ಉಕ್ರೇನ್ ಕೈಯಲ್ಲಿ ಅಮೆರಿಕದ ವಿಷಕಾರಿ ರಾಸಾಯನಿಕ ಅಸ್ತ್ರ?; ಜಾಗತಿಕ ಆತಂಕವನ್ನು ಹೆಚ್ಚಿಸಿದ ರಷ್ಯಾದ ಆರೋಪ..!

By Suvarna News  |  First Published May 30, 2024, 3:19 PM IST

ರಷ್ಯಾದ ಸಶಸ್ತ್ರ ಪಡೆಗಳ ವಿಕಿರಣ, ರಾಸಾಯನಿಕ ಮತ್ತು ಜೈವಿಕ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಇಡೀ  ಜಗತ್ತಿನ ಗಮನ ಸೆಳೆದಿದೆ.  ಉಕ್ರೇನಿಯನ್ ಪಡೆಗಳು ಅತ್ಯಂತ ವ್ಯವಸ್ಥಿತವಾಗಿ ವಿಷಕಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿವೆ ಮತ್ತು ಇದರಲ್ಲಿ ಅಮೆರಿಕದ ಕೈವಾಡ ಎದ್ದು ಕಾಣುತ್ತಿದೆ ಎಂಬ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರ ಹೇಳಿಕೆಯನ್ನು ರಷ್ಯಾದ ಅಧಿಕೃತ  ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
 


ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

Tap to resize

Latest Videos

undefined

ಬೆಂಗಳೂರು(ಮೇ.30):  ಎಂದೂ ಮುಗಿಯದ ಕಥೆಯಂತಾಗಿರುವ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ, ಜಗತ್ತನ್ನು ಮತ್ತೊಂದು ವಿಶ್ವಯುದ್ಧದ ಹೊಸ್ತಿಲಿಗೆ ತಂದು ನಿಲ್ಲಿಸಿದೆ. ಯುದ್ಧದ ಭೀಕರತೆ ಒಂದೆಡೆಯದಾದರೆ, ಯುದ್ಧದ ಪರಿಣಾಮಗಳು ಜಾಗತಿಕ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದ ಮೇಲೆ ಭಾರಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ಈ ಧೀರ್ಘಾವಧಿ ಯುದ್ಧ ಅಮೇರಿಕಾ ಮತ್ತು ರಷ್ಯಾ ದೇಶಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾದರೆ, ಭಾರತದಂತಹ ಜಾಗತಿಕ ಶಾಂತಿ ಬಯಸುವ ರಾಷ್ಟ್ರ್ರಗಳಿಗೆ ತಮ್ಮ ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿಭಾಯಿಸುವ ಅನಿವಾರ್ಯತೆಗೆ ದೂಡಿದೆ. ಸದ್ಯ ಯುದ್ಧಪೀಡಿತ ಉಕ್ರೇನ್  ನೆಲದಿಂದ ಬರುತ್ತಿರುವ ಸುದ್ದಿಗಳು ಜಾಗತಿಕ ಶಾಂತಿಪ್ರಿಯರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.     

ರಷ್ಯಾದ ಸಶಸ್ತ್ರ ಪಡೆಗಳ ವಿಕಿರಣ, ರಾಸಾಯನಿಕ ಮತ್ತು ಜೈವಿಕ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಇಡೀ  ಜಗತ್ತಿನ ಗಮನ ಸೆಳೆದಿದೆ.  ಉಕ್ರೇನಿಯನ್ ಪಡೆಗಳು ಅತ್ಯಂತ ವ್ಯವಸ್ಥಿತವಾಗಿ ವಿಷಕಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿವೆ ಮತ್ತು ಇದರಲ್ಲಿ ಅಮೆರಿಕದ ಕೈವಾಡ ಎದ್ದು ಕಾಣುತ್ತಿದೆ ಎಂಬ ಲೆಫ್ಟಿನೆಂಟ್ ಜನರಲ್ ಇಗೊರ್ ಕಿರಿಲೋವ್ ಅವರ ಹೇಳಿಕೆಯನ್ನು ರಷ್ಯಾದ ಅಧಿಕೃತ  ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಐಎನ್‌ಎಸ್ ವಿಕ್ರಾಂತ್ ಹೆಗಲೇರಲಿದೆ ರಫೇಲ್ ಫೈಟರ್: ಭಾರತ-ಫ್ರಾನ್ಸ್ ಒಪ್ಪಂದಕ್ಕೆ ಹೊಸ ಖದರ್..!

