Asianet Suvarna News Asianet Suvarna News

ಮುಸ್ಲಿಂ ಭದ್ರಕೋಟೆ ಹೈದರಾಬಾದ್‌ಗೆ ನುಗ್ಗಿದ ಹಿಂದೂ ಬೆಂಕಿ ಚೆಂಡು ಮಾಧವಿ ಲತಾ!

ಓವೈಸಿಗೆ ಸವಾಲಾಗಿ ನಿಂತ ಮಾಧವಿ ಲತಾ ಯಾರು? ಇತ್ತೀಚೆಗೆ ಆಪ್ ಕೀ ಅದಾಲತ್‌ನಲ್ಲಿ ಈ ಬಿಜೆಪಿ ಅಭ್ಯರ್ಥಿಯ ಮಾತಿಗೆ ಮೋದಿ ಸಹ ಆಕರ್ಷಿತರಾಗಿದ್ದು, ಈ ಶೋ ನೋಡುವಂತೆ ಎಕ್ಸ್‌ನಲ್ಲಿ ಕರೆ ನೀಡಿದ್ದರು. 

Hindu fire brank madhavi latha bjp candidate in hyderabad constituency Modi applauds her
Author
First Published Apr 29, 2024, 5:35 PM IST

ಆಕೆ ಹೆಸರು ಮಾಧವಿ ಲತಾ. ಈ ಹೆಸರು ಕೇಳಿದ್ರೆ, ಹೈದರಾಬಾದ್ ಅಷ್ಟೇ ಅಲ್ಲ ಇಡೀ ದೇಶವೇ ತಿರುಗಿ ನೋಡುತ್ತೆ. ಮಾಧವಿ ಲತಾ ಒಂದು ಕಾಲದ ತೆಲುಗು ಸಿನಿಮಾ ನಟಿ, ಆರೆಸ್ಸೆಸ್​ನ ಕಟ್ಟಾ ಕಾರ್ಯಕರ್ತೆ, ಹೋರಾಟಗಾರ್ತಿ, ಭರತನಾಟ್ಯ ಕಲಾವಿದೆ, ಜತೆಗೆ ಉದ್ಯಮಿ. ಈಗ ಹೈದರಾಬಾದ್​ ಬಿಜೆಪಿ ಅಭ್ಯರ್ಥಿ. ಅಷ್ಟಾಗಿದ್ರೆ, ಆಕೆ ಬಗ್ಗೆ ಯಾರೂ ಗಮನ ಹರಿಸ್ತಿರಲಿಲ್ಲ. ಮಾಧವಿ ಲತಾ ಕಣಕ್ಕಿಳಿದಿರೋದು ಎಐಎಂಎಂ ಸಂಸದ ಅಸಾದುದ್ದೀನ್ ಓವೈಸಿ ಎದುರು. ಶತಾಯಗತಾಯ ಈ ಬಾರಿ ಓವೈಸಿ ಮಣಿಸಲೇಬೇಕೆಂದು ಹಠಕ್ಕೆ ಬಿದ್ದಿರೋ ಬಿಜೆಪಿ, ಓವೈಸಿ ಎಂಬ ಕಟ್ಟಾ ಮುಸ್ಲಿಂ ನಾಯಕನ ಎದುರು ಹಿಂದೂ ಫೈರ್​ ಬ್ರಾಂಡ್ ಮಾಧವಿ ಲತಾರನ್ನು ಅಖಾಡಕ್ಕೆ ತಂದಿದೆ.  ಹೈದರಾಬಾದ್​​ಲ್ಲಿ ಸತತ 4 ದಶಕಗಳಿಂದ ಸಂಸದನಾಗಿ ಆಯ್ಕೆಯಾಗ್ತಿರೋ ಅಸಾದುದ್ದೀನ್ ಓವೈಸಿಗೆ ಪ್ರತಿ ಎಲೆಕ್ಷನ್​ ನೀರು ಕುಡಿದಷ್ಟೇ ಸುಲಭವಾಗ್ತಿತ್ತು. ಓವೈಸಿ ಎದುರು ಎಂಥವರೇ ನಿಂತರೂ, ಸೋಲುಣ್ಣುತ್ತಿದ್ರು. ಆದ್ರೆ ಈ ಬಾರಿ ಎಲೆಕ್ಷನ್​ ಚಿತ್ರಣವೇ ಬದಲಾಗಿದೆ. ಹಿಂದೂ ಬೆಂಕಿ ಚೆಂಡು ಎಂದೇ ಖ್ಯಾತಿ ಗಳಿಸಿರೋ ಮಾಧವಿ ಲತಾ, ಓವೈಸಿ ಮಣಿಸಲು ರಣರಂಗಕ್ಕಿಳಿದಿದ್ದಾರೆ. 

