ಯೂಟ್ಯೂಬ್ ಚಾನೆಲ್ ಆರಂಭಿಸಿದ್ಯಾಕೆ ? ಅದಿತಿ ಪ್ರಭುದೇವ ಮನದಾಳದ ಮಾತು
ಇತ್ತೀಚೆಗೆ ಹೆಚ್ಚು ಕಡಿಮೆ ಎಲ್ಲರೂ ತಮ್ಮದೊಂದು ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಒಂದಷ್ಟು ವಿಚಾರ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿಯೂ ಸಿನಿಮಾ ನಟಿಯರೇ ಸ್ವತಃ ಚಾನೆಲ್ ಶುರು ಮಾಡಿದ್ದನ್ನೂ ನೋಡಿದ್ದೇವೆ. ಆದರೆ ನಟಿ ಅದಿತಿ ಪ್ರಭುದೇವ ಮಾತ್ರ ಉಳಿದವರಿಗಿಂತ ವಿಭಿನ್ನ ಸ್ಥಾನ ಪಡೆದುಕೊಂಡಿರುವುದು ನಿಜ.
- ಶಶಿಕರ ಪಾತೂರು
ನಟಿಯೊಬ್ಬಳಲ್ಲಿನ ವೈವಿಧ್ಯತೆಯನ್ನು ಪಾತ್ರಗಳಾಗಿ ಪರದೆಯ ಮೇಲೆ ಮಾತ್ರ ನೋಡುತ್ತೇವೆ. ಆದರೆ ವೈಯಕ್ತಿಕವಾಗಿ ಬಹಳ ಮಂದಿ ಎಷ್ಟೊಂದು ನೀರಸ ಅನಿಸಿಬಿಡುತ್ತಾರೆ! ಬ್ಯೂಟಿ ಟಿಪ್ಸ್ ಹೇಳೋದು ಬಿಟ್ಟರೆ ತಮಗೆ ಪ್ರಪಂಚದ ಬೇರೆ ಜ್ಞಾನವೇ ಇಲ್ಲವೇನೋ ಎನ್ನುವ ಅವರ ವರ್ತನೆಯೇ ಅದಕ್ಕೆ ಕಾರಣವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಪರದೆಯ ಮೇಲಿನ ನಾಯಕಿಗಿಂತಲೂ ಗುಣವತಿಯಂತೆ, ಬಹುಮುಖ ಪ್ರತಿಭೆಯಂತೆ ನಿಜ ಜೀವನದಲ್ಲಿದ್ದೇನೆ ಎಂದು ತೋರಿಸಿಕೊಟ್ಟು ಬೆರಗು ಮೂಡಿಸಿದವರು ಅದಿತಿ ಪ್ರಭುದೇವ(Adithi Prabhudeva). ಚಿತ್ರ ಬಿಡಿಸುವ, ಹಾಡು ಹಾಡುವ, ಬೊಂಬೆ ರಚಿಸುವ ಮಾತ್ರವಲ್ಲ ಹಳ್ಳಿಮನೆ ಕೆಲಸ ಮಾಡುವ ಮೂಲಕ ನಿಜಕ್ಕೂ ಇದು ಅದಿತಿಯೇನಾ ಎಂದು ಸಾಮಾನ್ಯರಲ್ಲಿ ಸಂದೇಹ ತಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಪ್ರಮುಖ ತಾರೆಯಾಗಿ ಗುರುತಿಸಿರುವಾಗಲೇ ನಿಮಗೆ ಯೂಟ್ಯೂಬ್‌ನಲ್ಲಿ ಕೂಡ ಸಕ್ರಿಯಗೊಳ್ಳಬೇಕು ಅನಿಸಿದ್ದು ಯಾಕೆ?
