Russia- Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

Prashant Natu |   | Asianet News
Published : Mar 04, 2022, 08:43 AM ISTUpdated : Oct 20, 2022, 05:46 PM IST
Russia- Ukraine Crisis: ಏನಿವು ವಾರ್ಸಾ ಮತ್ತು ನ್ಯಾಟೋ? ರಷ್ಯಾಗೇಕೆ ಉಕ್ರೇನ್ ಮೇಲೆ ಸಿಟ್ಟು.?

ಸಾರಾಂಶ

ಈ ಯುದ್ಧಗಳ ಕ್ರೌರ್ಯ ಧ್ವಂಸತೆಯ ಇತಿಹಾಸ ಎಂದಿಗೂ ಹಿಟ್ಲರ್‌, ಮುಸಲೋನಿ, ಸ್ಟಾಲಿನ್‌ ಮತ್ತು ಈಗ ಪುಟಿನ್‌ ಥರದ ಸರ್ವಾಧಿಕಾರಿಗಳನ್ನು ಕ್ಷಮಿಸುವುದಿಲ್ಲ ಹೌದು. ಆದರೆ ಅವರ ಎದುರಿಗೆ ನಿಂತ ದೇಶಗಳೂ ವಸಾಹತುಶಾಹಿಗಳೇ. 

ಸರ್ವಾಧಿಕಾರಿಗಳ ಮಹತ್ವಾಕಾಂಕ್ಷೆ ಬರೀ ತನ್ನ ಗಡಿಯೊಳಗಿನ ಅಪರಿಮಿತ ಅಧಿಕಾರ ಪ್ರಾಪ್ತಿಗೆ ಸೀಮಿತವಾಗಿರುವುದಿಲ್ಲ. ಅದು ಗಡಿಯಾಚೆಗೂ ವ್ಯಾಪಿಸಿ, ಎಷ್ಟುಸಾಧ್ಯವೋ ಅಷ್ಟುಭೂಮಿಯನ್ನು ಪ್ರತ್ಯಕ್ಷ ಮತ್ತು ಪರೋಕ್ಷ ರೂಪದಲ್ಲಿ ನಿಯಂತ್ರಿಸಿ ಆರ್ಥಿಕ ಮಹಾಸತ್ತೆ ಆಗುವ ಇರಾದೆ ಹೊಂದಿರುತ್ತದೆ ಎಂದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಗೊತ್ತಾಗುತ್ತದೆ. ಈಗ ರಷ್ಯಾ, ಉಕ್ರೇನ್‌ ಮೇಲೆ ನಡೆಸುತ್ತಿರುವ ದಾಳಿ ಆದೇ ಇತಿಹಾಸದ ಪುನರಾವರ್ತನೆ ಅಷ್ಟೇ.

ಆಗ ಅಡಾಲ್ಫ್‌ ಜರ್ಮನ್‌ ಜನರ ಮಾರಣಹೋಮ ನಡೆಸಲಾಗುತ್ತಿದೆ ಎಂದು 1938ರಲ್ಲಿ ಆಸ್ಟ್ರಿಯಾ, ಝೆಕೊಸ್ಲೋವಾಕಿಯಾಗಳನ್ನು ಕಬಳಿಸಿದರೆ, ಈಗ ರಷ್ಯನ್‌ ಭಾಷಿಕರ ಮೇಲೆ ಅತ್ಯಾಚಾರದ ಆರೋಪ ಮಾಡುತ್ತಾ ವ್ಲಾಡಿಮಿರ್‌ ಪುಟಿನ್‌ ಉಕ್ರೇನ್‌ ಅನ್ನು ಧಂ್ವಸಗೊಳಿಸುತ್ತಿದ್ದಾರೆ. ಆಗ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ಯುದ್ಧದ ಗೊಡವೆ ಬೇಡ ಎಂದು ಆರಂಭದಲ್ಲಿ ಹಿಟ್ಲರ್‌ ಹೇಳಿದ್ದಕ್ಕೆಲ್ಲಾ ‘ಹ್ಞೂ’ ಎನ್ನುತ್ತಾ ಎರಡನೇ ಮಹಾಯುದ್ಧಕ್ಕೆ ಕಾರಣರಾದರೆ, ಈಗ ಅಮೆರಿಕ ಮತ್ತು ಯುರೋಪ್‌ ಪಾಪದ ಉಕ್ರೇನ್‌ ಅನ್ನು ಒಬ್ಬೊಂಟಿಯಾಗಿ ಹುಲಿ ಬಾಯಿಗೆ ಬಿಟ್ಟು ಬರೀ ಮಾತಿನ ಬಾಣವನ್ನು ಬಿಡುತ್ತಾ ಕುಳಿತಿವೆ. ಚಕ್ರವರ್ತಿ ಆಗಬೇಕು ಎಂದು ಹೊರಟಿರುವ ಮಹತ್ವಾಕಾಂಕ್ಷಿ ರಾಜನ ಹಸಿವು ಒಂದು ಯುದ್ಧ ಗೆದ್ದು ಬಿಟ್ಟರೆ ಮುಗಿಯಲ್ಲ, ಅದು ಜಾಸ್ತಿಯಾಗುತ್ತಲೇ ಹೋಗುತ್ತದೆ ಎನ್ನುವುದು ಇತಿಹಾಸವೇ ಕಲಿಸಿದ ಪಾಠ.

