ಟರ್ಕಿ, ಸಿರಿಯಾ ಭೂಕಂಪಕ್ಕೆ ಮೃತರ ಸಂಖ್ಯೆ 11500ಕ್ಕೇರಿಕೆ; 2 ಡಜನ್‌ ದೇಶಗಳಿಂದ ರಕ್ಷಣಾ ಕಾರ್ಯಾಚರಣೆ

By Kannadaprabha NewsFirst Published Feb 9, 2023, 8:49 AM IST
Highlights

ಟರ್ಕಿಯಲ್ಲಿ 3 ಸಾವಿರ ಭಾರತೀಯ ನಾಗರಿಕರಿದ್ದು, ಇವರಲ್ಲಿ 10 ಮಂದಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಉದ್ಯಮ ಸಂಬಂಧಿ ಕೆಲಸಕ್ಕಾಗಿ ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ.

ಗಾಜಿಯಾನ್ಟೆಪ್‌: ಎರಡು ದಶಕಗಳಲ್ಲೇ ಭೀಕರವಾದ ಭೂಕಂಪನದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾ (ಟರ್ಸಿ)ದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 11500ಕ್ಕೇರಿದೆ. ಈ ಪೈಕಿ ಟರ್ಕಿಯಲ್ಲಿ 9000 ಮತ್ತು ಸಿರಿಯಾದಲ್ಲಿ 2500 ಜನರು ಸಾವನ್ನಪ್ಪಿದ್ದಾಗಿ ಉಭಯ ಸರ್ಕಾರಗಳು ಮಾಹಿತಿ ನೀಡಿವೆ. 2011ರಲ್ಲಿ ಜಪಾನ್‌ನಲ್ಲಿ ಭೂಕಂಪನ ಹಾಗೂ ಅದರಿಂದ ಸೃಷ್ಟಿಯಾದ ಸುನಾಮಿಗೆ 20 ಸಾವಿರ ಮಂದಿ ಬಲಿಯಾಗಿದ್ದರು. ಅದಾದ ನಂತರ ಕಳೆದೊಂದು ದಶಕದ ಅವಧಿಯಲ್ಲಿ ಸಂಭವಿಸಿದ ಘೋರ ಪ್ರಕೃತಿ ವಿಕೋಪ ಟರ್ಕಿ, ಸಿರಿಯಾ ಭೂಕಂಪವಾಗಿದೆ.

ಈ ನಡುವೆ, ಭೂಕಂಪನದಿಂದಾಗಿ ನೆಲಕಚ್ಚಿರುವ ಸಹಸ್ರಾರು ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣಾ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ರಕ್ಷಿಸಲು ಟರ್ಕಿಯಲ್ಲಿ ಅತೀವ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ಇಂತಹ ಸಿಬ್ಬಂದಿ ಸಂಖ್ಯೆ ಕೇವಲ 60 ಸಾವಿರದಷ್ಟಿದೆ. ಭೂಕಂಪದಿಂದ ಹಾನಿಗೆ ಒಳಗಾದ ಪ್ರದೇಶಗಳು ಅಪಾರವಾಗಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರು ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಎರಡು ಡಜನ್‌ ದೇಶಗಳಿಂದ ರಕ್ಷಣಾ ಸಿಬ್ಬಂದಿ ಆಗಮಿಸಿ, ಜನರ ರಕ್ಷಣೆಗೆ ನೆರವಾಗುತ್ತಿದ್ದಾರೆ.

ಇದನ್ನು ಓದಿ: ಟರ್ಕಿ ಭೂಕಂಪದಲ್ಲಿ ಬೆಂಗಳೂರಿನ ಉದ್ಯಮಿ ನಾಪತ್ತೆ, 10 ಭಾರತೀಯರು ರಕ್ಷಣೆಗೆ ಕಾರ್ಯಾಚರಣೆ!

ಪಶ್ಚಾತ್‌ ಕಂಪನಗಳಿಂದಾಗಿ ಕಟ್ಟಡಗಳಿಗೆ ತೆರಳಲು ಜನರು ಹೆದರುತ್ತಿದ್ದು, ಕಾರು ಹಾಗೂ ಕಟ್ಟಡಗಳ ಹೊರಭಾಗ ಅಥವಾ ಸರ್ಕಾರಿ ನಿರಾಶ್ರಿತ ಕೇಂದ್ರಗಳಲ್ಲಿ ದಿನ ದೂಡುತ್ತಿದ್ದಾರೆ. ಟೆಂಟ್‌ ಇಲ್ಲ, ಹೀಟಿಂಗ್‌ ಸ್ಟವ್‌ ಇಲ್ಲ, ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಭೂಕಂಪನ ಅಥವಾ ಹಸಿವಿನಿಂದ ಸಾಯುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಭಯಾನಕ ಚಳಿಯಿಂದ ನಾವು ಸತ್ತು ಹೋಗುತ್ತೇವೆ ಎಂದು ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಟರ್ಕಿಯಲ್ಲಿ 8.5 ಕೋಟಿ ಜನಸಂಖ್ಯೆ ಇದ್ದು, ಆ ಪೈಕಿ 1.3 ಕೋಟಿ ಜನರು ಭೂಕಂಪನದಿಂದ ಬಾಧಿತರಾಗಿದ್ದಾರೆ. 10 ಪ್ರಾಂತ್ಯಗಳಲ್ಲಿ ಟರ್ಕಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸದ್ಯ 3.8 ಲಕ್ಷ ಮಂದಿ ಮಾತ್ರ ಸರ್ಕಾರಿ ನಿರಾಶ್ರಿತ ಕೇಂದ್ರ ಅಥವಾ ಹೋಟೆಲ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1999ರಲ್ಲಿ ಟರ್ಕಿಯ ವಾಯವ್ಯ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿ 18 ಸಾವಿರ ಮಂದಿ ಸಾವಿಗೀಡಾಗಿದ್ದರು.

ಇದನ್ನೂ ಓದಿ: Turkey Syria Earthquake: 9500ರ ಗಡಿ ದಾಟಿದ ಸಾವಿನ ಸಂಖ್ಯೆ!

ಬೆಂಗಳೂರಿನ ವ್ಯಕ್ತಿ ನಾಪತ್ತೆ, ಭಾರತದ 10 ಮಂದಿ ಸಂತ್ರಸ್ತ
ನವದೆಹಲಿ: ಟರ್ಕಿಯಲ್ಲಿ 3 ಸಾವಿರ ಭಾರತೀಯ ನಾಗರಿಕರಿದ್ದು, ಇವರಲ್ಲಿ 10 ಮಂದಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಉದ್ಯಮ ಸಂಬಂಧಿ ಕೆಲಸಕ್ಕಾಗಿ ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ತಿಳಿಸಿದೆ. ಸಂತ್ರಸ್ತ 10 ಮಂದಿಯೂ ಸುರಕ್ಷಿತವಾಗಿದ್ದಾರೆ. ಕಾಣೆಯಾದ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಟರ್ಕಿ ಭೂಕಂಪ: ಭಾರತದಿಂದ ಸಹಾಯಹಸ್ತ; ದೋಸ್ತ್‌ ಎಂದು ಧನ್ಯವಾದ ಹೇಳಿದ ಟರ್ಕಿ ಸರ್ಕಾರ

click me!