ಬೆಲಾರಸ್‌ ಬಿಲಿಯಾಟ್ಸ್ಕಿ, ರಷ್ಯಾ ಮತ್ತು ಉಕ್ರೇನ್‌ ಮಾನವ ಹಕ್ಕುಗಳ ಗುಂಪುಗಳಿಗೆ Nobel Peace Prize

By BK AshwinFirst Published Oct 7, 2022, 3:23 PM IST
Highlights

2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಲೆಸ್ ಬಿಲಿಯಾಟ್ಸ್ಕಿ ಮತ್ತು ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಹಾಗೂ ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ ಸೇರಿ 2 ಸಂಸ್ಥೆಗಳಿಗೆ  ನೀಡಲಾಗಿದೆ.

2022 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ನಾರ್ವೆ ರಾಜಧಾನಿ ಓಸ್ಲೋದ (Oslo) ನಾರ್ವೇಜಿಯನ್ ನೊಬೆಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಲೆಸ್ ಬಿಲಿಯಾಟ್ಸ್ಕಿ  (Ales Bialiatski) ಮತ್ತು ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ (Russian human rights organisation Memorial) ಹಾಗೂ ಉಕ್ರೇನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್‌ ( Ukrainian human rights organisation Center for Civil Liberties ) ಸೇರಿ 2 ಸಂಸ್ಥೆಗಳಿಗೆ  ನೀಡಲಾಗಿದೆ. ರಷ್ಯಾ - ಉಕ್ರೇನ್ ಯುದ್ಧ ಹಾಗೂ ಸಂಘರ್ಷವನ್ನು ತಡೆಗಟ್ಟಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಅಲೆಸ್ ಬಿಲಿಯಾಟ್ಸ್ಕಿ ಹಾಗೂ 2 ಸಂಸ್ಥೆಗಳಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. 

ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್‌ ಮಾಡುವ ಆಲ್ಟ್‌ ನ್ಯೂಸ್‌ ಸಂಸ್ಥಾಪಕರಾದ ಮೊಹಮ್ಮದ್‌ ಜುಬೇರ್‌(Mohammad Zubair) ಮತ್ತು ಪ್ರತೀಕ್‌ ಸಿನ್ಹಾ (Prateek Sinha) ಇದ್ದಾರೆ ಎಂದು ಟೈಮ್‌ ಮಾಧ್ಯಮ ವರದಿ ಮಾಡಿದೆ. ಇವರ ಜೊತೆಗೆ ಉಕ್ರೇನ್‌ ಅಧ್ಯಕ್ಷ (Ukrainian President) ವೊಲೊಡಿಮಿರ್‌ ಜೆಲೆನ್‌ಸ್ಕಿ (Volodymyr Zelensky), ಅಮೆರಿಕದ ನಿರಾಶ್ರಿತ ಏಜೆನ್ಸಿ(US refugee agency), ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ರೇಸ್‌ನಲ್ಲಿದ್ದರು. ಒಟ್ಟು 343 ಅಭ್ಯರ್ಥಿಗಳು ಶಾಂತಿ ಪ್ರಶಸ್ತಿ ರೇಸ್‌ನಲ್ಲಿದ್ದು, ಇದರಲ್ಲಿ 251 ವ್ಯಕ್ತಿಗಳಿದ್ದರೆ, 92 ಸಂಘಟನೆಗಳಿವೆ ಎಂದು ತಿಳಿದುಬಂದಿತ್ತು. 

ಇದನ್ನು ಓದಿ: ನೊಬೆಲ್‌ ರೇಸಲ್ಲಿ ರಶ್ದಿ, ಆಲ್ಟ್‌ ನ್ಯೂಸ್‌ ಸಂಸ್ಥಾಪಕ ಜುಬೇರ್

ಕಳೆದ ವರ್ಷ ಪತ್ರಕರ್ತರಾದ ರಷ್ಯಾದ ಡಿಮಿಟ್ರಿ ಮುರಾಟೊವ್ ಮತ್ತು ಫಿಲಿಪೈನ್ಸ್‌ನ ಮರಿಯಾ ರೆಸ್ಸಾ ಅವರು "ಪ್ರಜಾಪ್ರಭುತ್ವ ಮತ್ತು ಶಾಶ್ವತ ಶಾಂತಿಗೆ ಪೂರ್ವಾಪೇಕ್ಷಿತವಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಪ್ರಯತ್ನಗಳಿಗಾಗಿ" ಇದೇ ಪ್ರಶಸ್ತಿಯನ್ನು ಗೆದ್ದಿದ್ದರು.