"ವಾಷಿಂಗ್ಟನ್‌ನ ಮೌನ ಅನುಮೋದನೆಯೊಂದಿಗೆ, ಉಕ್ರೇನಿಯನ್ ಉಗ್ರಗಾಮಿಗಳು ತಮ್ಮ ವಿಶೇಷ ಕಾರ್ಯಾಚರಣೆಗಳಲ್ಲಿ ನಿಯಮಿತವಾಗಿ ವಿಷಕಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ.." ಎಂದು ಕಿರಿಲೋವ್ ತಮ್ಮ ಮಾಧ್ಯಮ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

"ಯುದ್ಧಪೀಡಿತ ಡೊನೆಟ್ಸ್ಕ್ ಪ್ರದೇಶದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬೊಗ್ಡಾನೋವ್ಕಾ, ಗೊರ್ಲೋವ್ಕಾ, ಕ್ರೆಮೆನೋವ್ಕಾ ಮತ್ತು ಆರ್ಟಿಯೊಮೊವ್ಸ್ಕ್ ಭಾಗದಲ್ಲಿ ಕ್ಲೋರೊಸೆಟೊಫೆನೋ ಮತ್ತು ಕ್ಲೋರೊಪಿಕ್ರಿನ್ ಎಂಬ ವಿಷಕಾರಿ ರಾಸಾಯನಿಕ ಅಸ್ತ್ರಗಳನ್ನು ಬಳಸಿದ ಹಲವಾರು ನಿದರ್ಶನಗಳಿವೆ.." ಎಂಬ ಲೆ. ಜ. ಕಿರಿಲೋವ್ ಅವರ ಆರೋಪ ಜಾಗತಿಕ ಗಮನ ಸೆಳೆದಿದೆ.

ಕ್ಲೋರೊಪಿಕ್ರಿನ್ ಅನ್ನು ಕ್ಲೋರೊಸೆಟೋಫೆನೋನ್‌ನೊಂದಿಗೆ ಬೆರೆಸಿದಾಗ, ಅದು ಪ್ರಬಲವಾದ ಅಶ್ರುವಾಯುವನ್ನು ಸೃಷ್ಟಿಸುತ್ತದೆ. ಇದು ತೀವ್ರವಾದ ಕಣ್ಣು ಉರಿತ ಮತ್ತು ಉಸಿರಾಟದ ತೊಂದರೆಯನ್ನು ಉಂಟುಮಾಡುತ್ತದೆ. ಈ ವಿಷಕಾರಿ ಅನಿಲ ಮಾನವರ ಕಾರ್ಯಕ್ಷಮತೆಯನ್ನು ತ್ವರಿತವಾಗಿ ನಿಷ್ಕ್ರಿಯಗೊಳಿಸುತ್ತದೆ.

"ಉಕ್ರೈನಿಯನ್ ಉಗ್ರಗಾಮಿಗಳು ಈ ವಿಷಕಾರಿ ಅನಿಲದ ಬಳಕೆಯನ್ನು, ಅವರು ಮೊದಲೇ ಸಿದ್ಧಪಡಿಸಿದ ಫಿಲ್ಟರಿಂಗ್ ಗ್ಯಾಸ್ ಮಾಸ್ಕ್‌ಗಳ ಸಹಾಯದಿಂದ ಮರೆಮಾಚುತ್ತಿದ್ದಾರೆ.ಇತ್ತೀಚೆಗೆ ರಷ್ಯಾದ ಸೈನಿಕರ ವಿರುದ್ಧ ಸಿಎಸ್ ಹೊಂದಿರುವ ಗ್ಯಾಸ್ ಗ್ರೆನೇಡ್‌ಗಳನ್ನು ಬಳಸಿರುವುದು ಕೂಡ ಇದೀಗ ರಹಸ್ಯವಾಗಿ ಉಳಿದಿಲ್ಲ.."  ಎಂದು ಇಗೊರ್ ಕಿರಿಲೋವ್ ಗುಡುಗಿದ್ದಾರೆ.

