ಮದುವೆಗೆ ಮುಗಿಸಿ ಬಂದವರು ಮಸಣ ಸೇರಿದರು, ದೋಣಿ ಮುಗುಚಿ 103 ಮಂದಿ ಸಾವು!

By Santosh NaikFirst Published Jun 14, 2023, 11:14 AM IST
Highlights

ಮದುವೆ ಸಂಭ್ರಮ ಮುಗಿಸಿ ವಾಪಾಸಾಗುತ್ತಿದ್ದ ದೋಣಿ ನದಿಯಲ್ಲಿ ಮುಗುಚಿದ ಪರಿಣಾಮ ಕನಿಷ್ಠ 103 ಮಂದಿ ಸಾವು ಕಂಡಿದ್ದಾರೆ. ಚಿಕ್ಕ ಮಕ್ಕಳು, ಮಹಿಳೆಯರು ಕೂಡ ಇದರಲ್ಲಿದ್ದು, ಉತ್ತರ ನೈಜೀರಿಯಾದಲ್ಲಿ ಘಟನೆ ನಡೆದಿದೆ.
 

ಅಬುಜಾ, ನೈಜೀರಿಯಾ (ಜೂ.14): ಮದುವೆ ಸಂಭ್ರಮದಲ್ಲಿ ಖುಷಿಯಿಂದ ಭಾಗಿಯಾಗಿ ಅವರೆಲ್ಲ ವಾಪಾಸ್‌ ಮನೆಗೆ ಬರುತ್ತಿದ್ದರು. ಆದರೆ, ನದಿಯ ಮಧ್ಯದಲ್ಲಿ ದೋಣಿ ಮುಗುಚಿದ ಪರಿಣಾಮ ಕನಿಷ್ಠ 103 ಮಂದಿ ಮಕ್ಕಳು ಹಾಗೂ ಮಹಿಳೆಯರು ಸಾವು ಕಂಡಿದ್ದಾರೆ. ಮಂಗಳವಾರ ಉತ್ತರ ನೈಜೀರಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ವಕ್ತಾರ ಒಕಾಸನ್ಮಿ ಅಜಾಯಿ ಪ್ರಕಾರ, ರಾಜ್ಯದ ರಾಜಧಾನಿ ಇಲೋರಿನ್‌ನಿಂದ 160 ಕಿಲೋಮೀಟರ್ ದೂರದಲ್ಲಿರುವ ಕ್ವಾರಾ ರಾಜ್ಯದ ಪಾಟೆಗಿ ಜಿಲ್ಲೆಯ ನೈಜರ್ ನದಿಯಲ್ಲಿ ಸೋಮವಾರ ಮುಂಜಾನೆ ದೋಣಿ ಮುಳುಗಿದೆ. ಅತಿಯಾಗಿ ಜನರನ್ನು ದೋಣಿಯಲ್ಲಿ ಸಾಗಿಸಿದ ಕಾರಣ ದೋಣಿ ನದಿಯಲ್ಲಿ ಮುಳುಗಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ದೋಣಿಯಲ್ಲಿದ್ದರೂ ಸಾಕಷ್ಟು ಜನರನ್ನೂ ಇನ್ನೂ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈವರೆಗೂ 100ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನೀರಿನಲ್ಲಿ ಮುಳುಗಿದವರ ಪೈಕಿಹೆಚ್ಚಿನವರು ಸ್ಥಳೀಯಗ ಗ್ರಾಮದ ಅಕ್ಕಪಕ್ಕದ ಸಂಬಂಧಿಕರೇ ಆಗಿದ್ದು, ಮದುವೆಯಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು. ಸೋಮವಾರ ತಡರಾತ್ರಿಯವರೆಗೂಅವರು ಪಾರ್ಟಿ ಮಾಡಿದ್ದರು ಎಂದು ಸ್ಥಳೀಯ ಮುಖ್ಯಸ್ಥ ಅಬ್ದುಲ್ ಗನಾ ಲುಕ್ಪಾಡಾ ಹೇಳಿದ್ದಾರೆ. 

ಎಲ್ಲರೂ ಬೈಕ್‌ ಹಾಗೂ ಕಾರ್‌ಗಳಲ್ಲಿ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಆದರೆ, ಸೋಮವಾರ ಭಾರೀ ಮಳೆ ಬಂದ ಕಾರಣ ರಸ್ತೆಯಲ್ಲಿ ನೀರು ತುಂಬಿ ಹೋಗಿತ್ತು. ಇದರಿಂದಾಗಿ ದೇಸಿ ದೋಣಿಯನ್ನು ಬಳಸಿಕೊಂಡು ನದಿ ದಾಟಿ ಊರು ಸೇರುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದ್ದಾರೆ.

"ಬೋಟ್ ಓವರ್‌ಲೋಡ್ ಆಗಿತ್ತು ಮತ್ತು ಅದರಲ್ಲಿ ಸುಮಾರು 300 ಜನರು ಇದ್ದರು. ಅವರು ಬರುತ್ತಿರುವಾಗ, ದೋಣಿ ನೀರಿನೊಳಗೆ ಒಂದು ದೊಡ್ಡ ಮರದ ದಿಮ್ಮಿಗೆ ಡಿಕ್ಕಿ ಹೊಡೆದು ಎರಡು ಭಾಗವಾಯಿತು" ಎಂದು ಲುಕ್ಪಾಡಾ ಮಾಹಿತಿ ನೀಡಿದ್ದಾರೆ. ನೆರೆಯ ನೈಜರ್‌ನ ಗ್ಬೋಟಿ ಗ್ರಾಮದಲ್ಲಿ ಮದುವೆ ನಡೆದಿದೆ ಎಂದು ಇಲ್ಲಿನ ನಿವಾಸಿ ಉಸ್ಮಾನ್ ಇಬ್ರಾಹಿಂ ತಿಳಿಸಿದ್ದಾರೆ. ಮುಂಜಾನೆ 3 ಗಂಟೆಗೆ ಅಪಘಾತ ಸಂಭವಿಸಿದೆ. ಅಕ್ಕಪಕ್ಕದ ಊರಿನವರಿಗೆ ಏನಾಗಿದೆ ಎಂದು ತಿಳಿಯುವಷ್ಟರಲ್ಲಿ ಗಂಟೆಗಳು ಕಳೆದಿದ್ದು, ಬೆಳಕೂ ಕೂಡ ಹರಿದಿತ್ತು ಎಂದು ತಿಳಿಸಿದ್ದಾರೆ. ದೋಣಿ ಮುಗುಚಿ ಪ್ರಯಾಣಿಕರು ಮುಳುಗುತ್ತಿದ್ದಂತೆ, ಸಮೀಪದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿದರು ಮತ್ತು ಮೊದಲಿಗೆ ಸುಮಾರು 50 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಪ್ರಯಾಣಿಕರನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಬಹಳ ನಿಧಾನವಾಗಿತ್ತು ಹಾಗೂ ಕಷ್ಟಕರವೂ ಆಗಿತ್ತು ಎಂದು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನದವರೆಗೂ ಅಧಿಕಾರಿಗಳು ಹಾಗೂ ಸ್ಥಳೀಯ ಜನರು ನದಿಯಲ್ಲಿ ಮೃತದೇಹಗಳನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ. ಇದು ಇಡೀ ನೈಜೀರಿಯಾದಲ್ಲಿಯೇ ಅತ್ಯಂತ ದೊಡ್ಡ ನದಿಯಾಗಿದೆ.ಬುಧವಾರದವರೆಗೆ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪೊಲೀಸ್ ವಕ್ತಾರ ಅಜಾಯಿ ತಿಳಿಸಿದ್ದಾರೆ.  ಇದು ಇತ್ತೀಚಿನ ಹಲವು ವರ್ಷಗಳಲ್ಲಿಯೇ ಅತ್ಯಂತ ಭೀಕರ ದೋಣಿ ಅಪಘಾತ ಎಂದು ಸ್ಥಳೀಯರು ಹೇಳಿದ್ದಾರೆ.

ಮಂಗಳವಾರ ಸಂಜೆಯ ವೇಳೆಗೆ, ಇಲ್ಲಿಯವರೆಗೆ ನದಿಯಿಂದ ಹೊರತೆಗೆಯಲಾದ ಮೃತದೇಹಗಳನ್ನು ಸ್ಥಳೀಯ ಪದ್ಧತಿಗಳ ಪ್ರಕಾರ ನದಿಯ ಸಮೀಪದಲ್ಲಿ ಹೂಳಲಾಯಿತು ಎಂದು ಲುಕ್ಪಾಡಾ ಹೇಳಿದರು. ಕ್ವಾರಾ ಗವರ್ನರ್ ಅಬ್ದುಲ್ರಹ್ಮಾನ್ ಅಬ್ದುಲ್ರಜಾಕ್ ಅವರ ಕಚೇರಿಯು ಘಟನೆಗೆ ಬೇಸರ ವೃಕ್ತಪಡಿಸಿದ್ದು ಮೃತ ವ್ಯಕ್ತಿಗಳಿಗೆ ಸಂತಾಪ ಸೂಚಿಸಿದ್ದಾರೆ. 'ನಮಗೆ ಇನ್ನೂ ವಿಶ್ವಾಸವಿದೆ. ಕೆಲವರು ಇನ್ನೂ ಬದುಕಿರಬಹುದು. ಸೋಮವಾರ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಈಗಲೂ ಮುಂದುವರಿದಿದೆ' ಎಂದು ತಿಳಿಸಿದ್ದಾರೆ.

ಒಂದೇ ಕುಟುಂಬದ 8 ಮಂದಿಗೆ ಶಾಪವಾದ ಪ್ರವಾಸಿ ಬೋಟ್‌: ಲೈಫ್‌ ಜಾಕೆಟ್‌ ಅಭಾವ, ಜನಸಂದಣಿಯಿಂದ 22 ಮಂದಿ ಬಲಿ?

ನೈಜೀರಿಯಾ ದೇಶದ ಗ್ರಾಮೀಣ ಭಾಗದಲ್ಲಿ ದೋಣಿ ಅಪಘಾತಗಳು ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತದೆ. ರಸ್ತೆ ಮಾರ್ಗಕ್ಕಿಂತ ಹೆಚ್ಚಾಗಿ ಜಲಸಾರಿಗೆ ಇಲ್ಲಿ ಪ್ರಮುಖವಾಗಿದೆ. ಸ್ಥಳೀಯವಾಗಿ ತಯಾರಿಸಿದ ದೋಣಿಗಳನ್ನು ಪ್ರಯಾಣಕ್ಕಾಗಿ ಬಳಸಲಾಗುತ್ತದೆ. ಓವರ್‌ಲೋಡ್‌ ಹಾಗೂ ಕಳಪೆ ನಿರ್ವಹಣೆ ದೋಣಿ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಸ್ಸಾಂನಲ್ಲಿ ದೋಣಿ ದುರಂತ; 40 ಮಂದಿ ರಕ್ಷಣೆ, 100ಕ್ಕೂ ಜನ ನಾಪತ್ತೆ!

click me!