Asianet Suvarna News Asianet Suvarna News

Dooradarshana Film Review ನೆನಪುಗಳನ್ನು ಮೀಟುವ ಫೀಲ್‌ಗುಡ್‌ ದೂರದರ್ಶನ

ಪೃಥ್ವಿ ಅಂಬಾರ್‌, ಅಯಾನ, ವೀಣಾ ಸುಂದರ್‌, ಉಗ್ರಂ ಮಂಜು ಅಭಿನಯಿಸಿರುವ ದೂರದರ್ಶನ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ಯಾವ ರೀತಿಯ ಕಥೆ ಹೇಳುತ್ತದೆ? 

Pruthvi Ambaar Ugram Manju Dooradarshana kannada film review vcs
Author
First Published Mar 4, 2023, 9:50 AM IST

ರಾಜೇಶ್‌ ಶೆಟ್ಟಿ

ಪ್ರಾಥಮಿಕ ಶಾಲೆಯನ್ನು ನೋಡಿದಾಗ ಧುತ್ತೆಂದು ಎದುರಾಗುವ ಬಾಲ್ಯದ ನೆನಪು ಕೊಡುವ ಆಹ್ಲಾದದಂತೆ, ಚಿಕ್ಕಂದಿನಲ್ಲಿ ಈಜಾಡಿದ ಕೆರೆಯನ್ನು ನೋಡಿದಾಗ ಗೆಳೆಯರ ಜೊತೆ ಹಂಚಿ ತಿಂದ ನೇರಳೆ, ಪೇರಳೆ ಹಣ್ಣಿನ ಘಮ ನೆನಪಾಗಿ ಮನಸ್ಸು ಅರಳಿದಂತೆ ನಿಧಾನಕ್ಕೆ ಆವರಿಸುತ್ತಾ ಹೋಗುವ ಸಿನಿಮಾ ದೂರದರ್ಶನ.

ನಿರ್ದೇಶನ: ಸುಕೇಶ್‌ ಶೆಟ್ಟಿ

ತಾರಾಗಣ: ಪೃಥ್ವಿ ಅಂಬಾರ್‌, ಅಯಾನ, ವೀಣಾ ಸುಂದರ್‌, ಉಗ್ರಂ ಮಂಜು, ಹರಿಣಿ ಶ್ರೀಕಾಂತ್‌

ರೇಟಿಂಗ್‌: 3

ಹಳ್ಳಿಗಳಲ್ಲಿ ಯಾವುದೋ ಒಂದು ಮನೆಗೆ ಟಿವಿ ಬಂದಾಗ ಆ ಹಳ್ಳಿಯ ಎಲ್ಲರೂ ಟಿವಿ ನೋಡಲೆಂದು ಆ ಮನೆಯಲ್ಲಿ ಸೇರುತ್ತಿದ್ದುದು ಪ್ರತೀ ಹಳ್ಳಿಯಲ್ಲೂ ಸಾಮಾನ್ಯವಾಗಿತ್ತು. ಆ ಕಾಲವನ್ನು ನೋಡಿದ ಎಲ್ಲರಿಗೂ ತಟ್ಟುವ, ಹಳೆಯ ಭಾವವನ್ನು, ಮರೆಯದ ಕತೆಗಳನ್ನು, ಹತ್ತಿರವಿದ್ದು ದೂರವಾದವರ ನೆನಪುಗಳನ್ನು ಮೀಟುವ ಸಹಜ ಸುಂದರ ಸಿನಿಮಾ ಇದು.

Kasina Sara Review: ಮಣ್ಣಿಗೆ ಮರಳಿದ ವಿದ್ಯಾವಂತನ ಕತೆ

ಊರಲ್ಲೊಬ್ಬ ಜಿಪುಣಾಗ್ರೇಸರ. ಅವರಿಗೊಬ್ಬ ಪ್ರೇಮಿ ಮಗ. ಅವನ ಪಾಪ ಪಾಂಡು ಗೆಳೆಯರು. ಅವನಿಗೊಬ್ಬಳು ಕಾದಂಬರಿ ಪ್ರೇಮಿ ನಲ್ಲೆ. ಹಳೆಯ ಗೆಳೆಯನೊಬ್ಬನ ಜೊತೆ ಜಗಳ. ಈ ಮಧ್ಯೆ ಟಿವಿ ಪ್ರಹಸನ. ಯಾವುದೇ ಊರಿನಲ್ಲಿ ನಡೆಯಬಹುದಾದ ಒಂದು ಕತೆಯನ್ನು ನಿರ್ದೇಶಕ ಸುಕೇಶ್‌ ಶೆಟ್ಟಿಸಿನಿಮಾ ಮಾಡಿದ್ದಾರೆ. ಆ ಮಟ್ಟಿಗೆ ಇದು ಎಲ್ಲರಿಗೂ ಸಲ್ಲುವ ಸಿನಿಮಾ.

