ನೇಪಾಳದಲ್ಲಿ ಕೊರೋನಾ ಹರಡಲು ಭಾರತ ಕಾರಣ; ಪ್ರಧಾನಿ ಕೆಪಿ ಶರ್ಮಾ!

By Suvarna NewsFirst Published May 26, 2020, 4:48 PM IST
Highlights

ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೊರೋನಾ ವೈರಸ್ ಹರಡುವಿಕೆ ಕುರಿತು ಆರಂಭದಿಂದಲೇ ಮುನ್ನಚ್ಚೆರಿಕೆ ವಹಿಸಿದ್ದ ನೇಪಾಳ, ಇದೀಗ ಭಾರತದಿಂದ ನೇಪಾಳ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ. ಭಾರತದ ಧೋರಣೆ ಹಾಗೂ ಸಡಿಲ ನಿಯಮ ನೇಪಾಳದಲ್ಲಿ ಆತಂಕ ಸೃಷ್ಟಿಸುತ್ತಿದೆ ಎಂದಿದ್ದಾರೆ.

ನೇಪಾಳ(ಮೇ.26): ಕೊರೋನಾ ವೈರಸ್‌ ಹರಡದಂತೆ ತಡೆಯಲು ಪ್ರತಿ ರಾಷ್ಟ್ರಗಳು ಹಗಲಿರುಳು ಶ್ರಮಿಸುತ್ತಿದೆ. ಭಾರತ ಆರಂಭದಲ್ಲಿ ಕಠಿಣ ಲಾಕ್‌ಡೌನ್ ನಿಯಮ ಜಾರಿಗೆ ತಂದು ಕೊರೋನಾ ವ್ಯಾಪಕವಾಗಿ ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಸೇರಿದಂತೆ ಹಲವು ನಿಯಮಗಳು ಸಡಿಲಿಕೆಯಿಂದ ಭಾರತದಲ್ಲಿ ಇದೀಗ ಕೊರೋನಾ ವೈರಸ್ ಸ್ಫೋಟಗೊಂಡಿದೆ. ಭಾರತದ ನಿರ್ಲಕ್ಷ್ಯ ನೆರೆ ದೇಶ ನೇಪಾಳದಲ್ಲಿ ಭಯದ ವಾತಾವಾರಣ ಸೃಷ್ಟಿಸಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಆರೋಪಿಸಿದ್ದಾರೆ.

ಭಾರತದಲ್ಲಿರುವ ತನ್ನ ನಾಗರಿಕರ ಹಿಂದಕ್ಕೆ ಕರೆಸಿ ಕೊಳ್ಳಲು ಚೀನಾ ನಿರ್ಧಾರ!.

ಇತರ ದೇಶಗಳಿಗೆ ಹೋಲಿಸಿದರೆ ನೇಪಾಳದಲ್ಲಿ ಅತ್ಯಂತ ಕಡಿಮೆ ಕೊರೋನಾ ವೈರಸ್ ಪ್ರಕರಣಗಳು  ದಾಖಲಾಗಿದೆ. ಆದರೆ ಭಾರತದಿಂದ ನೇಪಾಳ ಗಡಿ ಪ್ರದೇಶದಲ್ಲಿ ಗ್ರಾಮಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದೆ. ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಭಾರತದಿಂದ ಆಗಮಿಸಿ ವ್ಯವಹಾರದಲ್ಲಿ ತೊಡಗಿರುವವರು ಯಾವ ನಿಯಮ ಪಾಲಿಸುತ್ತಿಲ್ಲ.  ಭಾರತದಲ್ಲಿ ಕಟ್ಟುನಿಟ್ಟಾದ ತಪಾಸಣೆ, ಕ್ವಾರಂಟೈನ್ ಮಾಡುತ್ತಿಲ್ಲ. ಜೊತೆಗೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಭಾರತದಿಂದ ನೇಪಾಳಕ್ಕೆ ಆಗಮಿಸುವ ಶೇಕಡಾ 90 ರಷ್ಟು ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗುತ್ತಿದೆ. ಇದಕ್ಕೆ ಭಾರತವೇ ಕಾರಣ ಎಂದು ಕೆಪಿ ಶರ್ಮಾ ಹೇಳಿದ್ದಾರೆ.

ನೇಪಾಳದಲ್ಲಿ ಜೂನ್ 2 ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಕೊರೋನಾ ವೈರಸ್ ಕುರಿತು ನೇಪಾಳ ಸಂಸತ್ತಿನಲ್ಲಿ ಮಾತನಾಡಿದ ಮಾಡಿದ ಪ್ರಧಾನಿ ಕೆಪಿ ಶರ್ಮಾ, ಭಾರತದಿಂದ ಬರುತ್ತಿರುವವರು ನೇಪಾಳದಲ್ಲೂ ತಪಾಸಣೆ ಒಳಗಾಗುತ್ತಿಲ್ಲ, ಇಲ್ಲಿನ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ವುಹಾನ್‌ನಿಂದ ಬಂದ ವೈರಸ್‍‌ಗಿಂತ ಭೀಕರ ಎಂದಿದ್ದಾರೆ. 

ನೇಪಾಳ ಹಾಗೂ ಭಾರತದ ಗಡಿ ದಾರಿಗಳನ್ನು ಮುಚ್ಚಲಾಗಿದೆ. ಆದರೆ ಕಳ್ಳದಾರಿ ಮೂಲಕ ನೇಪಾಳ ಪ್ರವೇಶಿಸುತ್ತಿದ್ದಾರೆ. ಅತ್ತ ಭಾರತದಲ್ಲಿ ತಪಾಸಣೆಗೆ ಒಳಗಾಗದೇ, ಇತ್ತ ನೇಪಾಳದಲ್ಲಿ ಅಧಿಕಾರಿಗಳ ಕಣ್ಣಿಗೆ ಬೀಳದೆ ವ್ಯವಹಾರ ನಡೆಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಈ ರೀತಿ ಘಟನೆಗಳಿಂದ ಕೊರೋನಾ ವೈರಸ್ ನಿಯಂತ್ರಣ ಕೈತಪ್ಪಲಿದೆ ಎಂದು ಭಾರತವನ್ನು ದೂರಿದ್ದಾರೆ.  ನೇಪಾಳದಲ್ಲಿ ಒಟ್ಟು 682 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. 

click me!