ಮಿತ್ರರಾಷ್ಟ್ರ ಪಾಕಿಸ್ತಾನದ ಪ್ರಧಾನಿಗೆ ದೇಶಕ್ಕೆ ಬರಬೇಡಿ ಎಂದು ಹೇಳಿದ್ದೇಕೆ ಟರ್ಕಿ?

By Santosh NaikFirst Published Feb 9, 2023, 1:19 PM IST
Highlights

ಟರ್ಕಿ ಹಾಗೂ ಸಿರಿಯಾದಲ್ಲಿ ಭೀಕರವಾದ ಭೂಕಂಪ ಸಂಭವಿಸಿದೆ. 70ಕ್ಕೂ ಅಧಿಕ ದೇಶಗಳ ರಕ್ಷಣಾ ಸಿಬ್ಬಂದಿಗಳು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಸಾವು ಕಂಡಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಟರ್ಕಿಯ ಜೊತೆ ಎಲ್ಲಾ ದೇಶಗಳು ನಿಂತಿವೆ. ಪಾಕಿಸ್ತಾನ ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು ಯತ್ನಿಸಿತ್ತಾದರೂ, ಸ್ವತಃ ಟರ್ಕಿಯಿಂದಲೇ ಅವಮಾನಕ್ಕೆ ತುತ್ತಾಗಿದೆ.
 

ನವದೆಹಲಿ (ಫೆ.9): ಭೀಕರ ಭೂಕಂಪದಿಂದ ಟರ್ಕಿ ಮತ್ತು ಸಿರಿಯಾ ಧ್ವಂಸಗೊಂಡಿವೆ. ವಿನಾಶದ ನಂತರ, ಪ್ರಪಂಚದಾದ್ಯಂತದ ದೇಶಗಳು ಸಿರಿಯಾ ಮತ್ತು ಟರ್ಕಿಗೆ ಒಗ್ಗಟ್ಟಿನಿಂದ ಸಹಾಯವನ್ನು ನೀಡಿದೆ. ಒಂದು ಅಂದಾಜುನ ಪ್ರಕಾರ 70ಕ್ಕೂ ಅಧಿಕ ದೇಶಗಳು ಟರ್ಕಿ ಹಾಗೂ ಸಿರಿಯಾದ ಸಹಾಯಕ್ಕೆ ಬಂದಿವೆ. ಪ್ರಪಂಚದಾದ್ಯಂತದ ದೇಶಗಳು ಪರಿಹಾರ ಸಾಮಗ್ರಿಗಳು ಮತ್ತು ರಕ್ಷಣಾ ತಂಡಗಳನ್ನು ಟರ್ಕಿಗೆ ಕಳುಹಿಸುತ್ತಿವೆ. ‘ಆಪರೇಷನ್ ದೋಸ್ತ್’ ಅಡಿಯಲ್ಲಿ ಭಾರತವು ಎರಡೂ ದೇಶಗಳಿಗೆ ಸಹಾಯ ಮಾಡುತ್ತಿದೆ. ಈ ನಡುವೆ ಪಾಕಿಸ್ತಾನ ಕೂಡ ಈ ದುರಂತವನ್ನು ತನ್ನ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನ ಮಾಡಿತ್ತಾದರೂ, ಸಾರ್ವಜನಿಕವಾಗಿ ಅವಮಾನಿತವಾಗಿದೆ. ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ವೇಳೆ ದೇಶದ ಜೊತೆಗೆ ತಾವಿದ್ದೇವೆ ಎನ್ನುವ ಒಗ್ಗಟ್ಟನ್ನು ತೋರಿಸಲು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಪ್‌ ರಾಜಧಾನಿ ಅಂಕಾರಕ್ಕೆ ಭೇಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಭೂಕಂಪ ಪೀಡಿತ ಟರ್ಕಿಯು ಶೆಹಬಾಜ್‌ ಷರೀಫ್‌ಗೆ ಆತಿಥ್ಯ ನೀಡಲು ಸಾರ್ವಜನಿಕವಾಗಿ ನಿರಾಕರಿಸಿದೆ. ಇದು ಅಂತಾರಾಷ್ಟ್ರೀಯ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಪಾಕಿಸ್ತಾನದ ಮರ್ಯಾದೆ ಕಳೆಯುವಂತೆ ಮಾಡಿದೆ. ಟರ್ಕಿ ಆತಿಥ್ಯ ನಿರಾಕರಿಸಿದ ಬಳಿಕ ಶೆಹಬಾಜ್‌ ಷರೀಪ್‌ ಅವರು ಟರ್ಕಿ ಪ್ರವಾಸವನ್ನು ಮುಂದೂಡಿದರು.