"ಉಕ್ರೇನಿಯನ್ ಸಶಸ್ತ್ರ ಪಡೆಗಳು ಕ್ಲೋರೊಪಿಕ್ರಿನ್ ಜೊತೆಗೆ ಇತರ ಮಾರಕ ರಾಸಾಯನಿಕಗಳೊಂದಿಗೆ ಲೋಡ್ ಮಾಡಲಾದ ಯುದ್ಧ ಸಾಮಗ್ರಿಗಳನ್ನು ಬಳಸಿರುವುದು ಸ್ಪಷ್ಟವಾಗಿದೆ. ಕ್ರಾಸ್ನಿ ಲಿಮನ್ ಮತ್ತು ಬೊಗುಸ್ಲಾವ್ ಪ್ರದೇಶಗಳಲ್ಲಿ ರಷ್ಯಾದ ಸೈನಿಕರ ವಿರುದ್ಧ ಅಮೇರಿಕಾದಲ್ಲಿ ತಯಾರಿಸಿದ  ಸಿಎಸ್ ಎಂಬ ವಸ್ತುವನ್ನು ಒಳಗೊಂಡಿರುವ ಗ್ಯಾಸ್ ಗ್ರೆನೇಡ್‌ಗಳನ್ನು ಬಳಸಲಾಗಿದೆ.. " ಎಂದು ರಷ್ಯಾದ ಹಿರಿಯ ಸೇನಾಧಿಕಾರಿ  ಕಿರಿಲೋವ್ ಗಂಭೀರ ಆರೋಪ ಮಾಡಿದ್ದಾರೆ.
ಟೆರೆನ್-6 ಎಂದು ಹೆಸರಿಸಲಾದ ರಾಸಾಯನಿಕ ಕೈ ಗ್ರೆನೇಡ್‌ಗಳನ್ನು ಉಕ್ರೇನಿಯನ್ ಡ್ರೋನ್‌ಗಳಿಂದ, ರಷ್ಯಾದ ಸೇನಾ ನೆಲೆಗಳ ಮೇಲೆ ಆಕ್ರಮಣ ಮಾಡಲಾಗಿದೆ. ಈ ಯುದ್ಧಸಾಮಗ್ರಿಗಳ ಸಂಗ್ರಹವು ಡೊನೆಟ್ಸ್ಕ್‌ನಲ್ಲಿ ಕಂಡುಬಂದಿದ್ದು, ವಾಷಿಂಗ್ಟನ್ ತನ್ನ ಹಸ್ತಕ್ಷೇಪವನ್ನು ಅಲ್ಲಗಳೆಯಲಾಗದು.  ಉಕ್ರೇನಿಯನ್ ಯುದ್ಧ ಕೈದಿಗಳ ಹೇಳಿಕೆಯ ಪ್ರಕಾರ, ಉಕ್ರೇನಿಯನ್ ಸಶಸ್ತ್ರ ಪಡೆಗಳಲ್ಲಿನ ತೀವ್ರ ಆಕ್ರಮಣ ವಿಶೇಷ ಘಟಕವು ಈ ಗ್ರೆನೇಡ್‌ಗಳನ್ನು ಹೊಂದಿವೆ ಎನ್ನಲಾಗಿದೆ.

