ಭಾರತದ ಧ್ವಜಕ್ಕೆ ಸಮ್ಮಾನ, ಅಮೆರಿಕಾ ಬ್ರಿಟನ್‌ ಜಪಾನ್‌ಗೆ ಅವಮಾನ: ರಷ್ಯಾ ಮಾಡಿದ್ದೇನು ನೋಡಿ

By Suvarna NewsFirst Published Mar 3, 2022, 2:30 PM IST
Highlights
  • ಭಾರತದ ಧ್ಜಜ ಹೊರತುಪಡಿಸಿ ಉಳಿದ ರಾಷ್ಟ್ರಗಳ ಧ್ವಜ ತೆಗೆದ ರಷ್ಯಾ
  • ರಾಕೆಟ್ ಲಾಂಚರ್‌ನಲ್ಲಿದ್ದ ಅಮೆರಿಕಾ, ಬ್ರಿಟನ್‌, ಜಪಾನ್‌ ಧ್ವಜಗಳು
  • ಬಾಹ್ಯಾಕಾಶಕ್ಕೂ ತಲುಪಿದ ರಷ್ಯಾ ಯುದ್ಧ

ಉಕ್ರೇನ್‌ ಮೇಲೆ ಸಮರ ಸಾರಿರುವ ರಷ್ಯಾ ತನ್ನನ್ನು ವಿರೋಧಿಸುತ್ತಿರುವ ಅಮೆರಿಕಾ, ಬ್ರಿಟನ್‌, ಜಪಾನ್‌ ದೇಶದ ಧ್ವಜಗಳನ್ನು ತನ್ನ ಒನ್‌ವೆಬ್ ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್‌ನಿಂದ ತೆಗೆದು ಹಾಕಿದ್ದು ಅಲ್ಲಿ ಕೇವಲ ರಷ್ಯಾ ಹಾಗೂ ಭಾರತದ ಧ್ವಜವನ್ನು ಮಾತ್ರ ಇರಿಸಿದೆ. ಬಹುಶಃ ಇತಿಹಾಸದಲ್ಲಿ ಮೊದಲ ಬಾರಿಗೆ, ಭೂಮಿಯ ಮೇಲಿನ ಯುದ್ಧದ ಪ್ರಭಾವ ಬಾಹ್ಯಾಕಾಶದಲ್ಲಿ ಕಾಣಿಸುತ್ತಿದೆ. ಉಕ್ರೇನ್ ಮೇಲಿನ  ಆಕ್ರಮಣಕ್ಕಾಗಿ  ಅಮೆರಿಕಾ ಮತ್ತು ಯುರೋಪ್ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಿವೆ. ಇದು  ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಒಪ್ಪಂದದ ಅಂತ್ಯಕ್ಕೆ ಕಾರಣವಾಗಬಹುದು ಎಂದು ರಷ್ಯಾ ಹೇಳಿತ್ತು. ಇದಾದ ನಂತರ ರಷ್ಯಾ ಭಾರತವನ್ನು ಹೊರತುಪಡಿಸಿ, ಅದರ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಇತರ ದೇಶಗಳ ಧ್ವಜವನ್ನು ತೆಗೆದು ಹಾಕಿದೆ.

ರಷ್ಯಾದ ಬಾಹ್ಯಾಕಾಶ ಸಂಸ್ಥೆ ROSCOSMOS ಮುಖ್ಯಸ್ಥ ಡಿಮಿಟ್ರಿ ರೋಗೋಜಿನ್ (Dimitry Rogozin) ಅವರು ಶುಕ್ರವಾರದಂದು  ಬೈಕೊನೂರ್ (Baikonur launch pad) ಉಡಾವಣಾ ಪ್ಯಾಡ್‌ನಿಂದ, ಉಡಾವಣೆ ಆಗಲಿರುವ OneWeb ರಾಕೆಟ್‌ನಲ್ಲಿ ಅಮೆರಿಕಾ, ಜಪಾನ್ ಮತ್ತು ಬ್ರಿಟನ್‌ನ ಧ್ವಜಗಳನ್ನು ಮುಚ್ಚುತ್ತಿರುವ  ಕೆಲಸಗಾರರನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆದರಲ್ಲಿ ಭಾರತದ ಧ್ವಜಕ್ಕೆ ಎಂದಿನ ಸ್ಥಾನಮಾನ ಸಿಕ್ಕಿದೆ.