Russia Ukraine Crisis: ಪುಟಿನ್ ಅಂತಿಮವಾಗಿ ಸಾಧಿಸಲು ಹೊರಟಿರುವುದು ಏನನ್ನು?

ಹಿಟ್ಲರ್‌ ಕಾಲದಲ್ಲಿ ಏನಾಗಿತ್ತು?

1918ರ ಮೊದಲನೇ ಮಹಾಯುದ್ಧದಲ್ಲಿ ಸೋತಿದ್ದ ಜರ್ಮನಿ ಮೇಲೆ ಇತರ ಯುರೋಪಿಯನ್‌ ರಾಷ್ಟ್ರಗಳು ವಿಪರೀತ ಯುದ್ಧ ದಂಡವನ್ನು ವಿಧಿಸುವುದರ ಜೊತೆಗೆ ಶಸ್ತ್ರಾಸ್ತ್ರಗಳ ಕ್ರೋಢೀಕರಣದ ಮೇಲೆ ನಿಷೇಧ ಹಾಕಿದ್ದವು. ಜರ್ಮನಿಗಾದ ಈ ಅಪಮಾನವನ್ನೇ ಬಳಸಿಕೊಂಡು 1933ರಲ್ಲಿ ಅಧಿಕಾರಕ್ಕೆ ಬಂದ ಹಿಟ್ಲರ್‌ ಮೊದಲ 5 ವರ್ಷ ದೇಶದ ಒಳಗೆ ಯಹೂದಿಗಳು, ಕಮ್ಯುನಿಸ್ಟರು ಹೀಗೆ ವೈಚಾರಿಕ ವಿರೋಧಿಗಳನ್ನು ಸೆರೆಮನೆಗೆ ಅಟ್ಟಿದ. 1938ರಲ್ಲಿ ಆಸ್ಟ್ರಿಯಾವನ್ನು ಹಿಟ್ಲರ್‌ ಗೆದ್ದಾಗ ಬ್ರಿಟನ್‌, ಫ್ರಾನ್ಸ್‌ ಏನೂ ಮಾತಾಡಲಿಲ್ಲ. ಆದರೆ ಅದಾದ 6 ತಿಂಗಳಲ್ಲಿ ಝೆಕೋಸ್ಲೋವಾಕಿಯಾದ ಗಡಿಯಲ್ಲಿ ಜರ್ಮನಿ ಸೇನೆ ಜಮಾವಣೆ ಆಯಿತು.