ಹಿಂದುತ್ವದ ಬಗೆಗಿನ ತನ್ನ ಖಡಕ್ ಮಾತುಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ ಮಾಧವಿ ಲತಾ, ಹಿಂದುತ್ವವಾದಿ, ಧರ್ಮ, ಸಿದ್ಧಾಂತದ ವಿಷಯದಲ್ಲಿ ನಿಪುಣೆ. 
'ತಾನು ಆರೆಸ್ಸೆಸ್ ಸಂಘಟಕನ​ ಮಗಳು' ಎಂದು ಘೋಷಿಸಿಕೊಂಡಿರೋ ಮಾಧವಿ ಲತಾ, ಹೈದರಾಬಾದ್​ ಹಿಂದೂಗಳ ಹಾಟ್ ಫೇವರಿಟ್. ಈ ಬಾರಿ ಬಿಜೆಪಿ ಲೋಕಸಭೆ ಎಲೆಕ್ಷನ್​ಗೆ ಹೈದರಾಬಾದ್​ನಲ್ಲಿ ಓವೈಸಿ ವಿರುದ್ಧ ಮಾಧವಿ ಲತಾ ಹೆಸರು ಪ್ರಕಟಿಸುತ್ತಿದ್ದಂತೆ, ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. 

BJP Hyderabad Candidate: ಓವೈಸಿ ವಿರುದ್ಧ ಹೋರಾಟಕ್ಕೆ ಮಾಧವಿ ಲತಾಗೆ ಮುಸ್ಲಿಂ ಹೆಣ್ಮಕ್ಕಳ ಬೆಂಬಲ!

ಅದುವರೆಗೂ ಮಾಧವಿ ಲತಾ ಬಗ್ಗೆ ಅಷ್ಟೇನು ತಿಳಿದುಕೊಳ್ಳದ ಜನರೂ, ಹಿಂದೂ ಫೈರ್​ ಬ್ರಾಂಡ್​​ ಹಿನ್ನೆಲೆ ತಿಳಿದು ಕೊಳ್ಳಲು ಗೂಗಲ್ ಮಾಡ ತೊಡಗಿದ್ರು. ಆಕೆಯ ಬೆಂಕಿಯಂಥ ಮಾತು, ಹಿಂದುತ್ವದ ಬಗೆಗಿನ ಗಟ್ಟಿ ದನಿ ಎಲ್ಲರನ್ನೂ ಆಕರ್ಷಿಸಿತು. 49 ವರ್ಷದ ಮಾಧವಿ ಲತಾ, ಓವೈಸಿಯನ್ನು ಸುಲಭವಾಗಿ ಸೋಲಿಸಿ ಬಿಡುತ್ತಾರಾ ಅನ್ನೋ ಅನುಮಾನವೂ ಮೂಡಿತು. ಯಾಕಂದ್ರೆ, ಓವೈಸಿ ಹಿನ್ನೆಲೆಯೇ ಅಂಥದ್ದು. 

ಓವೈಸಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹೈದರಾಬಾದ್​ನಲ್ಲಿ ನಾಲ್ಕು ದಶಕಗಳಿಂದ ಓವೈಸಿ ಕುಟುಂಬದ ಪಾರುಪತ್ಯವಿದೆ.  ಇಂಥ ಕ್ಷೇತ್ರದಲ್ಲಿ ಮೊದಲ ಬಾರಿಗೆ 'ಹಿಂದೂ ಲೇಡಿ ಫೈಯರ್' ಓವೈಸಿಗೆ ಸವಾಲಾಗಿ ನಿಂತಿದ್ದಾರೆ. 1984ರಿಂದ ಈ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದವರು ಓವೈಸಿ ತಂದೆ ಸಲಾವುದ್ದೀನ್.  ಹೈದರಾಬಾದ್ ಲೋಕಸಭಾ ಕ್ಷೇತ್ರವು ಬಹದ್ದೂರ್‌ಪುರ, ಚಂದ್ರಾಯನಗುಟ್ಟ, ಚಾರ್ಮಿನಾರ್, ಗೋಶಾಮಹಲ್, ಕಾರ್ವಾನ್, ಮಲಕ್‌ಪೇಟ್ ಮತ್ತು ಯಾಕತ್‌ಪುರ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಗೋಶಾಮಹಲ್​ ಹೊರತುಪಡಿಸಿ ಉಳಿದ ಎಲ್ಲ ಅಸೆಂಬ್ಲಿ ಕ್ಷೇತ್ರಗಳೂ ಎಐಎಂಐಎಂ ಹಿಡಿತದಲ್ಲಿದೆ. ಗೋಶಾಮಹಲ್ ಅನ್ನು ಬಿಜೆಪಿಯ ಫೈರ್‌ಬ್ರಾಂಡ್ ಹಿಂದೂ ನಾಯಕ ರಾಜಾ ಸಿಂಗ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ತ್ರಿವಳಿ ತಲಾಖ್ ಬಗ್ಗೆ ಅರಿವು ಮೂಡಿಸಿದ್ದ ಮಾಧವಿ:
2004ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಗೆದ್ದ ಅಸಾದುದ್ದೀನ್​ ಓವೈಸಿ, ಮತ್ತೆ ಹಿಂದಿರುಗಿ ನೋಡಿಲ್ಲ. ಅಂಥ ಓವೈಸಿಗೆ ಎದುರು ಬದುರು ನಿಂತಿರುವ ಮಾಧವಿ ಲತಾ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡಿದ್ದು ತ್ರಿವಳಿ ತಲಾಖ್ ವೇಳೆ. ತ್ರಿವಳಿ ತಲಾಖ್​ ರದ್ದು ಬಗ್ಗೆ ಮುಸ್ಲಿಂ ಮಹಿಳೆಯರಲ್ಲಿ ಅರಿವು ಮೂಡಿಸಲು ಬೀದಿಗಿಳಿದ ಮಾಧವಿ ಲತಾ, ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡು, ಬೀದಿ ಬೀದಿ ಅಲೆದರು. ಮುಸ್ಲಿಂ ಮಹಿಳೆಯರು ಅನುಭವಿಸುತ್ತಿರುವ ಶೋಷಣೆ, ಬಡತನ, ವಿದ್ಯಾಭ್ಯಾಸದಿಂದ ವಂಚಿತರಾಗಿರುವುದನ್ನೇ ಪ್ರಮುಖ ಅಸ್ತ್ರ ಮಾಡಿಕೊಂಡು, ತನ್ನ ಖಡಕ್​ ಮಾತುಗಳಿಂದ ಮಹಿಳೆಯರ ಮನ ಗೆಲ್ಲ ತೊಡಗಿದ್ರು.

