ಸಿಂದೂರದ ವೇಳೆ ಅಡಗಲು ಸೂಚನೆ ಇತ್ತು: ಜರ್ದಾರಿ

Kannadaprabha News   | Kannada Prabha
Published : Dec 29, 2025, 04:25 AM IST
Asif Ali Zardari

ಸಾರಾಂಶ

ಆಪರೇಷನ್‌ ಸಿಂದೂರದ ಮೂಲಕ ಭಾರತದ ತೀವ್ರ ದಾಳಿಗೆ ಆತಂಕಗೊಂಡ ನಮ್ಮ ಮಿಲಿಟರಿ ಕಾರ್ಯದರ್ಶಿ ನನ್ನ ಬಳಿ ಬಂದು, ಬಂಕರ್‌ನಲ್ಲಿ ಆಶ್ರಯ ಪಡೆಯೋಣ ಎಂದು ಎಚ್ಚರಿಸಿದರು. ಆದರೆ ನಾನು ನಿರಾಕರಿಸಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಶನಿವಾರ ಹೇಳಿಕೆ ನೀಡಿದ್ದಾರೆ.

ಇಸ್ಲಾಮಾಬಾದ್‌ : ಆಪರೇಷನ್‌ ಸಿಂದೂರದ ಮೂಲಕ ಭಾರತದ ತೀವ್ರ ದಾಳಿಗೆ ಆತಂಕಗೊಂಡ ನಮ್ಮ ಮಿಲಿಟರಿ ಕಾರ್ಯದರ್ಶಿ ನನ್ನ ಬಳಿ ಬಂದು, ಬಂಕರ್‌ನಲ್ಲಿ ಆಶ್ರಯ ಪಡೆಯೋಣ ಎಂದು ಎಚ್ಚರಿಸಿದರು. ಆದರೆ ನಾನು ನಿರಾಕರಿಸಿದೆ ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಶನಿವಾರ ಹೇಳಿಕೆ ನೀಡಿದ್ದಾರೆ. ಇದು ಭಾರತದ ದಾಳಿ ಪಾಕ್‌ನ ಉನ್ನತ ನಾಯಕರಲ್ಲೇ ಭೀತಿ ಹುಟ್ಟಿಸಿದ ಪರಿಯನ್ನು ಜಗಜ್ಜಾಹೀರುಗೊಳಿಸಿದೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜರ್ದಾರಿ, ‘ನನ್ನ ಮಿಲಿಟರಿ ಕಾರ್ಯದರ್ಶಿ ನನ್ನ ಬಳಿಗೆ ಬಂದು, ‘ಸರ್, ಯುದ್ಧ ಪ್ರಾರಂಭವಾಗಿದೆ. ಬಂಕರ್‌ಗಳಿಗೆ ಹೋಗೋಣ’ ಎಂದು ಎಚ್ಚರಿಕೆ ನೀಡಿದರು. ಯುದ್ಧ ನಡೆಯಲಿದೆ ಎಂದು ನಾನು 4 ದಿನ ಹಿಂದೆಯೇ ಹೇಳಿದ್ದೆ. ಆದರೆ ನಾನು ಬಂಕರ್‌ಗೆ ಹೋಗಲು ಒಪ್ಪಲಿಲ್ಲ’ ಎಂದಿದ್ದಾರೆ.

‘ಹುತಾತ್ಮತೆ ಬರಬೇಕಾದರೆ, ಅದು ಇಲ್ಲಿಗೆ ಬರುತ್ತದೆ. ನಾಯಕರು ಬಂಕರ್‌ಗಳಲ್ಲಿ ಸಾಯುವುದಿಲ್ಲ. ಅವರು ಯುದ್ಧಭೂಮಿಯಲ್ಲಿ ಸಾಯುತ್ತಾರೆ’ ಎಂದೂ ಹೇಳಿದ್ದೆ ಎಂದಿದ್ದಾರೆ.ಅವರ ಹೇಳಿಕೆಯಿಂದ, ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕತ್ವಕ್ಕೆ ಉಂಟಾದ ಪ್ರಾಣಭಯ ಬಹಿರಂಗವಾಗಿದೆ.

ಭಾರತ ದಾಳಿಯಿಂದ ನೂರ್‌ ಖಾನ್‌ ವಾಯುನೆಲೆಗೆ ಹಾನಿ: ಪಾಕ್ ಒಪ್ಪಿಗೆ

ನವದೆಹಲಿ: ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರದಲ್ಲಿ ತನ್ನ ನೂರ್‌ ಖಾನ್‌ ವಾಯುನೆಲೆಗೆ ಹಾನಿಯಾಗಿದ್ದನ್ನು ಇದೀಗ ಪಾಕಿಸ್ತಾನವೇ ಬಹಿರಂಗವಾಗಿ ಒಪ್ಪಿಕೊಂಡಿದೆ.ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್‌ನ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್‌ ದಾರ್‌, ‘ರಾವಲ್ಪಿಂಡಿಯ ನೂರ್‌ ಖಾನ್‌ ವಾಯುನೆಲೆ ಮೇಲೆ ಭಾರತ ಡ್ರೋನ್‌ ದಾಳಿ ನಡೆಸಿತು. ಈ ದಾಳಿಯಿಂದಾಗಿ ಅಲ್ಲಿ ನಿಯೋಜಿಸಲಾಗಿದ್ದ ಸೇನಾ ನೆಲೆಗೆ ಹಾನಿಯಾಯಿತು.

