
ಯುರೋಪಿಯನ್ ಒಕ್ಕೂಟದಿಂದ (ಬ್ರೆಕ್ಸಿಟ್) ಹೊರಬಂದ ನಂತರದ 7 ವರ್ಷಗಳಲ್ಲಿ ದೇಶ 5 ಪ್ರಧಾನಿಗಳನ್ನು ಕಂಡಿದೆ. ಈ ಪೈಕಿ ನಾಲ್ವರು ಕಳೆದ 3 ವರ್ಷಗಳಲ್ಲಿ ಬದಲಾಗಿದ್ದಾರೆ. ಕನ್ಸರ್ವೇಟೀವ್ ಪಕ್ಷದ 4ನೇ ಪ್ರಧಾನಿಯಾಗಿದ್ದ ಲಿಜ್ ಟ್ರಸ್, ಆರ್ಥಿಕ ಕುಸಿತದಿಂದ ದೇಶವನ್ನು ಹೊರತರಲಾಗದ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ದೇಶದ ರಾಜಕೀಯ ಬಿಕ್ಕಟ್ಟಿಗೆ ಹಿಡಿದ ಕನ್ನಡಿಯಾಗಿದೆ. ಯುರೋಪಿಯನ್ ಒಕ್ಕೂಟವನ್ನು ತೊರೆಯುವ ಕುರಿತಾಗಿ ಜನಾಭಿಪ್ರಾಯವನ್ನು ಕೋರಿದ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ರಾಜೀನಾಮೆಯಿಂದ ಈ ಪರ್ವ ಆರಂಭವಾಯಿತು. ಇವರ ಬಳಿಕ ಪ್ರಧಾನಿಯಾದ ಥೆರೆಸಾ ಮೇ 2019ರಲ್ಲಿ ರಾಜೀನಾಮೆ ನೀಡಿದರು. ಬಳಿಕ ಅಧಿಕಾರಕ್ಕೆ ಬಂದ ಬೋರಿಸ್ ಜಾನ್ಸನ್ 2022ರಲ್ಲಿ ರಾಜೀನಾಮೆ ನೀಡಿದರು. ಬಳಿಕ ಪ್ರಧಾನಿ ಹುದ್ದೆಗೇರಿದ ಲಿಜ್ ಟ್ರಸ್ ಕೇವಲ 45 ದಿನಗಳಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.
ಹಣದುಬ್ಬರ, ಆರ್ಥಿಕ ಸಂಕಷ್ಟದಲ್ಲಿ ಬ್ರಿಟನ್: ಬ್ರೆಕ್ಸಿಟ್‌ನ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬ್ರಿಟನ್ 5 ವರ್ಷವಾದರೂ ಇನ್ನೂ ಸಹ ಚೇತರಿಸಿಕೊಂಡಿಲ್ಲ. ಬ್ರಿಟನ್‌ನ ಆರ್ಥಿಕ ಸಂಕಷ್ಟಕ್ಕೆ ಕೋವಿಡ್ ಸಾಂಕ್ರಾಮಿಕ ಕಾರಣ ಎಂದು ಹೇಳಲಾಗುತ್ತಿದ್ದರೂ ಸಹ ಬ್ರೆಕ್ಸಿಟ್ ಮತ್ತು ಆನಂತರ ಒಪ್ಪಂದಗಳೇ ಕಾರಣ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಡಾಲರ್ ಎದುರು ನಿರಂತರವಾಗಿ ಕುಸಿತ ಕಾಣುತ್ತಿರುವ ಪೌಂಡ್ ಅನ್ನು ಮೇಲೆತ್ತಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡರೂ ಅದರಲ್ಲಿ ಸಫಲವಾಗುತ್ತಿಲ್ಲ. ಪ್ರಸ್ತುತ ಡಾಲರ್ ಎದುರು ಪೌಂಡ್ ಮೌಲ್ಯ 1.03 ಡಾಲರ್‌ಗೆ ಇಳಿಕೆಯಾಗಿದ್ದು, ಇದು ಈವರೆಗಿನ ಕನಿಷ್ಠ ಮೌಲ್ಯವಾಗಿದೆ.