ಸಿನಿಮಾ ಅಂದರೆ ನಿರ್ದೇಶಕರ ಸ್ವತ್ತು. ಒಂದು ಪಾತ್ರವನ್ನು ನಾನು ಒಪ್ಪಿಕೊಂಡಿದ್ದೇನೆ ಎಂದ ಮಾತ್ರಕ್ಕೆ ಆ ಪಾತ್ರದ ವರ್ತನೆಗಳೆಲ್ಲ ನನ್ನದಲ್ಲವಲ್ಲ? ಅದರಲ್ಲಿ ಪಾತ್ರದ, ನಿರ್ದೇಶಕರ ಪ್ರಭಾವವೇ ಅಧಿಕ. ನನ್ನ ಆರ್ಟಿಸ್ಟ್ ಬದುಕು ಹೇಗಿದೆ ಎಂದರೆ ನನ್ನ ಒರಿಜಿನಾಲಿಟಿ ಎಲ್ಲೋ ಒಂದು ಕಡೆ ಅಡಗಿ ಹೋಗುತ್ತಿದೆ ಅನಿಸಿತು. ಯಾಕೆಂದರೆ ಜನರ ದೃಷ್ಟಿಯಲ್ಲಿ ಒಬ್ಬರು ಹೀರೋ, ಹೀರೋಯಿನ್ ವೈಯಕ್ತಿಕ ಬದುಕಿನ ಬಗ್ಗೆ ಇಂದಿಗೂ ಒಂದು `ವಿಭಿನ್ನವಾದ’ ನಿರೀಕ್ಷೆಗಳಿರುತ್ತವೆ.
ಬಹುಶಃ ಕೆಲವರು ಹೀರೋಯಿನ್ ಆದ ಮೇಲೆ ನಿಜಕ್ಕೂ ವೈಯಕ್ತಿಕ ಬದುಕನ್ನು ವಿಚಿತ್ರವಾಗಿ ಬದಲಾಯಿಸಿಕೊಂಡಿರಬಹುದು. ಆದರೆ ಹಳ್ಳಿಯಿಂದ ಬಂದ ನಾನು ನನ್ನ ಬಾಲ್ಯದಲ್ಲಿ ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ಜೊತೆಗೆ ಪರಿಶ್ರಮ ಮತ್ತು ಗುರಿಯ ಕಡೆಗಿನ ಶ್ರದ್ಧೆ ಇದ್ದರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದು ನನ್ನ ನಂಬಿಕೆ. ಹಾಗಾಗಿ ಬಹಳಷ್ಟು ಮಂದಿಗೆ ಗೊತ್ತಿರದ ಈ ನನ್ನ ತನವೇನು ಎನ್ನುವುದನ್ನು ಪ್ರೇಕ್ಷರೊಂದಿಗೆ ಹಂಚಿಕೊಳ್ಳುವ ಆಸಕ್ತಿಯಿಂದಲೇ ಈ ಚಾನೆಲ್ ಶುರು ಮಾಡಿದೆ.
ಇನ್ನು ಸಂಗೀತ ಸಾಧನೆಯೇ ನನ್ನ ಗುರಿ- ಸಂದೇಶ್ ನೀರ್ ಮಾರ್ಗ
“ಹಳ್ಳಿಯ ಪಾತ್ರ ಮಾಡುವುದೇ ಕಷ್ಟ” ಎನ್ನುವ ನಟಿಯರ ನಡುವೆ ನೀವು ನಿಜಕ್ಕೂ ಹಳ್ಳಿ ಬದುಕನ್ನು ಆಸ್ವಾದಿಸಿ ತೋರಿಸುತ್ತೀರಲ್ಲ! ಅದು ಹೇಗೆ?
ನಾನು ನಿಜಕ್ಕೂ ಹಳ್ಳಿಯಿಂದ ಬಂದವಳೇ. ನಗರ ಸೇರಿ ನಾಯಕಿಯಾದರೂ ನನಗೆ ಹಳ್ಳಿ ಯಾವತ್ತೂ ಕಡಿಮೆ ಅನಿಸಿಲ್ಲ. ನಿಜಕ್ಕೂ ನನ್ನ ಮನಸ್ಸಲ್ಲಿ ಹಳ್ಳಿಗೆ ಉತ್ತಮ ಸ್ಥಾನ ನೀಡಿರುವುದರಿಂದಲೇ ಬದುಕನ್ನು ಎಂಜಾಯ್ ಮಾಡುವಂತೆ ಕಾಣಿಸಿಕೊಂಡಿರಬಹುದು. ಇಷ್ಟಕ್ಕೂ ನಮ್ಮ ಆಸ್ವಾದನೆಯ ಅಭಿರುಚಿ ಹೇಗಿರುತ್ತದೆ ಎನ್ನುವುದರ ಮೇಲೆ ಖುಷಿ ಆಧಾರವಾಗಿರುತ್ತದೆ. ಉದಾಹರಣೆಗೆ ನಾನು ನನ್ನಮ್ಮ, ಆಂಟಿಯಂದಿರನ್ನು ಹೊರಗೆ ಕರೆದೊಯ್ದು ಒಂದು ಕಡೆ ಗೋಬಿ ಕೊಡಿಸಿದರೆ ಅಷ್ಟಕ್ಕೇನೇ ಅವರೆಲ್ಲ ತುಂಬ ಖುಷಿಯಾಗುತ್ತಾರೆ. ಆದರೆ ನಮ್ಮ ಜನರೇಶನ್ ಮಂದಿ ಅಂಥದನ್ನು ಕಳೆದುಕೊಂಡಿದ್ದೇವೆ. ಇವರಿಗೆ ಒಳ್ಳೆಯ ಮಾಡೆಲ್ ಕಾರು ತಂದರೆ, ಐ ಪೋನ್ ಮೊಬೈಲ್ ಗಿಫ್ಟ್ ಸಿಕ್ಕರೆ ಆಗಲೇ ಖುಷಿ ಎನ್ನುವಂತಾಗಿದೆ! ಖುಷಿಯನ್ನು ಹೀಗೆ ಮೆಟಿರಿಯಲಿಸ್ಟಿಕ್ಕಾಗಿ ತಗೊಳ್ಳುವವರೇ ಹೆಚ್ಚು. ಆದರೆ ನನಗೆ ಸಹಜವಾದ ಹಸಿರು ಪ್ರಕೃತಿ ತುಂಬಿದ ವಾತಾವರಣವೇ ಖುಷಿ. ಬರಿಗಾಲಲ್ಲಿ ಓಡಾಡುವುದು, ಪುಟ್ಟ ಕೀಟಗಳು, ಸಣ್ಣ ಗಿಡದ ಹಣ್ಣುಗಳು, ಹೂವುಗಳು, ಎಲೆಗಳು ಎಲ್ಲವೂ ಲವಲವಿಕೆ ತುಂಬುತ್ತವೆ.
ಮುಂದಿನ ಚಿತ್ರದಲ್ಲಿ ನನಗೂ ಪ್ರಶಸ್ತಿ ಬರಬಹುದು - ಇಳಾ ವಿಟ್ಲ
ನಿಮ್ಮ ಯೂಟ್ಯೂಬ್ ವಾಹಿನಿ ನೋಡಿದ ಮೇಲೆ ನಿಮಗೆ ಸಿಗುವಂಥ ಪ್ರತಿಕ್ರಿಯೆಗಳು ಹೇಗಿವೆ?
ಆನ್ಲೈನ್ ಪ್ರತಿಕ್ರಿಯೆಗಳನ್ನು ನೀವೆಲ್ಲ ನೋಡಿರಬಹುದು. ಆದರೆ ಇತ್ತೀಚೆಗೆ ಒರಾಯನ್ ಮಾಲ್‌ಗೆ ಹೋದಾಗ ನೇರವಾಗಿ ಆದ ಅನುಭವವನ್ನು ಹೇಳಲೇಬೇಕು. ಅಲ್ಲಿ ನನ್ನ ತಾಯಿ ವಯಸ್ಸಿನ ಒಂದಷ್ಟು ಮಹಿಳೆಯರು ಸಿಕ್ಕಿದ್ರು. “ವರಮಹಾಲಕ್ಷ್ಮಿ ಪೂಜೆ ಎಷ್ಟು ಚೆನ್ನಾಗಿ ಮಾಡ್ದೆ ನೀನು.. ಗಣೇಶನ್ನಂತೂ ನೀನೇ ಕೈಯ್ಯಲ್ಲಿ ಮಾಡ್ದೆ.. ತುಂಬಾ ಚೆನ್ನಾಗಿತ್ತು” ಎಂದು ಅವರು ಆತ್ಮೀಯವಾಗಿ ಹೇಳಿಕೊಂಡಾಗ ನಿಜಕ್ಕೂ ನನಗೆ ಕಣ್ಣೆಲ್ಲ ತುಂಬಿಕೊಂಡಿತ್ತು.
ಯಾಕೆಂದರೆ ಯಾರದೋ ಅಮ್ಮಂದಿರು ನನ್ನ ಯೂಟ್ಯೂಬ್(YouTube) ನೋಡಿ ತಮ್ಮದೇ ಮಗಳನ್ನು ಮೆಚ್ಚುವಂತೆ ಅಷ್ಟೊಂದು ಆತ್ಮೀಯವಾಗಿ ಮಾತನಾಡಿದ್ರಲ್ಲ? ಅದೇ ಖುಷಿಯಾಯಿತು. ಯಾಕೆಂದರೆ ಅಷ್ಟೊಂದು ಪ್ರತಿಕ್ರಿಯೆ ನಾನೇ ನಿರೀಕ್ಷೆ ಮಾಡಿರಲಿಲ್ಲ. ಯೂಟ್ಯೂಬ್ ಮಾಡಿದ್ದಕ್ಕೂ ಸಾರ್ಥಕ ಅನಿಸಿತು. ಇಂಡಸ್ಟ್ರಿಯ ಸ್ನೇಹಿತರು ಕೂಡ ನೋಡಿ ಖುಷಿಯಾಯಿತು ಅಂತಾನೇ ಹೇಳ್ತಾರೆ.
