ಯುದ್ಧ ಸನ್ನದ್ಧರಾಗಿ: ಸೇನೆಗೆ ಚೀನಾ ಅಧ್ಯಕ್ಷ ಸೂಚನೆ| ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರಿಂದ ಯುದ್ಧೋನ್ಮಾದದ ಮಾತು| ಅಮೆರಿಕ, ಭಾರತ, ತೈವಾನ್, ಹಾಂಕಾಂಗ್‌ಗೆ ಎಚ್ಚರಿಕೆ?
ಬೀಜಿಂಗ್(ಮೇ.27): ದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ತಮ್ಮ ಯೋಧರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮಂಗಳವಾರ ಆದೇಶಿಸಿದ್ದಾರೆ.
undefined
ಭಾರತದ ಜೊತೆ ಗಡಿ ಕ್ಯಾತೆ, ಅಮೆರಿಕದ ಜೊತೆ ವ್ಯಾಪಾರ ಹಾಗೂ ಕೊರೋನಾ ಬಿಕ್ಕಟ್ಟು, ತೈವಾನ್ ಮೇಲೆ ಅಧಿಪತ್ಯ ಸ್ಥಾಪಿಸುವ ಯತ್ನ ಮತ್ತು ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಮುಗಿಸುವ ಯತ್ನ ನಡೆಸುತ್ತಿರುವ ಹೊತ್ತಿನಲ್ಲೇ ಚೀನಾ ಇದೀಗ ನೇರಾನೇರ ಯುದ್ಧದ ಮಾತುಗಳನ್ನು ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಮೇಲ್ಕಂಡ ಎಲ್ಲಾ ವಿಷಯ ಸಂಬಂಧ ಚೀನಾ ಹಲವು ದಿನಗಳಿಂದ ಶೀತಲ ಸಮರ ನಡೆಸಿಕೊಂಡೇ ಬಂದಿತ್ತಾದರೂ, ತಮ್ಮ ಸೇನಾ ನಾಯಕರನ್ನು ಉದ್ದೇಶಿಸಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಡಿರುವ ಮಾತುಗಳು, ಎಲ್ಲಾ ದೇಶಗಳಿಗೂ ಎಚ್ಚರಿಕೆ ಸಂದೇಶ ರವಾನಿಸುವ ಯತ್ನ ಎನ್ನಲಾಗಿದೆ.
ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್ ಬಳಿ ಬಂಕರ್ ನಿರ್ಮಾಣ!
ಸನ್ನದ್ಧರಾಗಿರಿ: ಮಂಗಳವಾರ ಇಲ್ಲಿ ತಮ್ಮನ್ನು ಭೇಟಿಯಾದ ಚೀನಾ ಸೇನೆಯ ನಿಯೋಗವನ್ನು ಉದ್ದೇಶಿಸಿ ಮಾತನಾಡಿದ ಚೀನಾದ 20 ಲಕ್ಷ ಪ್ರಬಲ ಸೇನೆಯ ಮುಖ್ಯಸ್ಥರೂ ಆಗಿರುವ ಕ್ಸಿ ಜಿನ್‌ಪಿಂಗ್, ‘ಸಂಭವನೀಯ ಗಂಭೀರ ಪರಿಸ್ಥಿತಿಗಳನ್ನು ಊಹಿಸಿಕೊಂಡು ಅದನ್ನು ಎದುರಿಸಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ. ದೇಶದ ಸಮಗ್ರತೆ, ಸಾರ್ವಭೌಮತೆ ಕಾಪಾಡಲು ಮತ್ತು ಯಾವುದೇ ಸಂಕೀರ್ಣ ಪರಿಸ್ಥಿತಿಯನ್ನು ತತ್‌ಕ್ಷಣವೇ ಮತ್ತು ಯಶಸ್ವಿಯಾಗಿ ಎದುರಿಸಲು ಬೇಕಾದ ತರಬೇತಿ ಮತ್ತು ಇತರೆ ಸಿದ್ಧತೆ ಆರಂಭಿಸಿ’ ಎಂದು ಕರೆಕೊಟ್ಟಿದ್ದಾರೆ.
ಕ್ಸಿ ಜಿನ್‌ಪಿಂಗ್ ತಮ್ಮ ಸೂಚನೆಯಲ್ಲಿ ಯಾವುದೇ ದೇಶ ಅಥವಾ ಸನ್ನಿವೇಶದ ಕುರಿತು ಪ್ರಸ್ತಾಪ ಮಾಡದೇ ಇದ್ದರೂ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ವಿರುದ್ಧ ದೊಡ್ಡದಾಗಿ ಕೇಳಿಬಂದ ಆಕ್ರೋಶದ ಧ್ವನಿಯನ್ನು ಮಟ್ಟಹಾಕುವ ಯತ್ನವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಭಾರತದ ರಸ್ತೆ ಕಾಮಗಾರಿಗೆ ಆಕ್ಷೇಪ: ಮತ್ತೆ ಚೀನಾ ಗಡಿ ಕ್ಯಾತೆ!