ಕೂಡಲೇ ಹಿಟ್ಲರ್‌ ಭೇಟಿಗೆ ಹಾರಿ ಬಂದ ಬ್ರಿಟನ್‌ ಪ್ರಧಾನಮಂತ್ರಿ ನೆವಿಲ್ಲೇ ಚಂಬರ್ಲಿನ್‌, ‘ಸ್ಲೋವಾಕಿಯಾದ 2 ಪ್ರಾಂತ್ಯಗಳನ್ನು ಕೊಡಿ, ಮುಂದೆ ಎಂದೂ ಯುದ್ಧ ಮಾಡುವುದಿಲ್ಲ’ ಎಂಬ ಹಿಟ್ಲರ್‌ ಮಾತಿಗೆ ಮರುಳಾಗಿ ಮ್ಯೂನಿಕನಲ್ಲಿ ಶಾಂತಿ ಒಪ್ಪಂದ ಮಾಡಿಕೊಂಡರು. ಅದಾದ 6 ತಿಂಗಳಲ್ಲಿ ಝೆಕ್‌ನ ಪ್ರೇಗ್‌ಅನ್ನು ಗುಳುಂ ಮಾಡಿದ್ದ ಹಿಟ್ಲರ್‌ ಸೇನೆ ಪೋಲೆಂಡ್‌ ಮೇಲೆ ದಾಳಿ ಮಾಡಿತು. ಆಗ ಎಚ್ಚೆತ್ತುಕೊಂಡ ಬ್ರಿಟನ್‌ ಮೇಲೆ ಯುದ್ಧ ಘೋಷಿಸಿತು. ಆದರೆ ಅಷ್ಟರಲ್ಲಿ ತುಂಬಾ ತಡವಾಗಿ ಹೋಗಿತ್ತು.

1938ರ ಯುರೋಪ್‌ ಮತ್ತು 2022ರ ಯುರೋಪಿನ ಮಹತ್ವಾಕಾಂಕ್ಷೆಗಳ ತಾಕಲಾಟ ಒಳ ರಾಜಕಾರಣ ಮತ್ತು ಧ್ವಂಸತೆಯ ದೃಶ್ಯಗಳು ಎಲ್ಲವನ್ನೂ ತಾಳೆ ಹಾಕಿ ನೋಡಿ. ಆಗ ಝೆಕೋಸ್ಲೋವಾಕಿಯಾ ಇದ್ದ ಸ್ಥಿತಿಯಲ್ಲಿ ಉಕ್ರೇನ್‌ ಇದೆ. ಆಗ ಹಿಟ್ಲರ್‌ ಇದ್ದ ಜಾಗೆಯಲ್ಲಿ ಈಗ ಪುಟಿನ್‌ ಇದ್ದಾರೆ, ಅಷ್ಟೇ ವ್ಯತ್ಯಾಸ. ಸ್ವಾಭಿಮಾನ, ದೇಶಾಭಿಮಾನ ಮತ್ತು ಜನಾಂಗದ ಅಭಿಮಾನ ರಾಷ್ಟ್ರದ ವೈಭವಕ್ಕಾಗಿ ಅತಿ ಅವಶ್ಯಕ. ಆದರೆ ಅದರ ಹೆಸರಿನ ಮೇಲೆ ಶತ್ರುಗಳನ್ನು ಸೃಷ್ಟಿಸಿ ಸಾವಿರಾರು ಅಮಾಯಕರ ಸಮಾಧಿ ಮೇಲೆ ಕಟ್ಟುವ ಸಾಮ್ರಾಜ್ಯಗಳು ಅನರ್ಥಕಾರಿ.

ಉಕ್ರೇನ್‌ ಮೇಲೇಕೆ ಮೋಹ?

ಇತಿಹಾಸದ ಪುಟಗಳನ್ನು ತಿರುವಿದಾಗ ಈಗಿನ ಉಕ್ರೇನಿನ ರಾಜಧಾನಿ ಕೀವ್‌ಗೆ 1000 ಸಾವಿರ ವರ್ಷಗಳ ಇತಿಹಾಸವಿದ್ದು, ಅದಕ್ಕೆ ಹೋಲಿಸಿದರೆ ರಷ್ಯಾ ರಾಜಧಾನಿ ಮಾಸ್ಕೋ ತೀರಾ ಹೊಸತು. 10ನೇ ಶತಮಾನದಲ್ಲೇ ಕೀವ್‌ನಲ್ಲಿ ಆಳುತ್ತಿದ್ದ ರಾಜ ವ್ಲಾಡಿಮಿರ್‌ ಕ್ರಿಶ್ಚಿಯನ್‌ ಧರ್ಮವನ್ನು ಮೊದಲು ಉಕ್ರೇನ್‌, ನಂತರ ರಷ್ಯಾಕ್ಕೆ ತಂದನು ಎಂದು ಹೇಳಲಾಗುತ್ತದೆ. ಅಲ್ಲಿಯವರೆಗೆ ಅಲ್ಲಿ ಸ್ಲಾವ್‌್ಸ ಬುಡಕಟ್ಟು ಜನರು ಇದ್ದರಂತೆ. ಹೀಗಾಗಿಯೇ ತನ್ನದೇ ಹೆಸರಿನ ರಾಜನ 52 ಅಡಿ ಪ್ರತಿಮೆಯನ್ನು ಮಾಸ್ಕೋದಲ್ಲಿ ಸ್ಥಾಪಿಸಿರುವ ಪುಟಿನ್‌ ರಷ್ಯಾ ಮತ್ತು ಉಕ್ರೇನ್‌ ಒಂದೇ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. 10ನೇ ಶತಮಾನದ ರಾಜ ಕ್ರಿಶ್ಚಿಯನ್‌ ಆಗಿದ್ದು ಕ್ರಿಮಿಯಾದಲ್ಲಿ ಎಂದು ಹೇಳಿಯೇ ಪುಟಿನ್‌ 2014ರಲ್ಲಿ ಅದನ್ನು ರಷ್ಯಾಗೆ ಸೇರಿಸಿಕೊಂಡಿದ್ದು. ಆದರೆ ಉಕ್ರೇನ್‌ ಜನ ಇದನ್ನು ಒಪ್ಪುವುದಿಲ್ಲ.