ಮೆಣಸಿನ ವಾಸನೆಯೊಂದಿಗೆ ಘನ ಮತ್ತು ಸ್ವಲ್ಪ ಬಾಷ್ಪಶೀಲ ಸ್ಫಟಿಕದಂತಹ ವಸ್ತುವಾಗಿರುವ ಸಿಎಸ್, ನೀರಿನಲ್ಲಿ ಅಷ್ಟು ಸುಲಭವಾಗಿ ಕರಗುವುದಿಲ್ಲ, ಆದರೆ ಇದು ಆಲ್ಕೋಹಾಲ್ ನಲ್ಲಿ ಮಧ್ಯಮವಾಗಿ ಮತ್ತು ಅಸಿಟೋನ್ ಮತ್ತು ಕ್ಲೋರೊಫಾರ್ಮ್ ನಲ್ಲಿ ವೇಗವಾಗಿ ಕರಗುತ್ತದೆ. ಕಡಿಮೆ ಸಾಂದ್ರತೆ ಪ್ರದೇಶದಲ್ಲಿ ಇದು ಕಣ್ಣುಗಳ ಮೇಲೆ ಮತ್ತು ಹೆಚ್ಚಿನ ಸಾಂದ್ರತೆ ಪ್ರದೇಶದಲ್ಲಿ ಇದು ಚರ್ಮ ಸುಡುವಿಕೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ  ಕೆಲವು ಸಂದರ್ಭಗಳಲ್ಲಿ ಈ ವಿಷಕಾರಿ ಅನಿಲ ಉಸಿರಾಟ ಮತ್ತು ರಕ್ತಪರಿಚಲನಾ ವ್ಯವಸ್ಥೆಗಳ ಪಾರ್ಶ್ವವಾಯುವಿಗೂ ಕಾರಣವಾಗಬಹುದು.

"ಉಕ್ರೇನಿಯನ್ ಸಶಸ್ತ್ರ ಪಡೆಗಳು ರಷ್ಯಾದ ಸೈನಿಕರ ವಿರುದ್ಧ ಮತ್ತೊಂದು ರಾಸಾಯನಿಕ ವಿಷಕಾರಿ ಅನಿಲ ಬಿಝಡ್  ಅನ್ನು ಸಹ ಬಳಸಿರುವ ಕುರಿತು ವರದಿಯಾಗಿದೆ. ಆಗಸ್ಟ್ 2022ರಲ್ಲಿ ರಷ್ಯಾದ ಸೈನಿಕರ ವಿರುದ್ಧ ಬಿಝಡ್ ಮತ್ತು ಫೆಬ್ರವರಿ 2023ರಲ್ಲಿ ಸಿಲಿಲ್ ಆಮ್ಲವನ್ನು ಬಳಸಿದ ನಿದರ್ಶನಗಳಿವೆ.."   ಎಂದು ಕಿರಿಲೋವ್ ಉಲ್ಲೇಖಿಸಿದ್ದಾರೆ.

ಬಿಝಡ್(3-ಕ್ವಿನುಕ್ಲಿಡಿನೈಲ್ ಬೆಂಜಿಲೇಟ್) ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ಇದು ಭ್ರಾಮಕ ಮತ್ತು ಅಸಮರ್ಥಗೊಳಿಸುವ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ರಾಸಾಯನಿಕ ಅಸ್ತ್ರವಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು ಯುದ್ಧಭೂಮಿಯಲ್ಲಿ ಸೈನಿಕರನ್ನು ಗೊಂದಲ ಮತ್ತು ದಿಗ್ಭ್ರಮೆಗೆ ದೂಡುವ ಸಾಧ್ಯತೆ ಇರುತ್ತದೆ. ಬಿಝಡ್ ಮಾನವರ ಕೇಂದ್ರ ನರಮಂಡಲದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದನ್ನು ಮಾರಣಾಂತಿಕವಲ್ಲದ ರಾಸಾಯನಿಕ ಎಂದು ಪರಿಗಣಿಸಲಾಗುತ್ತದೆ. 

"ಸಿಎಸ್ ಮತ್ತು ಬಿಝಡ್ ವಿಷಕಾರಿ ರಾಸಾಯನಿಕ ಬಳಕೆಯ ಕುರಿತು, ಉಕ್ರೇನಿಯನ್ ಮಿಲಿಟರಿ ಪ್ರತಿನಿಧಿಗಳ ಹೇಳಿಕೆಗಳ ಬಗ್ಗೆ ಲೆ. ಜ. ಕಿರಿಲೋವ್ ನಿರ್ದಿಷ್ಟವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಯುದ್ಧ ರಾಸಾಯನಿಕ ಏಜೆಂಟ್ ಟಬುನ್ (ಜಿಎ)ನ  ಅಂಶಗಳೂ ಸೇರಿವೆ.."  ಎಂದು ಕಿರಿಲೋವ್ ಆತಂಕ ವ್ಯಕ್ತಪಡಿಸಿದ್ದಾರೆ.

