ಭಾರತ ತಂಡದ ನಾಯಕ ಶುಭ್‌ಮನ್ ಗಿಲ್‌ಗೆ ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಮುಂದಿನ ಪಂದ್ಯಗಳಲ್ಲಿ ನಾಯಕತ್ವದ ಒತ್ತಡ ಅರ್ಥವಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ. 

ಕೊಲ್ಕತಾ: ಭಾರತ ತಂಡದ ನಾಯಕ ಶುಭ್‌ಮನ್ ಗಿಲ್‌ಗೆ ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಕೆ ನೀಡಿದ್ದಾರೆ. ಶುಭ್‌ಮನ್ ಗಿಲ್‌ಗೆ ಇದು ಹನಿಮೂನ್ ಪೀರಿಯಡ್, ನಿಜವಾದ ಒತ್ತಡ ಇನ್ನೂ ಬರಬೇಕಿದೆ ಎಂದು ಬಿಸಿಸಿಯ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ ಮುಂದಿನ ಪಂದ್ಯಗಳಲ್ಲಿ ನಾಯಕತ್ವದ ಒತ್ತಡ ಅರ್ಥವಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಇನ್ನೂ ಮುಗಿದಿಲ್ಲ. ಒಂದು ಟೆಸ್ಟ್ ಗೆದ್ದಿದ್ದೇವೆ, ಒಂದು ಸೋತಿದ್ದೇವೆ. ಇನ್ನೂ ಮೂರು ಟೆಸ್ಟ್‌ಗಳು ಬಾಕಿ ಇವೆ. ಭಾರತ ಚೆನ್ನಾಗಿ ಆಡುತ್ತಿದೆ. ಆದರೆ ಮುಂದಿನ ಪಂದ್ಯಕ್ಕೆ ಇಳಿಯುವಾಗ ಎಲ್ಲವೂ ಹೊಸದಾಗಿ ಶುರು ಎಂದು ತಿಳಿದುಕೊಳ್ಳಬೇಕು ಎಂದು ಗಂಗೂಲಿ ಕಿವಿಮಾತು ಹೇಳಿದ್ದಾರೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ದಿಢೀರ್ ಎನ್ನುವಂತೆ ಟೆಸ್ಟ್ ನಾಯಕತ್ವ ಸ್ಥಾನಕ್ಕೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಹೀಗಾಗಿ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಟೂರ್ನಿಯ ನಿಟ್ಟಿನಲ್ಲಿ ಮಹತ್ವದ ಸರಣಿ ಎನಿಸಿಕೊಂಡಿದ್ದ ಇಂಗ್ಲೆಂಡ್ ಸರಣಿಗೆ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲು ಕಂಡಿದ್ದ ಟೀಂ ಇಂಡಿಯಾ, ಇದೀಗ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಇನ್ನು ಶುಭ್‌ಮನ್ ಗಿಲ್ ನಾಯಕನಾಗುತ್ತಿದ್ದಂತೆಯೇ ಬ್ಯಾಟ್ ಮೂಲಕವೂ ಸದ್ದು ಮಾಡಲಾರಂಭಿಸಿದ್ದಾರೆ. ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಶುಭ್‌ಮನ್ ಗಿಲ್, ಇದೀಗ ಮೊದಲೆರಡು ಟೆಸ್ಟ್‌ನಲ್ಲಿ ಒಂದು ದ್ವಿಶತಕ ಸೇರಿದಂತೆ ಒಟ್ಟು ಮೂರು ಶತಕ ಸಿಡಿಸಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿಯುತ್ತಿರುವ ಶುಭ್‌ಮನ್ ಗಿಲ್, 146.25ರ ಬ್ಯಾಟಿಂಗ್ ಸರಾಸರಿಯಲ್ಲಿ 585 ರನ್ ಸಿಡಿಸಿ ಸರಣಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ದಾಖಲೆಗಳ ಹೊಸ್ತಿಲಲ್ಲಿ ಶುಭ್‌ಮನ್ ಗಿಲ್: ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಗರಿಷ್ಠ ರನ್‌ ಸಿಡಿಸಿದ ಆಟಗಾರ ಯಶಸ್ವಿ ಜೈಸ್ವಾಲ್‌. ಕಳೆದ ವರ್ಷ ತವರಿನ ಸರಣಿಯಲ್ಲಿ ಅವರು 712 ರನ್‌ ಸಿಡಿಸಿದ್ದರು. ಇದನ್ನು ಮುರಿಯಲು ಗಿಲ್‌ ಕೇವಲ 127 ರನ್‌ ಗಳಿಸಬೇಕಿದೆ. ಇನ್ನು, ಇಂಗ್ಲೆಂಡ್‌ ವಿರುದ್ಧ ಅವರದೇ ತವರಿನಲ್ಲಿ ಗರಿಷ್ಠ ರನ್‌ ಗಳಿಸಿದ ಭಾರತೀಯ ಆಟಗಾರ ರಾಹುಲ್‌ ದ್ರಾವಿಡ್‌. ಅವರು 2002ರಲ್ಲಿ 602 ರನ್‌ ಸಿಡಿಸಿದ್ದರು. ದ್ರಾವಿಡ್‌ರನ್ನು ಹಿಂದಿಕ್ಕಲು ಗಿಲ್‌ ಬೇಕಿರುವುದು ಕೇವಲ 18 ರನ್‌. ಭಾರತದ ನಾಯಕರಾಗಿ ಗರಿಷ್ಠ ರನ್‌ ಸಿಡಿಸಿದ್ದು ವಿರಾಟ್‌ ಕೊಹ್ಲಿ. 2016ರಲ್ಲಿ ತವರಿನಲ್ಲಿ 655 ರನ್‌ ಬಾರಿಸಿದ್ದರು. ಅದನ್ನು ಮುರಿಯಲು 91 ರನ್‌ ಅಗತ್ಯವಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಭಾರತ ಕ್ರಿಕೆಟ್‌ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನಂತರ ವಿರಾಟ್ ಕೊಹ್ಲಿ, ಈಗ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ಹೀಗೆ ಪ್ರತಿಭೆಗಳ ಸರಮಾಲೆ ಇದೆ. ಹಾಗಾಗಿ ಪರ್ಯಾಯ ಆಟಗಾರರಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. 

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಮಹತ್ವದ ಟೆಸ್ಟ್ ಪಂದ್ಯವು ಜುಲೈ 10ರಿಂದ ಲಾರ್ಡ್ಸ್ ಮೈದಾನದಲ್ಲಿ ಆರಂಭವಾಗಲಿದ್ದು, ಶುಭ್‌ಮನ್ ಗಿಲ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.