UP Election: ಯಾದವೇತರರು ಒಟ್ಟಿಗೆ ಬಂದರೆ ಬಿಜೆಪಿಗೆ ಲಾಭ, ಬರದೇ ಹೋದರೆ ಅಖಿಲೇಶ್‌ಗೆ ಲಾಭ

ಹಿಂದೆ ಸತತ ಯುದ್ಧಗಳು ನಡೆದು ಒಮ್ಮೆ ಹಂಗೇರಿ, ಒಮ್ಮೆ ಪೋಲೆಂಡ್‌ ರಷ್ಯಾ ಭಾಗ ಆಗಿದ್ದವೇ ಹೊರತು ನಮ್ಮದು ಸ್ವಾಯತ್ತ ರಾಷ್ಟ್ರ ಎಂಬುದು ಉಕ್ರೇನಿಗಳ ವಾದ. ಪೂರ್ವ ಯುರೋಪಿನಲ್ಲಿರುವ ಹಂಗೇರಿ, ಪೋಲೆಂಡ್‌, ಉಕ್ರೇನ್‌, ರಷ್ಯಾದಲ್ಲಿ ಕ್ರಿಶ್ಚಿಯನ್‌ ಧರ್ಮ ವ್ಯಾಪಿಸಿದ್ದು, ಬಹುತೇಕ 8ರಿಂದ 11ನೇ ಶತಮಾನದ ಆಸುಪಾಸಿನಲ್ಲಿಯೇ. 1917ರಲ್ಲಿ ರಷ್ಯಾದಲ್ಲಿ ಕಮ್ಯುನಿಸಂ ಪ್ರವೇಶಿಸಿದಾಗ ಉಕ್ರೇನ್‌ ಮೇಲೆ ಬರ್ಬರ ದಾಳಿ ಮಾಡಿತ್ತು. ನಂತರ ಬಲ ಪ್ರಯೋಗದಿಂದ 1991ರ ಕಮ್ಯುನಿಸಂ ಅಂತ್ಯದವರೆಗೆ ಅಂದರೆ 74 ವರ್ಷಗಳ ಕಾಲ ಸೋವಿಯತ್‌ ಯೂನಿಯನ್‌ ಜೊತೆಗಿತ್ತು. ಸೋವಿಯತ್‌ ವಿಘಟನೆ ಆದ ನಂತರ 1900 ಅಣ್ವಸ್ತ್ರಗಳನ್ನು ಉಕ್ರೇನ್‌ ರಷ್ಯಾಕ್ಕೆ ವಾಪಸ್‌ ಕೊಟ್ಟಿತ್ತು. ಆದರೆ ಈಗ ಪುಟಿನ್‌ಗೆ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮರಳಿ ಉಕ್ರೇನ್‌ ಬೇಕಿದೆ. ಅದಕ್ಕಾಗಿ ಸಾವಿರಾರು ಬಾಂಬ್‌ಗಳು, ಸಾವಿರಾರು ಕ್ಷಿಪಣಿಗಳನ್ನು ಎಸೆದು ಸಾವಿರಾರು ಅಮಾಯಕರ ರಕ್ತದ ಓಕುಳಿ ನಡೆಯುತ್ತಿದೆ. ಪುಟಿನ್‌ ಮಾಡುತ್ತಿರುವುದು ಕ್ರೌರ್ಯ, ಯಾವುದೇ ಕಾರಣಕ್ಕೂ ಅದು ಪುರುಷಾರ್ಥ ಅಲ್ಲ.

