Asianet Suvarna News Asianet Suvarna News

ಯುವಕರಿಗೆ ವಿಜಯೇಂದ್ರ, ಹಿರಿಯರಿಗೆ ನಾನು ಸ್ಫೂರ್ತಿ - ಆರ್ ಅಶೋಕ್

ಒಂದು ವೇಳೆ ಈಗ ಅಥವಾ ಮುಂದೆ ಬಿಜೆಪಿ ಸರ್ಕಾರ ರಚಿಸುವ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಹಕ್ಕು ಮಂಡಿಸುತ್ತೀರೊ ಅಥವಾ ವಿಜಯೇಂದ್ರ ಅವರಿಗೆ ಬಿಟ್ಟು ಕೊಡುತ್ತೀರೊ? ಈ ಪ್ರಶ್ನೆಗೆ ವಿಪಕ್ಷ ನಾಯಕ ಆ ಅಶೋಕ್ ಹೇಳಿದ್ದೇನು?

 

Face to face interview with R Ashok Vijayendra for the youth, I am the inspiration for the elders  rav
Author
First Published Nov 30, 2023, 6:44 AM IST

- ವಿಜಯ್ ಮಲಗಿಹಾಳ

ರಾಜ್ಯ ಬಿಜೆಪಿ ಪಾಳೆಯದಲ್ಲಿ ಈಗ ಒಂದಿಷ್ಟು ಸಂಭ್ರಮದ ವಾತಾವರಣ ಕಂಡು ಬಂದಿದೆ. ಆರು ತಿಂಗಳ ಸುದೀರ್ಘ ಅವಧಿಯ ಕಾಯುವಿಕೆ ಮುಗಿದಿದ್ದು, ಕೊನೆಗೂ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನ ನೇಮಕವಾಗಿದೆ. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕಗೊಂಡ ಒಂದು ವಾರದ ಬಳಿಕ ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸುವ ಶಾಸಕಾಂಗ ಪಕ್ಷದ ನಾಯಕನಾಗಿ ಏಳು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದೆ. ನೇಮಕದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿರುವ ಅಶೋಕ್ ಅವರ ನಾಯಕತ್ವ ಮುಂಬರುವ ಬೆಳಗಾವಿ ಅಧಿವೇಶನ ಒರೆಗೆ ಹಚ್ಚಲಿದೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದಾಗ...

ಪ್ರತಿಪಕ್ಷದ ನಾಯಕನ ಸ್ಥಾನ ಅಲಂಕರಿಸಿದ ಬಳಿಕ ಅಶೋಕ್ ಅವರಿಗೆ ಖುಷಿಯಾಗಿರುವಂತಿದೆ?

-ಇದು ಖುಷಿಯ ಪ್ರಶ್ನೆ ಅಲ್ಲ. ಇದೊಂದು ಜವಾಬ್ದಾರಿ. ಪಕ್ಷ ನನ್ನ ಮೇಲೆ ಅಭಿಮಾನ ಇಟ್ಟು ಈ ಸ್ಥಾನ ನೀಡಿದೆ. ಲಕ್ಷಾಂತರ ಕಾರ್ಯಕರ್ತರ ಆಸೆ ನೆರವೇರಿಸಬೇಕಾಗಿದೆ. ಈಗ ನಮ್ಮಲ್ಲಿ ಅಧಿಕಾರವಿಲ್ಲ. ಹೀಗಾಗಿ, ಸವಾಲು ಇದ್ದಂತೆ. ಹೋರಾಟ, ಪ್ರತಿಭಟನೆ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ. ಈ ದೃಷ್ಟಿಯಿಂದ ಇದು ಖುಷಿಗಿಂತ ಜವಾಬ್ದಾರಿ.

ವರಿಷ್ಠರ ನಡೆಯಿಂದ ರಾಜ್ಯ ಬಿಜೆಪಿ ದುರ್ಬಲವಾಗಿದೆ: ಡೀವಿ ಬೇಸರ

ವಾಸ್ತವವಾಗಿ ನೀವು ಪ್ರತಿಪಕ್ಷದ ನಾಯಕನ ಸ್ಥಾನದ ಬದಲು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಿರಲ್ಲವೇ?