ಅನೇಕ ಸಿಬ್ಬಂದಿ ಗಾಯಗೊಂಡರು. ಭಾರತವು ಅಲ್ಪಾವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ಡ್ರೋನ್‌ಗಳನ್ನು ಕಳುಹಿಸಿತು. 36 ಗಂಟೆಗಳ ಒಳಗೆ ಕನಿಷ್ಠ 80 ಡ್ರೋನ್‌ಗಳು ಗಡಿ ದಾಟಿವೆ. ಪಾಕ್‌ ಪಡೆಗಳು ಅವುಗಳಲ್ಲಿ 79 ಡ್ರೋನ್‌ಗಳನ್ನು ತಡೆದವು. ಆದರೆ ಒಂದು ಡ್ರೋನ್ ನಮ್ಮ ಮಿಲಿಟರಿ ನೆಲೆಯನ್ನು ಅಪ್ಪಳಿಸುವಲ್ಲಿ ಯಶಸ್ವಿಯಾಯಿತು, ಇದರಿಂದಾಗಿ ಗಾಯಗಳಾದವು’ ಎಂದಿದ್ದಾರೆ.ಈ ಮೂಲಕ ಭಾರತಕ್ಕೆ ಮಣ್ಣುಮುಕ್ಕಿಸಿದ್ದಾಗಿ ಹೇಳಿಕೊಳ್ಳುತ್ತಿದ್ದ ಪಾಕ್‌ನ ಜಂಭದ ಮಾತುಗಳು ಸುಳ್ಳು ಎಂಬುದನ್ನು ಒಪ್ಪಿಕೊಂಡಂತಾಗಿದೆ.

ಜಮ್ಮು ಪ್ರಾಂತ್ಯದಲ್ಲಿ 30 ಉಗ್ರರು ಸಕ್ರಿಯ: ಗುಪ್ತಚರ ಎಚ್ಚರಿಕೆ

ಜಮ್ಮು: ಪಾಕ್ ಬೆಂಬಲಿತ 30 ಉಗ್ರರು ಜಮ್ಮು ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದಾರೆ. ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಎತ್ತರದ ಪ್ರದೇಶಗಳು, ಹಿಮಭರಿತ ಪರ್ವತಗಳಲ್ಲಿ ಅಡಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ಡಿ.21ರಿಂದ ತೀವ್ರ ಚಳಿಯ ಅವಧಿ ಆರಂಭವಾಗಿದ್ದು, ಈ ವೇಳೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಕೊಂಚ ಮಟ್ಟಿಗೆ ಕಡಿಮೆಗೊಳಿಸುತ್ತದೆ. ಈ ಅವಧಿಯ ಲಾಭ ಪಡೆಯಲು ಉಗ್ರರು ಜಮಾಯಿಸಿದ್ದು, ಕಿಶ್ತ್‌ವಾರ್‌ ಮತ್ತು ದೋಡಾ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ.ಸೇನೆ ಗಸ್ತು:

ಆದರೂ ಸೇನಾಪಡೆಗಳು ಚಳಿಯನ್ನು ಲೆಕ್ಕಿಸದೆ, ಉಗ್ರರ ಬೇಟೆಗೆ ಸಿದ್ಧವಾಗಿದೆ. ದೂರದ ಪೋಸ್ಟ್‌ಗಳು, ಹಿಮಪರ್ವತಗಳಲ್ಲಿ ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ. ಜೊತೆಗೆ ಥರ್ಮಲ್ ಡಿಟೆಕ್ಟರ್‌, ಡ್ರೋನ್‌ ಸೇರಿ ಅತ್ಯಾಧುನಿಕ ಸಲಕರಣೆಗಳನ್ನು ಬಳಸುತ್ತಿದೆ. ಇದಿಷ್ಟೇ ಅಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ, ಜನವಸತಿ ಪ್ರದೇಶದಲ್ಲಿ, ಗಡಿ ಭಾಗದಲ್ಲಿ ಸೇರಿ ಎಲ್ಲೆಡೆ ಹದ್ದಿನ ಕಣ್ಣಿರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಿಂದಿಸಿದ ಕೆಎಫ್‌ಸಿ ಮ್ಯಾನೇಜರ್ ವಿರುದ್ದ ಕೇಸ್, ₹81 ಲಕ್ಷ ಪರಿಹಾರ ಪಡೆದ ಭಾರತೀಯ ಮೂಲದ ಉದ್ಯೋಗಿ
US is the Real UN ಅಮೆರಿಕವೇ ಈಗ ನಿಜವಾದ ವಿಶ್ವಸಂಸ್ಥೆ: ಥೈಲ್ಯಾಂಡ್-ಕಾಂಬೋಡಿಯಾ ಕದನ ವಿರಾಮದ ಬಳಿಕ ಟ್ರಂಪ್ ಹೇಳಿದ್ದೇನು?