ಏನಿವು ವಾರ್ಸಾ ಮತ್ತು ನ್ಯಾಟೋ?

1945ರಲ್ಲಿ 2ನೇ ಮಹಾಯುದ್ಧ ಮುಗಿದ ನಂತರ ಅಮೆರಿಕ, ಕೆನಡಾ, ಪಶ್ಚಿಮ ಜರ್ಮನಿ, ಇಂಗ್ಲೆಂಡ್‌, ಫ್ರಾನ್ಸ್‌ನಂಥ ದೇಶಗಳು ಕೂಡಿಕೊಂಡು ನ್ಯಾಟೋ ಒಪ್ಪಂದಕ್ಕೆ ಸಹಿ ಹಾಕಿದರೆ, ಅದಕ್ಕೆ ವ್ಯತಿರಿಕ್ತವಾಗಿ ಸೋವಿಯತ್‌ ಯೂನಿಯನ್‌ ಜೊತೆ ಪೂರ್ವ ಯುರೋಪಿನ ಕಮ್ಯುನಿಸ್ಟ್‌ ಆಡಳಿತ ಇರುವ ಹಂಗೇರಿ, ಪೋಲೆಂಡ್‌, ಸ್ಲೋವಾಕಿಯಾ, ರೊಮೇನಿಯಾ, ಬಲ್ಗೇರಿಯಾದಂಥ ದೇಶಗಳು ವಾರ್ಸಾ ಒಪ್ಪಂದ ಮಾಡಿಕೊಂಡವು. ಅಂದರೆ ನ್ಯಾಟೋದ ಯಾವುದೇ ದೇಶ ವಾರ್ಸಾದ ದೇಶದ ಮೇಲೆ ದಾಳಿ ಮಾಡಿದರೆ ಎಲ್ಲರೂ ಸೇರಿ ಮಿಲಿಟರಿ ಬಳಸಿ ರಕ್ಷಣೆಗೆ ಧಾವಿಸುವುದು ಅನಿವಾರ್ಯ ಎಂಬುದು ಒಪ್ಪಂದ. ಆದರೆ 1991ರಲ್ಲಿ ಯಾವಾಗ ಸೋವಿಯತ್‌ ಒಕ್ಕೂಟ ಪತನವಾಯಿತೋ 30 ವರ್ಷಗಳಲ್ಲಿ ಪೋಲೆಂಡ್‌, ಹಂಗೇರಿ, ಸ್ಲೋವಾಕಿಯಾ ಜೊತೆಗೆ ಸೋವಿಯತ್‌ ಭಾಗ ಆಗಿದ್ದ ಎಸ್ಟೋನಿಯಾ, ಲಾಟವಿಯಾದಂಥ ದೇಶಗಳು ನ್ಯಾಟೋ ಜೊತೆಗಿವೆ ಹೊರತು ರಷ್ಯಾ ಜೊತೆಗಿಲ್ಲ. ಈಗ ಉಕ್ರೇನ್‌ ಕೂಡ ನ್ಯಾಟೋ ಸೇರಿಕೊಂಡರೆ ರಷ್ಯಾದ ಪ್ರಭಾವಕ್ಕೆ ಜಾಗೆಯೇ ಇಲ್ಲ. ಹೀಗಾಗಿ ಈ ಯುದ್ಧ.