ಕೆಟ್ಟ ಸರ್ಪ್ರೈಸ್ ಕೊಟ್ಟ ದೇವ್ರು - ರಮೇಶ್ ಅರವಿಂದ್
ನಿಮ್ಮ `ಅದಿತಿ ಪ್ರಭುದೇವ’ ಯೂಟ್ಯೂಬ್ ವಾಹಿನಿಯ ಅಭಿಮಾನಿಗಳನ್ನು ಮುಂದೆ ಹೇಗೆ ಮನರಂಜಿಸಬೇಕು ಎಂದುಕೊಂಡಿದ್ದೀರಿ?
ಸದ್ಯಕ್ಕೆ ಸಿನಿಮಾ ಶೂಟಿಂಗ್‌ನಲ್ಲಿದ್ದೀನಿ. ನಾಳೆಯಿಂದ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಇದೆ. `ಅಂದೊಂದಿತ್ತು ಕಾಲ’, `ಮ್ಯಾಟ್ನಿ’ ಮತ್ತು ಜಮಾಲಿ ಗುಡ್ಡ’ ಎನ್ನುವ ಮೂರು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ. ಆದರೆ ನೀವೇ ಹೇಳಿದಂತೆ ಯೂಟ್ಯೂಬ್‌ನಲ್ಲಿ ಕೂಡ ಅಭಿಮಾನಿಗಳು ಸೃಷ್ಟಿಯಾಗಿರುವ ಕಾರಣ ಸದಾ ಅವರಿಗೆ ಕೂಡ ಏನಾದರೊಂದು ಹೊಸತನದ ವಿಡಿಯೋ ಹಾಕುವ ಯೋಜನೆ ಇದೆ. ಬಿಡುವಾದಾಗಲೆಲ್ಲ ಶೂಟ್ ಮಾಡಿ ಇಡುತ್ತಿದ್ದೇನೆ. ನಮ್ಮ ಅಜ್ಜಿ ಮನೆಯ ಕಡೆಯಲ್ಲೆಲ್ಲ ಬೇರೆ ಬೇರೆ ರೀತಿಯ ಹಬ್ಬಗಳನ್ನು ಆಚರಿಸುತ್ತೇವೆ.
`ಚೋಂಗ್ಯಾ ಹಬ್ಬ’, `ಸೀಗಿ ಹುಣ್ಣಿಮೆ’, `ಕಾರು ಹುಣ್ಣಿಮೆ’ ಇವೆಲ್ಲ ಉತ್ತರ ಕನ್ನಡದಲ್ಲಿರುವ ವಿಭಿನ್ನವಾದ ಹಬ್ಬಗಳು.. ಇವುಗಳನ್ನು ತೋರಿಸುವುದು, ನಾನು ಹಾಡಿರುವ ಆಲ್ಬಂ ಹಾಡುಗಳ ಬಗ್ಗೆ ಅಥವಾ ನನ್ನಮ್ಮ ತುಂಬ ಚೆನ್ನಾಗಿ ಮಾಡುವ ಪೆಯಿಂಟಿಂಗ್ ಬಗ್ಗೆ ಇವೆಲ್ಲದರ ಬಗ್ಗೆ ತೋರಿಸಬೇಕು ಎಂದುಕೊಂಡಿದ್ದೇನೆ. ನಾನೇ ಕಾನ್ಸೆಪ್ಟ್, ಎಡಿಟಿಂಗ್‌ಗೆ ಎಲ್ಲ ಕುಳಿತುಕೊಳ್ಳುವುದರಿಂದ ಮುಂದೆ ಹೊಸ ಹುಡುಗರನ್ನು ಹಾಕಿ ಕಿರುಚಿತ್ರ ಮಾಡಿದರೂ ಅಚ್ಚರಿ ಇಲ್ಲ! ಒಳ್ಳೆಯ ಸಂದೇಶ ಇರುವ ಸಣ್ಣಪುಟ್ಟ ಕಿರುಚಿತ್ರ ಮಾಡಲು ಪ್ರಯತ್ನಿಸಬಹುದು ಅನ್ಸುತ್ತೆ.