ಸ್ಪೈ ಬಲೂನ್‌ ಆಯ್ತು; ಈಗ 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಮತ್ತೊಂದು ವಸ್ತು ಹೊಡೆದುರುಳಿಸಿದ ಅಮೆರಿಕ

By BK AshwinFirst Published Feb 11, 2023, 3:28 PM IST
Highlights

ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದ್ದ ಈ ಬಲೂನ್‌ ಸ್ಫೋಟ ಪ್ರಕರಣದ ಬಳಿಕ ಈಗ ಅಮೆರಿಕ ಮತ್ತೊಂದು ವಸ್ತುವನ್ನು ಶೂಟ್‌ ಮಾಡಿರೋದಾಗಿ ತಿಳಿದುಬಂದಿದೆ. ಆದರೆ, ಈ ವಸ್ತು ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ವಾಷಿಂಗ್ಟನ್‌ (ಫೆಬ್ರವರಿ 11, 2023): ಇತ್ತೀಚೆಗಷ್ಟೇ ಚೀನಾದ ಶಂಕಿತ ಸ್ಪೈ ಬಲೂನ್‌ ಭಾರತ, ಅಮೆರಿಕ ಸೇರಿ ಹಲವು ದೇಶಗಳಲ್ಲಿ ಪತ್ತೆಯಾಗಿದ್ದವು. ಇದು ವಿಶ್ವದ ಹಲವು ದೇಶಗಳಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಮಧ್ಯೆ, ಕೆಲ ದಿನಗಳ ಹಿಂದಷ್ಟೇ ಅಮೆರಿಕ ಆ ಶಂಕಿತ ಗೂಢಚಾರ ಬಲೂನ್‌ವೊಂದನ್ನು ಸ್ಫೋಟಿಸಿತ್ತು. ಚೀನಾದೊಂದಿಗಿನ ರಾಜತಾಂತ್ರಿಕ ಸಂಬಂಧ ಕಡಿತಗೊಳಿಸಿದ್ದ ಈ ಬಲೂನ್‌ ಸ್ಫೋಟ ಪ್ರಕರಣದ ಬಳಿಕ ಈಗ ಅಮೆರಿಕ ಮತ್ತೊಂದು ವಸ್ತುವನ್ನು ಶೂಟ್‌ ಮಾಡಿರೋದಾಗಿ ತಿಳಿದುಬಂದಿದೆ. ಆದರೆ, ಈ ವಸ್ತು ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಈ ಹೊಸ ವಸ್ತುವಿನ (Object) ಉದ್ದೇಶ ಅಥವಾ ಮೂಲ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಮೆರಿಕದ (United States) ಶ್ವೇತ ಭವನದ (White House) ರಾಷ್ಟ್ರೀಯ ಮಂಡಳಿಯ ವಕ್ತಾರ ಜಾನ್‌ ಕಿರ್ಬಿ (John Kirby) ತಿಳಿಸಿದ್ದಾರೆ. ಆದರೆ, ಆ ವಸ್ತು 40 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಕಾರಣ ಅದು ನಾಗರಿಕ ವಾಯುಯಾನಕ್ಕೆ (Civil Aviation) ಆತಂಕಕಾರಿ ಎಂಬ ಕಾರಣಕ್ಕೆ ಸ್ಫೋಟಿಸಲಾಗಿದೆ ಎಂದು ಹೇಳಿದ್ದಾರೆ. 

ಇದನ್ನು ಓದಿ: ಭಾರತದಲ್ಲೂ ಚೀನಾದ ಸ್ಪೈ ಬಲೂನ್‌: ಸೇನಾ ಕವಾಯತು ವೇಳೆ ಅಂಡಮಾನ್‌ ದ್ವೀಪದಲ್ಲಿ ಸಂಚಾರ..!

ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಆ ವಸ್ತುವನ್ನು ಶೂಟ್‌ ಮಾಡಲು ಆದೇಶ ನೀಡಿದ್ದರು ಎಂದೂ ಜಾನ್‌ ಕಿರ್ಬಿ ತಿಳಿಸಿದ್ದಾರೆ. ಆದರೆ, ಚೀನಾದ ಬಲೂನ್‌ನಷ್ಟು (Chinese Spy Balloon) ದೊಡ್ಡದಾಗಿರಲಿಲ್ಲ. ಇದು ಸಣ್ಣ ಕಾರ್‌ನಷ್ಟು ದೊಡ್ಡದಾಗಿತ್ತಷ್ಟೇ ಎಂದೂ ಹೇಳಿದ್ದಾರೆ. ಚೀನಾದ ಬಲೂನ್‌ ಕಳೆದ ವಾರ ಅಮೆರಿಕದ ವಾಯುನೆಲೆಯನ್ನು (US Air Space) ಹಾದು ಹೋಗಿತ್ತು. ಅದನ್ನು ಅಟ್ಲಾಂಟಿಕ್ ಕರಾವಳಿ ಪ್ರದೇಶದ ಬಳಿ ಅಮೆರಿಕದ ಫೈಟರ್‌ ಜೆಟ್‌ ಹೊಡೆದುರುಳಿಸಿತ್ತು. 

ಇನ್ನು, ಆ ಅನುಮಾನಾಸ್ಪದ ವಸ್ತು ಯಾರದ್ದು ಎಂಬುದು ಸಹ ನಮಗೆ ಗೊತ್ತಿಲ್ಲ. ಅದು ಸರ್ಕಾರಕ್ಕೆ ಸೇರಿದ್ದೋ ಅಥವಾ ಕಾರ್ಪೊರೇಟ್‌ ಮೂಲಕ್ಕೆ ಸೇರಿದ್ದೋ ಎಂಬ ಬಗ್ಗೆಯೂ ನಮಗೆ ಮಾಹಿತಿ ಇಲ್ಲ. ಹಾಗೆ, ನಮಗೆ ಸಂಪೂರ್ಣ ಉದ್ದೇಶವೂ ಇನ್ನೂ ಅರ್ಥವಾಗಿಲ್ಲ ಎಂದೂ ಜಾನ್‌ ಕಿರ್ಬಿ ಹೇಳಿದ್ದಾರೆ.

ಇದನ್ನೂ ಓದಿ: ಅಮೆರಿಕ ಮಾತ್ರವಲ್ಲ, ಕೆನಡಾ, ಲ್ಯಾಟಿನ್‌ ಅಮೆರಿಕದಲ್ಲೂ ಚೀನಾದ ಗುಪ್ತಚರ ಬಲೂನ್‌ ಪ್ರತ್ಯಕ್ಷ!

AIM-9X ಮಿಸೈಲ್‌ ಅನ್ನು ಬಳಸಿಕೊಂಡು ಎಫ್‌ - 22 ರ್ಯಾಪ್ಟರ್‌ ಆ ವಸ್ತುವನ್ನು ಹೊಡೆದುರುಳಿಸಿದೆ. ಚೀನಾದ ಶಂಕಿತ ಗೂಢಚಾರಿ ಬಲೂನ್‌ ಅನ್ನು ಸಹ ಅದೇ ಯುದ್ಧ ವಿಮಾನ ಹಾಗೂ ಮಿಸೈಲ್‌ ಸ್ಫೋಟ ಮಾಡಿತ್ತು ಎಂದು ಪೆಂಟಗನ್‌ ವಕ್ತಾರ ಬ್ರಿಗೇಡಿಯರ್‌ ಜನರಲ್‌ ಪ್ಯಾಟ್‌ ರೈಡರ್‌ ಮಾಹಿತಿ ನೀಡಿದ್ದಾರೆ. ಈ ಬಲೂನುಗಳು 40ಕ್ಕೂ ಹೆಚ್ಚು ದೇಶಗಳನ್ನು ಹಾದು ಹೋಗಿದ್ದವು ಎಂದೂ ಅಮೆರಿಕ ಹೇಳಿತ್ತು. ಈ ಘಟನೆಯ ಬಳಿಕ ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ತಮ್ಮ ಚೀನಾ ಪ್ರವಾಸವನ್ನು ಕೊನೆಗಳಿಗೆಯಲ್ಲಿ ರದ್ದುಗೊಳಿಸಿದ್ದರು. 