ಅರ್ಧಂಬರ್ಧ ಅಮೆರಿಕನ್‌ ನೀತಿಗಳು

ಈ ಯುದ್ಧಗಳ ಕ್ರೌರ್ಯ ಧ್ವಂಸತೆಯ ಇತಿಹಾಸ ಎಂದಿಗೂ ಹಿಟ್ಲರ್‌, ಮುಸಲೋನಿ, ಸ್ಟಾಲಿನ್‌ ಮತ್ತು ಈಗ ಪುಟಿನ್‌ ಥರದ ಸರ್ವಾಧಿಕಾರಿಗಳನ್ನು ಕ್ಷಮಿಸುವುದಿಲ್ಲ ಹೌದು. ಆದರೆ ಅವರ ಎದುರಿಗೆ ನಿಂತ ದೇಶಗಳೂ ವಸಾಹತುಶಾಹಿಗಳೇ. ಹಿಟ್ಲರ್‌ ಮತ್ತು ಮುಸಲೋನಿಯನ್ನು ವಿರೋಧಿಸುತ್ತಿದ್ದ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ಜಗತ್ತಿನ ತುಂಬೆಲ್ಲಾ ಕಾಲೋನಿಗಳನ್ನು ಮಾಡಿಕೊಂಡ ದೇಶಗಳು. ಸ್ವಂತ ದೇಶದಲ್ಲಿ ಪ್ರಜಾಪ್ರಭುತ್ವ ಇದ್ದರೂ ಕಾಲೋನಿಗಳನ್ನು ಲೂಟಿ ಮಾಡಿ ತಮ್ಮ ಖಜಾನೆಗಳನ್ನು ತುಂಬಿಕೊಂಡವರು.

ಈಗ ಉಕ್ರೇನ್‌ ಮೇಲಿನ ರಷ್ಯಾ ದಾಳಿ ವಿರೋಧಿಸುವ ಅಮೆರಿಕದ್ದು ಕೂಡ ಅರ್ಧಂಬರ್ಧ ನೀತಿಗಳೇ. ಇರಾಕ್‌ ಮೇಲೆ ದಾಳಿ ನಡೆಸಿತು ವಾಪಸ್‌ ಬಂತು, ಸೋವಿಯತ್‌ ಅನ್ನು ಕಾಬೂಲ್‌ನಿಂದ ಓಡಿಸಲು ಒಸಾಮಾ ಕೈಯಲ್ಲಿ ದುಡ್ಡು ಮತ್ತು ಬಂದೂಕು ಕೊಟ್ಟಿತ್ತು; ಕೊನೆಗೆ ಅವು ತಮ್ಮದೇ ವಿರುದ್ಧ ಬಳಕೆ ಆದಾಗ ಅದೇ ಒಸಾಮಾನನ್ನು ಹಿಡಿಯಲು ಅಷ್ಘಾನಿಸ್ತಾನದ ಮೇಲೆ ದಾಳಿ ನಡೆಸಿತು, ಕೊನೆಗೆ ಅದನ್ನೂ ತಾಲಿಬಾನಿಗಳ ಕೈಯಲ್ಲಿ ಕೊಟ್ಟು ಓಡಿ ಬಂತು. ಪಾಕಿಸ್ತಾನಕ್ಕೆ ಆಧುನಿಕ ಶಸ್ತ್ರಗಳನ್ನು ನೀಡಿತು, ಅವೆಲ್ಲವೂ ಭಾರತದ ವಿರುದ್ಧ ಬಳಕೆ ಆಗುತ್ತಿದ್ದರೂ ನೋಡುತ್ತಾ ಕುಳಿತಿತ್ತು. ವ್ಯತ್ಯಾಸ ಏನು ಅಂದರೆ ಹಿಟ್ಲರ್‌ನಂಥವರು ಜರ್ಮನ್‌ ಹೆಮ್ಮೆಯ ಹೆಸರಿನಲ್ಲಿ, ಸ್ಟಾಲಿನ್‌ ಕಮ್ಯುನಿಸಂ ಹೆಸರಿನಲ್ಲಿ, ಈಗ ಪುಟಿನ್‌ ರಷ್ಯನ್‌ ಏಕೀಕರಣದ ಹೆಸರಿನಲ್ಲಿ ತೋರಿಸುವ ಕ್ರೌರ್ಯವನ್ನು ಅಮೆರಿಕ ಪ್ರಜಾಪ್ರಭುತ್ವದ ಮೌಲ್ಯಗಳ ಲೇಪ ಹಚ್ಚಿ ತೋರಿಸುತ್ತದೆ ಅಷ್ಟೇ. ಎಲ್ಲರ ಉದ್ದೇಶದ ಅಂತ್ಯ ಇಷ್ಟೇ ವಿಸ್ತರಣೆ, ಪ್ರಭಾವ ಹೆಚ್ಚಳ ಮತ್ತು ಆರ್ಥಿಕ ಕ್ರೋಢೀಕರಣ.

