ರಷ್ಯಾದಲ್ಲಿ ಪುಟಿನ್‌ ಆಪ್ತನ ಖಾಸಗಿ ಸೇನೆ ದಿಢೀರ್‌ ಸೈಲೆಂಟ್‌: ಮಾಸ್ಕೋಗೆ ಲಗ್ಗೆ ನಿರ್ಧಾರದಿಂದ ಹಿಂದೆ ಸರಿದ ವ್ಯಾಗ್ನರ್‌!

By Kannadaprabha News  |  First Published Jun 25, 2023, 8:07 AM IST

Russia Coup: ಮಾಸ್ಕೋ​ದತ್ತ ಮುನ್ನು​ಗ್ಗು​ತ್ತಿ​ರುವು​ದಾಗಿ ಹೇಳಿದ್ದ ವ್ಯಾಗ್ನರ್‌ ಪಡೆ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್‌, ತಡ​ರಾತ್ರಿ ತಣ್ಣ​ಗಾ​ದಂತೆ ಕಂಡು​ಬಂದಿ​ದ್ದಾ​ರೆ. ರಷ್ಯಾ ಸ್ನೇಹಿತ ದೇಶ​ವಾದ ಬೆಲರೂಸ್‌ ಅಧ್ಯ​ಕ್ಷ ಅಲೆ​ಕ್ಸಾಂಡರ್‌ ಲುಕಾ​ಶೆಂಕೋ ಸಂಧಾ​ನಕ್ಕೆ ಇಳಿ​ದಿ​ದ್ದು, ಅದು ಯಶಸ್ವಿಯಾಗಿದೆ.


ಮಾಸ್ಕೋ (ಜೂನ್ 25, 2023): ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿ ಒಂದೂವರೆ ವರ್ಷ ಕಳೆದರೂ ಯಶಸ್ಸು ಸಿಗದೆ ಬಸವಳಿದಿದ್ದ ರಷ್ಯಾಗೆ ಇದೀಗ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ‘ವ್ಯಾಗ್ನರ್‌’ ಎಂಬ ಈ ಹಿಂದಿನ ರಷ್ಯಾ ಬೆಂಬ​ಲಿ​ತ ಖಾಸಗಿ ಸೇನಾ ಪಡೆ, ಇದೀಗ ನೇರವಾಗಿ ರಷ್ಯಾದ ಮೇಲೆ ಸಶಸ್ತ್ರ ಬಂಡಾಯ ಘೋಷಿಸಿದೆ. ರಷ್ಯಾ ಅಧ್ಯ​ಕ್ಷರು, ರಕ್ಷಣಾ ಸಚಿ​ವರು ಹಾಗೂ ಸೇನಾ ಮುಖ್ಯ​ಸ್ಥರ ಪದ​ಚ್ಯು​ತಿಯ ಪಣ ತೊಟ್ಟಿ​ರುವ ವ್ಯಾಗ್ನರ್‌ ಸೇನೆ, ರಷ್ಯಾದ ರೋಸ್ತೋವ್‌ ನಗರ ಕೈವಶ ಮಾಡಿ​ಕೊಂಡಿ​ದೆ. ಈ ನಡುವೆ, ಶನಿವಾರ ಸಂಜೆ​ಯವ​ರೆಗೆ ಮಾಸ್ಕೋ​ದತ್ತ ಮುನ್ನು​ಗ್ಗು​ತ್ತಿ​ರುವು​ದಾಗಿ ಹೇಳಿದ್ದ ವ್ಯಾಗ್ನರ್‌ ಪಡೆ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್‌, ತಡ​ರಾತ್ರಿ ತಣ್ಣ​ಗಾ​ದಂತೆ ಕಂಡು​ಬಂದಿ​ದ್ದಾ​ರೆ.

ರಷ್ಯಾ ಸ್ನೇಹಿತ ದೇಶ​ವಾದ ಬೆಲರೂಸ್‌ ಅಧ್ಯ​ಕ್ಷ ಅಲೆ​ಕ್ಸಾಂಡರ್‌ ಲುಕಾ​ಶೆಂಕೋ ಸಂಧಾ​ನಕ್ಕೆ ಇಳಿ​ದಿ​ದ್ದು, ಅದು ಯಶಸ್ವಿಯಾಗಿದೆ. ‘ಮಾಸ್ಕೋ​ದತ್ತ ಮುನ್ನು​ಗ್ಗ​ದೆ ದಾಳಿ ನಿಲ್ಲಿ​ಸಲು ನಮ್ಮ ಸೈನಿಕರಿಗೆ ನಾವು ಸೂಚಿಸಿದ್ದೇವೆ. ರಕ್ತಪಾತ ನಮಗೆ ಇಷ್ಟವಿಲ್ಲ’ ಎಂದು ವ್ಯಾಗ್ನರ್‌ ಸೇನೆ ಮುಖ್ಯಸ್ಥ ಯೆವ್‌ಗೆನಿ ಹೇಳಿದ್ದಾರೆ. ಇದ​ರಿಂದ ಕ್ಷಿಪ್ರ​ಕ್ರಾಂತಿ ಆತಂಕ​ದ​ಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾದಿ​ಮಿರ್‌ ಪುಟಿನ್‌ ಕೊಂಚ ನಿರಾ​ಳ​ರಾ​ಗಿ​ದ್ದಾ​ರೆ.

Tap to resize

Latest Videos

ಇದನ್ನು ಓದಿ: ಪುಟಿನ್‌ ವಿರುದ್ಧವೇ ತಿರುಗಿಬಿದ್ದ ವ್ಯಾಗ್ನರ್‌, ಶೀಘ್ರವೇ ರಷ್ಯಾಕ್ಕೆ ಹೊಸ ಅಧ್ಯಕ್ಷ ಎಂದ ರೆಬಲ್‌ ಆರ್ಮಿ!

ಇದಕ್ಕೂ ಮುನ್ನ ಅಂತರ್ಯುದ್ಧ ಆರಂಭವಾದ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಪುಟಿನ್‌, ‘ಒಂದು ನಗರ ನಮ್ಮ ಕೈತ​ಪ್ಪಿದೆ. ಬಂಡಾಯ ಏಳುವವರ, ಬೆನ್ನಿಗೆ ಚೂರಿ ಹಾಕಿ​ದ​ವ​ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಪಡೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇಂಥ ಸಶಸ್ತ್ರ ಬಂಡಾಯದಿಂದ ದೇಶವನ್ನು ರಕ್ಷಿಸಿಕೊಳ್ಳಲು ನಾವು ಬದ್ಧ ಮತ್ತು ಸಿದ್ಧರಾಗಿದ್ದೇವೆ’ ಎಂದು ಎಚ್ಚರಿಸಿದರು. ಮತ್ತೊಂದೆಡೆ ಸೇನೆ ಕೂಡಾ ಪ್ರಿಗೋಝೀನ್‌ ಬಂಧನಕ್ಕೆ ಆದೇಶಿಸಿತು.