ಮನುಷ್ಯನ ದುರಾಸೆ, ಬಡತನದ ಅಸಹಾಯಕತೆ, ಗೆಳೆಯರ ತುಂಟಾಟ, ಅಂತರ್ಜಾತೀಯ ಪ್ರೇಮದ ಪೀಕಲಾಟ, ಏನೋ ಮಾಡಲು ಹೋಗಿ ಮತ್ತಿನ್ನೇನೋ ಆಗುವ ವಿಧಿ ವಿಸ್ಮಯ ಎಲ್ಲವೂ ತುಂಬಿಕೊಂಡಿರುವ ತಾಕುವ ಸಿನಿಮಾ. ನಮ್ಮ ನಿಮ್ಮ ಅವರ ಇವರ ಎಲ್ಲರ ಊರಿನಲ್ಲೂ ಇರಬಹುದಾದ ಒಂದು ಚಾದಂಗಡಿ, ಆ ಚಾದಂಗಡಿಯ ಕತೆ ಹೇಳುವ ವ್ಯಕ್ತಿ, ಹೋಟೆಲ್‌ ತೆರೆಯುವ ಕನಸು ಕಾಣುತ್ತಾ ಓಡಾಡುವ ತರುಣ ಹೀಗೆ ಇಲ್ಲಿ ಸಿಗುವ ಪಾತ್ರಗಳೆಲ್ಲಾ ನಮ್ಮ ಅಕ್ಕಪಕ್ಕ ಇರಬಹುದಾದಂತಹ ಪಾತ್ರಗಳು. ಆ ಹಿನ್ನೆಲೆಯಲ್ಲಿ ನೋಡಿದರೆ ಇದು ನಮ್ಮ ಮಧ್ಯದ ಸಿನಿಮಾ.

Gowli Review: ತಾಂತ್ರಿಕವಾಗಿ ಘರ್ಜಿಸುವ ಶ್ರೀನಗರ ಕಿಟ್ಟಿ 'ಗೌಳಿ'

ಆರಂಭದಲ್ಲಿ ಸ್ವಲ್ಪ ಸಡಿಲುಗೊಂಡ ಚಿತ್ರಕತೆ ಮತ್ತು ಮಿಸ್ಸಿಂಗ್‌ ಲಿಂಕ್‌ಗಳು ಈ ಸಿನಿಮಾದ ಸಣ್ಣ ಅರೆಕೊರೆ. ಆದರೆ ಅವು ಓಟಕ್ಕೆ ಅಡ್ಡಿಯಾಗುವುದಿಲ್ಲ. ಅಬ್ಬರವಿಲ್ಲದ, ಬೊಬ್ಬೆಯಿಲ್ಲದ ತಣ್ಣಗಿನ ನದಿಯಂಥ ಹರಿವು ಈ ಸಿನಿಮಾದ್ದು. ಅದಕ್ಕೆ ತಕ್ಕಂತೆ ಪಾತ್ರಧಾರಿಗಳು ಪಾತ್ರಗಳನ್ನು ಜೀವಿಸಿದ್ದಾರೆ. ವೀಣಾ ಸುಂದರ್‌ ಅಭಿನಯ ಈ ಚಿತ್ರದ ಪ್ರಬಲ ಶಕ್ತಿ. ಅವರೊಂದಿಗೆ ಉಗ್ರಂ ಮಂಜು, ಪೃಥ್ವಿ, ಅಯಾನ, ಹರಿಣಿ ಶ್ರೀಕಾಂತ್‌ ಮುಂತಾದ ಪ್ರಮುಖ ಪಾತ್ರಗಳ ಜತೆ ಸಣ್ಣ ಪುಟ್ಟಪಾತ್ರಗಳು ಕೂಡ ಮನಸ್ಸಲ್ಲಿ ಉಳಿಯುತ್ತವೆ ಅನ್ನುವುದೇ ಈ ಚಿತ್ರದ ಗೆಲುವು. ನಂದೀಶ್‌ ತೀರ್ಥಹಳ್ಳಿ ಸಂಭಾಷಣೆ ಸೊಗಸಾಗಿದೆ. ವಾಸುಕಿ ವೈಭವ್‌ ಸಂಗೀತ ಹಿತವಾಗಿದೆ.

ಇದು ಮಧುರ ನೆನಪುಗಳಿಗೆ ಮರಳಿಸುವಂತೆ ಮಾಡುವ ಸೊಗಸಾದ ಫೀಲ್‌ಗುಡ್‌ ಸಿನಿಮಾ.

Follow Us:
Download App:
  • android
  • ios