ಸಂವಿಧಾನ ದಿನಾಚರಣೆ ವೇಳೆ ಅಂಬೇಡ್ಕರ್ ಚಿತ್ರ ಇಡದ ಪ್ರಕರಣದಲ್ಲಿ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರನ್ನು ಅಮಾನತು ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಘಟನೆ ನಡೆದು 8 ತಿಂಗಳ ಬಳಿಕ ಸರ್ಕಾರ ಕ್ರಮ ಕೈಗೊಂಡಿತ್ತು.
ಬೆಂಗಳೂರು (ಜು.08): ಸಂವಿಧಾನ ದಿನಾಚರಣೆ ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ನಡೆಸಿದ ಪ್ರಕರಣದಲ್ಲಿ ವಿಧಾನ ಪರಿಷತ್ ಉಪ ಕಾರ್ಯದರ್ಶಿ ಕೆ.ಜೆ. ಜಲಜಾಕ್ಷಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಆದರೆ, ಅಮಾನತು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಕಳೆದ 2024ರ ನವೆಂಬರ್ 26ರಂದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ಕಾರ್ಯಕ್ರಮ ನಡೆಯಿತು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಭಾವಚಿತ್ರ ಇಡಬೇಕೆಂದು ತಿಳಿಸಿದರೂ ಕೂಡ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರು ಅದನ್ನು ಕಡೆಗಣಿಸಿದರೆಂಬ ಆರೋಪಗಳು ಕೇಳಿಬಂದಿದ್ದವು.
ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ದಲಿತ ಸಂಘಟನೆಗಳು ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದವು. ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ, ಮಹಿಳಾ ಅಧಿಕಾರಿಯನ್ನು ವಿಚಾರಣೆ ನಡೆಸಿ ಘಟನೆ ನಡೆದು 8 ತಿಂಗಳ ಬಳಿಕ ಅಮಾನತು ಮಾಡಿ ಕ್ರಮ ಕೈಗೊಂಡಿತ್ತು. ಇದಕ್ಕೂ ಮುನ್ನ ಕಾರ್ಯಕ್ರಮದ ಲೋಪ ಕುರಿತು ವಿಧಾನ ಪರಿಷತ್ ಕಾರ್ಯದರ್ಶಿಯ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗಿತ್ತು. ಆದರೆ, ಈ ಅಮಾನತು ಆದೇಶವನ್ನು ಪ್ರಶ್ನಿಸಿ ಮಹಿಳಾ ಅಧಿಕಾರಿ ಜಲಜಾಕ್ಷಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಧಾನ ಪರಿಷತ್ ಉಪ ಕಾರ್ಯದರ್ಶಿ ಜಲಜಾಕ್ಷಿ ಅವರ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್‌ನ ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಅವರ ಪೀಠವು ರಾಜ್ಯ ಸರ್ಕಾರದ ಅಮಾನತು ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ನ್ಯಾಯಾಲಯದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಮುಂದಿನ ಕ್ರಮ ನಿರ್ಧಾರವಾಗಬೇಕಿದೆ.
ಸಂವಿಧಾನದ ಗೌರವ ಕಾಪಾಡಬೇಕು:
ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನವನ್ನು ರೂಪಿಸಿದ ಶಿಲ್ಪಿಯಾಗಿ ರಾಷ್ಟ್ರದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಸಂವಿಧಾನ ದಿನಾಚರಣೆಯ ಸಂದರ್ಭದಲ್ಲಿ ಅವರ ಭಾವಚಿತ್ರ ಇಡದಿರುವುದು ಜನಮಾನಸದಲ್ಲಿ ಆಕ್ರೋಶ ಉಂಟುಮಾಡಿದ್ದು, ಭವಿಷ್ಯದಲ್ಲಿ ಅಂತಹ ಘಟನೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ.