ಮಾಸ್ಕೋದಲ್ಲಿ ಮೋದಿ: ರಾಜತಾಂತ್ರಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಮತೋಲನದ ನಾಜೂಕಿನ ಹಾದಿ

By Suvarna NewsFirst Published Jul 10, 2024, 4:49 PM IST
Highlights

ಮೋದಿಯವರು ಎರಡು ದಿನಗಳ ಭೇಟಿಗಾಗಿ ರಷ್ಯಾಗೆ ತೆರಳಿದ್ದರು. ಮೋದಿಯವರು ತೆರಳಿದ ಸಮಯದಲ್ಲಿ, ಸೋಮವಾರ ರಷ್ಯನ್ ಸೇನೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿನ ಮಕ್ಕಳ ಆಸ್ಪತ್ರೆಯ ಮೇಲೆ ವಾಯು ದಾಳಿ ನಡೆಸಿತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಸಾವಿಗೀಡಾದರು. 

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜುಲೈ 9, ಮಂಗಳವಾರದಂದು ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, ಯಾವುದೇ ಬಿಕ್ಕಟ್ಟುಗಳನ್ನು ಯುದ್ಧದಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ಮೋದಿ ಅಭಿಪ್ರಾಯ ಪಟ್ಟರು. "ಶಾಂತಿ ಬಾಕಿ ಎಲ್ಲಕ್ಕಿಂತಲೂ ಹೆಚ್ಚು ಮುಖ್ಯವಾದುದು" ಎಂದು ಮೋದಿ ಹೇಳಿದ್ದರು. ಉಕ್ರೇನ್ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸುವಲ್ಲಿ ಮೋದಿಯವರ ಪ್ರಯತ್ನಕ್ಕೆ ಅಧ್ಯಕ್ಷ ಪುಟಿನ್ ಧನ್ಯವಾದ ಸಲ್ಲಿಸಿದ್ದಾರೆ ಎಂದು ರಷ್ಯಾ ಸರ್ಕಾರಿ ಮಾಧ್ಯಮ ಸಂಸ್ಥೆಯಾದ ಸ್ಪುಟ್ನಿಕ್ ವರದಿ ಮಾಡಿದೆ.

Latest Videos

ಮೋದಿಯವರು ಎರಡು ದಿನಗಳ ಭೇಟಿಗಾಗಿ ರಷ್ಯಾಗೆ ತೆರಳಿದ್ದರು. ಮೋದಿಯವರು ತೆರಳಿದ ಸಮಯದಲ್ಲಿ, ಸೋಮವಾರ ರಷ್ಯನ್ ಸೇನೆ ಉಕ್ರೇನ್ ರಾಜಧಾನಿ ಕೀವ್‌ನಲ್ಲಿನ ಮಕ್ಕಳ ಆಸ್ಪತ್ರೆಯ ಮೇಲೆ ವಾಯು ದಾಳಿ ನಡೆಸಿತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು ಜನರು ಸಾವಿಗೀಡಾದರು. ಈ ದಾಳಿ ಕಳೆದ ಎರಡು ವರ್ಷಗಳಿಂದ ಮುಂದುವರಿದಿರುವ ರಷ್ಯಾ - ಉಕ್ರೇನ್ ಕದನದ ಭಾಗವಾಗಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮೋದಿಯವರು ಪುಟಿನ್‌ರನ್ನು ಭೇಟಿಯಾದುದನ್ನು ಟೀಕಿಸಿದ್ದಾರೆ. ಅವರು ಮೋದಿಯವರ ನಡೆ ಶಾಂತಿಯ ಪ್ರಯತ್ನಗಳಿಗೆ ಬಹುದೊಡ್ಡ ಹೊಡೆತ ಎಂದಿದ್ದಾರೆ.

ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ

ಪುಟಿನ್‌ರನ್ನು ಭೇಟಿಯಾದ ಸಂದರ್ಭದಲ್ಲಿ, ಹಿಂದಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, "ಒಬ್ಬ ಸ್ನೇಹಿತನಾಗಿ, ನಮ್ಮ ಮುಂದಿನ ತಲೆಮಾರುಗಳ ಉಜ್ವಲ ಭವಿಷ್ಯಕ್ಕಾಗಿ ಶಾಂತಿ ಅತ್ಯಂತ ಮಹತ್ವದ್ದು ಎಂದು ನಾನು ನಂಬಿದ್ದೇನೆ. ಆದರೆ, ಎಂತಹ ಸಮಸ್ಯೆಗಳಿಗೂ ಯುದ್ಧ ರಂಗದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ನನಗೆ ತಿಳಿದಿದೆ. ಬಾಂಬ್‌ಗಳು, ಬಂದೂಕುಗಳು ಮತ್ತು ಮದ್ದುಗುಂಡುಗಳ ನಡುವೆ ಪರಿಹಾರಗಳಾಗಲಿ, ಶಾಂತಿ ಮಾತುಕತೆಗಳಾಗಲಿ ನಡೆಯಲು ಸಾಧ್ಯವಿಲ್ಲ. ನಾವು ಮಾತುಕತೆಯ ಮೂಲಕವೇ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು" ಎಂದಿದ್ದರು. 

ಪುಟಿನ್‌ರೊಡನೆ ಸೋಮವಾರ ನಡೆದ ಅನೌಪಚಾರಿಕ ಭೋಜನದ ಸಂದರ್ಭದಲ್ಲಿ ಇಬ್ಬರೂ ಉಕ್ರೇನ್ ಯುದ್ಧದ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ಮೋದಿ ತಿಳಿಸಿದ್ದು, ಶಾಂತಿ ಸ್ಥಾಪನೆಗಾಗಿ ಯಾವುದೇ ರೀತಿಯ ಸಹಾಯವನ್ನಾದರೂ ಒದಗಿಸಲು ಭಾರತ ಸಿದ್ಧವಿದೆ ಎಂದಿದ್ದಾರೆ. ಆದರೆ, ಯುದ್ಧದ ಸಂದರ್ಭದಲ್ಲಿ ಅಮಾಯಕ ಮಕ್ಕಳು ಸಾವಿಗೀಡಾಗುವುದು ಅತ್ಯಂತ ನೋವು ಉಂಟುಮಾಡುವ ವಿಚಾರ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಮೋದಿಯವರು ಪುಟಿನ್‌ರನ್ನು ಆಲಂಗಿಸಿದ್ದನ್ನು ಕಟುವಾಗಿ ಟೀಕಿಸಿರುವ ಜೆಲೆನ್ಸ್‌ಕಿ, ಮೋದಿ ಅಪ್ಪಿಕೊಂಡದ್ದು 'ಜಗತ್ತಿನ ಅತಿದೊಡ್ಡ ರಕ್ತಪಾತದ ಅಪರಾಧಿಯನ್ನು' ಎಂದು ಜರೆದಿದ್ದಾರೆ. ಮೋದಿಯವರು ರಷ್ಯಾಗೆ ತೆರಳಿದ ಅದೇ ದಿನ ರಷ್ಯನ್ ಕ್ಷಿಪಣಿ ಉಕ್ರೇನಿನ ಅತಿದೊಡ್ಡ ಮಕ್ಕಳ ಆಸ್ಪತ್ರೆಗೆ ಅಪ್ಪಳಿಸಿತ್ತು.