ಪ್ರಿಗೋ​ಝಿನ್‌ ಕೂಡ, ‘50 ಸಾವಿರ ಸೈನಿ​ಕ​ರೊಂದಿಗೆ ಮಾಸ್ಕೋ​ದತ್ತ ಮುನ್ನು​ಗ್ಗು​ತ್ತಿ​ದ್ದೇ​ವೆ. ಆದಷ್ಟು ಶೀಘ್ರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ರಷ್ಯಾದ ರಕ್ಷಣಾ ಸಚಿವ ಸೆರ್ಗೇಯ್‌ ಶೋಯ್‌ಗು ಮತ್ತು ಸೇನಾ ಮುಖ್ಯಸ್ಥ ಜ.ವಲೆರಿ ಗೆರಸಿಮೋವ್‌ ಅವರನ್ನು ಪದಚ್ಯುತ ಮಾಡು​ತ್ತೇ​ವೆ’ ಎಂದು ಘೋಷಿಸಿದರು. ಅಲ್ಲದೆ ಈಗಾಗಲೇ ರಷ್ಯಾದ ರೊಸ್ತೋ​ವ್‌ ಪಟ್ಟಣವನ್ನು ಕೈವಶ ಮಾಡಿಕೊಂಡಿದ್ದು, ಶೀಘ್ರವೇ ಮಾಸ್ಕೋ ಸೇರಿ ಇನ್ನಷ್ಟು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಾಗಿ ಪ್ರಿಗೋಝಿನ್‌ ಹೇಳಿದ್ದರು.

ಇದನ್ನೂ ಓದಿ: ಉಕ್ರೇನ್‌ ವಿರುದ್ಧ ಯುದ್ಧದ ಪಾಪ: ಪುಟಿನ್‌ ದೃಷ್ಟಿಮಂದ, ನಾಲಿಗೆ ಸ್ತಬ್ಧ, ಸಂವೇದನೆಯೂ ಇಲ್ಲ; ವೈದ್ಯರ ಕಳವಳ

ಇದರ ಬೆನ್ನಲ್ಲೇ, ರಷ್ಯಾದ ಕೆಲ ನಗರಗಳಲ್ಲಿ ಪರಸ್ಪರ ಗುಂಡಿನ ದಾಳಿ, ಹೆಲಿಕಾಪ್ಟರ್‌ ಮೇಲೆ ದಾಳಿ, ತೈಲ ಬಂಕ್‌ಗಳ ಮೇಲೆ ದಾಳಿ ಘಟನೆಗಳು ನಡೆದವು. ರಷ್ಯಾದ 4 ಹೆಲಿ​ಕಾ​ಪ್ಟ​ರ್‌​ಗ​ಳನ್ನೂ ವ್ಯಾಗ್ನರ್‌ ಸೇನೆ ಹೊಡೆ​ದು​ರು​ಳಿ​ಸಿ​ದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋ ಸೇರಿದಂತೆ ಪ್ರಮುಖ ನಗರಗಳಲ್ಲಿನ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆಯಕಟ್ಟಿನ ಪ್ರದೇಶಗಳಿಗೆ ಹೆಚ್ಚಿನ ರಕ್ಷಣೆ ನೀಡಲಾಗಿದೆ. ಜುಲೈ 1 ರವ​ರೆಗೆ ಮಾಸ್ಕೋ ವಲ​ಯ​ದಲ್ಲಿ ಎಲ್ಲ ಶಾಲೆಗೆ ರಜೆ ಸಾರ​ಲಾ​ಗಿದೆ. ಹೊರಾಂಗಣ ಸಭೆ ನಿರ್ಬಂಧಿ​ಸ​ಲಾ​ಗಿದೆ. ಸೋಮ​ವಾರ ಮಾಸ್ಕೋ​ ರಸ್ತೆ​ಗ​ಳಲ್ಲಿ ವಾಹನ ಸಂಚಾರ ಕೂಡ ನಿರ್ಬಂಧಿ​ಸ​ಲಾ​ಗಿ​ದೆ.

ದಿಢೀರ್‌ ಬಂಡಾಯ:
ರಷ್ಯಾ ಪರವಾಗಿ ಉಕ್ರೇನ್‌ನಲ್ಲಿ ಯುದ್ಧ ಮಾಡುತ್ತಿದ್ದ ವ್ಯಾಗ್ನರ್‌ ಸೇನೆ ಶನಿವಾರ ಬೆಳ​ಗ್ಗೆ ಮರಳಿ ರಷ್ಯಾ ಪ್ರವೇಶ ಮಾಡಿದ್ದು ರಷ್ಯಾದಲ್ಲಿ ಸಶಸ್ತ್ರ ಬಂಡಾಯ ಘೋಷಿಸಿತು. ರಷ್ಯಾ ಸೇನೆ ತಮಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಷ್ಯಾ ಸರ್ಕಾ​ರದ ವಿರುದ್ಧ ಕ್ಷಿಪ್ರ​ಕ್ರಾಂತಿ ಮಾಡು​ವು​ದಾಗಿ ಹೇಳಿ​ತು.

