ಟರ್ಕಿ ಸಿರಿಯಾ ಭೂಕಂಪ: ಬದುಕ್ಕಿಲ್ಲವೆಂದು ತಿಳಿದರೂ ಮಗಳ ಕೈ ಬಿಡಲೊಪ್ಪದ ಅಪ್ಪ

By Anusha KbFirst Published Feb 10, 2023, 6:11 PM IST
Highlights

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನದಲ್ಲಿ ತನ್ನ 15 ವರ್ಷದ ಮಗಳನ್ನು ಕಳೆದುಕೊಂಡ ಅಪ್ಪನದ್ದು ಮತ್ತೊಂದು ಕತೆ. ಬಿದ್ದಿರುವ ತನ್ನ ಮನೆಯ ಮುಂದೆ ಮಗಳ ಶವದ ಕೈ ಬಿಡಲಾರದಂತೆ ಹಿಡಿದುಕೊಂಡು ಶೂನ್ಯದತ್ತ ನೋಡುತ್ತಿದ್ದಾನೆ ಈ ತಂದೆ

ಇಸ್ತಾಂಬೂಲ್/ಡಮಾಸ್ಕಸ್:  ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಸಾವನ್ನಪ್ಪಿದವರ ಸಂಖ್ಯೆ 20 ಸಾವಿರ ದಾಟಿದೆ. ಭೂಕಂಪ ಸಂಭವಿಸಿ ಐದು ದಿನಗಳೇ ಕಳೆಯುತ್ತ ಬಂದಿದ್ದು, ಅವಶೇಷಗಳಡಿ ಸಿಲುಕಿದವರು ಜೀವಂತವಾಗಿರುವ ಬಗ್ಗೆ ಭರವಸೆ ಕಡಿಮೆಯಾಗುತ್ತಿದೆ. ಈ ಮಧ್ಯೆ ಬದುಕುಳಿದವರು ತಾವು ಕಳೆದುಕೊಂಡ ಪ್ರೀತಿ ಪಾತ್ರರ ನೆನೆಸಿಕೊಂಡು ಬಿಕ್ಕಳಿಸುತ್ತಿದ್ದಾರೆ. ಅಲ್ಲಿ ಒಬ್ಬೊಬ್ಬರದ್ದು ಒಂದೊಂದು ನೋವಿನ ಕತೆ. ಒಂದು ಕಡೆ ಪುಟ್ಟ ಕಂದ ಸತ್ತು ಅಪ್ಪ ಬದುಕುಳಿದ್ದರೆ, ಮತ್ತೊಂದೆಡೆ ಕುಟುಂಬದ ಎಲ್ಲರೂ ಸತ್ತು ಒಂದು ಮಗು ಬದುಕುಳಿದಿದೆ. ಹೀಗೆ ಎಲ್ಲೆಲ್ಲೂ ನೋವಿನ ಹಾಹಾಕಾರವೇ ಕೇಳಿ ಬರುತ್ತಿದೆ. ಭೂಕಂಪಕ್ಕೂ ಮೊದಲು ನಾಗರಿಕ ಯುದ್ಧದಿಂದಾಗಿ ಭೂಮಿ ಮೇಲಿನ ನರಕವೆನಿಸಿದ ಸಿರಿಯಾ ಈಗ ಅಕ್ಷರಶಃ ನರಕವೇ ಆಗಿದೆ. 

ಈ ದುರಂತದಲ್ಲಿ ತನ್ನ 15 ವರ್ಷದ ಮಗಳನ್ನು ಕಳೆದುಕೊಂಡ ಅಪ್ಪನದ್ದು ಮತ್ತೊಂದು ಕತೆ. ಬಿದ್ದಿರುವ ತನ್ನ ಮನೆಯ ಮುಂದೆ ಮಗಳ ಶವದ ಕೈ ಬಿಡಲಾರದಂತೆ ಹಿಡಿದುಕೊಂಡು ಶೂನ್ಯದಂತೆ ನೋಡುತ್ತಿದ್ದಾನೆ. ಟರ್ಕಿಶ್‌ ದುರಂತದಲ್ಲಿ ಮಗಳ ಕಳೆದುಕೊಂಡ ಓರ್ವ ತಂದೆ. ಈ ದೃಶ್ಯ ಜಾಗತಿಕ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ. 