ಬ್ರೆಕ್ಸಿಟ್‌ನಿಂದ ಇನ್ನೂ ಚೇತರಿಸಿಕೊಳ್ಳದ ದೇಶ: ವ್ಯಾಪಾರದಲ್ಲಿ ಏಕಸ್ವಾಮ್ಯತೆ ಸಾಧಿಸುವ ಉದ್ದೇಶದಿಂದ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಒಡ್ಡಿಕೊಂಡಾಗಿನಿಂದಲೂ ಆರ್ಥಿಕ ಸಮಸ್ಯೆ ಎದುರಿಸುತ್ತಲೇ ಇದೆ. ಬ್ರೆಕ್ಸಿಟ್‌ಗೂ ಮೊದಲು ಬ್ರಿಟನ್‌ನ 1 ಪೌಂಡ್ ಅಮೆರಿಕದ 1.8 ಡಾಲರ್‌ಗೆ ಸಮನಾಗಿತ್ತು. ಬ್ರೆಕ್ಸಿಟ್ ಘೋಷಣೆಯಾಗುತ್ತಿದ್ದಂತೆ ಇದು 1.5 ಡಾಲರ್‌ಗೆ ಕುಸಿತ ಕಂಡಿತು. ಈಗ ಪೌಂಡ್ ಮೌಲ್ಯ 1.3 ಡಾಲರ್‌ಗೆ ಕುಸಿತ ಕಂಡಿದೆ. ಬ್ರೆಕ್ಸಿಟ್ ಬಳಿಕ ವಿದೇಶಿ ವ್ಯವಹಾರವನ್ನು ಡಾಲರ್‌ನಲ್ಲೇ ನಡೆಸಬೇಕಾದ ಕಾರಣ ಹೆಚ್ಚಿನ ಹಣವನ್ನು ವೆಚ್ಚ ಮಾಡಬೇಕಾಯಿತು. ಹೀಗಾಗಿ ವಿದೇಶಿ ವಿನಿಮಯವೂ ಬೇಗ ಸಹ ಕರಗಿತು. ಒಕ್ಕೂಟದಿಂದ ಹೊರ ಬಂದ ಬಳಿಕ ಬ್ರಿಟನ್ ಮಾಡಿಕೊಂಡ ಒಪ್ಪಂದಗಳು ಸಹ ದೇಶಕ್ಕೆ ಮುಳುವಾಗಿ ಪರಿಣಮಿಸಿತು.
ಇನ್ನೂ ಮೂರು ವರ್ಷ ಇದೆ ಸರ್ಕಾರಕ್ಕೆ ಅಧಿಕಾರ: ಭಾರತದಂತೆ ಸಂಸದೀಯ ಮಾದರಿ ಹೊಂದಿರುವ ಬ್ರಿಟನ್‌ನಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಕಳೆದ ಚುನಾವಣೆ ಡಿ.12, 2019ರಂದು ನಡೆದಿತ್ತು. ಮುಂದಿನ ಚುನಾವಣೆ ಜನವರಿ 2025ರಲ್ಲಿ ನಡೆಯಲಿದೆ. 2019ರಲ್ಲಿ ಕನ್ಸರ್ವೇಟಿವ್ ಪಕ್ಷವು 80 ಸೀಟುಗಳನ್ನು ಗೆದ್ದು ಬಹುಮತ ಪಡೆದು ಸರ್ಕಾರ ಸ್ಥಾಪಿಸಿತು. ಸರ್ಕಾರಕ್ಕೆ ಇನ್ನೂ ಮೂರು ವರ್ಷ ಅಧಿಕಾರಾವಧಿ ಇದೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಅಸ್ಥಿರತೆ ಕಂಡು ವಿಪಕ್ಷ ಲೇಬರ್ ಪಾರ್ಟಿ ಅವಧಿಪೂರ್ವ ಚುನಾವಣೆ ಘೋಷಿಸಲು ಕರೆ ನೀಡಿದೆ.