ಚೀನಾ ಏನು ಮಾಡುತ್ತಿದೆ?

ಉಕ್ರೇನ್‌ ಮೇಲಿನ ರಷ್ಯಾ ಅಕ್ರಮಣದಲ್ಲಿ ಯುರೋಪಿಯನ್‌ ದೇಶಗಳು, ಅಮೆರಿಕದ ನಿಲುವು ಏನಿದೆ ಎಂಬುದು ಜಗತ್ತಿಗೆ ಗೊತ್ತಿದೆ. ಆದರೆ ಕುತೂಹಲ ಇರುವುದು ಆರ್ಥಿಕವಾಗಿ ಬಲಾಢ್ಯವಾಗಿರುವ ರಾಷ್ಟ್ರ ಚೀನಾ ನಿಲುವಿನ ಬಗ್ಗೆ. ಅಮೆರಿಕ- ರಷ್ಯಾ ಕಂದಕದ ಮಧ್ಯೆ ನೆರೆಹೊರೆಯಲ್ಲಿದ್ದು ಅಣ್ವಸ್ತ್ರಗಳನ್ನು ಹೊಂದಿರುವ ಚೀನಾ-ರಷ್ಯಾ ಗೆಳೆತನ ಗಟ್ಟಿಯಾಗುತ್ತಿವೆ. ಚೀನಾ ಬಳಿ ಕಾರ್ಖಾನೆಗಳಿವೆ, ದುಡ್ಡು ಇದೆ. ರಷ್ಯಾ ಬಳಿ ಇಂಧನದ ಮೂಲಗಳಿವೆ. ರಷ್ಯಾದ ಯುದ್ಧ ಸಾಮಗ್ರಿ ತಯಾರಿಕಾ ಘಟಕಗಳಿಗೆ ಚೀನಾ ದೊಡ್ಡ ಮಾರುಕಟ್ಟೆಯೂ ಹೌದು.

ಒಂದು ಕಡೆ ಅಮೆರಿಕ, ರಷ್ಯಾದ ಗೋಧಿ ರಫ್ತಿಗೆ ನಿರ್ಬಂಧ ವಿಧಿಸುತ್ತಿದ್ದರೆ, ಚೀನಾ ರಷ್ಯಾದ ಗೋಧಿಯನ್ನು ಹೆಚ್ಚು ಆಮದು ಮಾಡಿಕೊಳ್ಳಲು ಯೋಚಿಸುತ್ತಿದೆ. ಅಮೆರಿಕ, ರಷ್ಯಾ ವಿರುದ್ಧ ಎಷ್ಟೇ ನಿರ್ಬಂಧ ಹೇರಿದರೂ ರಷ್ಯಾ ಕಳೆದ 8 ವರ್ಷಗಳಿಂದ ಅದೇ ಯುರೋಪಿಯನ್‌ ದೇಶಗಳಿಗೆ ತೈಲ ಮಾರಾಟ ಮಾಡಿ 63 ಸಾವಿರ ಕೋಟಿ ಹಣ ಯುದ್ಧ ನಿಧಿಯನ್ನಾಗಿಸಿ ಖಜಾನೆಯಲ್ಲಿ ಇಟ್ಟಿದೆ.ಹೀಗಾಗಿ ತಕ್ಷಣಕ್ಕೆ ರಷ್ಯಾಗೆ ಯಾವುದೇ ಸಮಸ್ಯೆ ಇಲ್ಲ. ಒಂದು ಕಡೆ ಚೀನಾ ವಿರುದ್ಧ ಅಮೆರಿಕ, ಜಪಾನ್‌, ವಿಯೆಟ್ನಾಂ, ಆಸ್ಪ್ರೇಲಿಯಾವನ್ನು ಬಳಸಿಕೊಳ್ಳುವಂತೆ ಚೀನಾ ಅಮೆರಿಕ ಮತ್ತು ಯುರೋಪ್‌ ವಿರುದ್ಧ ರಷ್ಯಾವನ್ನು ಬಳಸಿಕೊಳ್ಳುತ್ತಿದೆ. ಶತ್ರುವಿನ ಶತ್ರು ಯಾವತ್ತಿಗೂ ಮಿತ್ರ ಎಂಬುದು ರಾಜಕಾರಣದ ಮೊದಲ ನಿಯಮ ಅಲ್ಲವೇ?

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!