-ಹೌದೌದು. ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಪಕ್ಷ ನನಗೆ ಪ್ರತಿಪಕ್ಷದ ನಾಯಕನಾಗುವ ಅವಕಾಶ ಕೊಟ್ಟಿದೆ. ಎರಡೂ ಒಂದೇ. ಯಾವುದಾದರೂ ಪಕ್ಷದ ಸಂಘಟನೆಯ ಜವಾಬ್ದಾರಿ. ನಾವು ಜೋಡೆತ್ತು ಅಲ್ಲವೇ? ಎಡಕ್ಕೆ ನಿಂತರೂ ಅಷ್ಟೆ. ಬಲಕ್ಕೆ ನಿಂತರೂ ಅಷ್ಟೆ. ನೊಗ ಎಳೆಯಬೇಕಲ್ಲ.

ನೀವೇನೊ ಜೋಡೆತ್ತು ಎಂದು ಹೇಳಿಕೊಳ್ಳುತ್ತೀರಿ. ಪಕ್ಷದ ಎಲ್ಲ ಮುಖಂಡರೂ ಹೇಳಬೇಕಲ್ಲ?

-ಹೇಳಿದಾರಲ್ಲ. ಶೇ.98ರಷ್ಟು ಮಂದಿ. ಯಾರೋ ಒಬ್ಬಿಬ್ಬರು ಹೇಳದೆ ಇರಬಹುದು. ಅಂಥವರ ಜತೆ ಮಾತನಾಡುತ್ತೇವೆ.

ಬಯಸಿದ ರಾಜ್ಯಾಧ್ಯಕ್ಷ ಸ್ಥಾನ ಸಿಗದೆ ಪ್ರತಿಪಕ್ಷದ ನಾಯಕನ ಹುದ್ದೆ ಸಿಕ್ಕಿರುವುದಕ್ಕೆ ನಿಮಗೆ ಬೇಸರವಿಲ್ಲ?

-ಇಲ್ಲ. ಬೇಸರವಿಲ್ಲ. ತೃಪ್ತಿಯಿದೆ.

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಿಮ್ಮನ್ನೇ ಆಯ್ಕೆ ಮಾಡಿದ್ದು ಯಾಕಿರಬಹುದು?

-ಮೊದಲ ಬಾರಿಗೆ ಶಾಸಕರಾಗಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದರು. ನಾನು ಏಳು ಬಾರಿ ಶಾಸಕನಾಗಿದ್ದೇನೆ. ಸತತವಾಗಿ ಏಳು ಬಾರಿ ಗೆದ್ದಿರುವುದು ನಾನೊಬ್ಬನೇ. ಅಂದರೆ, ಸೀನಿಯರ್‌. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದವರು ಮತ್ತು ಏಳು ಬಾರಿ ಶಾಸಕರಾಗಿ ಆಯ್ಕೆಯಾದವರು. ಒಳ್ಳೆಯ ಕಾಂಬಿನೇಷನ್‌. ಯುವಕರಿಗೆ ವಿಜಯೇಂದ್ರ ಸ್ಫೂರ್ತಿ. ಹಿರಿಯರಿಗೆ ನಾನು ಸ್ಫೂರ್ತಿ. ನಮ್ಮಿಬ್ಬರ ಜೋಡಿ ಮುಂಬರುವ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿ ಹೆಚ್ಚು ಸ್ಥಾನ ಗಳಿಸುವುದು, ಪಕ್ಷ ಸಂಘಟನೆ ಬಲಪಡಿಸುವ ದೃಷ್ಟಿಯಿಂದ ಆಯ್ಕೆ ಮಾಡಿದ್ದಾರೆ.

ಮೊದಲ ಬಾರಿಗೆ ಶಾಸಕರಾದ ವಿಜಯೇಂದ್ರ ಅವರೊಂದಿಗೆ ಏಳು ಬಾರಿ ಆಯ್ಕೆಯಾದ ನೀವು ಸಮ ಸಮನಾಗಿ ಕೆಲಸ ಮಾಡಬೇಕಲ್ಲ ಎಂಬ ಮುಜುಗರ ಉಂಟಾಗಿಲ್ಲವೇ?