ಹೊಸ ಸರ್ಕಾರದ ಮುಂದಿದೆ ಹಲವು ಸವಾಲು: ನೂತನ ಪ್ರಧಾನಿಗೆ ಹೊಸ ಹಾದಿ ಸುಗಮವಾಗೇನೂ ಇಲ್ಲ. ಬ್ರಿಟನ್ ಕಳೆದ 40 ವರ್ಷಗಳಲ್ಲೇ ಕಂಡುಕೇಳರಿಯದ ಹಣದುಬ್ಬರ, ಬ್ರೆಕ್ಸಿಟ್ ನಂತರದ ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದು ಅದನ್ನು ಎದುರಿಸಬೇಕಾದ ಗುರುತರ ಸವಾಲು ಮುಂದಿದೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ದಿನೇ ದಿನೇ ಪೌಂಡ್ ಮೌಲ್ಯ ಕುಸಿಯತೊಡಗಿದೆ. ಹಿಂದಿನ ಪ್ರಧಾನಿಯ ತೆರಿಗೆ ಕಡಿತದ ನೀತಿಗಳಿಂದಾಗಿ ಸರ್ಕಾರಿ ಬಾಂಡುಗಳ ಮೌಲು ಕುಸಿದಿದೆ. ಇಂಧನದ ಬೆಲೆಯು ಗಗನಕ್ಕೇರಿದೆ. ಬ್ರೆಕ್ಸಿಟ್ ನಂತರವೂ ಬ್ರಿಟನ್ ಭಾರತ ಸೇರಿ ಇತರೆ ದೇಶಗಳೊಂದಿಗೆ ಯಾವುದೇ ಮುಕ್ತ ವ್ಯಾಪಾರದ ಮಹತ್ವಪೂರ್ಣ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈ ನಡುವೆ ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿದೆ. ಹೀಗಾಗಿ ರಾಜಕೀಯ ಸ್ಥಿರತೆಯೊಂದಿಗೆ ನೂತನ ಪ್ರಧಾನಿಯಾದವರು ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ಕೋವಿಡ್ ಕಾಲದಲ್ಲಿ ಗುಂಡು ಪಾರ್ಟಿ: ಬೋರಿಸ್ ತಲೆದಂಡ:ಕೋವಿಡ್ ಲಾಕ್‌ಡೌನ್‌ನ ಸಮಯದಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಕಚೇರಿಯಲ್ಲಿ ತನ್ನ ಸಹಚರರೊಂದಿಗೆ ಪಾರ್ಟಿ ಮಾಡಿದ್ದು, ಅವರ ರಾಜೀನಾಮೆ ಕೇಳಲು ಮುಖ್ಯ ಕಾರಣವಾಗಿ ಮಾರ್ಪಟ್ಟಿತು. ಬೋರಿಸ್ ಆಡಳಿತ ಅವಧಿಯಲ್ಲಿ ಬ್ರಿಟನ್ 40 ವರ್ಷಗಳಲ್ಲೇ ಅತ್ಯಂತ ಭೀಕರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಹೀಗಾಗಿ ದೇಶದಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಜೀವನ ಕಷ್ಟವಾಗಿತ್ತು. ಇದೇ ಸಮಯದಲ್ಲಿ ನಡೆದ ಪಾರ್ಟಿ, ಬೋರಿಸ್‌ನ ತಲೆದಂಡ ಕೇಳಲು ಪ್ರಮುಖ ಕಾರಣವಾಯಿತು. ಕೊನೆಗೂ ಸಂಸದರ ಒತ್ತಾಯಕ್ಕೆ ಮಣಿದು ಜಾನ್ಸನ್ ರಾಜೀನಾಮೆ ಸಲ್ಲಿಸಿದರು.
ತೀರದ ಆರ್ಥಿಕ ಸಂಕಷ್ಟ, ಲಿಜ್ ಟ್ರಸ್ ರಾಜೀನಾಮೆ: ಬೋರಿಸ್ ಜಾನ್ಸನ್ ಬಳಿಕ ಪ್ರಧಾನಿಯಾಗಿ ಆಯ್ಕೆಯಾದ ಲಿಜ್ ಟ್ರಸ್ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಾಗಿ ಅಧಿಕಾರಕ್ಕೆ ಬರುವ ಮೊದಲು ಭರವಸೆ ನೀಡಿದ್ದರು. ಶ್ರೀಮಂತರಿಗೆ ತೆರಿಗೆ ಕಡಿತ ಮಾಡುವುದಾಗಿಯೂ ಘೋಷಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಎಲ್ಲಾ ಭರವಸೆಗಳಿಂದ ಹಿಂದೆ ಸರಿದರು. ಅಲ್ಲದೇ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಲಿಜ್ ಜಾರಿಗೆ ತಂದ ಯೋಜನೆಗಳು, ಮಧ್ಯಂತರ ಬಜೆಟ್ ಮತ್ತಷ್ಟುಆರ್ಥಿಕ ಕುಸಿತಕ್ಕೆ ಕಾರಣವಾಯಿತು. ಹೀಗಾಗಿ ಆತುರದಲ್ಲಿ ತಂದ ಈ ನಿರ್ಧಾರಗಳನ್ನು ಹಿಂಪಡೆದರು. ಇದರಿಂದ ಬೇಸರಗೊಂಡ ಟೋರಿ ಸಂಸದರು ಟ್ರಸ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನಲೆಯಲ್ಲಿ ಟ್ರಸ್ ಸಹ ರಾಜೀನಾಮೆ ಸಲ್ಲಿಸಬೇಕಾಯಿತು.
ಹೊಸ ಪ್ರಧಾನಿಯ ಆಯ್ಕೆ ಹೇಗೆ ?: ಸೋಮವಾರ ಮಧ್ಯಾಹ್ನ 2 ಗಂಟೆಗಳ ಒಳಗಾಗಿ ಪ್ರಧಾನಿ ಆಕಾಂಕ್ಷಿಗಳು ನಾಮಪತ್ರ ನಾಮಪತ್ರ ಸಲ್ಲಿಸಲಿದ್ದಾರೆ. ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ 100 ಸಂಸದರ ಬೆಂಬಲ ಇರುವುದು ಕಡ್ಡಾಯವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ ಅಂತಿಮ ಸುತ್ತಿಗೆ ಇಬ್ಬರನ್ನು ಸಂಸದರು ವೋಟಿಂಗ್ ಮೂಲಕ ಆಯ್ಕೆ ಮಾಡಲಾಗುತ್ತದೆ. ಅ.28ರಂದು ನಡೆಯುವ ಟೋರಿ ಸದಸ್ಯರ ಆನ್ಲೈನ್ ವೋಟಿಂಗ್‌ನಲ್ಲಿ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಾಗುತ್ತದೆ. 100 ಸಂಸದರ ಬೆಂಬಲ ಅನಿವಾರ್ಯವಾಗಿದ್ದರಿಂದ ಗರಿಷ್ಠ 3 ಅಭ್ಯರ್ಥಿಗಳು ಮಾತ್ರ ಕಣಕ್ಕಿಳಿಯಬಹುದಾಗಿದೆ. ನಾಮಪತ್ರ ಸಲ್ಲಿಸುವ ಗಡುವಿನ ಒಳಗೆ ಒಬ್ಬ ಅಭ್ಯರ್ಥಿ ಮಾತ್ರ ನಾಮಪತ್ರ ಸಲ್ಲಿಸಲು ಯಶಸ್ವಿಯಾದರೆ ಅದೇ ದಿನ ಅವರನ್ನು ನೂತನ ಪ್ರಧಾನಿಯಾಗಿ ಘೋಷಿಸಲಾಗುವುದು.
ಬ್ರಿಟನ್ ಪ್ರಧಾನಿ ಹುದ್ದೆಗೆ Liz Truss ರಾಜೀನಾಮೆ: ಮುಂದಿನ ಪ್ರಧಾನಿಯಾಗ್ತಾರಾ ಇನ್ಫಿ ಅಳಿಯ..?