ಅಮೆರಿಕಾ ಮತ್ತು ಇತರ ಪಾಶ್ಚಾತ್ಯ ರಾಷ್ಟ್ರಗಳು ಮೋದಿಯವರ ರಷ್ಯಾ ಭೇಟಿಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿವೆ. ಇದೇ ಸಮಯದಲ್ಲಿ, ನ್ಯಾಟೋ ಒಕ್ಕೂಟ ತನ್ನ 75ನೇ ವರ್ಷಾಚರಣೆಯ ಅಂಗವಾಗಿ, ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಮೂರು ದಿನಗಳ ವಾರ್ಷಿಕ ಸಭೆಯನ್ನು ಆಯೋಜಿಸಿದೆ. ಸೋಮವಾರ, ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರರಾದ ಮ್ಯಾಥ್ಯೂ ಮಿಲ್ಲರ್ ಅವರು ಉಕ್ರೇನ್ ಯುದ್ಧದ ಸಂದರ್ಭದಲ್ಲಿ, ರಷ್ಯಾದ ಜೊತೆ ಭಾರತದ ಸಂಬಂಧದ ಕುರಿತು ಅಮೆರಿಕಾ ಈಗಾಗಲೇ ತನ್ನ ಕಳವಳಗಳನ್ನು ಭಾರತದೊಡನೆ ಹಂಚಿಕೊಂಡಿದೆ ಎಂದಿದ್ದಾರೆ. ಮಿಲ್ಲರ್ ಭಾರತವನ್ನು ಅಮೆರಿಕಾದ 'ಕಾರ್ಯತಂತ್ರದ ಸಹಯೋಗಿ' ಎಂದು ಕರೆದಿದ್ದು, ವಿಶ್ವಸಂಸ್ಥೆಯ ಗೊತ್ತುವಳಿಗಳು ಮತ್ತು ಉಕ್ರೇನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ರಷ್ಯಾವನ್ನು ಆಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳವಾರ ಶ್ವೇತ ಭವನದಲ್ಲಿ ಮಾಧ್ಯಮಗಳೊಡನೆ ಮಾತನಾಡಿದ ವಕ್ತಾರರಾದ ಕ್ಯಾರಿನ್ ಜೀನ್ ಪಿಯರ್ ಅವರು, ಭಾರತ ದೀರ್ಘಕಾಲದಿಂದ ರಷ್ಯಾದೊಡನೆ ಸ್ನೇಹ ಹೊಂದಿದ್ದು, ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧವನ್ನು ಸ್ಥಗಿತಗೊಳಿಸುವಂತೆ ರಷ್ಯಾದ ಮನವೊಲಿಸಲು ನವದೆಹಲಿಗೆ ಸಾಧ್ಯವಾಗಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಯುದ್ಧವನ್ನು ಭಾರತ ನೇರವಾಗಿ ಖಂಡಿಸಿರದಿದ್ದರೂ, ಬಿಕ್ಕಟ್ಟು ಪರಿಹರಿಸಲು ರಾಜತಾಂತ್ರಿಕತೆ ಮತ್ತು ಮಾತುಕತೆಯೇ ಪರಿಹಾರ ಎಂದು ಸೂಚಿಸುತ್ತಾ ಬಂದಿದೆ. ಯುದ್ಧದ ಹೊರತಾಗಿಯೂ, ಭಾರತ ರಷ್ಯಾದೊಡನೆ ವ್ಯಾಪಾರ ವಹಿವಾಟು ಮುಂದುವರಿಸಿದ್ದು, ರಷ್ಯಾದಿಂದ ರಿಯಾಯಿತಿ ಬೆಲೆಗೆ ತೈಲವನ್ನೂ ಖರೀದಿಸುತ್ತಿದೆ.

ಮಂಗಳವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ರಷ್ಯಾ ಭಾರತದ ನಂಬಿಕಾರ್ಹ ಮಿತ್ರ ಎಂದು ಬಣ್ಣಿಸಿದ್ದರು. ರಷ್ಯಾ ಭಾರತದ ಸುಖ - ದುಃಖಗಳೆರಡರಲ್ಲೂ ಸ್ನೇಹಿತನಾಗಿ ಜೊತೆ ನಿಂತಿದೆ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದರು. ಭಾರತ ಮತ್ತು ರಷ್ಯಾಗಳ ಸಂಬಂಧ ಪರಸ್ಪರ ನಂಬಿಕೆ ಮತ್ತು ಗೌರವದ ತಳಹದಿಯಲ್ಲಿ ನಿರ್ಮಾಣಗೊಂಡಿದ್ದು, ಈ ಸಹಯೋಗ ಗಟ್ಟಿಯಾಗಲು ಅಧ್ಯಕ್ಷ ಪುಟಿನ್‌ರ ನಾಯಕತ್ವವೂ ಸಾಕಷ್ಟು ಕೊಡುಗೆ ನೀಡಿದೆ ಎಂದಿದ್ದರು. ಫೆಬ್ರವರಿ 2022ರಲ್ಲಿ ಉಕ್ರೇನ್ ಯುದ್ಧ ಆರಂಭಗೊಂಡ ಬಳಿಕ, ಇದು ಮೋದಿಯವರ ಮೊದಲ ರಷ್ಯಾ ಭೇಟಿಯಾಗಿದ್ದು, ಸತತ ಮೂರನೇ ಅವಧಿಗೆ ಭಾರತದ ಪ್ರಧಾನಿಯಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಬಳಿಕ ರಷ್ಯಾಗೆ ತೆರಳಿದ್ದಾರೆ. 