The last thing Turkey wants at a time like this is to look after state guests. Please send relief staff only.

— Azam Jamil اعظم (@AzamJamil53)


ಭೂಕಂಪ ಸಂಭವಿಸಿದ ಒಂದು ದಿನದ ಬಳಿಕ ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯುಂ ಔರಂಗಜೇಬ್‌ ಟ್ವಿಟರ್ನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.  "ಪ್ರಧಾನಿ ಶೆಹಬಾಜ್ ಷರೀಫ್ ಅವರು ಟರ್ಕಿಗೆ ಭೇಟಿ ನೀಡಲು ನಾಳೆ ಬೆಳಿಗ್ಗೆ ಅಂಕಾರಾಗೆ ತೆರಳಲಿದ್ದಾರೆ. ಅವರು ಅಧ್ಯಕ್ಷ ಅರ್ಡೋನ್ ಅವರಿಗೆ ವಿಪತ್ತಿನ ಬಗ್ಗೆ ಸಂತಾಪ ಸೂಚಿಸಲಿದ್ದಾರೆ' ಎಂದು ಟ್ವೀಟ್‌ ಮಾಡಿದ್ದರು. ಈ ಕಾರಣಕ್ಕಾಗಿ ಗುರುವಾರ ಕರೆದಿದ್ದ ಎಪಿಸಿ ಸಭೆಯನ್ನು ಮುಂದೂಡಲಾಗುತ್ತಿದೆ. ಮಿತ್ರಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದಿದ್ದರು.
ಆದರೆ, ಈ ಟ್ವೀಟ್‌ ಮಾಡಿದ ಕೆಲವೇ ಘಂಟೆಗಳಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರ ಮಾಜಿ ವಿಶೇಷ ಸಹಾಯಕ ಅಜಮ್ ಜಮೀಲ್ ಟ್ವೀಟ್‌ ಮಾಡಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರಿಗೆ ದೇಶದಲ್ಲಿ ಈ ಸಮಯದಲ್ಲಿ ಆತಿಥ್ಯ ನೀಡಲು ನಿರಾಕರಿಸಿದರು.

'ಈ ಸಮಯದಲ್ಲಿ ಹಾಗೂ ಇಂಥ ಕಷ್ಟದ ಸಮಯದಲ್ಲಿ ಟರ್ಕಿ ತನ್ನ ದೇಶದ ನಾಗರಿಕರನ್ನು ಮಾತ್ರವೇ ಕಾಳಜಿ ವಹಿಸಲು ಬಯಸುತ್ತದೆ. ಹಾಗಾಗಿ ನೀವು ಪರಿಹಾರ ಸಿಬ್ಬಂದಿಗಳನ್ನು ಕಳಿಸೋದಿದ್ದರೆ ಮಾತ್ರವೇ ಕಳುಹಿಸಿ' ಎಂದು ಟ್ವೀಟ್‌ನಲ್ಲಿ ಬರೆದಿದ್ದರು.