ನೊಬೆಲ್ ಪ್ರಶಸ್ತಿ ಘೋಷಣೆಗಳು ಸೋಮವಾರ ಪ್ರಾರಂಭವಾಗಿದ್ದು, ನಿಯಾಂಡರ್ತಾಲ್‌ ಡಿಎನ್‌ಎಯಲ್ಲಿನ ಗಮನಾರ್ಹ ಆವಿಷ್ಕಾರಕ್ಕಾಗಿ ಸ್ವೀಡಿಷ್ ವಿಜ್ಞಾನಿ ಸ್ವಾಂಟೆ ಪಾಬೊ ಅವರು ವೈದ್ಯಕೀಯ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಅಲೈನ್ ಆಸ್ಪೆಕ್ಟ್, ಜಾನ್ ಎಫ್. ಕ್ಲೌಸರ್ ಮತ್ತು ಆಂಟನ್ ಝೈಲಿಂಗರ್ ಅವರು ಕ್ವಾಂಟಮ್ ಭೌತಶಾಸ್ತ್ರದಲ್ಲಿ ತಮ್ಮ ಅದ್ಭುತ ಕಾರ್ಯಕ್ಕಾಗಿ ಮಂಗಳವಾರ ಭೌತಶಾಸ್ತ್ರದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಕ್ವಾಂಟಮ್ ವಿಜ್ಞಾನದಲ್ಲಿ ಆವಿಷ್ಕಾರ: ಭೌತಶಾಸ್ತ್ರದಲ್ಲಿ Nobel Prize ಗೆದ್ದ 3 ವಿಜ್ಞಾನಿಗಳು

ರಸಾಯನಶಾಸ್ತ್ರದಲ್ಲಿ, ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕನ್ನರಾದ ಕ್ಯಾರೊಲಿನ್ ಆರ್. ಬರ್ಟೊಜಿ ಮತ್ತು ಕೆ. ಬ್ಯಾರಿ ಶಾರ್ಪ್‌ಲೆಸ್ ಹಾಗೂ ಡ್ಯಾನಿಶ್ ವಿಜ್ಞಾನಿ ಮೊರ್ಟೆನ್ ಮೆಲ್ಡಾಲ್ ಅವರಿಗೆ ಕ್ಲಿಕ್ ರಸಾಯನಶಾಸ್ತ್ರವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬುಧವಾರ ನೀಡಲಾಯಿತು. ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಈ ವರ್ಷದ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಗುರುವಾರ ಪಡೆದರು.

ಇನ್ನು, ಈ ವರ್ಷ ಪ್ರಕಟವಾದ 5ನೇ ನೊಬೆಲ್ ಪ್ರಶಸ್ತಿ ಇದಾಗಿದೆ. ಈ ಬಹುಮಾನದ ಹಣವನ್ನು 1895 ರಲ್ಲಿ ನಿಧನರಾದ ಪ್ರಶಸ್ತಿಯ ಸೃಷ್ಟಿಕರ್ತ, ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ಆಸ್ತಿಯ ಮೂಲಕ ನೀಡಲಾಗುತ್ತದೆ. ಅವರ ವಿಲ್‌ ಅಥವಾ ಉಯಿಲಿನ ಪ್ರಕಾರ ಈ ಪ್ರಶಸ್ತಿ ನೀಡಲಾಗುತ್ತಿದೆ. ವೈಜ್ಞಾನಿಕ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ನೊಬೆಲ್‌ ಪ್ರಶಸ್ತಿಯನ್ನು ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್‌ನ ನೊಬೆಲ್ ಅಸೆಂಬ್ಲಿ ನೀಡುತ್ತದೆ.

ಇದನ್ನೂ ಓದಿ: ಮಾನವ ವಿಕಾಸದ ಬಗ್ಗೆ ಆವಿಷ್ಕಾರ: ವೈದ್ಯಕೀಯ ಕ್ಷೇತ್ರದಲ್ಲಿ ಸ್ವಾಂಟೆ ಪಾಬೊಗೆ Nobel Prize

ಇನ್ನು,  ಕೋವಿಡ್ - 19 ಸಾಂಕ್ರಾಮಿಕ ರೋಗದಿಂದಾಗಿ 2 ವರ್ಷಗಳ ಬ್ರೇಕ್‌ ನಂತರ ಈ ಬಾರಿ ಸ್ಟಾಕ್‌ಹೋಮ್‌ನಲ್ಲಿ ಮತ್ತೆ ನೊಬೆಲ್ ಔತಣಕೂಟ ನಡೆಯಲಿದೆ. 

click me!