Latest Videos

ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

15 ವರ್ಷದ ಮಗಳು ಇರ್ಮಾಕ್ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಚಿರನಿದ್ರಗೆ ಜಾರಿದ್ದಳು. ಆಕೆಯ ಕೈ ಹೊರತುಪಡಿಸಿ ಇಡೀ ದೇಹವೇ ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿತ್ತು. ಆಕೆಯನ್ನು ರಕ್ಷಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಆಕೆಯ ತಂದೆ ಆಕೆಯ ಕೈ ಹಿಡಿದುಕೊಂಡು ಅಲ್ಲೇ ಕುಳಿತಿದ್ದರು.  ಅದೂ ಹೊರಗೆ ಮೈ ಕೊರೆಯುವ ಚಳಿಗಾಳಿ ಹಿಮಪಾತವಿದ್ದರೂ ಮಗಳು ಬದುಕಿಲ್ಲ ಎಂದು ತಿಳಿದಿದ್ದರೂ ಅವರು ಆಕೆಯ ಕೈ ಬಿಟ್ಟು ಬೇರೆಡೆ ಹೋಗಲು ಸಿದ್ಧರಿರಲಿಲ್ಲ. ಹೀಗೆ ಮಗಳನ್ನು ಕಳೆದುಕೊಂಡು ನಿರಾಶೆಯಿಂದ ಕುಸಿದು ಹೋಗಿರುವ ಅಪ್ಪನ ಹೆಸರು ಮೆಸುಟ್ ಹ್ಯಾನ್ಸರ್(Mesut Hancer), ಮಗಳು ಹೊರ ಬರಲಾಗದೇ ಬಂಧಿಯಾಗಿರುವ ಅವಶೇಷಗಳ ಸಮೀಪ ಮಗಳ ಕೈ ಹಿಡಿದುಕೊಂಡೆ ಕೊರೆಯುವ ಚಳಿಯನ್ನು ಲೆಕ್ಕಿಸದೇ ಅವರು ಕುಳಿತಿದ್ದರು. ಮಗಳಿನಿಲ್ಲ ಎಂದು ತಿಳಿದರು ಅವರು ಅಲ್ಲಿಂದ ಹೋಗಲು ಸಿದ್ಧರಿರಲಿಲ್ಲ. 

ಸೋಮವಾರದಂದು ಮೊದಲ ಬಾರಿ ಭೂಕಂಪ ಸಂಭವಿಸಿದಾಗ ಈ ಹುಡುಗಿ ಮಲಗಿದ್ದ ಹಾಸಿಗೆಯಿಂದ ಈ ಹುಡುಗಿ ಕೈಗಳನ್ನು ಹೊರ ಚಾಚಿದ್ದಳು. ಆದರೆ ಆ ಕ್ಷಣ ಅಲ್ಲಿ ಯಾವುದೇ ರಕ್ಷಣಾ ತಂಡಗಳಿರಲಿಲ್ಲ. ಬದುಕುಳಿದವರು ತಮ್ಮವರಿಗಾಗಿ ತಾವೇ ಹುಚ್ಚು ಆವೇಶದಿಂದ ಅವಶೇಷಗಳ ತೆರವಿಗೆ ಮುಂದಾಗಿದ್ದರು. ಛಿದ್ರಗೊಂಡ ಮನೆ ಬಾಲ್ಕನಿಗಳ ಮೇಲಿದ್ದ ಹರಿದ ಬಟ್ಟೆ ಮತ್ತು ಆಟಿಕೆಗಳು ಕಳೆದುಹೋದ ಜೀವಗಳ ಕಥೆಯನ್ನು ಹೇಳಿದ್ದವು. 

