Latest Videos

ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಮತ್ತೆ ಅರೆಸ್ಟ್‌: ರಹಸ್ಯ ಕಡತಗಳ ಅಕ್ರಮ ಸಂಗ್ರಹ ಕೇಸಲ್ಲಿ ಶರಣು

By Kannadaprabha NewsFirst Published Jun 14, 2023, 8:17 AM IST
Highlights

ರಹಸ್ಯ ಕಡತಗಳ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಎದುರು ವಿಚಾರಣೆ ನಡೆಯಲಿದ್ದು, ವಿಚಾರಣೆಯ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರ ಫೋಟೋ, ಬೆರಳಚ್ಚು ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಾಷಿಂಗ್ಟನ್‌ (ಜೂನ್ 14, 2023): ಸರ್ಕಾರದ ಅತ್ಯಂತ ರಹಸ್ಯ ಕಡತಗಳನ್ನು ಅಕ್ರಮವಾಗಿ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಂಗಳವಾರ ಮಿಯಾಮಿ ಕೋರ್ಟ್‌ ಎದುರು ಶರಣಾಗಿದ್ದಾರೆ. ಈ ವೇಳೆ ಅವರನ್ನು ಕಾನೂನಿನ ಪ್ರಕಾರ ಬಂಧನಕ್ಕೊಳಪಡಿಸಲಾಗಿದೆ.

ರಹಸ್ಯ ಕಡತಗಳ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಎದುರು ವಿಚಾರಣೆ ನಡೆಯಲಿದ್ದು, ವಿಚಾರಣೆಯ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರ ಫೋಟೋ, ಬೆರಳಚ್ಚು ಮತ್ತು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದಲ್ಲಿ 2ನೇ ಬಾರಿಗೆ ಡೊನಾಲ್ಡ್‌ ಟ್ರಂಪ್‌ ಕೋರ್ಟ್‌ ಎದುರು ವಿಚಾರಣೆಗೆ ಹಾಜರಾಗುತ್ತಿದ್ದು, ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಡೊನಾಲ್ಡ್‌ ಟ್ರಂಪ್‌ಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದರೆ ಡೊನಾಲ್ಡ್‌ ಟ್ರಂಪ್‌ಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಮಂಗಳವಾರ ವಿಚಾರಣೆಯ ಬಳಿಕ ಡೊನಾಲ್ಡ್‌ ಟ್ರಂಪ್‌ ಬಿಡುಗಡೆಯಾಗಿ ತಮ್ಮ ನಿವಾಸಕ್ಕೆ ಮರಳಿದ್ದಾರೆ.

ಇದನ್ನು ಓದಿ: ರಹಸ್ಯ ದಾಖಲೆ ‘ಕದ್ದೊಯ್ದ’ ಕೇಸಲ್ಲಿ ಟ್ರಂಪ್‌ ವಿರುದ್ಧ ದೋಷಾರೋಪ: ಅಧ್ಯಕ್ಷರಾಗಿದ್ದೋರ ಮೇಲೆ ಮೊದಲ ಬಾರಿ ಕ್ರಿಮಿನಲ್‌ ಆರೋಪ

ರಹಸ್ಯ ಮಾಹಿತಿಗಳನ್ನು ಅಕ್ರಮವಾಗಿ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಟ್ರಂಪ್‌ ವಿರುದ್ಧ 7 ದೋಷಾರೋಪಗಳನ್ನು ಹೊರಿಸಲಾಗಿತ್ತು. ಈ ಪ್ರಕರಣ ಬಯಲಾಗುತ್ತಿದ್ದಂತೆ ಮಂಗಳವಾರ ಕೋರ್ಟ್‌ ಎದುರು ಹಾಜರಾಗುವುದಾಗಿ ಡೊನಾಲ್ಡ್‌ ಟ್ರಂಪ್‌ ಘೋಷಣೆ ಮಾಡಿದ್ದರು. ಅಲ್ಲದೇ ತಾನು ಮುಗ್ಧನಾಗಿದ್ದು, ತಮ್ಮನ್ನು ಉದ್ದೇಶ ಪೂರ್ವಕವಾಗಿ ಗುರಿ ಮಾಡಲಾಗಿದೆ ಎಂದು ಹೇಳಿದ್ದರು.

ಕೋರ್ಟ್‌ ಎದುರು ಜಮಾಯಿಸಿದ ಬೆಂಬಲಿಗರು:
ಟ್ರಂಪ್‌ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿದ್ದಂತೆಯೇ ಅವರ ಹಲವು ಬೆಂಬಲಿಗರು ಕೋರ್ಟ್‌ ಎದುರು ಜಮಾಯಿಸಿದ್ದು, ಟ್ರಂಪ್‌ ಪರವಾಗಿ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ ಟ್ರಂಪ್‌ ವಿರೋಧಿಗಳು ಸಹ ಕೋರ್ಟ್‌ ಎದುರು ಸೇರಿದ್ದು, ಪ್ರತಿಭಟನೆಯನ್ನು ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಎಫ್‌ಬಿಐ ತನ್ನ ನಿವಾಸದ ಮೇಲೆ ರೇಡ್‌ ಮಾಡಿದೆ: ಡೊನಾಲ್ಡ್‌ ಟ್ರಂಪ್‌ ಟೀಕೆ

ಆರೋಪಗಳೇನು?:
ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಅಕ್ರಮವಾಗಿ ಸಂಗ್ರಹಿಸಿರುವುದು. ಬೇಹುಗಾರಿಕೆ ಕಾಯ್ದೆಯ ಉಲ್ಲಂಘನೆ, ಸುಳ್ಳು ಹೇಳಿಕೆಗಳ ನೀಡಿಕೆ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಪಿತೂರಿ ಮುಂತಾದ ದೋಷಾರೋಪಗಳನ್ನು ಡೊನಾಲ್ಡ್‌ ಟ್ರಂಪ್‌ ವಿರುದ್ಧ ಹೊರಿಸಲಾಗಿದೆ.

ಟಾಯ್ಲೆಟ್‌ನಲ್ಲಿ ಅಣ್ವಸ್ತ್ರ ಕಡತ:
ಇದರ ನಡುವೆಯೇ ಡೊನಾಲ್ಡ್‌ ಟ್ರಂಪ್‌ ರಹಸ್ಯವಾಗಿ ಸಾಗಿಸಿದ್ದ ಕಡತಗಳನ್ನು ಫ್ಲೋರಿಡಾದಲ್ಲಿರುವ ತಮ್ಮ ಮನೆಯ ಶೌಚಾಲಯದಲ್ಲಿ ಜೋಡಿಸಿಟ್ಟಿದ್ದರು ಎಂಬ ವಿಷಯವೂ ಬೆಳಕಿಗೆ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಡೊನಾಲ್ಡ್‌ ಟ್ರಂಪ್‌ ವಿರುದ್ಧ 37 ಆರೋಪಗಳನ್ನು ಹೊರಿಸಲಾಗಿದ್ದು, ಡೊನಾಲ್ಡ್‌ ಟ್ರಂಪ್‌ ಅಕ್ರಮವಾಗಿ ಇಟ್ಟಿದ್ದ ಕಡತಗಳ ಫೋಟೋವನ್ನು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮನೆಗೇ ಎಫ್‌ಬಿಐ ದಾಳಿ: ಬೈಡೆನ್‌ ನಿವಾಸ 13 ಗಂಟೆ ತಲಾಶ್‌..!

click me!