Fact Check: ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಹಿಟ್ಲರ್‌ನೊಂದಿಗೆ ಹೋಲಿಸುವ ಟೈಮ್ ಕವರ್ ಫೋಟೋ ನಕಲಿ!  

'ಬೈಕೊನೂರ್‌ನಲ್ಲಿನ ರಾಕೆಟ್‌ ಲಾಂಚರ್‌, ಕೆಲವು ದೇಶಗಳ ಧ್ವಜಗಳಿಲ್ಲದಿದ್ದರೆ ನಮ್ಮ ರಾಕೆಟ್ ಹೆಚ್ಚು ಸುಂದರವಾಗಿರುತ್ತದೆ ಎಂದು ನಿರ್ಧರಿಸಿತು' ಎಂದು ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಾ ರೊಗೊಜಿನ್ ರಷ್ಯನ್ ಭಾಷೆಯಲ್ಲಿ ಬರೆದಿದ್ದಾರೆ. ಈ ವಿಡಿಯೋದಲ್ಲಿ ಬೈಕೊನೂರ್ ಲಾಂಚ್ ಪ್ಯಾಡ್‌ನಲ್ಲಿರುವ ಲಾಂಚರ್‌ಗಳು ಸೋಯುಜ್ ರಾಕೆಟ್‌ನಲ್ಲಿನ ಜಪಾನ್‌ ಅಮೆರಿಕಾ ಹಾಗೂ ಬ್ರಿಟನ್‌ ಧ್ವಜಗಳ ಮೇಲೆ ಬಿಳಿ ವಿನೈಲ್ ಅನ್ನು ಅಂಟಿಸುತ್ತಿರುವ ದೃಶ್ಯವಿದೆ. ಬಿಳಿ ವಿನೈಲ್ ಅಂಟಿಸುವ ಮೂಲಕ ಧ್ವಜಗಳನ್ನು ಸಂಪೂರ್ಣವಾಗಿ ಕಾಣದಂತೆ ಮಾಡಲಾಗಿದೆ.

ಒನ್‌ವೆಬ್ ಯೋಜನೆಯಡಿಯಲ್ಲಿ (OneWeb project) ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕವನ್ನು (broadband Internet connectivity) ಒದಗಿಸುವ ವಿವಿಧ ದೇಶಗಳ 36 ಉಪಗ್ರಹಗಳನ್ನು ಸೋಯುಜ್ ರಾಕೆಟ್ ಹೊತ್ತೊಯ್ಯುತ್ತಿದೆ. ಯೋಜನೆಯು 648 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಗುರಿಯನ್ನು ಹೊಂದಿದೆ ಮತ್ತು ಅವುಗಳಲ್ಲಿ 428 ಅನ್ನು ಈಗಾಗಲೇ ಉಡಾವಣೆ ಮಾಡಲಾಗಿದೆ. ಎಲ್ಲರೂ ಇಂಟರ್ನೆಟ್ ಸೇವೆ ಒದಗಿಸುವ ಉಪಗ್ರಹಗಳ ಉಡಾವಣೆಗೆ ಈ ಸೋಯುಜ್ ರಾಕೆಟ್‌ನ್ನು ಬಳಸುತ್ತಿವೆ. ಭಾರ್ತಿ ಏರ್‌ಟೆಲ್ ಗ್ರೂಪ್ (Bharti Airtel group) ಮತ್ತು ಬ್ರಿಟನ್‌ ಸರ್ಕಾರ (UK government)ಈ ಯೋಜನೆಯ ಮಾಲೀಕತ್ವ ಹೊಂದಿದೆ.