-ನಮ್ಮದು ಶಿಸ್ತಿನ ಪಕ್ಷ. ಮುಜುಗರದ ಪ್ರಶ್ನೆಯೇ ಇಲ್ಲ. ಖುಷಿ. ವಿಜಯೇಂದ್ರ ಅವರೊಂದಿಗೆ ಕೆಲಸ ಮಾಡಲು ಖುಷಿಯಾಗಿದೆ. ಅವರು ಪಕ್ಷ ಸಾಮಾನ್ಯ ಕಾರ್ಯಕರ್ತನಾಗಿ, ರಾಜ್ಯ ಕಾರ್ಯದರ್ಶಿಯಾಗಿ, ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿ ಈಗ ರಾಜ್ಯಾಧ್ಯಕ್ಷರಾಗಿದ್ದಾರೆ. ಪಕ್ಷದಲ್ಲಿ ಚಿಕ್ಕವರು, ದೊಡ್ಡವರು ಎಂಬುದು ಬರುವುದಿಲ್ಲ. ಎಲ್ಲರೂ ಸಮಾನ.

ನೀವು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಥವಾ ಅವರ ಯಡಿಯೂರಪ್ಪ ಬಣದ ಆಯ್ಕೆಯಂತೆ?

-ನನ್ನನ್ನು ಆಯ್ಕೆ ಮಾಡಿದ್ದು ಪಕ್ಷ. ನಾನು ಯಾವುದೇ ಬಣದೊಂದಿಗೆ ಗುರುತಿಸಿಕೊಂಡಿಲ್ಲ. ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸೇರಿ ಆಯ್ಕೆ ಮಾಡಿದ್ದು.

ಅಂದರೆ, ಬಿಜೆಪಿಯಲ್ಲಿ ಬಣಗಳಿವೆ ಎಂದಾಯಿತಲ್ಲವೇ?

-ಇಲ್ಲಿಲ್ಲ. ನಾನು ಆ ರೀತಿ ಹೇಳಿಯೇ ಇಲ್ಲ. ಪಕ್ಷದಲ್ಲಿ ಬಣಗಳಿಲ್ಲ. ಇರುವುದು ಒಂದೇ ಬಣ. ಅದು ಬಿಜೆಪಿ ಬಣ.

ವಿಜಯೇಂದ್ರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತವರು ಇರಲಿ ಎಂಬ ಕಾರಣಕ್ಕಾಗಿ ನಿಮ್ಮನ್ನು ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪರಿಗಣಿಸಲಾಯಿತೇ?

-ಹಾಗೇನೂ ಇಲ್ಲ. ಮುಂಬರುವ ಚುನಾವಣೆಗಳಿಗೆ ಯಾವ ರೀತಿಯ ಕಾಂಬಿನೇಷನ್ ಆದರೆ ಒಳ್ಳೆಯದು ಎಂದು ಅಳೆದು ತೂಗಿ ಮಾಡಿದ್ದಾರೆ. ಹಳೆ ಬೇರು, ಹೊಸ ಚಿಗುರು..ಕೂಡಿದರೆ ಮರಸೊಬಗು.. ಎನ್ನುವ ರೀತಿಯಲ್ಲಿ ಯೋಚನೆ ಮಾಡಿ ಆಯ್ಕೆ ಮಾಡಿದ್ದಾರೆ. ಸಾಮಾಜಿಕ ನ್ಯಾಯವನ್ನೂ ಗಮನಿಸಿ ಮಾಡಿರುತ್ತಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೂ ನಿಮ್ಮ ಪರವಾಗಿ ಬಿಜೆಪಿ ನಾಯಕರ ಬಳಿ ಬ್ಯಾಟಿಂಗ್ ಬೀಸಿದ್ದರಂತೆ?

-ನಮ್ಮ ಪಕ್ಷದವರು ಎಲ್ಲವನ್ನೂ ನೋಡಿ ಮಾಡಿರುತ್ತಾರೆ. ಎನ್‌ಡಿಎ ಅಂಗಪಕ್ಷವಾಗಿರುವವರನ್ನೂ ಜತೆಗೆ ಕರೆಯೊಯ್ಯಬೇಕಲ್ಲವೇ? ಆ ಜವಾಬ್ದಾರಿ ನಾನು ನಿಭಾಯಿಸಬಲ್ಲೆ ಎಂದು ಈ ಸ್ಥಾನ ನೀಡಿದ್ದಾರೆ.

ನಿಮ್ಮ ಮುಂದಿರುವ ಸವಾಲುಗಳೇನು?

-ನಾನು ಮತ್ತು ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಪಕ್ಷ ಸಂಘಟನೆ ಮುನ್ನಡೆಸುವುದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಳ್ಳೆಯ ಸಾಧನೆ ಮಾಡುವುದು, ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವುದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಹೋರಾಟದ ಮೆರಗು ಹಾಗೂ ಚುರುಕು ಮುಟ್ಟಿಸುವುದು ಮುಂದಿರುವ ಸವಾಲುಗಳು.

