
ಇಸ್ಲಾಮಾಬಾದ್ (ಏ.18): ಕಳೆದ ವರ್ಷ ಭಾರತ ನಡೆಸಿದ 'ಆಪರೇಷನ್ ಸಿಂದೂರ್' (Operation Sindoor) ದಾಳಿಯ ವೇಳೆ ಬ್ರಹ್ಮೋಸ್ ಕ್ಷಿಪಣಿಯಿಂದ ಘಾತಕ ಏಟು ತಿಂದಿದ್ದ ಪಾಕಿಸ್ತಾನದ ಪ್ರಮುಖ 'ನೂರ್ ಖಾನ್' ವಾಯುನೆಲೆಯಲ್ಲಿ ನಡೆಸಿದ್ದ ಪುನರ್ನಿರ್ಮಾಣ ಕಾರ್ಯಗಳು ಬಹುತೇಕ ಮುಕ್ತಾಯ ಕಂಡಿದೆ. ಭವಿಷ್ಯದಲ್ಲಿ ಭಾರತದಿಂದ ಎದುರಾಗಬಹುದಾದ ದಾಳಿಗಳನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಪಾಕಿಸ್ತಾನ ಈ ದುರಸ್ತಿ ಕಾರ್ಯದಲ್ಲಿ ತೊಡಗಿದೆ ಎಂದು ವಿಶ್ಲೇಷಣೆ ಮಾಡಲಾಗಿದ್ದು, ಈ ಬಾರಿ ಇನ್ನಷ್ಟು ಆಧುನಿಕ ವ್ಯವಸ್ಥೆಗಳೊಂದಿಗೆ ನೂರ್ ಖಾನ್ ಏರ್‌ಬೇಸ್‌ಅನ್ನು ಪಾಕಿಸ್ತಾನ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.
ಜಿಯೋ-ಇಂಟೆಲಿಜೆನ್ಸ್ ತಜ್ಞ ಡೇಮಿಯನ್ ಸೈಮನ್ ಹಂಚಿಕೊಂಡಿರುವ ಇತ್ತೀಚಿನ ಸ್ಯಾಟಲೈಟ್ ಚಿತ್ರಗಳು ನೂರ್ ಖಾನ್ ವಾಯುನೆಲೆಯ ನೈಜ ಸ್ಥಿತಿಯನ್ನು ಅನಾವರಣಗೊಳಿಸಿವೆ. ವಾಯುನೆಲೆಯಾದ್ಯಂತ ಹೊಸ ವಿಮಾನ ನಿಲುಗಡೆ ತಾಣಗಳನ್ನು (Hangars) ನಿರ್ಮಿಸಲಾಗುತ್ತಿದೆ. ಇದು ಕೇವಲ ಸಾಮಾನ್ಯ ನಿರ್ಮಾಣವಲ್ಲ. ಪಾಕಿಸ್ತಾನಿ ವಾಯುಪಡೆಯ ವಿಮಾನಗಳನ್ನು ಭಾರತದ ಅತ್ಯಾಧುನಿಕ ನಿಗಾ ವ್ಯವಸ್ಥೆ ಹಾಗೂ ಸ್ಯಾಟಲೈಟ್ ಕಣ್ಣುಗಳಿಂದ ಮರೆಮಾಚುವುದು ಇದರ ಅಸಲಿ ಉದ್ದೇಶ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ 11 ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂದೂರ್' ನಡೆಸಿತ್ತು. ಇಸ್ಲಾಮಾಬಾದ್‌ನಿಂದ ಕೇವಲ 25 ಕಿಮೀ ದೂರದಲ್ಲಿರುವ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ನಡೆಸಿದ ದಾಳಿಯು ಪಾಕಿಸ್ತಾನಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿತ್ತು. ನೂರ್ ಖಾನ್ ಏರ್‌ಬೇಸ್ ಮೇಲೆ ಕ್ಷಿಪಣಿ ದಾಳಿ ಆಗುತ್ತಿದ್ದಂತೆ ಪಾಕಿಸ್ತಾನ ಮೆತ್ತಗಾಗಲು ಆರಂಭಿಸಿ ಬಳಿಕ ಕದನ ವಿರಾಮಕ್ಕೆ ಕೋರಿತ್ತು.
ರಕ್ಷಣಾ ತಜ್ಞ ಸಂದೀಪ್ ಉನ್ನಿತನ್ ಅವರ ಪ್ರಕಾರ, ಇರಾನ್ ಸಂಘರ್ಷದ ನಂತರ ಡ್ರೋನ್ ಯುದ್ಧದ ತೀವ್ರತೆ ಜಗತ್ತಿಗೆ ಮನವರಿಕೆಯಾಗಿದೆ. ಸ್ವಾರ್ಮ್ ಡ್ರೋನ್‌ಗಳ (Swarm Drones) ಯುಗದಲ್ಲಿ ಯಾವುದೇ ರಾಷ್ಟ್ರವು ತನ್ನ ಯುದ್ಧ ವಿಮಾನಗಳನ್ನು ಬಯಲಿನಲ್ಲಿ ನಿಲ್ಲಿಸುವ ಸಾಹಸ ಮಾಡುವುದಿಲ್ಲ. ಭಾರತದ ನಿಖರವಾದ ಡ್ರೋನ್ ದಾಳಿಗಳಿಂದ ಪಾಕಿಸ್ತಾನ ಕಂಗೆಟ್ಟಿದ್ದು, ತನ್ನ ವಿಮಾನಗಳನ್ನು ರಕ್ಷಿಸಿಕೊಳ್ಳಲು ಸುರಕ್ಷಿತ ಹ್ಯಾಂಗರ್‌ಗಳನ್ನು ನಿರ್ಮಿಸುತ್ತಿದೆ.
ಹಿಂದೆ 'ಚಕ್ಲಾಲಾ ಬೇಸ್' ಎಂದು ಕರೆಯಲ್ಪಡುತ್ತಿದ್ದ ಈ ವಾಯುನೆಲೆ ಪಾಕಿಸ್ತಾನಕ್ಕೆ ಅತ್ಯಂತ ಆಯಕಟ್ಟಿನ ಪ್ರದೇಶವಾಗಿದೆ. ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿರುವುದರಿಂದ ಇದು ಮಿಲಿಟರಿ ಮತ್ತು ರಾಜತಾಂತ್ರಿಕ ಸಂಚಾರಕ್ಕೆ ಮುಖ್ಯ ದ್ವಾರವಾಗಿದೆ. ಪಾಕಿಸ್ತಾನದ ಪರಮಾಣು ಶಸ್ತ್ರಾಗಾರವನ್ನು ನಿಯಂತ್ರಿಸುವ 'ಸ್ಟ್ರಾಟೆಜಿಕ್ ಪ್ಲಾನ್ ಡಿವಿಷನ್' (SPD) ಮತ್ತು ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿ (GHQ) ಈ ವಾಯುನೆಲೆಯ ಸಮೀಪದಲ್ಲೇ ಇವೆ. ಸಿ-130 ಹರ್ಕ್ಯುಲಸ್ ಮತ್ತು ಐಎಲ್-78 ಇಂಧನ ಮರುಪೂರಣ ಟ್ಯಾಂಕರ್‌ಗಳಂತಹ ಬೃಹತ್ ವಿಮಾನಗಳ ಕಾರ್ಯಾಚರಣೆಗೆ ಇದು ಪ್ರಮುಖ ಕೇಂದ್ರವಾಗಿದೆ.
ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇರಾನ್ ಶಾಂತಿ ಮಾತುಕತೆಗಾಗಿ ಇದೇ ವಾಯುನೆಲೆಯಲ್ಲಿ ಇಳಿದಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯಾಚರಣೆಗಳ ವೇಳೆಯೂ ಈ ನೆಲೆ ಪ್ರಮುಖ ಪಾತ್ರ ವಹಿಸಿತ್ತು. ಒಟ್ಟಾರೆಯಾಗಿ, ಭಾರತದ ತಾಂತ್ರಿಕ ಶಕ್ತಿ ಮತ್ತು ನಿಖರ ದಾಳಿಯ ಸಾಮರ್ಥ್ಯವನ್ನು ಕಂಡು ಹೆದರಿರುವ ಪಾಕಿಸ್ತಾನ, ಈಗ ತನ್ನ ಅತ್ಯಂತ ಪ್ರಮುಖ ಮಿಲಿಟರಿ ಆಸ್ತಿಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ ಎಂಬುದು ಸ್ಯಾಟಲೈಟ್ ಚಿತ್ರಗಳಿಂದ ಸ್ಪಷ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