ಕಳೆದ ಒಂದು ದಶಕದ ಅವಧಿಯಲ್ಲಿ, ಮೋದಿ ರಷ್ಯಾಗೆ ಆರು ಬಾರಿ ಭೇಟಿ ನೀಡಿದ್ದು, ಪುಟಿನ್‌ರನ್ನು 16 ಬಾರಿ ಭೇಟಿಯಾಗಿದ್ದಾರೆ.  2021ರಲ್ಲಿ ಕೊನೆಯ ಬಾರಿಗೆ ಭಾರತ - ರಷ್ಯಾ ದ್ವಿಪಕ್ಷೀಯ ಸಮಾವೇಶ ನವದೆಹಲಿಯಲ್ಲಿ ನಡೆದಿತ್ತು. ಈ ವೇಳೆ ಭಾರತಕ್ಕೆ ಬಂದಿದ್ದ ಪುಟಿನ್, ರಷ್ಯಾಗೆ ಆಗಮಿಸುವಂತೆ ಮೋದಿಯವರನ್ನು ಅಧಿಕೃತವಾಗಿ ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ಮೋದಿ ರಷ್ಯಾಗೆ ಭೇಟಿ ನೀಡಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರ ಅವರ ಪ್ರಕಾರ, ಮೋದಿ ಮತ್ತು ಪುಟಿನ್ ನಡುವಿನ ಮಾತುಕತೆ ಮುಖ್ಯವಾಗಿ ಆರ್ಥಿಕ ವಿಚಾರಗಳ ಕೇಂದ್ರಿತವಾಗಿತ್ತು. ಅದರೊಡನೆ, ಉಭಯ ನಾಯಕರು ರಾಜಕೀಯ ಸಹಕಾರ, ರಕ್ಷಣೆ ಮತ್ತು ಭದ್ರತೆಯ ಕುರಿತು ಸಮಾಲೋಚನೆ ನಡೆಸಿದ್ದರು. 

ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ, ಇಬ್ಬರು ನಾಯಕರು ಜಂಟಿ ಉತ್ಪಾದನೆಯ ಮಹತ್ವವನ್ನು ಒಪ್ಪಿಕೊಂಡಿದ್ದಾರೆ. ಮೋದಿ ಮತ್ತು ಪುಟಿನ್ ಭಾರತ ಮತ್ತು ರಷ್ಯಾಗಳ ದ್ವಿಪಕ್ಷೀಯ ವ್ಯಾಪಾರವನ್ನು ಈಗಿನ 65 ಬಿಲಿಯನ್ ಡಾಲರ್‌ನಿಂದ 2030ರ ವೇಳೆಗೆ 100 ಬಿಲಿಯನ್ ಡಾಲರ್ ತಲುಪಿಸುವ ಗುರಿ ಹಾಕಿಕೊಂಡಿದ್ದಾರೆ. ಆದರೆ ಸದ್ಯದ ಮಟ್ಟಿಗೆ ಭಾರತ - ರಷ್ಯಾ ವ್ಯಾಪಾರದಲ್ಲಿ ರಷ್ಯಾ ರಫ್ತು ಮಾಡುವ ಪ್ರಮಾಣ ಭಾರತದ ರಫ್ತಿಗಿಂತ ಹೇರಳವಾಗಿ ಹೆಚ್ಚಾಗಿದೆ. ಮೋದಿಯವರು ಭಾರತೀಯ ಪ್ರಜೆಗಳನ್ನು ತಪ್ಪಾಗಿ ರಷ್ಯನ್ ಸೇನೆಗೆ ಸೇರ್ಪಡೆಗೊಳಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ. ಮಾಸ್ಕೋ ತನ್ನ ಸೇವೆಯಲ್ಲಿರುವ ಭಾರತೀಯರನ್ನು ಕ್ಷಿಪ್ರವಾಗಿ ಬಿಡುಗಡೆಗೊಳಿಸುವ ಭರವಸೆ ನೀಡಿದೆ. 