1930ರ ದಶಕದಲ್ಲಿ ಸಂಶೋಧಿಸಲಾದ ವಿಷಕಾರಿ ಅನಿಲ ಟಬುನ್ (ಜಿಎ) ನರಮಂಡಲವನ್ನು ನಿಷ್ಕ್ರೀಯಗೊಳಿಸುತ್ತದೆ ಅಲ್ಲದೇ, ತೀವ್ರವಾದ ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಇದು ಮಾರಣಾಂತಿಕ ಎಂಬುದು ಸಾಬೀತಾಗಿದೆ. ಉಕ್ರೇನ್ ಈ ವಿಷಕಾರಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸುವ ಯೋಜನೆ ರೂಪಿಸಿದೆ ಎಂದು ಇಗೊರ್ ಕಿರಿಲೋವ್ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

"ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಭಾಗದಲ್ಲಿ ತಮ್ಮ ಸೇನಾ ಸೌಲಭ್ಯಗಳನ್ನು ನಾಶಮಾಡಲು ಉಕ್ರೇನ್ ರಾಷ್ಟ್ರೀಯತಾವಾದಿಗಳು  ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಈ ಕ್ರಮಗಳು ಈ ಪ್ರದೇಶಗಳಲ್ಲಿನ ನಾಗರಿಕರಿಗೆ ರಾಸಾಯನಿಕ ಮಾಲಿನ್ಯದ ಅಪಾಯವನ್ನುಂಟುಮಾಡುತ್ತಿವೆ.." ಎಂದು ಕಿರಿಲೋವ್ ಹರಿಹಾಯ್ದಿದ್ದಾರೆ 

"ರಷ್ಯಾದ ಕೈಗಾರಿಕಾ ಸೌಲಭ್ಯಗಳಾದ ರುಬೆಜ್ನಾಯ್, ಸೆವೆರೊಡೊನೆಟ್ಸ್ಕ್‌ನ ಅಜೋಟ್ ಮತ್ತು ಅವ್ಡೆಯೆವ್ಕಾದಲ್ಲಿನ ಕೊಕ್ಸೊಕಿಮ್ ಸ್ಥಾವರಗಳು ಬೃಹತ್ ಕ್ಷಿಪಣಿ ದಾಳಿಗಳಿಗೆ ಪದೇ ಪದೇ ಗುರಿಯಾಗುತ್ತಿವೆ. ಅಮೇರಿಕಾ ಹೊಸ ರಾಸಾಯನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ಮುಂದುವರೆಸಿದ್ದು, ಅತ್ಯಂತ ರಹಸ್ಯವಾಗಿ ಉಕ್ರೇನ್ ಪಡೆಗಳಿಗೆ ಇವುಗಳನ್ನು ಪೂರೈಸುತ್ತಿದೆ. ಅಸ್ತಿತ್ವದಲ್ಲಿರುವ ಮಾರಕವಲ್ಲದ ರಾಸಾಯನಿಕ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣಾ ವ್ಯವಸ್ಥೆಗಳನ್ನು ಅಮೇರಿಕಾ ಸುಧಾರಿಸುತ್ತಿದೆ. ಅಲ್ಲದೇ ಇವುಗಳ ಉತ್ಪಾದನೆ ಮತ್ತು ಪೂರೈಕೆಗಾಗಿ  ಪ್ರತಿ ವರ್ಷ ಕನಿಷ್ಠ 10 ಮಿಲಿಯನ್ ಅಮೇರಿಕನ್ ಡಾಲರ್ ಖರ್ಚು ಮಾಡಲಾಗುತ್ತಿದೆ.." ಎಂದು ಎಂದು ಸೇನಾಧಿಕಾರಿ ಕಿರಿಲೋವ್ ಮಾಹಿತಿ ನೀಡಿದ್ದಾರೆ.

click me!