ಭಾರತೀಯ ರಿಷಿ ಸೇರಿ ರೇಸಲ್ಲಿ ಇನ್ನು ಹಲವರು!: ಲಿಜ್ ಟ್ರಸ್ (Liz Truss) ರಾಜೀನಾಮೆ ಬೆನ್ನಲ್ಲೇ, ಬ್ರಿಟನ್ ನೂತನ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಇಸ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Jhonson), ಹೌಸ್ ಆಫ್ ಕಾಮನ್ಸ್‌ನಲ್ಲಿ ಪಕ್ಷದ ನಾಯಕ ಪೆನ್ನಿ ಮೋರ್ಡೆಂಟ್ (Penny Modernt), ರಕ್ಷಣಾ ಸಚಿವ ಬೆನ್ ವಾಲ್ಲೆಸ್, ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ, ಬುಧವಾರವಷ್ಟೇ ರಾಜೀನಾಮೆ ನೀಡಿದ್ದ ಸುಯೆಲ್ಲಾ ಬ್ರೇವರ್ಮನ್ ಹೆಸರು ಕೂಡಾ ಕೇಳಿಬಂದಿದೆ. ಈ ಪೈಕಿ ಮೋರ್ಡೆಂಟ್ ಈಗಾಗಲೇ ಪ್ರಚಾರವನ್ನೂ ಆರಂಭಿಸುವ ಮೂಲಕ ರೇಸ್‌ನಲ್ಲಿ ಮುನ್ನಡೆ ಪಡೆಯುವ ಯತ್ನ ಮಾಡಿದ್ದಾರೆ. ಇನ್ನು ಜಾನ್ಸನ್ ಬೆಂಬಲಿಗ ಸಂಸದರು ಕೂಡಾ, ಮಾಜಿ ಪ್ರಧಾನಿ ಪರವಾಗಿ ಬಹಿರಂಗವಾಗಿಯೇ ಕರೆ ನೀಡುವ ಮೂಲಕ ಮರಳಿ ಅವರನ್ನ ಅಧಿಕಾರಕ್ಕೆ ತರುವ ಯತ್ನ ಆರಂಭಿಸಿದ್ದಾರೆ.
ರಿಷಿ ಸುನಕ್ ಸೋಲಿಗೆ ಕಾರಣವಾಗಿದ್ದು 5 ಆಪಾದನೆಗಳು!
ಭಾರತ ಆಳಿದ್ದ ಬ್ರಿಟನ್‌ನಲ್ಲಿ ಭಾರತೀಯನ ಆಡಳಿತ?: ಕಳೆದ ಬಾರಿ ಪ್ರಧಾನಿ ಆಯ್ಕೆ ಚುನಾವಣೆಯಲ್ಲಿ ಲಿಜ್ ಟ್ರಸ್‌ಗೆ ಕಠಿಣ ಸ್ಪರ್ಧೆ ನೀಡಿದ ಭಾರತೀಯ ಮೂಲದ ರಿಷಿ ಸುನಕ್ ಅವರು ಈ ಬಾರಿಯೂ ಪ್ರಧಾನಿ ರೇಸಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಚುನಾವಣೆ ವೇಳೆ ರಿಷಿ ತೆರಿಗೆ ಕಡಿತ, ಉತ್ತಮ ಆರೋಗ್ಯ ಸೇವೆ, ಬ್ರೆಕ್ಸಿಟ್‌ನ ಪೂರ್ಣ ಉಪಯೋಗ ಪಡೆದು ಮುಕ್ತ ವ್ಯಾಪಾರದ ಮೂಲಕ ಬ್ರಿಟನ್ ಆರ್ಥಿಕತೆಗೆ ಬಲ ತುಂಬುವುದಾಗಿ ಘೋಷಿಸಿದ್ದರು. ಜಾನ್ಸನ್ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಅವರ ನೀತಿಗಳು ಬ್ರಿಟನ್‌ನ ಕುಸಿಯುತ್ತಿರುವ ಆರ್ಥಿಕತೆ ನಿಭಾಯಿಸಲು ಅಗತ್ಯವಾಗಿರುವ ಇರುವ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರು ಅವರ ಪರವಾಗಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ರಿಷಿ ಪ್ರಧಾನಿಯಾಗಿ ಆಯ್ಕೆಯಾದರೆ ಭಾರತವನ್ನು ಆಳಿದ್ದ ಬ್ರಿಟನ್‌ನಲ್ಲಿ ಇನ್ನು ಭಾರತೀಯರ ಆಳ್ವಿಕೆಯ ಹೊಸ ಇತಿಹಾಸ ನಿರ್ಮಾಣವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