ಜೋಡೆತ್ತಿನ ನೇಮಕದ ನಡುವೆಯೇ ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಕಡೆಗೆ ಹೆಜ್ಜೆ ಹಾಕಿದ್ದಾರಲ್ಲ?

-ಎಲ್ಲವೂ ನಿಂತು ಹೋಯಿತಲ್ಲ. ಕಾಂಗ್ರೆಸ್‌ ಕಡೆಗೆ ಹೋಗುತ್ತಿರುವವರು ಈಗ ವಾಪಸ್ ಬರುತ್ತಿದ್ದಾರೆ. ಪಕ್ಷದಿಂದ ಹೊರಗೆ ಹೆಜ್ಜೆ ಹಾಕಲು ಸಜ್ಜಾಗಿರುವವರೊಂದಿಗೆ ಮಾತನಾಡಿ ಮನವೊಲಿಸಿದ್ದೇವೆ. ಪಕ್ಷದಲ್ಲಿ ಈಗ ನಾಯಕತ್ವದ ಕೊರತೆ ಇಲ್ಲ. ಎಲ್ಲರೂ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬ ಕಾರಣಕ್ಕಾಗಿ ಬಿಜೆಪಿಯಲ್ಲೇ ಮುಂದುವರೆಯುತ್ತಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಹೇಗೆ ಎದುರಿಸುತ್ತೀರಿ?

-ನನಗೆ ಅನುಭವ ಇದೆಯಲ್ಲ. ಸಚಿವನಾಗಿ ಅನೇಕ ಖಾತೆಗಳನ್ನು ನಿಭಾಯಿಸಿದ್ದೇನೆ. ನನ್ನ ಸಿದ್ಧಾಂತ ಗಟ್ಟಿಯಾಗಿದೆ. ಸಿದ್ಧಾಂತದ ಆಧಾರದ ಮೇಲೆ ರಾಜಕಾರಣ ಮಾಡಬೇಕು ಎಂದುಕೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಿದ್ಧಾಂತವಿಲ್ಲ. ಆ ನೈತಿಕತೆಯ ಮೇಲೆ ಅವರನ್ನು ಎದುರಿಸುತ್ತೇನೆ.

ನೀವು ಪ್ರತಿಪಕ್ಷದ ನಾಯಕನ ಜವಾಬ್ದಾರಿ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾಗುವಿರಾ?

-ರಾಜ್ಯದಲ್ಲಿ ಬರ ಬಂದಿದೆ. ಸರ್ಕಾರ ನಿದ್ದೆ ಮಾಡುತ್ತಿದೆ. ಬರದ ಹಣವನ್ನು ರೈತರಿಗೆ ಬಿಡುಗಡೆ ಮಾಡಿಲ್ಲ. ವಿದ್ಯುತ್ತಿನ ಕಳ್ಳಾಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ಸಹಾಯ ಮಾಡುವ ಮೂಲಕ ಕರ್ನಾಟಕಕ್ಕೆ ಮೋಸ ಮಾಡಿದ್ದಾರೆ. ಸ್ಪೀಕರ್ ವಿಚಾರವಾಗಿ ಸಚಿವ ಜಮೀರ್ ಅಹಮದ್ ಅವರು ಕೋಮುಭಾವನೆ ಸೃಷ್ಟಿ ಮಾಡಿದ್ದಾರೆ. ಇಂಥ ಅನೇಕ ವಿಚಾರಗಳಿವೆ. ಇ‍ವುಗಳನ್ನು ಅಧಿವೇಶನದಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತೇನೆ.

ಬಿಜೆಪಿ ಸಾಮಾನ್ಯವಾಗಿ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂಬ ಆರೋಪವಿದೆ?

-ನಾನು ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇನೆ. ಆ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತೇವೆ. ಕಾಂಗ್ರೆಸ್ಸಿನ ದುರಾಡಳಿತ, ಭ್ರಷ್ಟಾಚಾರ, ವರ್ಗಾವಣೆ ದಂಧೆ ಮೊದಲಾದ ದೊಡ್ಡ ದೊಡ್ಡ ಅಸ್ತ್ರಗಳನ್ನೇ ನಮಗೆ ಕೊಟ್ಟಿದ್ದಾರೆ. ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಈಗಿನ ಸರ್ಕಾರದಷ್ಟು ಹಿಂದಿನ ಯಾವ ಸರ್ಕಾರಗಳೂ ಕುಲಗೆಟ್ಟು ಹೋಗಿರಲಿಲ್ಲ.