Turkey-Syria earthquake: ಅವಶೇಷಗಳಡಿ ಬರೋಬ್ಬರಿ 17 ಗಂಟೆ ತೋಳಲ್ಲಿ ಆಸರೆ ನೀಡಿ ತಮ್ಮನನ್ನು ರಕ್ಷಿಸಿದ ಬಾಲಕಿ

ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸುವ ವೇಳೆ ಬಹಳ ವಿಳಂಬವಾಗಿತ್ತು, ಇರ್ಮಾಕ್ ಜೀವ ಬಿಟ್ಟಿದ್ದಳು.  ಎಎಫ್‌ಪಿಯ ಹಿರಿಯ ಫೋಟೋಗ್ರಾಫರ್ ಅಡೆಂ ಅಲ್ಟಾನ್ (Adem Altan) ಅಂಕಾರಾದಲ್ಲಿ ಹೃದಯ ಹಿಂಡುವಂತಿದ್ದ ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.  ಸದ್ದಿಲ್ಲದೇ ಮಗಳಿಗಾಗಿ ಶೋಕಿಸುತ್ತಿದ್ದ ತಂದೆಯನ್ನು ನೋಡಿ ಅವರು ಆ ದೃಶ್ಯದಿಂದ ದೃಷ್ಟಿ ಬೇರೆಡೆ ಹರಿಸದಾದರು. 

ಈ ದೃಶ್ಯವನ್ನು ಅವರು ಸುಮಾರು 200 ಅಡಿ ದೂರದಿಂದ ಕ್ಲಿಕ್ಕಿಸಲು ತಮ್ಮ ಕ್ಯಾಮರಾವನ್ನು ಸಿದ್ಧಗೊಳಿಸುತ್ತಿದ್ದರೆ ಅತ್ತ ಆ ತಂದೆ ಫೋಟೋಗ್ರಾಪರ್ ಅನ್ನು ಓಡಿಸುವ ಬದಲು ನಡುಗುವ ಧ್ವನಿಗಳಿಂದ ತನ್ನ ಮಗುವಿನ ಫೋಟೋ ತೆಗೆಯುವಂತೆ ಫೋಟೋಗ್ರಾಫರ್‌ಗೆ ಹೇಳಿದರಂತೆ. ಇದನ್ನು ಕೇಳಿ ಅಕ್ಷರಶಃ ನಾನು ಮೂಕನಾದೆ ಎಂದು ಹೇಳಿಕೊಂಡಿದ್ದಾರೆ, ಫೋಟೋಗ್ರಾಪರ್ ಅಡೆಂ ಅಲ್ಟಾನ್ 

ಆ ತಂದೆ ತನ್ನ ಹಾಗೂ ತನ್ನ ದೇಶದ ನೋವನ್ನು ಜಗತ್ತು ನೋಡಬೇಕು ಎಂದು ಬಯಸಿದ್ದರು. ಅಂತೆಯೇ ಆ ಫೋಟೋ ಈಗ ಜಗತ್ತಿನ ಹೃದಯಗಳನ್ನು ತಟ್ಟುತ್ತಿದೆ. ಎಎಫ್‌ಪಿ ಫೋಟೋಗ್ರಾಫ್‌ಗಳು  ಫೈನಾನ್ಶಿಯಲ್ ಟೈಮ್ಸ್(Financial Times), ವಾಲ್‌ಸ್ಟ್ರೀಟ್ ಜರ್ನಲ್ಸ್  (Wall Street Journal) ಸೇರಿದಂತೆ ಜಗತ್ತಿನ್ನೆಲ್ಲೆಡೆಯ ಪ್ರಮುಖ ಮಾಧ್ಯಮಗಳ ಮೊದಲ ಪೇಜ್‌ನಲ್ಲಿ ಪ್ರಕಟಿಸಲ್ಪಡುತ್ತವೆ.  ಈ ಫೋಟೋಗಳನ್ನು ನಾನು ನಿರಂತರವಾಗಿ ತೆಗೆಯುತ್ತಾ ಹೋದೆ. ಎಂತಹ ಸಹಿಸಲಾಗದ ನೋವದು, ನನ್ನಿಂದ ಕಣ್ಣೀರು ತಡೆಯಲಾಗಲಿಲ್ಲ ಎಂದು ಅಲ್ಟಾನ್ ಆ ಕ್ಷಣವನ್ನು ನೆನಪು ಮಾಡಿಕೊಂಡಿದ್ದಾರೆ. 

click me!