ಕೆಟ್ಟ ಹವಾಮಾನದ ಕಾರಣ ನೀಡಿ ಭೇಟಿ ರದ್ದು: ಜಮೀಲ್‌ ಅವರ ಟ್ವೀಟ್‌ನ ಬೆನ್ನಲ್ಲಿಯೇ ಪಾಕಿಸ್ತಾನ ಕೂಡ ಷರೀಫ್‌ ಅವರ ಟರ್ಕಿ ಭೇಟಿಯನ್ನು ರದ್ದು ಮಾಡಿತು. ಪ್ರಸ್ತುತ ನಡೆಯುತ್ತಿರುವ ಪರಿಹಾರ ಕಾರ್ಯ ಹಾಗೂ ಕೆಟ್ಟ ಹವಾಮಾನದ ಕಾರಣದಿಂದಾಗಿ ಭೇಟಿಯನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿತ್ತು. 'ಟರ್ಕಿಯಲ್ಲಿ ಭೂಕಂಪದ ಬಳಿಕ ಪರಿಹಾರ ಕಾರ್ಯಗಳು ನಡೆಯುತ್ತಿದೆ. ಆ ಕಾರಣದಿಂದಾಗಿ ಶೆಹಬಾಜ್‌ ಷರೀಫ್‌ ಅವರ ಟರ್ಕಿ ಭೇಟಿಯನ್ನು ಮುಂದೂಡಿಕೆ ಮಾಡಲಾಗಿದೆ' ಎಂದು ಸಚಿವೆ ಮರಿಯುಮ್‌ ಔರಂಗಜೇಬ್‌ ಟ್ವೀಟ್‌ ಮಾಡಿದರು.

ಮಹಾ ಭೂಕಂಪಕ್ಕೆ ಟರ್ಕಿ & ಸಿರಿಯಾ ತತ್ತರ: 4 ಸಾವಿರ ಜನರು ಬಲಿ

ತಮ್ಮ ಕಷ್ಟದ ಸಮಯದಲ್ಲಿ ತಮ್ಮ ಸಹೋದರ ದೇಶ ಟರ್ಕಿಯ ಭೂಕಂಪ ಸಂತ್ರಸ್ತರಿಗೆ ಬೆಂಬಲ ನೀಡಲು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯನ್ನು ಸ್ಥಾಪಿಸಲು ಪ್ರಧಾನಿ ನಿರ್ಧರಿಸಿದ್ದಾರೆ. ಇದಲ್ಲದೇ ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡುವುದಾಗಿ ಸಚಿವ ಸಂಪುಟ ಘೋಷಿಸಿದೆ. ನಮ್ಮ ಸಹೋದರ ದೇಶ ಟರ್ಕಿಗೆ ಉದಾರ ಸಹಾಯ ಮಾಡುವಂತೆ ಪ್ರಧಾನಿ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದ್ದರು.

ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮೃತರ ಸಂಖ್ಯೆ 500ಕ್ಕೆ ಏರಿಕೆ

ಪಾಕಿಸ್ತಾನಿ ಇಂಗ್ಲಿಷ್ ಸುದ್ದಿ ವೆಬ್‌ಸೈಟ್ 'ದಿ ಟ್ರಿಬ್ಯೂನ್ ಎಕ್ಸ್‌ಪ್ರೆಸ್' ಪ್ರಕಾರ, "ಪ್ರಧಾನಿ ಶೆಹಬಾಜ್ ಷರೀಫ್ ಅವರು ಟರ್ಕಿಗೆ ತೆರಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಪ್ರತಿಕೂಲ ಹವಾಮಾನ ಮತ್ತು ಪರಿಹಾರ ಪ್ರಯತ್ನಗಳಿಂದಾಗಿ, ಟರ್ಕಿಯ ಭೇಟಿಯನ್ನು ಮುಂದೂಡಲಾಗಿದೆ." ಪ್ರಧಾನ ಮಂತ್ರಿ ಶಹಬಾಜ್ ಅವರ ಭೇಟಿಯನ್ನು ಮರು ನಿಗದಿಪಡಿಸುವ ನಿರೀಕ್ಷೆಯಿದೆ ಮತ್ತು ಹೊಸ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು ಎಂದಿದೆ.

click me!