ಕಾಂಗ್ರೆಸ್ ಸರ್ಕಾರದ ಹನಿಮೂನ್‌ ಅವಧಿ ಮುಗಿದಂತಾಗಿದೆಯಲ್ಲವೇ?

-ಹನಿಮೂನ್ ಅವಧಿಯಲ್ಲೇ ಕಾಂಗ್ರೆಸ್ಸಿಗರು ಸಿಕ್ಕಾಪಟ್ಟೆ ಭ್ರಷ್ಟಾಚಾರ ಎಸಗಿದ್ದಾರೆ. ಯಥೇಚ್ಛ ಸರಕನ್ನು ಅವರೇ ನಮಗೆ ನೀಡಿದ್ದಾರೆ. ಅಧಿಕಾರದ ಗದ್ದುಗೆ ಏರುತ್ತಿದ್ದಂತೆಯೇ ಅಂಗಡಿ ತೆರೆದಿದ್ದಾರೆ.

ಹಿಂದೆ ನಿಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್‌ ನಿಮ್ಮದು ಭ್ರಷ್ಟಾಚಾರ ಸರ್ಕಾರ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಕ್ಕೆ ಈಗ ನೀವು ತಿರುಗೇಟು ನೀಡಲು ಹೊರಟಿದ್ದೀರಾ?

-ಹೌದು. ಭಗವದ್ಗೀತೆಯಲ್ಲಿ ಹೇಳಿದಂತೆ ಹಿಂದೆ ನಮ್ಮ ವಿರುದ್ಧ ವಿನಾಕಾರಣ ಅಪಪ್ರಚಾರ ಮಾಡಿದವರೇ ಅವರೇ ಭ್ರಷ್ಟಾಚಾರದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಿಂದೆ ನಮಗೆ ಪೇಸಿಎಂ ಎಂದವರೇ ಈಗ ಪೇಸಿಎಂ ಆಗಿದ್ದಾರೆ. ನಮ್ಮದು ಶೇ.40ರಷ್ಟು ಭ್ರಷ್ಟಾಚಾರ ಎಂದವರು ಶೇ.60ರಷ್ಟು ಭ್ರಷ್ಟಾಚಾರ ಎಸಗುತ್ತಿದ್ದಾರೆ. ಗುತ್ತಿಗೆದಾರರ ಧರಣಿ, ಆತ್ಮಹತ್ಯೆ, ವರ್ಗಾವಣೆ ಇವೆಲ್ಲ ಅವರ ಭ್ರಷ್ಟಾಚಾರಕ್ಕೆ ಸ್ಯಾಂಪಲ್‌ಗಳು. ಅವರು ಮಾಡಿದ ಪಾಪವನ್ನು ಅವರೇ ಅನುಭವಿಸುತ್ತಾರೆ. ಹಿಂದೆ ನಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದಾಗ ಯಾವುದೇ ದಾಖಲೆಳನ್ನು ನೀಡಲಿಲ್ಲ. ಈಗ ಅವರ ವಿರುದ್ಧದ ಭ್ರಷ್ಟಾಚಾರಕ್ಕೆ ದಾಖಲೆಗಳಿವೆ. ದಾಖಲೆಗಳ ಸಮೇತವೇ ಭ್ರಷ್ಟಾಚಾರ ಬೆಳಕಿಗೆ ಬರುತ್ತಿದೆ.

ಆಗ ಕಾಂಗ್ರೆಸ್ ಪಕ್ಷ ದಾಖಲೆಗಳಿಲ್ಲದೇ ಮಾಡಿದ ಆರೋಪಗಳು ಬಹಳ ಸದ್ದು ಮಾಡಿತ್ತು. ಈಗ ದಾಖಲೆಗಳಿದ್ದರೂ ನಿಮ್ಮ ಆರೋಪಗಳು ಸದ್ದೇ ಮಾಡುತ್ತಿಲ್ಲವಲ್ಲ?

-ಆಗ ಚುನಾವಣೆ ಸಮಯವಾಗಿತ್ತು. ನಾವೂ ಸೂಕ್ತ ಸಮಯ ನೋಡಿಕೊಂಡು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರ ಬಿಡುತ್ತೇವೆ.

