಂಗಳೂರಿನ ಚರ್ಚ್ ಸ್ಟ್ರೀಟ್, ಎಂ.ಜಿ. ರಸ್ತೆ ಸೇರಿ ವಿವಿಧೆಡೆ ಯುವತಿಯರ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಈತ ಕೋರಮಂಗಲ, ಇಂದಿರಾನಗರ ರಸ್ತೆ ಸೇರಿದಂತೆ ಹಲವೆಡೆ ಯುವತಿಯರನ್ನು ಗುರಿಯಾಗಿಸಿಕೊಂಡಿದ್ದನು.

ಬೆಂಗಳೂರು (ಜು.10): ಬೆಂಗಳೂರು ನಗರದ ಚರ್ಚ್‌ ಸ್ಟ್ರೀಟ್, ಎಂ.ಜಿ. ರಸ್ತೆ ಸೇರಿದಂತೆ ವಿವಿಧೆಡೆ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಪಬ್‌, ಕ್ಲಬ್‌ ಹಾಗೂ ರಸ್ತೆಯಲ್ಲಿ ತಿರುಗಾಡುವ ಯುವತಿಯರ ಖಾಸಗಿ ಕ್ಷಣಗಳನ್ನು ಗುಪ್ತವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದು, ಅದನ್ನು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್‌ಲೋಡ್ ಮಾಡುವ ಮೂಲಕ ಅಪರಾಧ ಎಸಗುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಗುರುದೀಪ್ ಸಿಂಗ್ (26) ಎಂದು ಗುರುತಿಸಲಾಗಿದ್ದು, ಈತ ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್‌, ಕೋರಮಂಗಲ, ಇಂದಿರಾನಗರ ಸೇರಿದಂತೆ ಹಲವಾರು ಯುವಜನರು ಸುತ್ತಾಡುವಂತಹ ಪ್ರದೇಶಗಳಲ್ಲಿ ಮಾರ್ಡನ್ ಡ್ರೆಸ್ ಧರಿಸಿಕೊಂಡು ಓಡಾಡುವಂತಹ ಯುವತಿಯರನ್ನ ಗುರಿಯಾಗಿಸಿಕೊಂಡು, ಅವರು ನಿರ್ಲಕ್ಷ್ಯವಾಗಿ ನಡೆದುಕೊಳ್ಳುವ ಸಮಯದಲ್ಲಿ ಅವರ ಆಕರ್ಷಕ ಭಂಗಿಯ ಫೋಟೋಗಳನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುತ್ತಿದ್ದನು. ಅಂದರೆ, ಈ ಆಸಾಮಿಯು ಐಫೋನ್ ಕ್ಯಾಮೆರಾ ಬಳಸಿಕೊಂಡು ಮಹಿಳೆಯರು ಜೋರಾಗಿ ನಡೆಯುವ, ಓಡುವಂತಹ, ನೃತ್ಯ ಮಾಡುವ ಹಾಗೂ ಆಪ್ತರೊಂದಿಗೆ ಖಾಸಗಿ ಭಂಗಿಗಳಲ್ಲಿರುವ ಕ್ಷಣಗಳನ್ನು ಫೋಟೋ ತೆಗೆದು ಅಥವಾ ವಿಡಿಯೋ ಮಾಡುತ್ತಿದ್ದನು. ಈ ವಿಡಿಯೋಗಳನ್ನು ವಿಭಿನ್ನ ಹಾಡುಗಳನ್ನು ಜೋಡಿಸಿ Instagram Reels ರೂಪದಲ್ಲಿ ಪ್ರಕಟಿಸುತ್ತಿದ್ದನು. ಇದರಿಂದ ಮಹಿಳೆಯರ ಗೌರವ ಹಾಗೂ ಗೌಪ್ಯತೆಗೆ ಭಂಗ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಯುವತಿಯರ ಖಾಸಗಿ ಭಂಗಿ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ಶಂಕೆ ವ್ಯಕ್ತಪಡಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಬನಶಂಕರಿ ಪೊಲೀಸ್ ಠಾಣೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ತನಿಖೆಗೆ ಕೈಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದ ಫೋಟೋಗಳ ಮೂಲಕ ಆರೋಪಿಯ ಡಿಜಿಟಲ್ ಗುರುತು ಶೋಧಿಸಿ, ಸೂಕ್ಷ್ಮ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಐಫೋನ್ ಮೊಬೈಲ್ ಹಾಗೂ ಮೆಮೊರಿ ಕಾರ್ಡ್‌ಗಳೂ ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆ ಮುಂದುವರಿದಿದ್ದು, ಇನ್ನಷ್ಟು ಕೃತ್ಯ ಬಯಲಾಗುವ ನಿರೀಕ್ಷೆ:

ಪೊಲೀಸರು ಈಗಾಗಲೇ ಆರೋಪಿಯ ಬಳಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಇನ್ನೂ ಹೆಚ್ಚಿನ ಯುವತಿಯರ ಫೋಟೋಗಳನ್ನು ಈತ ಅಪ್ಲೋಡ್ ಮಾಡಿರಬಹುದೆಂಬ ಶಂಕೆಯಿದೆ. ಅನುಮತಿಯಿಲ್ಲದ ವಿಡಿಯೋ ಚಿತ್ರಿಸುವುದು ಮತ್ತು ಸಾರ್ವಜನಿಕವಾಗಿ ಅಪ್‌ಲೋಡ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66E ಹಾಗೂ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ಗಳಿಗೆ ವಿರುದ್ಧವಾಗಿದೆ. ಈತನ ವಿರುದ್ಧ IPC 354C (voyeurism) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಕೃತ್ಯಗಳ ಕುರಿತ ತನಿಖೆ ಮುಂದುವರೆದಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮಹಿಳಾ ಹಕ್ಕು ಸಂಘಟನೆಗಳು ಆಗ್ರಹಿಸುತ್ತಿವೆ.