ಗಡಿ ಕ್ಯಾತೆ:
ಲಡಾಖ್ ಮತ್ತು ಸಿಕ್ಕಿಂ ಗಡಿಯಲ್ಲಿ ಭಾರತದ ರಸ್ತೆ ನಿರ್ಮಾಣ ಯೋಜನೆ ವಿರೋಧಿಸುತ್ತಿರುವ ಚೀನಾ, ಇದಕ್ಕೆಂದೇ ಭಾರತದ ಗಡಿಪ್ರದೇಶದಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಳ ಮಾಡಿದೆ. ಲಡಾಖ್‌ಗೆ ಸಮೀಪದ ಪ್ರದೇಶದಲ್ಲಿನ ವಾಯುನೆಲೆಯ ಕಾಮಗಾರಿ ತೀವ್ರಗೊಳಿಸಿದೆ. ಗಡಿಯಲ್ಲಿ ಡ್ರೋನ್ ಕಣ್ಗಾವಲಿಗೆ ನಿರ್ಧರಿಸುವ ಮೂಲಕ ಹಲವು ದಿನಗಳಿಂದ ಶೀತಲ ಸಮರ ನಡೆಸುತ್ತಿದೆ.
ಕೊರೋನಾ ಕಿರಿಕ್:
ಅಮೆರಿಕ ಮತ್ತು ಚೀನಾ ಕಳೆದ ವರ್ಷ ವ್ಯಾಪಾರ ಸಂಬಂಧ ವಾಣಿಜ್ಯ ಸಮರ ನಡೆಸಿದ್ದವು. ಪರಸ್ಪರರ ಉತ್ಪನ್ನಗಳ ಮೇಲೆ ಭಾರೀ ಸುಂಕ ವಿಧಿಸುವ ಮೂಲಕ ಹಗೆತನ ಸಾಧಿಸಿದ್ದವು. ಅದರ ಬೆನ್ನಲ್ಲೇ ಇದೀಗ ಕೊರೋನಾ ಸೋಂಕು ತನ್ನ ದೇಶದಲ್ಲಿ 1 ಲಕ್ಷ ಜನರನ್ನು ಬಲಿಪಡೆದ ಬಳಿಕ ಅಮೆರಿಕ ಚೀನಾ ವಿರುದ್ಧ ಮುಗಿಬಿದ್ದಿದೆ. ಕೊರೋನಾ ವೈರಸ್ ಅನ್ನು ಚೀನಾ ವೈರಸ್ ಅಂದೇ ಕರೆಯುವ ಮೂಲಕ ಅಧ್ಯಕ್ಷ ಟ್ರಂಪ್ ಚೀನಾವನ್ನು ಹಲವು ಬಾರಿ ಕೆಣಕಿದ್ದಾರೆ. ಅಲ್ಲದೆ ಆ ದೇಶದ ಮೇಲೆ ನಾನಾ ರೀತಿಯ ಕ್ರಮಗಳನ್ನು ಘೋಷಿಸುವ ಸುಳಿವು ನೀಡಿದ್ದಾರೆ.
ಗಡಿಯಲ್ಲಿ ಚೀನಾದಿಂದ ಇನ್ನಷ್ಟು ಸೈನಿಕರ ಜಮಾವಣೆ!
ತೈವಾನ್ ಮೇಲೆ ಕಣ್ಣು:
ಸ್ವಾಯತ್ತ ದೇಶವಾದ ತೈವಾನ್ ಮೇಲೆ ಹಿಂದಿನಿಂದಲೂ ಚೀನಾ ಕಣ್ಣಿದೆ. ಅದು ಸ್ವತಂತ್ರ್ಯ ದೇಶ ಎಂಬುದನ್ನು ತಾನು ಒಪ್ಪವುದಿಲ್ಲ ಎಂದು ಕಿರಿಕ್ ಮಾಡುತ್ತಲೇ ಇದೆ. ಇತ್ತೀಚೆಗೆ ನಡೆದ ತೈವಾನ್ ಅಧ್ಯಕ್ಷರ ಆಯ್ಕೆ ವೇಳೆಯೂ ಚೀನಾ ಆ ದೇಶದ ಮೇಲೆ ತನ್ನ ಹಕ್ಕಿನ ಮಾತುಗಳನ್ನು ಪುನುರುಚ್ಚರಿಸಿತ್ತು.
ಹಾಂಕಾಂಗ್‌ಗೆ ಸಡ್ಡು:
ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮುಗಿಸುವ ಚೀನಾದ ಯತ್ನ ಕಳೆದ ವರ್ಷ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅದು ಈ ಬಾರಿ ಸಂಸತ್‌ನ್ಲಲಿ ಹೊಸ ಮಸೂದೆಯನ್ನು ಅಂಗೀಕರಿಸಿ ಅದರ ಮೂಲಕ ಹಾಂಕಾಂಗ್ ಮೇಲೆ ಹೆಚ್ಚಿನ ಅಧಿಪತ್ಯ ಯತ್ನ ಸಾಧಿಸುವ ಯತ್ನ ಮಾಡಿದೆ. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.