ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯಾಗಿರುವ ಗೂಗಲ್‌ನಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಉದ್ಯೋಗಿ ಮೈತ್ರಿ ಮಂಗಲ್ ಅವರ ಮಾಸಿಕ ಖರ್ಚು 4.28 ಲಕ್ಷ ರೂ. ಆಗಿದೆ. ಅಂದರೆ, ಬಹುತೇಕ ಕಂಪನಿಗಳು ಫ್ರೆಶರ್ಸ್‌ಗೆ ಕೊಡುವ ವಾರ್ಷಿಕ ಸಂಬಳ ಇದಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. 

ಸಾಮಾನ್ಯವಾಗಿ ಹೊಸದಾಗಿ ಕೆಲಸಕ್ಕೆ ಸೇರಿದವರು ಅಥವಾ ಈಗಾಗಲೇ 10 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದವರಿಗೆ ವಾರ್ಷಿಕ 4 ರಿಂದ 5 ಲಕ್ಷ ರೂ. ಸಂಬಳ ಸಿಗಬಹುದು. ಪ್ರತಿಷ್ಠಿತ ಕಂಪನಿಗಳಲ್ಲಿ 1 ಲಕ್ಷದಿಂದ 5 ಲಕ್ಷ ರೂ. ಸಂಬಳ ಇರಬಹುದು. ಆದರೆ, ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯಾಗಿರುವ ಗೂಗಲ್‌ನ ಉದ್ಯೋಗಿ ಒಬ್ಬರು ತಿಂಗಳಿಗೆ 4.28 ಲಕ್ಷ ರೂ. ಹಣವನ್ನು ಖರ್ಚು ಮಾಡುತ್ತಾರಂತೆ. ಸ್ವತಃ ಗೂಗಲ್ ಕಂಪನಿಯ ಭಾರತೀಯ ಮೂಲದ ಉದ್ಯೋಗಿಯೇ ಈ ಬಗ್ಗೆ ಹೇಳಿಕೊಂಡಿದ್ದು, ವೈರಲ್ ವಿಡಿಯೋ ಇಲ್ಲಿದೆ ನೋಡಿ..

ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಮೈತ್ರಿ ಮಂಗಲ್ ಅವರು ತಮ್ಮ ಮಾಸಿಕ ಖರ್ಚುಗಳ ಲೆಕ್ಕಾಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ನೆಟ್ಟಿಗರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ. ಹೈಟೆಕ್ ಉದ್ಯೋಗ, ವಿದೇಶ ಜೀವನ, ಆಕರ್ಷಕ ಸಂಬಳದ ಹಿಂದಿನ ನಿಜಾಂಶವನ್ನು ಈ ವಿಡಿಯೋ ಬಹಿರಂಗಪಡಿಸುತ್ತಿದೆ.

ಮೈತ್ರಿ ಮಂಗಲ್, ಗೂಗಲ್‌ನಂತಹ ವಿಶ್ವದ ಅಗ್ರಗಣ್ಯ ಐಟಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪ್ರಕಾರ, ನ್ಯೂಯಾರ್ಕ್‌ನಲ್ಲಿ ತಿಂಗಳಿಗೆ ಖರ್ಚು ಸುಮಾರು ₹4.28 ಲಕ್ಷದಷ್ಟಿದೆ. ಈ ಲೆಕ್ಕಾಚಾರದಲ್ಲಿ ಬಾಡಿಗೆ ಮಾತ್ರವೇ ₹2.57 ಲಕ್ಷ. ದಿನನಿತ್ಯದ ಆಹಾರ, ಖರೀದಿ, ಪ್ರವಾಸ, ಇತರ ವೆಚ್ಚಗಳು ₹85,000 ರಿಂದ ₹1.71 ಲಕ್ಷದವರೆಗೆ ಹೋಗುತ್ತವೆ. ನಗರದಲ್ಲಿ ಓಡಾಡುವುದಕ್ಕೆ ಪ್ರತ್ಯೇಕವಾಗಿ ₹8,500 ರಿಂದ ₹17,000ರವರೆಗೆ ವೆಚ್ಚವಾಗುತ್ತದೆ. ಈ ಎಲ್ಲಾ ಖರ್ಚುಗಳನ್ನು ಸೇರಿಸಿದರೆ, ಮಾಸಿಕ ಜೀವನ ದೊಡ್ಡದಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಹೈಪ್ರೊಫೈಲ್ ಉದ್ಯೋಗದವರ ಜೀವನದ ಲೆಕ್ಕ ಚಿಕ್ಕದಲ್ಲ:

ಇನ್ನು ಮೈತ್ರಿ ವಾರ್ಷಿಕ ₹1.3 ಕೋಟಿ ರಷ್ಟು ಸಂಬಳವಿರುವ ಹೈಪ್ರೊಫೈಲ್ ಸಾಫ್ಟ್‌ವೇರ್ ಇಂಜಿನಿಯರ್ ಆದರೂ, ನ್ಯೂಯಾರ್ಕ್‌ನಂತಹ ಮಹಾನಗರದಲ್ಲಿ ಜೀವನ ನಿರ್ವಹಣೆ ವೆಚ್ಚವೂ ಜಾಗತಿಕ ಮಟ್ಟದಲ್ಲಿಯೇ ಇರುತ್ತದೆ. ಉತ್ತಮ ತಂತ್ರಜ್ಞಾನದ ಉದ್ಯೋಗಗಳು, ಉದ್ಯೋಗ ಭದ್ರತೆ ಮತ್ತು ಸವಲತ್ತುಗಳ ಜತೆಗೆ ಇಂತಹ ನಗರಗಳಲ್ಲಿ ಖಾಸಗಿ ವಸತಿ, ಆಹಾರ ಮತ್ತು ಪ್ರವಾಸ ತೀವ್ರ ಖರ್ಚುಗಳನ್ನು ತಂರುತ್ತದೆ. ಹೀಗಾಗಿ ಸಂಬಳ ಹೆಚ್ಚು ಇದ್ದರೂ ಉಳಿತಾಯ ಮಾತ್ರ ಕಡಿಮೆಯಾಗುತ್ತದೆ ಎಂಬುದು ಇವರ ವಾದವಾಗಿದೆ.

View post on Instagram
 

 

ವಿಡಿಯೋ ವೈರಲ್:

ಈ ಆರ್ಥಿಕ ಲೆಕ್ಕಾಚಾರವನ್ನು ವಿಡಿಯೋವನ್ನು ಕುಶಾಲ್ ಲೋಧಾ ಎಂಬವವರು (@kushallodha548) ಹಂಚಿಕೊಂಡಿದ್ದಾರೆ. ಕುಶಾಲ್ ಲೋಧಾ ಪಾಡ್‌ಕ್ಯಾಸ್ಟರ್ ಆಗಿದ್ದು ವೃತ್ತಿ, ತಂತ್ರಜ್ಞಾನ ಮತ್ತು ವಿದೇಶ ಜೀವನ ಹೀಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾಹಿ ಹಂಚಿಕೊಳ್ಳುತ್ತಾರೆ. ಇದೀಗ ಮೈತ್ರಿ ಮಂಗಲ್ ಅವರ ಆರ್ಥಿಕ ಜೀವನ, ಖರ್ಚು-ವೆಚ್ಚ ಹಾಗೂ ಉಳಿತಾಯದ ಬಗ್ಗೆಯೂ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಹಲವು ಮಂದಿ ಯುವ ಉದ್ಯೋಗಿಗಳು ಹಾಗೂ ವಿದೇಶಕ್ಕೆ ಹೋಗಲು ಆಸೆಪಡುವವರು ವಿಡಿಯೋ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ. ಇದು 'ಅತ್ಯಂತ ಉಪಯುಕ್ತ ಮಾಹಿತಿ, ಆದರೆ ಇನ್ನೂ ಆಳವಾದ ಮಾಹಿತಿ ಬೇಕಿತ್ತು' ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನಷ್ಟು ವಿವರವಾದ ಆರ್ಥಿಕ ರೂಪರೇಷೆಗಳ ಬಗ್ಗೆ ಮಾಹಿತಿ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.