ಅಂದಹಾಗೆ, ಈ ಅನುಮಾನಾಸ್ಪದ ವಸ್ತು ಗುರುವಾರ ತಡವಾಗಿ ಪತ್ತೆಯಾಗಿದ್ದು, ಶುಕ್ರವಾರ ಮಧ್ಯಾಹ್ನ ಸ್ಪೋಟಗೊಳಿಸಲಾಗಿದೆ. ಕೆನಡಾ ಗಡಿಯ ಬಳಿ ಉತ್ತರ ಅಲಾಸ್ಕಾದಲ್ಲಿ ಬಿದ್ದುಹೋಗಿದೆ ಎಂದೂ ಅಮೆರಿಕ ಮಾಹಿತಿ ನೀಡಿದೆ. 

ಇದನ್ನೂ ಓದಿ: ನಮ್ಮ ಮತ್ತೊಂದು ಬಲೂನ್‌ ಆಕಸ್ಮಿಕವಾಗಿ ದಾರಿ ತಪ್ಪಿ ಲ್ಯಾಟಿನ್‌ ಅಮೆರಿಕಕ್ಕೆ ಹೋಗಿದೆ: ಚೀನಾ

ಭಾರತದಲ್ಲೂ ಸದ್ದು ಮಾಡಿದ ಗೂಢಚಾರಿ ಬಲೂನ್‌
ಅಮೆರಿಕಕ್ಕೂ ಮುಂಚೆ ಭಾರತದ ವಾಯುಸೀಮೆಯನ್ನೂ ಈ ಚೀನಾದ ಗೂಢಚಾರಿ ಬಲೂನ್‌ ಹಾದುಹೋಗಿತ್ತು ಎಂಬ ವರದಿಗಳು ಬಂದಿವೆ. ಜನವರಿ 2022 ರಲ್ಲೇ ಕಾಣಿಸಿಕೊಂಡಿತ್ತು ಎಂದೂ ವರದಿಗಳು ಹೇಳುತ್ತಿವೆ. ತನ್ನ ವಾಯುಸೀಮೆ ಪ್ರವೇಶ ಮಾಡಿದ್ದಕ್ಕೆ ಭಾನುವಾರ ಅಮೆರಿಕ ಸೇನೆಯಿಂದ ಧ್ವಂಸಗೊಳಿಸಲ್ಪಟ್ಟ ಚೀನಾದ ಗೂಢಚರ ಬಲೂನ್‌, ಕಳೆದ ವರ್ಷ ಭಾರತದ ವಾಯುಸೀಮೆಯಲ್ಲೂ ಕಂಡುಬಂದಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. 2021ರ ಡಿಸೆಂಬರ್‌ ತಿಂಗಳಲ್ಲಿ ಭಾರತೀಯ ಸೇನೆಯ ಮೂರೂ ವಿಭಾಗಗಳು ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹದಲ್ಲಿ ಜಂಟಿ ಕಸರತ್ತು ನಡೆಸಿದ್ದವು. ಇದಾದ ಕೆಲವೇ ದಿನಗಳಲ್ಲಿ ಅಂದರೆ ಜನವರಿ 6, 2022ರ ವೇಳೆಗೆ ಅಂಡಮಾನ್‌ ಪೋರ್ಟ್‌ಬ್ಲೇರ್‌ ವಾಯುಸೀಮೆಯ ಅತ್ಯಂತ ಎತ್ತರದ ಆಗಸದಲ್ಲಿ ಬಲೂನೊಂದು ಹಾರಾಡುತ್ತಿದ್ದ ವಿಷಯವನ್ನು ಕೆಲ ಸಾರ್ವಜನಿಕರು ಗಮನಿಸಿ ಈ ಕುರಿತ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ: ದೊಡ್ಡಣ್ಣನಿಗೆ ಎಚ್ಚರಿಕೆ ಕೊಟ್ಟ ಚೀನಾ

click me!