ಕ್ವಾತ್ರ ಅವರು ರಷ್ಯನ್ ಸೇನೆಯಲ್ಲಿ ಅಂದಾಜು 35-50 ಭಾರತೀಯರಿದ್ದು, 10 ಭಾರತೀಯ ಪ್ರಜೆಗಳು ಈಗಾಗಲೇ ತಾಯ್ನಾಡಿಗೆ ಮರಳಿದ್ದಾರೆ ಎಂದು ತಿಳಿಸಿದ್ದಾರೆ. ಕ್ವಾತ್ರ ಅವರು ಈ ಸಮಾವೇಶ ಯಶಸ್ವಿಯಾಗಿದೆ ಎಂದಿದ್ದು, ಇದು ಭಾರತ - ರಷ್ಯಾದ ಪ್ರಸ್ತುತ ಸಂಬಂಧವನ್ನು ಚರ್ಚಿಸಿ, ಭವಿಷ್ಯದ ಸಹಯೋಗಕ್ಕೆ ಮಾರ್ಗಸೂಚಿ ಹಾಕಿದೆ ಎಂದಿದ್ದಾರೆ. ಸಮಾವೇಶದ ಬಳಿಕ ಮೋದಿ ಮತ್ತು ಪುಟಿನ್ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದು, ಭಾರತ - ರಷ್ಯಾ ಸ್ನೇಹ ಪರಸ್ಪರರಿಗೆ ಅನುಕೂಲಕರವಾಗಿದ್ದು, ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ ಎಂದಿದ್ದರು. ಭಾರತ - ರಷ್ಯಾ ಸಂಬಂಧ ಭದ್ರತೆ, ವ್ಯಾಪಾರ, ಇಂಧನ, ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ಮಾನವೀಯ ಸಹಕಾರ ಕ್ಷೇತ್ರಗಳಿಗೆ ವ್ಯಾಪಿಸಿದೆ.

ಉಕ್ರೇನಿನ ಯುದ್ಧ ಪರಿಸ್ಥಿತಿಯನ್ನು ಸರಿಪಡಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯನ್ನು ಇಬ್ಬರು ನಾಯಕರೂ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ, ಯುದ್ಧ ನಿರತವಾಗಿರುವವರು ನೇರವಾಗಿ ಶಾಂತಿ ಮಾತುಕತೆಯಲ್ಲಿ ತೊಡಗಬೇಕು ಎನ್ನುವುದು ಭಾರತದ ಅಭಿಪ್ರಾಯವಾಗಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿಯಮಾವಳಿಗಳಿಗೆ ಅನುಗುಣವಾಗಿ, ಉಕ್ರೇನ್ ಬಿಕ್ಕಟ್ಟನ್ನು ಪರಿಹರಿಸಲು ಒದಗಿಸಿರುವ ಪ್ರಸ್ತಾವನೆಗಳು ಮತ್ತು ಮಧ್ಯಸ್ಥಿಕೆಯ ಸಲಹೆಗಳನ್ನು ಉಭಯ ನಾಯಕರು ಶ್ಲಾಘಿಸಿದ್ದಾರೆ.

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ರಷ್ಯಾ ಮತ್ತು ಭಾರತಗಳು ಪ್ರತ್ಯೇಕವಾಗಿ 'ನಾಯಕರ ಜಂಟಿ ಹೇಳಿಕೆ'ಯನ್ನು ಬಿಡುಗಡೆಗೊಳಿಸಿದ್ದು, ಅವು 2030ರ ತನಕ ಕಾರ್ಯತಂತ್ರದ ಆರ್ಥಿಕ ಸಹಕಾರವನ್ನು ಕೇಂದ್ರೀಕರಿಸಿವೆ. ಭಾರತ - ರಷ್ಯಾ ವ್ಯಾಪಾರವನ್ನು ಸಮತೋಲನಗೊಳಿಸುವ ಸಲುವಾಗಿ, ರಷ್ಯಾಗೆ ಭಾರತದ ರಫ್ತು ಪ್ರಮಾಣವನ್ನು ಹೆಚ್ಚಿಸುವುದನ್ನೂ ಈ ಹೇಳಿಕೆ ಒಳಗೊಂಡಿದೆ. ಭಾರತ ಮತ್ತು ರಷ್ಯಾಗಳು ಈ ವೇಳೆ ವ್ಯಾಪಾರ, ಹೂಡಿಕೆ, ಹವಾಮಾನ ಬದಲಾವಣೆ ಮತ್ತು ಔಷಧಿ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದ ಒಂಬತ್ತು ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಸಮಾವೇಶದ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಭೇಟಿಗಾಗಿ ವಿಯೆನ್ನಾಗೆ ತೆರಳಿದ್ದಾರೆ. ಇದು ಕಳೆದ 40ಕ್ಕೂ ಹೆಚ್ಚು ವರ್ಷಗಳ ಅವಧಿಯಲ್ಲಿ ಆಸ್ಟ್ರಿಯಾಗೆ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ.

click me!