ಉಕ್ರೇನ್‌ನ (Ukraine) ಮೇಲೆ ಬಲಿಷ್ಠ ರಷ್ಯಾ (Russia) ಆಕ್ರಮಣ ಆರಂಭಿಸಿದ ನಂತರ ಬ್ರಿಟನ್‌ ಸೇರಿದಂತೆ ಹಲವಾರು ದೇಶಗಳು ರಷ್ಯಾಗೆ ನಿರ್ಬಂಧ ವಿಧಿಸಿವೆ. ಆದಾಗ್ಯೂ ರಷ್ಯಾದ ಬಾಹ್ಯಾಕಾಶ ಸಂಸ್ಥೆ (Russian space agency) ಈ ಯೋಜನೆಯನ್ನು ಜೊತೆಯಾಗಿ ಮುಂದುವರಿಸುತ್ತೇವೆ ಎಂದು ಹೇಳಿತ್ತು. ಮಾರ್ಚ್ 5 ರಂದು ನಿಗದಿಗೊಂಡ ಉಡಾವಣೆಗಾಗಿ ಲಾಂಚ್‌ಪ್ಯಾಡ್‌ನಲ್ಲಿ ರಾಕೆಟ್ ಅನ್ನು ಸ್ಥಾಪಿಸುತ್ತಿದ್ದೇವೆ ಎಂದು ಸಂಸ್ಥೆ ನಿನ್ನೆ ಟ್ವೀಟ್ ಮಾಡಿತ್ತು.

ಆದಾಗ್ಯೂ, ಸಂಸ್ಥೆ ಇಂದು ತನ್ನ ನಿರ್ಧಾರವನ್ನು ಬದಲಾಯಿಸಿದೆ. ಮತ್ತು ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ರಾಕೆಟ್ ಉಡಾವಣೆ ಯೋಜನೆಯನ್ನು ಹಿಡಿದಿಟ್ಟಿದ್ದು, ಬ್ರಿಟನ್‌ ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಉಪಗ್ರಹಗಳನ್ನು ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡಲು ಈಗ ROSCOSMOS ನಿರಾಕರಿಸಿದೆ. ರಾಕೆಟ್ ಉಡಾವಣೆಗೆ ಬ್ರಿಟನ್‌ ಸರ್ಕಾರವು ಒನ್‌ವೆಬ್ ಯೋಜನೆಯಲ್ಲಿ ತನ್ನ ಪಾಲನ್ನು ಮಾರಾಟ ಮಾಡಬೇಕು ಎಂಬ ಷರತ್ತನ್ನು ಏಜೆನ್ಸಿ ಹಾಕಿದೆ ಮತ್ತು ಉಪಗ್ರಹಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಒನ್‌ವೆಬ್ ಖಾತರಿ ನೀಡುತ್ತದೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆಯಾದ ROSCOSMOS ಹೇಳಿದೆ.

ಮಾರ್ಚ್ 4 ರಂದು ಮಾಸ್ಕೋ ಸಮಯ ರಾತ್ರಿ 9:30 ರೊಳಗೆ ತನ್ನ ಉಪಗ್ರಹಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂಬ ಖಾತರಿಯನ್ನು ಬ್ರಿಟನ್ ನೀಡದಿದ್ದರೆ, ಸೋಯುಜ್ -2.1 ಬಿ ರಾಕೆಟ್ ಅನ್ನು ಉಡಾವಣಾ ಪ್ಯಾಡ್‌ನಿಂದ ತೆಗೆದುಹಾಕಲಾಗುವುದು ಎಂದು  ಒನ್‌ವೆಬ್‌ಗೆ ಎಚ್ಚರಿಕೆ ನೀಡಿದ್ದಾರೆ ಎಂದು ರೊಗೊಜಿನ್ ಅವರು ಹೇಳಿದರು.

click me!