400 ದಿನಗಳ ಉಕ್ರೇನ್-ರಷ್ಯಾ ಯುದ್ಧಕ್ಕೆ ವಿಶ್ವದ ದೊಡ್ಡಣ್ಣ ಎಂಟ್ರಿ: ಯುದ್ಧಭೂಮಿಗೆ ನುಗ್ಗುತ್ತಾ ಅಮೆರಿಕ ಸೈನ್ಯ..?

ಕಳೆದೊಂದು ವರ್ಷದಿಂದ ಉಕ್ರೇನ್‌ ಮೇಲಿನ ದಾಳಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ರಷ್ಯಾದ ಗಡಿ ಭಾಗದ ರೊಸ್ತೋವ್‌ ಆನ್‌ ಡಾನ್‌ ನಗರದಲ್ಲಿ ಮಿಲಿಟರಿ ಕೇಂದ್ರ ಕಚೇರಿ ಮತ್ತು ಇಡೀ ನಗರವನ್ನು ನಾವು ಈಗಾಗಲೇ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ. ತಮ್ಮ ಬಳಿ 50 ಸಾವಿ​ರ ಯೋಧರ ಬೃಹತ್‌ ಪಡೆ ಇದೆ. ಗುರಿ ಮುಟ್ಟುವವರೆಗೂ ನಾವು ವಿರಮಿಸುವುದಿಲ್ಲ. ಈ ಹಂತದಲ್ಲಿ ಯಾರೂ ನಮಗೆ ಅಡ್ಡಿ ಮಾಡಿಲ್ಲ. ಒಂದು ವೇಳೆ ಯಾರಾದರೂ ನಮಗೆ ಅಡ್ಡಿ ಮಾಡಿದರೆ ನಾವು ಯಾರನ್ನೂ ಬಿಡುವುದಿಲ್ಲ. ರಷ್ಯಾ ಸೇನೆ ಕೂಡಾ ನಮಗೆ ಅಡ್ಡಿ ಮಾಡಬಾರದು. ಇದು ಸೇನಾ ದಂಗೆಯಲ್ಲ, ಬದಲಾಗಿ ನ್ಯಾಯದ ಕಡೆಗಿನ ನಡಿಗೆ’ ಎಂದಿತು.

ಈ ನಡುವೆ, ‘ನಾವು ಸೇನೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಉಕ್ರೇನ್‌ನಲ್ಲಿನ ನಮ್ಮ ಕ್ಯಾಂಪ್‌ಗಳ ಮೇಲೆ ರಷ್ಯಾ ಸೇನೆ, ರಾಕೆಟ್‌ ಮೂಲಕ ದಾಳಿ ನಡೆಸಿದೆ. ಹೆಲಿಕಾಪ್ಟರ್‌ ಗನ್‌ಶಿಫ್ಸ್‌ ಮತ್ತು ಫಿರಂಗಿಗಳ ಮೂಲಕವೂ ದಾಳಿ ನಡೆಸಲಾಗಿದೆ. ಈ ವೇಳೆ ನಾವು ಕೂಡಾ ರಷ್ಯಾದ 4 ಕಾಪ್ಟರ್‌ ಹೊಡೆದುರುಳಿಸಿದ್ದೇವೆ’ ಎಂದು ಪ್ರಿಗೋಝಿನ್‌ ಹೇಳಿದರು.

ಇದನ್ನೂ ಓದಿ: ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್

click me!