ಕಳೆದ ಒಂದು ವರ್ಷದಿಂದ ಈ ಕ್ಷೇತ್ರದಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿರುವ ಮಾಧವಿ, 'ಒಂದು ವರ್ಷದಿಂದ ಪ್ರತಿದಿನ, ಎಲ್ಲ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ದಿನಕ್ಕೆ 11 ರಿಂದ 12 ಗಂಟೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಏನೂ ಇಲ್ಲ, ಸ್ವಚ್ಛತೆ ಇಲ್ಲ, ಶಿಕ್ಷಣವಿಲ್ಲ, ಮದರಸಾಗಳಲ್ಲಿ ಮಕ್ಕಳಿಗೆ ಆಹಾರವಿಲ್ಲ, ಮುಸ್ಲಿಂ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಹಿಂದೂ ದೇವಾಲಯಗಳು ಮತ್ತು ಮನೆಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗುತ್ತಿದೆ,' ಎಂಬ ಸಂಗತಿಗಳನ್ನು ಮಾಧವಿ ಹೊರಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಒವೈಸಿ ವಿರುದ್ಧ ಕಣಕ್ಕಿಳಿದ ಬಿಜೆಪಿ ಮಾಧವಿ ಲತಾಗೆ ಕೇಂದ್ರದಿಂದ ವೈ ಪ್ಲಸ್ ಭದ್ರತೆ!

ಅಷ್ಟೇ ಅಲ್ಲ, ಹಳೆ ಹೈದರಾಬಾದ್​ನಲ್ಲಿ ಹಿಂದೂ ಮತಗಳನ್ನು ಗಟ್ಟಿಸುತ್ತಿದ್ದಾರೆ. ಓವೈಸಿ ತವರಲ್ಲಿ ಮಾಧವಿಯ ಮಿಂಚಿನ ಸಂಚಾರ ಹಿಂದೂಗಳಲ್ಲಿ ಉತ್ಸಾಹ ಮೂಡಿಸಿರುವುದಂತೂ ನಿಜ. ಮಾಧವಿ ಮಾತಿನ ವೈಖರಿಗೆ ಪ್ರಧಾನಿ ಮೋದಿ ಸಹ ಫಿದಾ ಆಗಿದ್ರು. ‘ಆಪ್ ಕಿ ಅದಾಲತ್’ನಲ್ಲಿನ ಮಾಧವಿ ಸಂದರ್ಶನ ನೋಡಿ ಟ್ವೀಟ್ ಮಾಡಿದ್ದ ಮೋದಿ, ಮಾಧವಿ ಲತಾರ ಬೆನ್ನು ತಟ್ಟಿದ್ರು. ಮೋದಿ ಮಾತಿನಿಂದ ಇನ್ನಷ್ಟು ಉತ್ಸುಕರಾಗಿರುವ ಮಾಧವಿ ಲತಾ, ಓವೈಸಿ ಎದುರು ಗೆಲ್ಲುವ ನಂಬಿಕೆಯಲ್ಲಿದ್ದಾರೆ. ಮುಸ್ಲಿಮರ ನೆಲದಲ್ಲಿ ಮಾಧವಿ ಕಮಲ ಅರಳಿಸ್ತಾರಾ ಅನ್ನೋದಕ್ಕೆ ಜೂನ್ ನಾಲ್ಕಕ್ಕೆ ಉತ್ತರ ಸಿಗಲಿದೆ.

Follow Us:
Download App:
  • android
  • ios