ನಿಮ್ಮ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ ಇದೆ ಎಂದಾಯ್ತು?

-ಖಂಡಿತ ಇದೆ. ಅದನ್ನು ಕಾದು ನೋಡಿ ಪ್ರಯೋಗ ಮಾಡುತ್ತೇವೆ.

ಅಂದರೆ, ಲೋಕಸಭಾ ಚುನಾವಣೆ ಹೊತ್ತಿಗೆ ಆಡಳಿತಾರೂಢ ಕಾಂಗ್ರೆಸ್ ಮೇಲೆ ಪ್ರತಿಪಕ್ಷ ಬಿಜೆಪಿ ಮುಗಿಬೀಳಲಿದೆ?

-ಹೌದು. ನೋಡ್ತಾಯಿರಿ. ದೊಡ್ಡ ಕದನವೇ ನಡೆಯಲಿದೆ.

ಈ ಕದನ ಆರಂಭಕ್ಕೆ ರಣಕಹಳೆ ಮೊಳಗಿಸುವುದು ಯಾವಾಗ?

-ಮುಂದಿನ ವಾರ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಿಂದ ಈ ಕದನ ಆರಂಭವಾಗಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುತ್ತೇವೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದೆಯೇ?

-ಈಗ ಸಿದ್ಧತೆ ಆರಂಭಿಸುತ್ತಿದ್ದೇವೆ. ಎರಡು ದಿನಗಳ ಹಿಂದೆ ನಾನು, ರಾಜ್ಯಾಧ್ಯಕ್ಷ ವಿಜಯೇಂದ್ರ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸಭೆ ನಡೆಸಿ ಒಂದು ಸುತ್ತಿನ ಚರ್ಚೆ ನಡೆಸಿದ್ದೇವೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಸ್ಥಾನಗಳ ಹಂಚಿಕೆ ಯಾವಾಗ?

-ಈಗಾಗಲೇ ಜೆಡಿಎಸ್ ಪಕ್ಷ ಎನ್‌ಡಿಎ ಅಂಗಪಕ್ಷವಾಗಿದೆ. ಉಭಯ ಪಕ್ಷಗಳ ರಾಷ್ಟ್ರೀಯ ನಾಯಕರು ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನ ನೀಡಬಹುದು ಎಂಬುದರ ಬಗ್ಗೆ ನಾವು ರಾಜ್ಯ ನಾಯಕರು ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಅದರ ಆಧಾರದ ಮೇಲೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ.

nterview: ಲೋಕಸಭಾ ಚುನಾವಣೆಗೆ ಸಚಿವರೂ ಕಣಕ್ಕೆ: ರಾಮಲಿಂಗಾರೆಡ್ಡಿ

ಒಂದು ವೇಳೆ ಈಗ ಅಥವಾ ಮುಂದೆ ಬಿಜೆಪಿ ಸರ್ಕಾರ ರಚಿಸುವ ಸಂದರ್ಭ ಎದುರಾದಾಗ ಮುಖ್ಯಮಂತ್ರಿ ಸ್ಥಾನಕ್ಕೆ ನೀವು ಹಕ್ಕು ಮಂಡಿಸುತ್ತೀರೊ ಅಥವಾ ವಿಜಯೇಂದ್ರ ಅವರಿಗೆ ಬಿಟ್ಟು ಕೊಡುತ್ತೀರೊ?

-ನೋಡಿ, ಈಗ ನಮ್ಮಿಬ್ಬರಿಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವ ಹೊಣೆ ಹೊರಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಯಾರು ಅಲಂಕರಿಸಬೇಕು ಎಂಬುದನ್ನು ತೀರ್ಮಾನ ಮಾಡುವವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು. ನಾವ್ಯಾರೂ ಆ ರೀತಿಯ ಷರತ್ತು ವಿಧಿಸಿ ಜವಾಬ್ದಾರಿ ತೆಗೆದುಕೊಂಡಿಲ್ಲ. ಪಕ್ಷ ಕಟ್ಟುತ್ತೇವೆ, ಸಂಘಟನೆ ಬಲಪಡಿಸುತ್ತೇವೆ ಎಂದು ಜವಾಬ್ದಾರಿ ಸ್ವೀಕರಿಸಿದ್ದೇವೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ.

Follow Us:
Download App:
  • android
  • ios